Sunday, April 12, 2015

ಕಂಟ್ರೋಲ್ - ಸಿ






ಅದು ನಾನು ದಾವಣಗೆರೆಯಿಂದ ಹೊಸದಾಗಿ ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸಮಯ. ಆಗಿನ್ನೂ ಸಿಟಿ ವಾತಾವರಣ ನನಗೆ ಹೊಸದು. ಇಲ್ಲಿನ ವಿದ್ಯಾರ್ಥಿಗಳ ಸ್ಟೈಲಿಶ್ ಜೀವನ ಶೈಲಿ ನೋಡಿ ಬೆರಗಾಗಿದ್ದೆ! ನಮ್ಮೂರಲ್ಲಿ ಅಪರೂಪಕ್ಕೆ ಇನ್-ಶರ್ಟ್ ಮಾಡಿದರೆ ಹುಡುಗರು ಕೇಳುತ್ತಿದ್ದರು. ಹುಡುಗಿ ಜೀನ್ಸ್ ತೊಟ್ಟು ಬಂದರೆ ಕಾಲೇಜಿಗೆಲ್ಲಾ ಅವಳ ಹೆಸರು ಗೊತ್ತಾಗುತ್ತಿತ್ತು! ಮೊಬೈಲ್ ಯಾರೂ ಕಂಡಿರಲಿಲ್ಲ. ವಿದ್ಯಾರ್ಥಿಗಳೆಲ್ಲರೂ ಸೈಕಲ್ಲು, ಬಸ್ಸು ಇಲ್ಲವೇ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು. ರಸ್ತೆಗಳು ವಾಹನ ದಟ್ಟಣೆ ಇಲ್ಲದೇ ಪ್ರಶಾಂತವಾಗಿದ್ದವು. ಹುಡುಗ ಹುಡುಗಿಯರು ಬೆರೆತು ಓಡಾಡುವುದು ಅಪರೂಪ. ಯಾರಾದರೂ ಧೈರ್ಯ ಮಾಡಿ ಹೋಟೆಲ್ಲಿಗೋ ಸಿನಿಮಾಗೋ ಜೊತೆಯಾಗಿ ಹೋದರೆ ಊರಿಗೆಲ್ಲಾ ಗಾಳಿ ಸುದ್ದಿ ಹಬ್ಬುತಿತ್ತು. ಆದರೆ ಇದು ಬೆಂಗಳೂರು ಮಹಾನಗರ. ಇಲ್ಲಿ ಹಾಗಿರಲಿಲ್ಲ. ಹುಡುಗ ಹುಡುಗಿಯರ ವಸ್ತ್ರದಲ್ಲಿ ವ್ಯತ್ಯಾಸವೇ ಕಾಣದು. ಎಲ್ಲರೂ ರಂಗು ರಂಗಿನ ಟಿ-ಶರ್ಟು, ಜೀನ್ಸು ಧರಿಸಿ ಕೈಗೊಂದು, ಕಾಲಿಗೊಂದು, ಕಿವಿಗೊಂದು, ಬ್ಯಾಂಡು, ಬಳೆ, ಓಲೆ ಟ್ಯಾಟೂ ಹೀಗೆ ಇನ್ನೂ ಹತ್ತು ಹಲವು ಚಿತ್ರ ವಿಚಿತ್ರ ಶೃಂಗಾರ ಮಾಡಿಕೊಂಡು ಬರುತ್ತಿದ್ದರು. ಕಾಲೇಜಿನ ಆವರಣದ ಒಳಗೂ ಹೊರಗೂ ಹುಡುಗ ಹುಡುಗಿಯರು ಒಬ್ಬರ ಮೇಲೊಬ್ಬರು ಕೈ ಹಾಕಿಕೊಂಡು ಮಗಾ ಮಚ್ಚಾ ಎಂದು ಮಾತು ಮಾತಿಗೂ ಅರೆ ಕನ್ನಡ ಅಡ್ಡ ಹೆಸರುಗಳನ್ನು ಕೂಗುತ್ತಾ ತರಲೆ ಮಾಡಿಕೊಂಡು ಓಡಾಡುತ್ತಿದ್ದರು. ತರಗತಿಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ SMSಗಳು ರವಾನೆಯಾಗುತ್ತಿದ್ದವು. ನನಗಂತೂ ಹೊಸದರಲ್ಲಿ ಕ್ಯಾಂಪಸ್ಸಿಗೆ ಕಾಲಿಟ್ಟ ಕ್ಷಣ ಯಾವುದೋ ಬೇರೆ ಗ್ರಹಕ್ಕೆ ಬಂದಂತೆನಿಸುತ್ತಿತ್ತು!
