Thursday, July 21, 2011

ಪಯಣಕ್ಕೊಂದು Short Break!


"ಕಾಫ಼ಿ, ತಿಂಡಿಗೆ ಹತ್ತು ನಿಮಿಷ ಟೈಮಿದೆ ನೋಡಿ..."

ಹೀಗೆ ದೂರದ ಬಸ್ ಪ್ರಯಾಣಗಳಲ್ಲಿ ಕೂಗುವುದುಂಟು. ಹಾಗೇ ಇಂದು ನಾನೂ ಕೂಗುತ್ತಿದ್ದೇನೆ.. ಈ "ಪ್ರೇಮ ಕವಿಯ ಪಯಣ" ನಿಮ್ಮೆಲ್ಲರ ಪ್ರೋತ್ಸಾಹದಿಂದ ಬಹಳ ದೂರ ಬಂದಾಗಿದೆ, ಹಾಗೆಯೇ ಇನ್ನು ಬಹಳ ದೂರ ಸಾಗುವುದಿದೆ.. ಪಯಣದ ಜೊತೆಗಾರರಾದ ನಿಮ್ಮೆಲ್ಲರಿಗೂ ಆಯಾಸವಾಗಿರಬಹುದು! ಇನ್ನು ಕೆಲ ತಿಂಗಳವರೆಗೆ ನಿಮ್ಮೆಲರಿಗೂ ಸುಧಾರಿಸಿಕೊಳ್ಳಲು ಸಮಯ ಕೊಡಬೇಕೆಂದಿದ್ದೇನೆ.

ಇನ್ನು ಪಯಣಕ್ಕೆ ಒಂದು Short Break!

ವೃತ್ತಿಯಲ್ಲಿ ಹೊಸ ಹೊಸ ಜವಾಬ್ದಾರಿಗಳು ತಲೆಯ ಮೇಲೆ ಬಿದ್ದಿರುವುದರಿಂದ ಸ್ವಲ್ಪ ಸಮಯ ಇತ್ತ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಕ್ಷಮಿಸಿ. ಬರೆಯಲು ಸಮಯವಾಗದಿದ್ದರೂ ನಿಮ್ಮೆಲ್ಲರ ಬ್ಲಾಗುಗಳನ್ನೂ ನೋಡಲು ಪ್ರಯತ್ನಿಸುತ್ತೇನೆ. ಆದಷ್ಟು ಬೇಗನೆ ಮತ್ತೆ ಮರಳಿ ಬರಲು ಪ್ರಯತ್ನಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಹೀಗೆ ಎಂದೂ ಇರಲಿ ಆಶಿಸುವೆ. ಧನ್ಯವಾದಗಳು!

Miss you all friends!

Keep in touch :)

************************************************

Tuesday, July 12, 2011

ಹುಸಿ ಪ್ರೇಮದ ಪಾಶ





ಗುರುಪ್ರಸಾದ್ ಶೃಂಗೇರಿಯವರು ತೆಗೆದ ಈ ಸುಂದರ ಚಿತ್ರದಿಂದ ಪ್ರೇರಿತವಾದ ನನ್ನ ಒಂದು ಕವನ...


ಹುಸಿ ಪ್ರೇಮದ ಪಾಶ
--------------------

ಮಲಗಿದ್ದ ಮುಗ್ಧ ಮೊಗ್ಗಿನ ಮನಸ್ಸು

ಕಣ್ಮುಚ್ಚಿ ಕಾಣುತಿತ್ತು ನಲ್ಲನ ಕನಸು

ರಂಗೇರಿತ್ತು ಬಣ್ಣ, ಅರಳುವ ಮುನ್ನ,

ಇನ್ನು ಅರಳಿದರೆಷ್ಟು ಸೊಗಸು!



ಎಳೆ ಪಕಳೆಗಾಯಿತು ಅಙ್ಞಾತ ಪಾದ ಸ್ಪರ್ಶ

ಹೂವಿಗೋ ಇನಿಯ ದುಂಬಿ ಬಂದನೆಂಬ ಹರುಷ

ಮಾಡುತಿರಲು ತುಳಿಯುತ ಆ ಪಾದಗಳು ನರ್ತನ

ಹೂವಿನೊಳು ಮಧು ಸುಗಂಧಗಳ ಸ್ಪಂಧನ



ಎಳೆ ಎಲೆಗಳ ಮೇಲೆ ಎಳೆದನು

ಟೊಳ್ಳು ಭಾವನೆಗಳ ಎಳೆ ಎಳೆಯ

ಕಥೆಗೊಂದು ಕಥೆ ಪೋಣಿಸಿ

ಹೆಣೆದ ಮೋಸದ ಬಲೆಯ



ಕಳೆದು ಮಧುರಾತ್ರಿ ಎಚ್ಚರವಾಗಲು ಮುಂಜಾನೆ

ಕಣ್ಣ ತೆರೆದು ಅರಳಲು ಮೊಗ್ಗು ಮೆಲ್ಲನೆ

ಕಂಡಿದ್ದು ನಗುತಿದ್ದ ವಿಶಾಲ ಖಾಲಿ ಆಕಾಶ

ಹಾಗು ತಾನು ಸೆರೆಯಾಗಿದ್ದ ಹುಸಿ ಪ್ರೇಮದ ಪಾಶ!

Photo Courtesy - img.moonbuggy.org
-----------------------------------------

ದುಂಬಿಯ ನಿರೀಕ್ಷೆಯಲಿದ್ದವಳ

ಮರಳು ಮಾಡಿದವ ವಿಷ ಜೇಡ!

ಅರಿಯಿರಿ ಅರಳುವ ಹೂಗಳೇ...

ಹುಸಿ ಆಸೆಗೆಂದೂ ದುಡುಕು ಬೇಡ.


Wednesday, July 6, 2011

My Clicks: ಮುತ್ತಿನ ಮಳೆಹನಿ




ಮೊದಲ ಮಳೆಯ ಸುವಾಸನೆ ಹರಡಿದೆ ಎಲ್ಲೆಲ್ಲೂ
ಮೊದಲ ಚುಂಬನದ ಪುಳಕಕೆ ಮೂಡಿದೆ ಕಾಮನಬಿಲ್ಲು!

ಬಿಸಿಲಿಗೆ ಬಿರಿದು ಬಯ್ಬಿಟ್ಟಿತ್ತು ಭೂಮಿ
ಇನಿದನಿಯ ಕೇಳಿ ಮೋಡವೂ ಆಯಿತು ಪ್ರೇಮಿ
ತನ್ನಿಯನ ಸ್ಪರ್ಶವ ಬೇಡಲು ಆ ದನಿ
ಮೋಡವು ಮುಟ್ಟಲು ನಾಚಿ...
ಉದುರಿಸಿತು ಮುತ್ತಿನ ಮಳೆಹನಿ!