Monday, February 14, 2011

ಪ್ರೀತಿಯ ಬಾನಲ್ಲೊಂದು ಧೃವತಾರೆ!

scraps orkut



ಗೆಳೆಯರೇ,




ನಿಮಗೆಲ್ಲಾ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು! ಈ ದಿನ ನಿಮಗೊಂದು ಕಥೆ ಹೇಳುತ್ತಿದ್ದೇನೆ. ಇದು ನಾನು ಬರೆದಿರುವ ಮೊದಲ ಕಥೆ. ತುಂಬಾ ದೊಡ್ಡದಾಗಿ ಗೀಚಿರುವೆ.. ದಯವಿಟ್ಟು ತಾಳ್ಮೆಯಿಂದ ಓದಿ ಇಷ್ಟವಾದರೂ ಆಗದಿದ್ದರೂ.. ತಿಳಿಸಿ.. ತಪ್ಪುಗಳಿದ್ದರೆ ತಿಳಿಸಿ.. ನಿಮ್ಮ ಕಾಮೆಂಟುಗಳಿಗೆ ಕಾಯುತ್ತಿರುವೆ.. ಧನ್ಯವಾದಗಳು.



ಇಂತಿ,
ನಿಮ್ಮ ಪ್ರೀತಿಯ ಪ್ರೇಮ ಕವಿ
ಪ್ರದೀಪ್ ರಾವ್.


==== ಭಾಗ-೧====



ಮಧ್ಯಾಹ್ನದ ಸಮಯ. ಉದಾಸೀನನಾಗಿ ಬೆನ್ನನ್ನು ಹಿಂದಕ್ಕೆ ಒರಗಿಸಿ ಕೈಯಲ್ಲಿ ಕಾಫ಼ಿಲೋಟ ಹಿಡಿದು ಮೇಲೆ ನೋಡುತ್ತಾ ಯೋಚನಾ ಲೋಕದಲ್ಲಿ ಮಗ್ನನಾಗಿದ್ದೆ. ಬೆಳಗ್ಗೆ ಮನೆಯಲ್ಲಿ ನಡೆದ ಮಾತುಗಳು ಮತ್ತೆ ಮತ್ತೆ ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ಮದುವೆ ಮಾಡಿಕೋ ಎಂದು ಬಹಳ ವರ್ಷಗಳಿಂದ ಮನೆಯಲ್ಲಿ ಒತ್ತಾಯ ಮಾಡುತ್ತಿದ್ದರೂ, ನಾನು ಅದಕ್ಕೆ ಓಗೊಟ್ಟಿರಲಿಲ್ಲ. ಇಂದು ನನ್ನ ಮೂವತ್ತೈದನೇ ಹುಟ್ಟುಹಬ್ಬವಾಗಿದ್ದರೂ ಇದೇ ಕಾರಣಕ್ಕೆ ಅಮ್ಮನ ಮುಖದಲ್ಲಿ ನಗುವೇ ಇರಲಿಲ್ಲ.. ಬದಲಾಗಿ ಇಂದು ಅವರ ಕಣ್ಣಲ್ಲಿ ನೀರು ನೋಡಬೇಕಾಯ್ತು.. ನಿನ್ನೆ ಮನೆಗೆ ಶಿಲ್ಪಾ ಬಂದು ಅಮ್ಮನಿಗೆ ಇನ್ನಷ್ಟು ತೆಲೆ ಕೆಡಿಸಿದ್ದಳು ಎಂದೆನಿಸುತ್ತದೆ. ನನ್ನ ಈ ಹಠಕ್ಕೆ ಕಾರಣ ಅವರಿಗೆ ತಿಳಿಯದ್ದೇನಲ್ಲ. ನಾನು ಸರಿ ಹೋಗುವೆನೆಂದು ಇಷ್ಟು ದಿನ ತಾಳ್ಮೆಯಿಂದಿದ್ದರು. ಆದರೆ ಇನ್ನು ಮುಂದೆ ಯಾಕೋ ನಾನು ಹಠ ಸಾಧಿಸುವುದು ಕಷ್ಟವೆನಿಸಿತ್ತು.