           ನನಗೆ ಆ ದಿನಗಳಲ್ಲಿ ಸಾಹಿತ್ಯ, ಚಿತ್ರಕಲೆಗಳಲ್ಲಿ ತುಂಬ ಆಸಕ್ತಿಯಿತ್ತು. ಆದರೆ ಮನೆಯವರ ಒತ್ತಡದಿಂದ ತಂತ್ರಙ್ಞಾನವನ್ನೇ ಓದಬೇಕಾಯ್ತು. ಬೇರೆ ದಾರಿಯಿಲ್ಲದೆ ಪರಮ ಶತ್ರುವಾದ  ಗಣಿತಕ್ಕೆ ಮತ್ತೆ ಶರಣಾಗಬೇಕಾಯ್ತು. ಜೊತೆಗೆ ಕಂಪ್ಯೂಟರ್ ಸೈನ್ಸ್ ಹಾಗು ಎಲೆಕ್ಟ್ರಾನಿಕ್ಸ್ ಎಂಬ ಭೂತಗಳೂ ಬೆನ್ನು ಹತ್ತಿದವು! ನನಗಿನ್ನೂ ಆಗ ಕಂಪ್ಯೂಟರಿನ ಅ ಆ ಇ ಈ ತಿಳಿದಿರಲಿಲ್ಲ. ಗಣಕಯಂತ್ರವನ್ನು ಆನ್ ಮಾಡಲೂ ಬರುತ್ತಿರಲಿಲ್ಲ. ಯಾರಾದರೂ ಆನ್ ಮಾಡಿ  M S Word  ತೆರೆದಿಟ್ಟರೆ, ಅಮ್ಮ ಸಾವಕಾಶವಾಗಿ ಕುಳಿತು ಅಕ್ಕಿ ಆರಿಸಿದಂತೆ ನಿಧಾನವಾಗಿ ಕೀ ಬೋರ್ಡಿನ ಮೇಲೆ ಒಂದೊಂದೇ ಅಕ್ಷರಗಳನ್ನು ಹುಡುಕಿ ಟೈಪಿಸುತ್ತಿದ್ದೆ. ಆದರೆ ಇಲ್ಲಿ ಹುಡುಗರು ಹಾಗಿರಲಿಲ್ಲ. ಬಹಳ ವರ್ಷಗಳಿಂದ ಮನೆಯಲ್ಲಿ ಕಂಪ್ಯೂಟರ್ ಬಳಸಿ ಪರಿಣಿತರಾಗಿದ್ದರು. ನಿತ್ಯ ಇಂಟರ್ನೆಟ್ ಪಾರ್ಲರ್ಗಳಿಗೆ ಭೇಟಿ ನೀಡಿ ಬೇಕಿದ್ದು ಬೇಡದ್ದು ಎಲ್ಲಾ ಕಲಿತಿದ್ದರು! ಬೆಂಗಳೂರಿಗರಿಗೆ ಸುತ್ತಮುತ್ತಲ ರಾಜ್ಯಗಳ ಐದು ಭಾಷೆಗಳು ಬರುತ್ತವೆ ಎಂದು ಕೇಳಿದ್ದೆ ಆದರೆ ತಂತ್ರಙ್ಞಾನದ ವಿದ್ಯಾರ್ಥಿಗಳಿಗೆ ಅವೆಲ್ಲದರ ಜೊತೆಗೆ ಮತ್ತೊಂದು ಭಾಷೆ ಖಡ್ದಾಯವೆಂದು ತಿಳಿದಿರಲಿಲ್ಲ. ಅದೇ ಈ ಕಂಪ್ಯೂಟರ್ ಭಾಷೆ - "ಸಿ". ಸಂಸ್ಕೃತದಂತೆ ಸಿ ಕೂಡ ಪಂಡಿತರ ಭಾಷೆಯೇ ಸರಿ ಅದಕ್ಕೆ ಹರಸಾಹಸ ಮಾಡಿದರೂ ನನ್ನ ತಲೆಗಂತೂ ಅದು ಹತ್ತಲೇ ಇಲ್ಲ! ಸಿ ಬರಲಿಲ್ಲ ಬದಲಿಗೆ ಅದನ್ನು ನೆನೆದರೆ ಸಿಟ್ಟು ಬರುತಿತ್ತು! ನಮ್ಮ ಸಿ ಅಧ್ಯಾಪಕಿ ಸವಾಲೆಸೆಯುತ್ತಿದ್ದರು. "ತಮಿಳು ತೆಲುಗು