Thursday, May 14, 2015

ಮದುವೆ - ಮನೆ


ಮದುವೆ - ಮನೆ

ಅರಳು ಮರಳೇನೋ ಅರವತ್ತಕ್ಕಂತೆ
ಮೂವತ್ತರ ನನಗೇಕೆ ಈ ಅದಲು-ಬದಲು?
ಎರಡು ದೋಣಿಯ ನಡುವೆ ನಿಂತಂತೆ
ಮದುವೆ ಸಮಯಕ್ಕೇ ಮನೆ ಕಟ್ಟುವ ಗೋಜಲು

ಜಾತಕದ ಕುಂಡಲಿಯ ಚಚ್ಚೌಕ ರೇಖೆಗಳಲಿ
ಕಾಣುವುದು ಗೃಹ ನಿರ್ಮಾಣದ ನೀಲಿ ನಕ್ಷೆ!
ಅಚ್ಚುಕಟ್ಟಾಗಿ ಅಚ್ಚಾದ ಆಮಂತ್ರಣ ಪತ್ರಿಕೆಯಲೂ
ಹತ್ತಂಕದ ಪ್ರಶ್ನೆಗಳು! ಸನಿಹವಿದೆ ಎಂ.ಬಿ.ಎ. ಪರೀಕ್ಷೆ

ಮನೆಯೆದುರು ಇದೇನು ಚಪ್ಪರವೋ ಸೆಂಟ್ರಿಂಗೋ?
ತಳಿರು ತೋರಣದ ಬದಲು ಕಂಡಿತು ಬರಿ ಲಿಂಟೆಲ್ಲು
ವರ ಪೂಜೆಗೂ ತಂದಿಟ್ಟಂತಿದೆ ಹಾರೆ ಗುದ್ದಲಿ ಪಿಕಾಸಿ!
ಕರಣೆಯೇ ಕೈಗಿಟ್ಟಂತಿದೆ ಹೋಮಕೆ ತುಪ್ಪ ಸುರಿಯಲು!

ಸಪ್ತಪದಿಯ ಹೆಜ್ಜೆಗಳ ನಾನಿಡಲಿ ಎಲ್ಲಿ?
ಎಲ್ಲಿ ನೋಡಿದರಲ್ಲಿ ಇಟ್ಟಿಗೆ ಮರುಳ ರಾಶಿ!
ಉಪಹಾರದೆಲೆಗಳಲಿ ಹಬೆಯಾಡುತಿದೆ ಕಾಂಕ್ರೀಟು!
ಕ್ಯೂರಿಂಗಿನ ಕೆಲಸವಿದೆ ನಾ ಹೋಗಲಾಗುವುದಿಲ್ಲ ಕಾಶಿ

ಮನೆತುಂಬಿಸಿಕೊಂಡಾಗ ಒದ್ದು ಚೆಲ್ಲಿದರಕ್ಕಿಯ
ನಾ ರೇಗಿದೆ "ಮೆಲ್ಲಗೆ ಕಣೇ ಹೊಸದಿದು ಗ್ರಾನೈಟು"
"ಸರಿ ಮಲಗಿರಿ ಹಾಗಿದ್ದರೆ ಅದರ ಮೇಲೆಯೇ"
ಹೇಳಿ ಒಳ ಹೋದಳು ನನಗೆ ಗುಡ್‍ನೈಟು!
-------------------------------------------------------

"ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು" ಎಂದು ಹಿರಿಯರು ಹೇಳುವ ಮಾತು ಶತ ಪ್ರತಿ ಶತ ಸತ್ಯ. ಮದುವೆ ಮಾಡುವುದು ಮತ್ತು ಮನೆ ಕಟ್ಟುವುದು ಎರಡೂ ಜೀವನದಲ್ಲಿ ಅಪಾರವಾದ ಅನುಭವವನ್ನು ತಂದುಕೊಡುವಂತಹ ವಿಷಯಗಳು. ಜೀವನವೇ ಒಂದು ಅಗ್ನಿಪರೀಕ್ಷೆಯಾದರೆ ಮನೆ ಕಟ್ಟುವುದು, ಮದುವೆ ಮಾಡುವುದು ಎರಡೂ ಆ ಪರೀಕ್ಷೆಯ ಫಲಿತಾಂಶಗಳಿದ್ದಂತೆ! ಪರೀಕ್ಷೆಯ ತಯಾರಿಯಲ್ಲಿ ಶ್ರಮವಹಿಸಿದವರ ಫಲಿತಾಂಶಗಳು ಉತ್ತಮವಾಗಿರುತ್ತವೆ. ನಾನಂತೂ ಹಿಂದೆಂದಿನಂತೆ ಪರೀಕ್ಷೆಯ ಸಮಯದಲ್ಲಿ ಎಡವಟ್ಟುಗಳು ಮಾಡಿಕೊಂಡು ಅರೆಬರೆ ತಯಾರಿಯಲ್ಲಿ ಪರೀಕ್ಷೆ ಬರೆದಿದ್ದೇನೆ... ಫಲಿತಾಂಶ ನೋಡಲು ನೀವೆಲ್ಲ ಬರಲೇಬೇಕು...

ಮತ್ತೇನಿಲ್ಲ ಇದೇ ಮೇ ತಿಂಗಳ 22ನೇ ತಾರೀಖು ನಾನು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ನೀವೆಲ್ಲ ತಪ್ಪದೇ ಬಂದು ಹಾರೈಸಬೇಕು, ಆಶೀರ್ವದಿಸಬೇಕು.

ಮುಹೂರ್ತ:
22nd May 2015 
9:55 AM to 10:30 AM

ಆರತಕ್ಷತೆ:
22nd May 2015
6:30 PM onwards

ಸ್ಥಳ:

Chamaraju Kalyana Mantapa
#102/5, 16th Cross, 7th 'A' Main, 
Jayanagar 3rd Block, 
Near South-end circle, Bangalore-560011