"ಟಿಂಣ್ ಟಿಂಣ್" ಎದುರಿಗಿದ್ದ Laptop ಸದ್ದು ಮಾಡಿ ನನ್ನ ಯೋಚನಾ ಲೋಕದಿಂದ ವಾಪಸ್ ಕರೆತಂದಿತ್ತು. Outlook reminder ಇನ್ನು ಒಂದು ಘಂಟೆಯಲ್ಲಿmeeting ಶುರು ಆಗಲಿದೆ ಘೋಷಿಸಿತ್ತು. ಸಮಯ ನೋಡಿಕೊಂಡೆ 3:30 ಆಗಿತ್ತು ನನ್ನ cabin ನಿಂದ ಹೊರಗೆ ಜನ ಗಡಿಬಿಡಿಯಲ್ಲಿ ಕೆಲಸ ಮಾಡುತ್ತಿರುವುದು ಕಾಣಿಸುತಿತ್ತು. Laptop ಪಕ್ಕದಲ್ಲಿ ಕೆಲವು ಪತ್ರಗಳು ನನ್ನ ಸಹಿಗಾಗಿ ಕಾದಿದ್ದವು. ನನ್ನದೇ ಕಂಪನಿ.. meeting ನಡೆಸುವುದು ನಂತರ ಪತ್ರಗಳಿಗೆ ಸಹಿ ಹಾಕುವುದಷ್ಟೇ ನನ್ನ ಕೆಲಸ. ಆದರೂ ಇಂದು ಅಷ್ಟನ್ನು ಮಾಡಲೂ mood ಇರಲಿಲ್ಲ. ಲೋಟ ನೋಡಿದೆ. ಅದರಲ್ಲಿ ಕಾಫ಼ಿ ಎಂದೋ ಆರಿ ತಣ್ಣಗಾಗಿತ್ತು. ಏನು ಮಾಡಲೂ ತಲೆ ಓಡುತ್ತಿರಲಿಲ್ಲ. "Unable to attend meeting due to emegency work" ಎಂದು mail ಕಳಿಸಿ, ಚೇರಿನ ಹಿಂದೆ ಹಾಕಿದ್ದ ಕೋಟನ್ನು ಹೆಗಲಿಗೇರಿಸಿ ಹೊರಟೇಬಿಟ್ಟೆ.ಹೊರಗೆ ಕೆಲಸದಲ್ಲಿ ಮಗ್ನಳಾಗಿದ್ದ ಶಿಲ್ಪಾ ತಲೆಯೆತ್ತಿ ನೋಡಿ, "ಎಲ್ಲಿಗೆ" ಎಂದು ಸನ್ನೆ ಮಾಡಿದಳು. ನಾನು ಸುಮ್ಮನೆ ತಲೆಯಾಡಿಸಿ ಬಂದೆ.
ಆಫ಼ೀಸಿನ ಹೊರಗೆ ಪಾರ್ಕಿಂಗ್ ಕಡೆಗೆ ನಡೆದು ಹೋಗುತ್ತಿದ್ದಾಗ ಪಕ್ಕದಲ್ಲಿದ್ದ ಕಾಫ಼ಿ ಡೇನಲ್ಲಿ ನಮ್ಮ ಕಂಪನಿಯ ಹೊಸ ಉದ್ಯೋಗಿಗಳಾದ ಸ್ವರೂಪ್, ದಿವ್ಯಾಳ ಹೆಗಲ ಮೇಲೆ ಕೈ ಹಾಕಿಕೊಂಡು ಏನೋ ಮಾತಾಡುತ್ತಾ ಕುಳಿತಿದ್ದುದು ಕಾಣಿಸಿತು. ಎಂದಿನಂತೆ ಇಂದೂ ಅವರನ್ನು ಕಂಡು, ಆ ಕ್ಷಣ ಹಳೆಯದೇನೋ ನೆನೆದು, ಮನಸಲ್ಲಿ ಎಲ್ಲೋ ತಲೆಯೆತ್ತುವ ಹತಾಶೆಯನ್ನು ಅಲ್ಲೆ ಕೊಂದು, ಮುಗುಳ್ನಕ್ಕು, .. "Huh!... Lucky couple!" ಎಂದುಕೊಳ್ಳುತ್ತಾ ಹೆಜ್ಜೆ ಹಾಕಿದೆ.