ಎಷ್ಟು ಸುಲಭವಾಗಿ ಕಲಿಯುತ್ತೀರಿ. ಅಷ್ಟೇ ಆಸಕ್ತಿಯಲ್ಲಿ ಸಿ ಭಾಷೆ ಕಲಿಯಲು ಏನು ಧಾಡಿ ನಿಮಗೆ?" ನನ್ನ ಬಳಿ ಸೇರಿಗೆ ಸವಾ ಸೇರು ಉತ್ತರವಿತ್ತು... "ತಮಿಳು ತೆಲುಗಿನಂತೆ ಮಹೇಶ್ ಬಾಬು, ರಜನಿ ಕಾಂತ್ ಅಂಥ ಮೆಗಾಸ್ಟಾರ್‌ಗಳು ನಿಮ್ಮ ಸಿ ಭಾಷೆಯಲ್ಲಿದ್ದಾರೆ? ತ್ರಿಶಾ, ಜೆನೆಲಿಯ, ಅನುಷ್ಕಾರಂಥ ಸುಂದರ ನಟಿಯರು ನಿಮ್ಮ ಸಿ ಭಾಷೆಯಲ್ಲಿದ್ದಾರೆ? ಹೋಗಲಿ ಒಂದೆರಡು ಐಟಮ್ ಸಾಂಗ್ ಆದರೂ ಸಿ ಭಾಷೆಯಲ್ಲಿದ್ದಿದ್ದರೆ ನಾವೆ ನಿದ್ದೆಗೆಟ್ಟು ಕಣ್ಣಿಗೆ ಎಣ್ಣೆ ಬಿಟ್ಕೊಂಡು ರಾತ್ರಿಯೆಲ್ಲಾ ಕುಳಿತು ಕಲಿತ್ತಿರಲಿಲ್ಲವೇ?" ಇದನ್ನು ಕೇಳಿದ್ದರೆ ನಮ್ಮ ಮೇಡಮ್ ಬಹುಷಃ ಮೂರ್ಛೆ ಹೋಗುತ್ತಿದ್ದರೇನೋ!

        ವರ್ಷದ ಮೊದಲನೆಯ ಕಂಪ್ಯೂಟರ್ ಲ್ಯಾಬ್ ತರಗತಿಗಳು ಶುರುವಾಗಿದ್ದವು. ನನಗೆ ಅಲ್ಲಿಯ ವರೆಗಿನ ಯಾವುದೇ ಪಾಠಗಳೂ ಅರ್ಥವಾಗಿರಲಿಲ್ಲ. ಆಗಲೇ ಕಂಪ್ಯೂಟರ್ ಎದುರು ತಂದು ಕೂಡಿಸಿಬಿಟ್ಟಿದ್ದರು. ಅದೃಷ್ಟವಶಾತ್ ನನ್ನ ಎದುರಿದ್ದ ಕಂಪ್ಯೂಟರನ್ನು ಯಾರೋ ಪುಣ್ಯಾತ್ಮರು ಬಳಸಿ ಒಂದು ಸಿ ಪ್ರೋಗ್ರಾಮ್ ತೆಗೆದಿಟ್ಟು ಹೋಗಿದ್ದಾರೆ. ನಾನು ಅದರೆದುರು ಕುಳಿತು ಮಿಕ ಮಿಕ ನೋಡುತ್ತಿದೇನೆ! ತರಗತಿಗೆ ಅಧ್ಯಾಪಕಿ ಆಗಮನವಾಯಿತು. ಅವರು ಎಲ್ಲರಿಗೂ ಪ್ರೋಗ್ರಾಮ್ ಬರೆಯಲು ಒಂದು ಪ್ರಶ್ನೆ ಕೊಟ್ಟರು" write a C program to implement a data structure" ನಾನಂತೂ ಆ ಘಳಿಗೆ ಬೋನಿಗೆ ಬಿದ್ದ ಇಲಿಯಂತಾಗಿದ್ದೆ! ಟಿ.