Monday, June 24, 2013

ಹತ್ತು ಜನರಿಂದ ಒಂದೊಂದು ತುತ್ತು...
 ಹಾಕಿ ಕಚ್ಚೆ
ಬಣ್ಣ ಹಚ್ಚೆ
ಕೈ ಬೀಸಿ ಕರೆದಿದೆ ವೇದಿಕೆ,ಗಾಂಪರ ಹಾಡು
ಕುಣಿದು ನೋಡು
ಹಿರಿಯ ಕಿರಿಯ ಭೇದವದೇಕೆ?
ಬಣ್ಣದ ಗಾಜು
ತೊಡಲೆಂಥ ಮೋಜು
ನಾಳಿನ ಕನಸುಗಳು ಬಣ್ಣ ಬಣ್ಣ

 

ಶರ್ಟು ಪ್ಯಾಂಟಿನಲ್ಲಿ
ಒಂದೆರಡು ಬಟನ್ ಇಲ್ಲಾ
ಉಜ್ವಲ ಭವಿಷ್ಯದ ನಂಬಿಕೆಯಣ್ಣಾ

 
ಹತ್ತು ಜನರಿಂದೊಂದೊಂದು ತುತ್ತು
ಟೈ, ಬೆಲ್ಟು ಶೂ ಹೊತ್ತು
ತಂದು ಪುಟಾಣಿಗಳಿಗೆ ಹಂಚಿದ್ದಾಯ್ತು

 

ಫೋಟೋ ಕೃಪೆ -  Srikant Manjunath

ಗೆಳೆಯರೆಲ್ಲಾ ಒಟ್ಟಾಗಿ ಕೂತು
ಗಂಟೆಗಟ್ಟಲೇ ಹರಟೆ ಮಾತು
ಅಣಕಿಸುತ ಅವರಿವರ ಫೋಟೋ ತೆಗೆದಿದ್ದಾಯ್ತು

 

ಆಡಿದರು ಕೆಲವರು ಕುಸ್ತಿ
ಮಾಡಿದರು ಕೆಲವರು ಮಸ್ತಿ
ಹೊಸಬರು ಇವರೇಕೆ ಹೀಗೆ ಅಂದ್ರೆ

 
ನಮಗೆ ಪ್ರೀತಿ ಜಾಸ್ತಿ
ಅದುವೆ ನಮ್ಮ ಆಸ್ತಿ
ಮಕ್ಕಳಾಗಿ ಬಿಡುವೆವು ಒಟ್ಟಾಗಿ ಬಂದ್ರೆ

 ಪ್ರೇಮ ಕವಿಗಳಿಬ್ಬರ ಭೇಟಿ - ಇದೊಂಥರ "ಕಲ್ಯಾಣ" ಭಾಗ್ಯ
ಕಾರ್ಯಕ್ರಮವನ್ನು ಆಯೋಜಿಸಿದ ಸತೀಶ್ ಬಿ. ಕನ್ನಡಿಗರವರಿಗೆ ನಾವೆಲ್ಲರೂ ಚಿರಋಣಿಗಳು!

ಎಂಥಾ ಸುಂದರ ಕಾರ್ಯಕ್ರಮ... ತಡೀರಿ ದೃಷ್ಟಿ ತೆಗೆದು ಬಿಡ್ತೀನಿ... ಕಾಗೆ ಕಣ್ಣು ಗೂಬೆ ಕಣ್ಣು....

Friday, June 7, 2013

ಗಣಕ-ಗಮಕ


 3K ಬಳಗದ ಶತಮಾನಂಭವತಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಂಸಲೇಖರವರು "ಕವಿತ್ವಕ್ಕೆ ಗ್ರಾಮ್ಯ ಸೊಗಡು ಅಗತ್ಯ. ಜಗತ್ತಿನಲ್ಲಿ ಮುಗ್ಧತೆಯನ್ನು ಹುಡುಕಲು ಹೊರಟಾಗ ಅದು ನಮಗೆ ಕಾಣಸಿಗುವುದು ಹಳ್ಳಿಗಾಡಿನ ಜನರಲ್ಲಿ ಎಂಬುದನ್ನು ಮರೆಯಬಾರದು" ಎಂದು ಅಭಿಪ್ರಾಯಪಟ್ಟಿದ್ದರು. ಅದೇ ಕಾರಣಕ್ಕೆ ನನ್ನ ಈ ಕವನವನ್ನು ಅವರು ಮೆಚ್ಚಿಕೊಂಡರು ಎಂದು ಕೇಳಿ ನನಗೆ ಅಪಾರ ಸಂತೋಷವಾಯಿತು! ಈ ಹಿಂದೆ ನೀವೆಲ್ಲಾ ಓದಿರಬಹುದು... ಮತ್ತೊಮ್ಮೆ ಶತಮಾನಂಭವತಿಯಲ್ಲಿ ಪ್ರಕಟಗೊಂಡ ನೆನಪಿಗೆ...

ಛಾಯಾಚಿತ್ರ ಕೃಪೆ - ಅಂತರ್ಜಾಲ

 ಗಣಕ-ಗಮಕ

ಹಳ್ಳಿ ಹೈದರು ನಾವ್ ನಿನ್ನೀ ತನಕ
ಕಂಡಿರಲಿಲ್ಲ ಪ್ರತ್ಯಕ್ಷ ಒಂದೂ ಗಣಕ
ಇವತ್ಯಾಕೋ ನಮ್ಗೂ ತಿಳ್ಕೊಳ್ಳೋ ತವಕ
ಕಲಿಸಿದರೆ ಕಲೀತೀವ್ರಿ ಹಾಡ್ಕೊಂಡೇ ಗಮಕ!

ಬೆಳಗೈತಿ ಇದು ಇಂದು ಎಲ್ಲರ ಬದುಕ
ನೀಡೈತಿ ಇದ ಕಲಿತವಗೆ ಧನ ಕನಕ
ನಮ್ಮ್ಯಾಗೂ ದಯೆ ತೋರೋ ಓ ಬೆನಕ
ನಿನ್ಹಾಂಗ ಐತಲ್ಲೊ ಇಲಿಯೊಂದು ಇದಕ

ಮೋಡಿ ಮಾಡೈತ್ರಿ ಆ ಬಣ್ಣದ ಪರದೆ
ನೋಡಾಕಿದು ಥೇಟ್ ನಮ್ ಟಿವಿ ಥರದ್ದೇ
ಬೇಕಾದ್ ಕಡಿ ಕ್ಲಿಕ್ಕಿಸಬಹುದು ಇಲಿ ಹಿಡಿದ್ರೆ
ಕಣ್ಮುಚ್ಚಿ ತೆಗೆಯೋದ್ರೋಳಗ ಜಗತ್ತೇ ನಿಮ್ ಮುಂದೆ!

ಬೆರಳಚ್ಚು ಯಂತ್ರದ ಪುಟ್ಟ ಶಾಖೆ
ಕೊಟ್ಟರು ಒತ್ತಲು ನಮ್ಮೆಲ್ಲರ ಕೈಗೆ
ನೂರೊಂದು ಗುಂಡಿಗಳು ಇತ್ತು ರೀ ಅದಕೆ
ಮೇಷ್ಟ್ರಂದ್ರು ಏನೇನೋ ಒತ್ತೀರಿ ಜೋಕೆ!

ಗೊಂಯ್ಗುಡ್ತಿತ್ತು ಮೇಜಿನ ಕೆಳಗೊಂದು CPU
ಅದುವೇ ಗಣಕಯಂತ್ರದ ಪ್ರಧಾನ ಕಛೇರಿಯು
ಇರುವಂತೆ ನಮ್ಮ ಹಳ್ಳಿಗೊಬ್ಬ ಆಪೀಸರ್ರು
ಒಳಗೆ ಕುಂತೌನಂತೆ ಇಲ್ಲೊಬ್ಬ ಪ್ರೊಸೆಸ್ಸರ್ರು!

ಬಲು ಮೋಸ ತಮ್ಮ ಈ ಕಂಪ್ಯೂಟರ್ರು
ಮೇಜಿನ ಕೆಳಗೆ ಕೈ ಚಾಚಿದರೆ ಆ ಆಪೀಸರ್ರು
ಲಂಚದ ಆಸೆ ಹೆಚ್ಚಾಗಿ ಕಳ್ ಬಡ್ಡೀ ಮಗ
ಮೇಜಿನ ಕೆಳಗೇ ಕುಂತು ಬಿಟ್ಟೌನಲ್ಲಾ ಈ ಪ್ರೊಸೆಸ್ಸರ್ರು!

=============================