ಕಾರು ಹತ್ತಿ ಹೊರಟೆ. ಮಧ್ಯಾಹ್ನದ ಸಮಯ ಟ್ರಾಫ಼ಿಕ್ ಇಲ್ಲದ ಬೀದಿಗಳಲ್ಲಿ ನನ್ನ ದೊಡ್ಡ ವಿದೇಶಿ ಕಾರು ಕೂಡ ಸರಾಗವಾಗಿ ಸಾಗಿತ್ತು. ಮನೆಗೆ ಹೋಗುವ ದಾರಿಯಲ್ಲಿ ಇಂದು ಮತ್ತೊಮ್ಮೆ ಆ ಉದ್ಯಾನವನ ನನ್ನ ಕಣ್ಣಿಗೆ ಬಿತ್ತು. ತಳಮಳ ತುಂಬಿ, ಶಾಂತಿಗಾಗಿ ಹಂಬಲಿಸುತ್ತಿದ್ದ ನನ್ನ ಮನಸ್ಸಿಗೆ ಅಲ್ಲಿ ಕೆಲ ಕಾಲ ಕುಳಿತು ಹೋಗೋಣವೆನಿಸಿತು. ಏಕಾಂತದಲ್ಲಿ ಕುಳಿತು ನನ್ನನೇ ನಾನು ಕೆಲ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎನಿಸುತ್ತಿತ್ತು. ಅದಕ್ಕೆ ಈ ಉದ್ಯಾನವೇ ಸರಿಯಾದ ಜಾಗ ಎಂದು ಏಕೋ ಮನಸ್ಸು ಹೇಳಿತ್ತು. ಸರಿಯೆಂದು ಕಾರನ್ನು ಅಲ್ಲೆ ಪಾರ್ಕ್ ಮಾಡಿದೆ. ಉದ್ಯಾನದ ಮುಖ್ಯ ದ್ವಾರದ ಬಳಿ ಕಡಲೇಕಾಯಿ, ಸೌತೇಕಾಯಿ, ಹೂವು, popcorn ಜೊತೆಗೆ SIM card ಮಾರುವವರು ಕೂಡ ಸೇರಿಕೊಂಡು ಬರುವವರನ್ನು ಹೋಗುವವರನ್ನು ಸುತ್ತುವರಿಯುತ್ತಿದ್ದರು. ನಾನು ಯಾರನ್ನೂ ತಲೆಯೆತ್ತಿಯೂ ನೋಡದೆ ಸುಮ್ಮನೆ ಒಳಗೆ ನಡೆದೆ.
ಉದ್ಯಾನದ ಒಳಗೆ ಎಲ್ಲೆಲ್ಲೂ ಶಾಂತಿ, ನಿಶ್ಯಬ್ದ, ಶುದ್ಧ ಗಾಳಿ ತುಂಬಿತ್ತು. ಇನ್ನೂ ಹೆಚ್ಚು ಜನರು ಬಂದಿರಲಿಲ್ಲ. ಹಾಗೆ ನಡೆದು ಹೋದೆ.. ಹದಿನೈದು ವರ್ಷದ ಕೆಳಗೆ ಇದ್ದ ಕಾಲುದಾರಿಗಳ ನಕ್ಷೆ ಇನ್ನೂ ಬದಲಾಗಿರಲಿಲ್ಲ.. ಹೌದು.. ನಾನೀ ಉದ್ಯಾನದೊಳಗೆ ಕೊನೆಯ ಬಾರಿ ಕಾಲಿಟ್ಟಿದುದು ಇಂದಿಗೆ ಸರಿಯಾಗಿ ಹದಿನೈದು ವರ್ಷಗಳ ಹಿಂದೆ.. ಇನ್ನೂ ಆ ದಿನವ ನಾನು ಮರೆತಿಲ್ಲ. ಆಗ ಇಲ್ಲಿ ಕಳೆದಿದ್ದ ಯೌವ್ವನದ ಕಾಲೇಜು ದಿನಗಳು ಮರೆಯಲಾಗುವಂತಹುದಲ್ಲ. ನಾನು ನಡೆದು ಹೋಗುವಾಗ ಪ್ರತಿಯೊಂದು ಹೆಜ್ಜೆಯೂ ಅಂದಿನ ಆ ದಿನಗಳ ರೋಮಾಂಚನಕಾರಿ ಕ್ಷಣಗಳ ನೆನಪುಗಳನ್ನು ತರುತ್ತಿದ್ದವು. ನಡೆಯುತ್ತಾ, ನಡೆಯುತ್ತಾ ಆ ಜಾಗವನ್ನು ತಲುಪಿಬಿಟ್ಟೆ! ತಲೆಯೆತ್ತಿ ನೋಡಿದೆ.. ಅದೇ ಬೃಹದಾಕಾರದ ಮರ!