ವಿ. ಪ್ರೋಗ್ರಾಮು, ರೇಡಿಯೋ ಪ್ರೋಗ್ರಾಮು ಬಿಟ್ಟರೆ ನನಗೆ ಬೇರ‍್ಯಾವ ಪ್ರೋಗ್ರಾಮ್ ಬಗ್ಗೆಯೂ ತಿಳಿದಿರಲಿಲ್ಲ ಕೆಲವು ಒಳ್ಳೊಳ್ಳೆ structureಗಳನ್ನು ನೋಡಿದ್ದೆ ಆದರೆ ಅದ್ಯಾವುದರ ಬಗ್ಗೆ ಯೂ ಇಲ್ಲಿ ಬರೆಯುವ ಹಾಗಿಲ್ಲ! ಬಹಳ ಕಸಿವಿಸಿಯಾಗತೊಡಗಿತು. ನನ್ನ ಅಕ್ಕಪಕ್ಕದ ಮೇಧಾವಿಗಳು ಪೇಪರಿನ ಮೇಲೆ ಆಗಲೇ ಏನೇನೋ ಗೀಚಿ ಆಗಲೇ ಕಂಪ್ಯೂಟರಿನಲ್ಲಿ ಅದನ್ನು ಟೈಪಿಸಲು ಶುರು ಮಾಡಿದ್ದರು. ಕುತೂಹಲದಿಂದ ಒಮ್ಮೆ ಅವರ ಕಂಪ್ಯೂಟರ್ ಪರದೆಯನ್ನೊಮ್ಮೆ ಬಗ್ಗಿ ನೋಡಿದೆ. ಅವರು ಕಳ್ಳನನ್ನು ಕಂಡಂತೆ ನನ್ನತ್ತ ಕೆಂಗಣ್ಣು ಬೀರಿದರು. ಬೇರೆ ಮಾರ್ಗವಿಲ್ಲದೇ ಸುಮ್ಮನೆ ಹಾಳೆಯ ಮೇಲೆ ಏನೋ ಗೀಚುತ್ತಾ ಕುಳಿತೆ. ನಾನು ಗೀಚಿದ ಗೆರೆಗಳಲ್ಲಿ ನನ್ನ ಹಾಗೆಯೇ ಕನಸು ಕಾಣುತ್ತಾ ಕುಳಿತ ಹುಡುಗನೊಬ್ಬನ ಚಿತ್ರ ಮೂಡುತ್ತಿತ್ತು.
         ಅಷ್ಟರಲ್ಲಿ ಹಿಂದಿನಿಂದ ಬಳೆ ಗೆಜ್ಜೆಗಳ ಸದ್ದು ಕೇಳಿಸತೊಡಗಿತು. ಓರೆಗಣ್ಣಿನಿಂದ ಒಮ್ಮೆ ಕಣ್ಣಾಡಿಸಿ ನೋಡಿದೆ. ನಮ್ಮ ಕ್ಲಾಸಿನ ಹುಡುಗಿಯರ ದಂಡು ಆಗಷ್ಟೆ ಒಳ ಬಂದು ನನ್ನ ಹಿಂದಿನ ಸಾಲಿನಲ್ಲಿ ಕುಳಿತುಬಿಟ್ಟರು. ನನಗಂತೂ ಆಗ "ಅತ್ತ ಪುಲಿ ಇತ್ತ ದರಿ" ಎಂಬ ಪರಿಸ್ಥಿತಿ! ಹೀಗೆ ಅಬ್ಬೆಪರಿಯಂತೆ ಕುಳಿತರೆ ಮಾನ ಹೋಗುವುದು ಖಂಡಿತ. ನನಗೇನೂ ಬರುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಾಗದಂತೆ ಏನಾದರೂ ಮಾಡಬೇಕೆಂದು ಯೋಚಿಸಿ ನನ್ನ ದುರ್ದೈವವ ಬೈದುಕೊಳ್ಳುತ್ತಾ ಹಾಗೇ ಸುಮ್ಮನೆ ಇತರರಂತೆ ಪ್ರೋಗ್ರಾಮ್ ಟೈಪಿಸುವ ನಟನೆ ಮಾಡಲು ಶುರು ಮಾಡಿದೆ. ಕೀಬೋರ್ಡಿನ ಸಿಕ್ಕ ಸಿಕ್ಕ ಕೀಗಳ ಮೇಲೆ ಬೆರಳಾಡಿಸಿದೆ. ಸುಮ್ಮನೆ ತಲೆ ತಗ್ಗಿಸಿ ಒಂದೇ ಸಮನೇ ಪಟ ಪಟ ಪಟ... ಕಟ ಕಟ ಕಟ... ಎಂದು ಸದ್ದು ಕೇಳುವಂತೆ ಕೀಬೋರ್ಡಿನ ಮೇಲೆ ಬಡಿಯುತ್ತಲೇ ಇದ್ದೆ. ಯಾವ ಯಾವ ಗುಂಡಿಗಳು ನನ್ನ ಬೆರಳುಗಳ ರುದ್ರ ತಾಂಡವಕ್ಕೆ ಸಿಕ್ಕಿ ಅದೆಷ್ಟು ಬಾರಿ ಅಪ್ಪಚ್ಚಿಯಾದವೋ ಗೊತ್ತಿಲ್ಲ. ಒಂದಿಪ್ಪತ್ತು ನಿಮಿಷ ಹಾಗೇ ಸಾಗಿಹಾಕಿದೆ ತಗ್ಗಿದ ತಲೆ ಮಾತ್ರ ಎತ್ತುವ ಧೈರ್ಯ ಮಾಡಲಿಲ್ಲ.
         ಸ್ವಲ್ಪ ಸಮಯದ ನಂತರ ಯಾಕೋ ಹಿಂದಿನ ಸಾಲಿನಿಂದ ಹುಡುಗಿಯರು ಮುಸಿ ಮುಸಿ ನಗುತ್ತಿರುವ ಸದ್ದು ಕೇಳಿ ಬರ ತೊಡಗಿತು. ಏನಿರಬಹುದು ಎಂದು ತಲೆ ಎತ್ತಿ ನೋಡಿದೆ. ನನ್ನ ಪ್ರಯತ್ನವೆಲ್ಲಾ ವ್ಯರ್ಥವಾಗಿತ್ತು! ನಾನು ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೆ! ನನ್ನ ಬೆರಳುಗಳ ಅತ್ಯಾಚಾರ ತಡೆಯಲಾಗದೆ ನನ್ನ ಕಂಪ್ಯೂಟರ್ ಹ್ಯಾಂಗ್ ಆಗಿತ್ತು. ಪ್ರಳಯಕಾಲದಲ್ಲಿ ಪ್ರಾಣಿಗಳು ಎಡ್ಡಾದಿಡ್ದಿ ಓಡುವಂತೆ ನನ್ನ ಪರದೆಯ ಮೇಲೆ ಚಿತ್ರ ವಿಚಿತ್ರ ಅಕ್ಷರ, ಸಂಖ್ಯೆ, ಸಂಕೇತಗಳು ಮೇಲಿಂದ ಕೆಳಗೆ ಕೆಳಗಿಂದ ಮೇಲೆ ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದವು! 
 
ಏನು ಮಾಡಬೇಕೆಂದು ತಿಳಿಯದೇ ಪೆಚ್ಚು ಮೋರೆ ಹಾಕಿ ಕುಳಿತ ನನ್ನ ಬಳಿಗೆ ಹಿಂದಿನಿಂದ ಯಾವುದೋ ಹೆಣ್ಣು ಹೆಜ್ಜೆಗಳು ನಡೆದು ಬಂದಂತಾಯಿತು. ನನ್ನ ಕೆಂಪಾಗಿದ್ದ ಮುಖವನ್ನು ಎತ್ತಿ ನೋಡಿದೆ. ಹೊಳಪಿನ ಕಣ್ಣುಗಳ ನಳಿನಿ ನಗೆ ಬೀರುತ್ತ ಬಂದು ಪಕ್ಕದಲ್ಲಿ ನಿಂತಿದ್ದಳು. ನಾನು ನನ್ನ ಕಂಪ್ಯೂಟರ್ ಪರದೆಯ ಕಡೆ ನೋಡಿ ನನಗೇನೂ ಗೊತ್ತಿಲ್ಲ ಎಂಬಂತೆ ಕೈ ತಿರುವಿದೆ. ವಿಷಯ ಅರಿತ ಅವಳು ಕರುಣಾಮಯಿ ಮದರ್ ತೆರೆಸಾ ಥರ ಲುಕ್ ಕೊಟ್ಟು "ಕಂಟ್ರೋಲ್ ಬ್ರೇಕ್" ಒತ್ತಿ ಎಂದಳು. ನಾನು ಕೀಬೋರ್ಡಿನ ಮೇಲೆ ಕಣ್ಣಾಡಿಸಿದೆ. ಮೂಲೆಯಲ್ಲಿ ಬ್ರೇಕ್ ಕೀ ಕಾಣಿಸಿತು. ತಕ್ಷಣವೇ ಇಲಿ ಹಿಡಿದ ಬೆಕ್ಕಿನಂತೆ ಅದನ್ನು ಹಿಡಿದುಕೊಂಡೆ. ನಂತರ ಕಂಟ್ರೋಲ್ ಕೀಗಾಗಿ ಹುಡುಕಾಡಿದೆ. ಒಂದು ಬಾರಿ.. ಎರಡು ಬಾರಿ.. ಮೂರು ಬಾರಿ... ಕಣ್ಣಾಡಿಸಿದೆ. ಊಂ ಹೂಂ ಸಿಗಲೇ ಇಲ್ಲ. ಹಳೆಯ ಕೀಬೋರ್ಡಾದ್ದರಿಂದ ಕೀಗಳ ಮೇಲಿನ ಅಕ್ಷರಗಳೆಲ್ಲ ಅಳಿಸಿ ಹೋಗಿದ್ದವು! ಬೈದುಕೊಳ್ಳುತ್ತಾ ನಳಿನಿಗೆ ಏನೋ ಹೇಳಲು ಹೋದೆ ಅಂಜಿಕೆಗೆ ಒಣಗಿದ್ದ ನಾಲಿಗೆ ತೊದಲಿತು... "ಕಂಟ್ರೋಲ್ ಸಿಗ್ತಿಲ್ಲ" ಎಂದೆ. ಅವಳು ಕಿಸಕ್ಕನೆ ನಕ್ಕು ಬಿಟ್ಟಳು. ಒಂದು ಕ್ಷಣ ಹೃದಯ ಬಡಿತ ಹೆಚ್ಚಾಯಿತು. ಅಬ್ಬ ಎಂಥ ನಗು! ಅದು ನಗುವೋ ಇಲ್ಲ ಮಾಯಾಜಲವೋ ತಿಳಿಯಲಿಲ್ಲ. ನೆಲದ ಮೇಲೆ ಮುತ್ತುಗಳೇನಾದರೂ ಉದುರಿವೆಯೇ ಎಂದು ಕೆಳಗೆ ನೋಡಬೇಕೆನಿಸಿದರೂ ಅವಳ ಸುಂದರ ನಗುಮುಖದಿಂದ ಕಣ್ತೆರೆಯಲು ಸಾಧ್ಯವಾಗಲಿಲ್ಲ! ಬ್ರೇಕ್ ಕೀ ಮೇಲಿಟ್ಟಿದ್ದ ಕೈ ಇನ್ನೂ ಅಲ್ಲಿಯೇ ಇದೆ! ನಾನು ಮಾತ್ರ ಎಚ್ಚರ ತಪ್ಪಿದ್ದೆ! ಅವಳಿಗೂ ಅದರ ಅರಿವಾಗಿತ್ತು. ತಾನಾಗಿಯೇ ಕಂಟ್ರೋಲ್ ಕೀ ಒತ್ತಿ ನಗು ತಡೆಯಲಾಗದೆ ಹೊರಟುಹೋದಳು. ತಕ್ಷಣ ಪರದೆಯ ಮೇಲೆ ಹರಿದಾಡುತ್ತಿದ್ದ ಅಕ್ಷರಗಳು ಮಾಯವಾದವು. ಕಂಪ್ಯೂಟರ್ ಸರಿ ಹೋಗಿತ್ತು. ಆದರೆ ಈಗ ಹ್ಯಾಂಗ್ ಆಗುವ ಖಾಯಿಲೆಗೆ ನನ್ನ ಮನಸ್ಸು ತಾನಾಗೇ ಶರಣಾಗಿತ್ತು! ಹೃದಯದಲೆಲ್ಲಾ ಏನೇನೋ ಹರಿದಾಡುತ್ತಿರುವಂತೆ ಭಾಸವಾಗುತಿತ್ತು. ಅವಳು ಹೋದ ದಿಕ್ಕಿನಲ್ಲೇ ಇನ್ನು ನೋಡುತ್ತಾ ಕುಳಿತಿದ್ದೆ.