ಆಗ ಜೋರಾಗಿ ಒಮ್ಮೆ ತಂಗಾಳಿ ಬೀಸಿತು.. ಅದರ ಎಲೆಗಳೆಲ್ಲ ಒಮ್ಮೆಲೆಗೆ ನನ್ನೆಡೆಗೆ ತಿರುಗಿ ಏನೋ ನೆನಪಿಸಿಕೊಂಡು ನಕ್ಕಂತೆ ಭಾಸವಾಯಿತು! ಆ ಮರದ ಕೆಳಗೆ ಇನ್ನೂ ಹಾಗೇ ಇದೆ.. ಆ ಅಗಲವಾದ ಬೆಂಚು.. ಎಂದೋ ಕಳೆದು ಹೋದದ್ದನ್ನು ಮರಳಿ ಪಡೆದವನಂತೆ ಸಂತೋಷವಾಗಿ ಹೋಗಿ ಕುಳಿತುಕೊಂಡೆ ಆ ಬೆಂಚಿನ ಮೇಲೆ. ಮೈ ಮೇಲೆ ಬೀಳುತ್ತಿದ್ದ ತಂಪಾದ ಆ ಮರದ ನೆರಳು, ನನ್ನಲ್ಲಿ ನೂರೊಂದು ನೆನಪುಗಳನ್ನು ತರುತ್ತಿತ್ತು. ಎದೆತುಂಬಿದಂತಾಗಿ ಕಣ್ಣು ಬಿಟ್ಟು ಸುತ್ತಲೂ ಒಮ್ಮೆ ಕಣ್ಣಾಡಿಸಿದೆ.. ಪಕ್ಕದಲ್ಲೇ ಇದ್ದ ಆ ಮರದ ಪೊಟರೆಯ ಮೇಲೆ ಅಂದವಾಗಿ ಢಾಳವಾಗಿ ಕೆತ್ತಿದ್ದ ಎರಡು ಹೃದಯಗಳ ಚಿತ್ರ ಕಣ್ಣು ಕುಕ್ಕಿತು... ತಕ್ಷಣವೇ ನನ್ನ ಮುಖ ಮಂಕಾಯಿತು.. ಹದಿನೇಳು ವರ್ಷಗಳ ಕೆಳಗೆ ನಾವುಗಳೇ ಕೆತ್ತಿದ್ದ ಹೃದಯಗಳು ಇನ್ನು ಅಲ್ಲಿ ಹಾಗೆಯೇ ಇರಬಹುದೆಂದು ನಾನು ಎಣಿಸಿರಲಿಲ್ಲ.. ಅಂದು ನಾವು ನಾಲ್ಕು ಜನ ಸೇರಿಕೊಂಡು ಕೆತ್ತಿದ್ದ ಎರಡು ಹೃದಯಗಳವು.. ನನ್ನ ಆಪ್ತ ಗೆಳೆಯ ಧೃವ ಮತ್ತು ಅವನ ಗೆಳೆತಿ ಸ್ವಾತಿ ಬಲದಲ್ಲಿರುವ ಹೃದಯವನ್ನೂ.. ನಾನು ಹಾಗೂ ನನ್ನ ದಮ್ಮು ಎಡಭಾಗದ ಹೃದಯವನ್ನೂ ಕೆತ್ತಿದ್ದೆವು.. ಏನೇ ಬಂದರೂ ನಾವು ನಾಲ್ಕು ಜನ ಒಟ್ಟಾಗಿ ಇರುತ್ತೇವೆ, ಆ ಜೋಡಿ ಹೃದಯಗಳಂತೆ ಎಂದು ಅದರ ಮುಂದೆ ನಿಂತು ಶಪಥ ಮಾಡಿದ್ದೆವು.. ಇಂದು ಯಾರೂ ಇಲ್ಲ.. ಮಾತು ಮರೆಯುವ ಮನುಷ್ಯರಿಗಿಂತ ಮನಸಿಲ್ಲದ ಮರಗಳೇ ಲೇಸು, ಜೀವಂತ ಹೃದಯಗಳು ಒಂದನೊಂದು ಕೊಂದರೂ, ಮರವು ಮಾತ್ರ ಆ ಹೃದಯಗಳನ್ನು ಆ ದಿನದ ನೆನಪಿಗಾಗಿ ತನ್ನ ಮಡಿಲಿನಲಿ ಇನ್ನು ಜೋಪಾನವಾಗಿಟ್ಟುಕೊಂಡು ಹೃದಯವಂತಿಕೆ ಮೆರೆದಿದೆ ಎನ್ನಿಸಿತ್ತು!
ಆಗಿನ ಕಾಲದಲ್ಲಿ ನಾನು ಕಡು ಬಡತನದಲ್ಲಿದ್ದವನು. ಪ್ರೀತಿಯೆಂಬುದು ಶ್ರೀಮಂತರ ಸ್ವತ್ತು, ಬಡವರಿಗೆ ಪ್ರೀತಿಸುವ ಯೋಗ್ಯತೆಯಿಲ್ಲ ಎಂದು ಬಹಳಷ್ಟು ಜನ ನನಗೆ ಹೇಳುತ್ತಿದ್ದರು. ಆದರೂ ಮನಸ್ಸು ಒಪ್ಪಲಿಲ್ಲ. ನಾನೂ ಒಬ್ಬಳನ್ನು ಪ್ರೀತಿಸಿಯೇ ಬಿಟ್ಟೆ. ಅವಳ ಹೆಸರು ಧಮಯಂತಿ. ನನ್ನ ಉಸಿರಿನಂತೆ ಇದ್ದ ಅವಳನ್ನು ಪ್ರೀತಿಯಿಂದ ದಮ್ಮು ಎಂದು ಕರೆಯುತ್ತಿದ್ದೆ. ನಾನು ಏನೋ ಒಪ್ಪಿ ಬಿಟ್ಟೆ.. ಆದರೆ ಆಗಿನ ಈ ಬಡಪಾಯಿಯನ್ನು ಅವಳು ಒಪ್ಪಲು ಭಗೀರಥ ಪ್ರಯತ್ನ ಮಾಡಬೇಕಾಯ್ತು. ಈ ಬಡವನಿಗೆ ಅವಳನ್ನು ಸುಖವಾಗಿ ಸಾಕುವ ಶಕ್ತಿಯಿದೆ.. ಜೀವನದಲ್ಲಿ ಮುಂದೆ ಬರಲು ಬುದ್ಧಿಯಿದೆ ಎಂದು ಅವಳಿಗೆ ನಂಬಿಕೆ ಮೂಡಿಸುವಲ್ಲಿ ನನ್ನ ಜೀವನವೇ ಮುಗಿದು ಹೋಗುವಂತೆ ಅನಿಸಿತ್ತು.. ಶತಪ್ರಯತ್ನಗಳ ನಂತರ ಒಂದು ದಿನ ಹೇಗೋ ಅರ್ಧ ಮನಸ್ಸಿನಿಂದಲೇ ಅವಳು ಯಾರಿಗೂ ಕೇಳದ ದನಿಯಲ್ಲಿ ಮೆಲ್ಲಗೆ ತಲೆ ತಗ್ಗಿಸಿ "ಹೂಂ" ಎಂದು ಬಿಟ್ಟಳು. ಅಂದು ಖುಶಿಯಲ್ಲಿ ನಾ ಹುಚ್ಚನಾಗಿದ್ದೆ! ಅದರ ಮಾರನೇ ದಿನವೇ ಈ ನನ್ನ ಹುಟ್ಟುಹಬ್ಬದ ದಿನವಾಗಿತ್ತು. ಅದು ನನ್ನ ಪ್ರೀತಿಯು ಹುಟ್ಟಿದ ಹಬ್ಬ.. ನನ್ನ ಪಾಲಿಗೆ ಮರುಜನ್ಮದ ದಿನವೇ ಆಗಿತ್ತು. ಅಂದು ನಾನು, ದಮ್ಮು, ಧೃವ, ಸ್ವಾತಿ ಇದೇ ಜಾಗದಲ್ಲಿ ಸೇರಿ ಈ ಮರದ ಮೇಲಿನ ಹೃದಯದ ಆಕಾರಗಳಿಗೆ ಜನ್ಮ ನೀಡಿದ್ದೆವು!