         ಹಿಂದಿನಿಂದ ಯಾರೋ ಬೆನ್ನು ತಟ್ಟಿ ನನ್ನ ಇಹಲೋಕಕ್ಕೆ ಕರೆತಂದರು. ತಿರುಗಿ ನೋಡಿದರೆ ಎದುರಿಗೆ ನಮ್ಮ ಸಿ ಅಧ್ಯಾಪಕಿ ಸಿಟ್ಟಿನಿಂದ ನನ್ನೆದುರು ನಿಂತು ಉತ್ತರಪತ್ರಿಕೆ ಕೇಳುತ್ತಿದ್ದರು. ಅವರ ಕೈಯಲ್ಲಿದ್ದ ಇತರರ ಉತ್ತರ ಪತ್ರಿಕೆಯಲ್ಲಿ ದೊಡ್ಡ ದೊಡ್ಡ ಸಿ ಪ್ರೋಗ್ರಾಮ್‍ಗಳು ರಾರಾಜಿಸುತ್ತಿತ್ತು. ನನ್ನ ಉತ್ತರಪತ್ರಿಕೆಯಲ್ಲಿ ಮಾತ್ರ ಈ ಚಿತ್ರಕಲೆ! 
 
ಏನು ಮಾಡುವುದೋ ತೋಚದೆ ಒಂದು ನಿಮಿಷ ಸಮಯ ಕೇಳಿದೆ. ಅವರು ಸರಿಯೆಂದು ಮುಂದಿನ ಸಾಲಿನವರತ್ತ ಹೋದರು. ನಾನು ತಕ್ಷಣ ಆ ಚಿತ್ರದ ಪಕ್ಕವೇ ಕ್ಷಮೆಯಾಚಿಸಿ ಪ್ರಾಸದಲ್ಲೇ ಎರಡು ಸಾಲು ಬರೆದೆ -

ಕ್ಷ - ಮಿ -  ಸಿ
I dont know - C

ಅದರ ಮೇಲೊಂದು ಹಾಳೆ ಮುಚ್ಚಿ ಅವರ ಕೈಗಿಟ್ಟು ಹೊರ ಬಂದೆ. ಹೊರ ನಡೆದಾಗ ನನ್ನ ಹೆಜ್ಜೆಗಳು ಏಕೋ ಹಗುರವಾಗಿದ್ದವು. ಬೀಸುತ್ತಿದ್ದ ತಂಪಾದ ಗಾಳಿಯಲ್ಲಿ ಮನಸ್ಸು ತೇಲುತ್ತಿತ್ತು. ಆಂದು ಕಂಪ್ಯೂಟರಿನ ಕಂಟ್ರೋಲ್ ಕೀ ಸಿಕ್ಕಿತಾದರೂ ನನ್ನ ಹೃದಯದ ಕಂಟ್ರೋಲ್ ಕೀ ಕಳೆದುಹೋಗಿತ್ತು! ಹುಡುಕಿಕೊಡಲು ಮತ್ತೆ ನಳಿನಿ ಬರಬಾರದೇ ಎನಿಸುತಿತ್ತು!

ಕ್ಲೈಮ್ಯಾಕ್ಸ್: ಕಾಲೇಜಿನ ಕೊನೆಯ ದಿನಗಳು.. ನಳಿನಿ ಅಂತೂ ಸಿಗಲಿಲ್ಲ... ಆದರೆ ನಾನು ಸಿ ಭಾಷೆಯಲ್ಲಿ ಪರಿಣಿತನಾಗಿ ಅದರಲ್ಲೇ ಕಂಪ್ಯೂಟರ್ ಗೇಮ್ ಒಂದನ್ನು ಬರೆದಿದ್ದೆ. ಮೊದಲ ಪರೀಕ್ಷೆಯಲ್ಲಿ ನನ್ನ ಚಿತ್ರ ಕವನ ನೋಡಿ ಇವನಲ್ಲಿ ಪ್ರತಿಭೆಯಿದೆ ಎಂದು ನಂಬಿ ಪಾಸು ಮಾಡಿಸಿದ್ದ ಕರುಣಾಮಯಿ ಅಧ್ಯಾಪಕಿ ಆ ದಿನ ನೋಡಲು ನಮ್ಮೊಂದಿಗಿರಲಿಲ್ಲ.