ಧೃವ ಶ್ರೀಮಂತರ ಮನೆಯವನು. ಸ್ವಾತಿಗೆ ಅವನ ಮೇಲೆ ಅಪಾರ ನಂಬಿಕೆ. ಅವರು ನಮ್ಮಂತೆ ಯಾವುದಕ್ಕೂ ಚಿಂತಿಸುತ್ತಿರಲಿಲ್ಲ. ನನಗೆ ಎಷ್ಟೋ ಬಾರಿ ಅವರ ಮೇಲೆ ಅಸೂಯೆ ಮೂಡುತಿತ್ತು. ನಾವು ಸಿನಿಮಾ, ಹೋಟೆಲ್ ಎಂದು ಹೊರಗೆ ಹೋದಾಗಲೆಲ್ಲಾ ನನ್ನ ಬಳಿ ಹಣವಿಲ್ಲವೆಂದು ಅರಿತು ಧೃವ ತಾನೇ ಖರ್ಚು ಮಾಡುತಿದ್ದ. ಓದು ಮುಗಿದು ಇಂಜಿನಿಯರ್ ಆದ ಮೇಲೆ ಇದನ್ನೆಲ್ಲ ಅವನಿಗೆ ವಾಪಸ್ ಕೊಡಬೇಕೆಂದು ಎಲ್ಲವನ್ನು ಲೆಕ್ಕ ಇಡುತಿದ್ದೆ. ಕೆಲ ದಿನಗಳ ಕಾಲ ನಾವು ನಾಲ್ಕು ಜನ ಜೊತೆ ಜೊತೆಗೆ ಸಂತೋಷವಾಗಿ ಕಾಲ ಕಳೆದವು. ಆದರೆ ಆ ಸಂತೋಷ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ದಮ್ಮು ನನ್ನೊಡನೆಯಿರುವಾಗ ಮೌನವಾಗಿರುತ್ತಿದ್ದಳು. ನಮ್ಮಿಬ್ಬರ ನಡುವಿನ ಈ ವಿಚಿತ್ರ ಮೌನ ಕಂಡು ಧೃವ ಮತ್ತು ಸ್ವಾತಿ ನಗುತ್ತಿದ್ದರು. ಯಾವುದೋ ಚಿಂತೆ ನನ್ನವಳನ್ನು ಕಾಡುತ್ತಿದಂತಿತ್ತು. ಅವಳಿಗೆ ನನ್ನ ಮೇಲೆ ನಂಬಿಕೆಯಿರಲಿಲ್ಲ. ಅವಳ ಮನಸ್ಸು "yes" ಮತ್ತು "No"ಗಳ ಮಧ್ಯೆ ಉಯ್ಯಾಲೆಯಾಡುತಿತ್ತು. ಹೀಗೆ ಆಡುತ್ತಿದ್ದ ಉಯ್ಯಾಲೆ ಒಂದು ದಿನ ಸೂತ್ರ ಹರಿದು ಕಳಚಿಕೊಂಡಿತು. ವರ್ಷ ಮುಗಿಯುತ್ತಿದ್ದಂತೆಯೇ ದಮ್ಮು ಬದಲಾಗಿಬಿಟ್ಟಳು. ಈ ಬಡಪಾಯಿ ಯಾವುದಕ್ಕೂ ಉಪಯೋಗವಿಲ್ಲದವನು ಎಂದು ಬಗೆದು ಹೊರಟುಹೋದಳು. ನಾನು ಹುಚ್ಚನಂತೆ ಅವಳ ಹಿಂದೆ ಅಲೆದಾಡಿದೆ. ಅವಳು ಊರಿನಿಂದಲೇ ಕಣ್ಮರೆಯಾದಳು. ನನ್ನ ಹುಚ್ಚು ಅಲೆದಾಟಗಳ ಮಧ್ಯೆ ಹೀಗೆ ಒಂದು ಸಂಜೆ ಬಂದು ಇದೇ ಬೆಂಚಿನ ಮೇಲೆ ಕುಳಿತಿದ್ದೆ. ಮನೆಯ ಕಡೆ ಹೋಗಿ ಎಷ್ಟೋ ದಿನವಾಗಿತ್ತು. ಕೊಳೆಯಾದ ಬಟ್ಟೆ, ತಲೆ ತುಂಬಾ ಕೂದಲು, ಸೊರಗಿ ಹೋದ ಮುಖದ ತುಂಬಾ ಗಡ್ಡ, ನಿದ್ದೆ ಕಂಡು ಎಷ್ಟೋ ದಿನವಾದಂತಿದ್ದ ಕೆಂಪು ಕಣ್ಣುಗಳು ನನ್ನನು ಯಾರೂ ಗುರುತೇ ಹಿಡಿಯದಷ್ಟು ಕೆಟ್ಟದಾಗಿ ಕಾಣುತಿದ್ದೆ. ಅಕಸ್ಮಾತ್ ಆಗಿ ಅದೇ ಸಮಯಕ್ಕೆ ಧೃವ ಮತ್ತು ಸ್ವಾತಿ ಅಲ್ಲಿಗೆ ಬಂದರು. ಅವರಿಗೆ ನನ್ನ ನೋಡಿ ನಗು ತಡೆಯಲಾಗಲಿಲ್ಲ. ಮಾತೇ ಬರದಷ್ಟು ನಗುತಿದ್ದ ಅವರಿಬ್ಬರನ್ನು ಕಂಡು ಸಿಟ್ಟಿನಿಂದ ಎದ್ದು ಹೊರಟುಹೋದೆ. ಅಂದು ಅವರೊಡನೆ ಏನೂ ಮಾತಾಡಲಿಲ್ಲ. ಅವರಿಬ್ಬರನ್ನು ನಾ ನೋಡಿದ್ದು ಅದೇ ಕೊನೆಯ ಬಾರಿ. ಇನ್ನು ಮುಂದೆ ಪರಿಸ್ಥಿತಿ ಬದಲಾಗುವವರೆಗೂ ಯಾರಿಗೂ ಮುಖ ತೋರಿಸಬಾರದು ಎಂದು ನಿರ್ಧರಿಸಿ ಹೋದ ನನಗೆ ಇಲ್ಲಿಯವರೆಗೂ ಯಾರೂ ಮತ್ತೆ ಮುಖ ತೋರಿಲ್ಲ!
ಇದೆಲ್ಲ ನಡೆದು ಹೋಗಿ 15 ವರ್ಷಗಳೇ ಸಾಗಿದ್ದರೂ ನನಗೆ ದಮ್ಮು ಮಾಡಿದ ಆಘಾತದಿಂದ ಹೊರಬರಲು ಸಾಧ್ಯವಾಗಿಲ್ಲ. ಅಂದು ಇದೇ ಜಾಗದಿಂದ ಸಿಟ್ಟಿನಲ್ಲಿ ಎದ್ದು ಹೋದ ನನ್ನ ಮನಸಲ್ಲಿ ಹೇಳಿಕೊಳ್ಳುತಿದ್ದುದು ಒಂದೇ ಮಾತು "ಪರಿಸ್ಥಿತಿಯನ್ನು ಬದಲಾಯಿಸಬೇಕಿದೆ.. ಇನ್ನು ಬದಲಾಯಿಸಲೇಬೇಕಾಗಿದೆ". ಅಂದು ಕುದಿಯುವ ರಕ್ತದಲ್ಲಿ ಎದ್ದು ಹೋದ ನನ್ನ ಸಿಟ್ಟು, ತಾಪ ತಣ್ಣಗಾಗಿದ್ದು ಇಂದು ಅಮ್ಮನ ಕಣ್ಣಿನಲ್ಲಿ ಕಂಡ ಕಣ್ಣೀರಿನಿಂದ! ಹದಿನೈದು ವರ್ಷಗಳಿಂದ ಕೆಲವು ಪ್ರಶ್ನೆಗಳು ನನ್ನನು ಕಾಡುತಿತ್ತು. ನಿಜವಾಗಿಯೂ ಈ ಭೂಮಿಯ ಮೇಲೆ ಪ್ರೇಮವೆಂಬುದು ಇರುವುದು ಶ್ರೀಮಂತರಿಗಾಗಿ ಮಾತ್ರವೇ ಆಗಿದ್ದರೆ ಇಂದು ನಾನು ಯಾರು? ಶ್ರೀಮಂತನಲ್ಲವೇ? ಅಂದು ಅವಳ ಹಠವನ್ನು ಅವಳು ಸಾಧಿಸಿದಳು, ನಾನು ನನ್ನ ಹಠವನ್ನು ಸಾಧಿಸಿರುವೆ.. ನಾನೀಗ ಈ ಕೋಟಿ-ಕೋಟಿಗಳಿಸುವ ಕಂಪನಿಯ ಮಾಲೀಕ ಎಂದ ಕೂಡಲೇ ಅವಳು ಮರಳಿ ಬರಲು ಸಾಧ್ಯವೇ? ಹಣವಿಲ್ಲದಿದ್ದಾಗ ಬಿಟ್ಟುಹೋಗುವುದು ಸರಿಯೆನಿಸಿದರೆ ಹಣ ಬಂದಾಗ ಮರಳಿ ಬರುವುದೇಕೆ ಸರಿಯೆನಿಸುವುದಿಲ್ಲ? ಆಸ್ತಿ ಪತ್ರಗಳು ಪ್ರೀತಿ ಮಾಡಲು ಯೋಗ್ಯತೆ ಇದೆ ಎಂಬುದಕ್ಕೆ ಪ್ರಮಾಣ ಪತ್ರಗಳೇ? ಹಾಗೆ ಪತ್ರಗಳ ನೋಡಿ ಹುಟ್ಟುವ ಪ್ರೀತಿಗೆ ನಿಜ ಪ್ರೀತಿಯೆನ್ನುವರೇ? ಪ್ರೀತಿಯೇಕೆ ಹಣದಾಸೆಗೆ ಬಾಗುತ್ತದೆ? ಪ್ರೀತಿಯೇಕೆ ಹಣವನ್ನು ಹಿಂಬಾಲಿಸುತ್ತದೆ? ಪ್ರೀತಿ ಮಾಡಲು ಹಣವಿರಬೇಕು ನಿಜ ಆದರೆ ಹಣವಿರುವವರಿಗೆಲ್ಲಾ ನಿಜವಾದ ಪ್ರೀತಿ ಸಿಗುತ್ತದೆ ಎಂದು ಯಾರಾದರೂ ಭರವಸೆ ನೀಡಲು ಸಾಧ್ಯವೇ? ಹಣವಿಲ್ಲದವನನ್ನು ನಂಬಬೇಡಿ, ಪ್ರೀತಿಸಬೇಡಿ ಎಂದು ಅವಳಿಗೆ ಯಾರು ಹೇಳಿಕೊಟ್ಟವರು?.... ಹಹ್! ಈ ಪ್ರೀತಿಯೇ ಹೀಗೋ ಅಥವಾ ಅವಳು ಮಾತ್ರ ಹೀಗೋ?" ಎಂದೂ ಉತ್ತರ ಸಿಗದ ಪ್ರಶ್ನೆಗಳಿವು. ಇನ್ನು ಇವುಗಳಿಗೆ ಉತ್ತರ ಹುಡುಕುವುದರಲ್ಲಿ ಉಪಯೋಗವಿಲ್ಲ ಎಂದು ಇಂದು ನನಗೆ ಅನಿಸುತ್ತಿದೆ..



==== ಭಾಗ-೨===



ಏನೋ ಸದ್ದಾಯಿತು.. ನನ್ನ ಯೋಚನಾ ಲೋಕದಿಂದ ಹೊರಬಂದೆ. ಉದ್ಯಾನದ ಗೇಟಿನ ಬಳಿ SIM card ಮಾರುತ್ತಿದ್ದವ ತನ್ನ ದೊಡ್ಡ ಛತ್ರಿಯನ್ನು ಮಡಿಸಿ ಹೊರಡಲು ಸಿದ್ಧತೆ ನಡೆಸುತ್ತಿದ್ದ. ಸುತ್ತಲೂ ಕತ್ತಲಾಗಿತ್ತು. ವಿದ್ಯುತ್ ಕಡಿತವಿದ್ದಿರಬಹುದು. ಉದ್ಯಾನದಲ್ಲಿ ಯಾವುದೇ ಬೆಳಕಿರಲಿಲ್ಲ. ಉದ್ಯಾನದ ಒಳಗೆ ಒಮ್ಮೆ ಬಗ್ಗಿ ನೋಡಿ, ತನ್ನ ಬ್ಯಾಗ್ ಹಾಗು ಛತ್ರಿ ಹಿಡಿದು ಒಳಗೆ ಕುಂಟುತ್ತಾ ಬಂದ. ನನ್ನ ಕಡೆಗೊಮ್ಮೆ ನೋಡಿ ನನ್ನ ಪಕ್ಕದಲ್ಲಿದ್ದ ಜಾಗದಲ್ಲಿ ಕುಳಿತುಕೊಳ್ಳಲು ಮುಂದಾದ. ನನ್ನ ಏಕಾಂತವನ್ನು ಕೆಡಿಸಿದ್ದಕ್ಕೆ, "ಇಷ್ಟು ದೊಡ್ಡ ಪಾರ್ಕಲ್ಲಿ ಇದೇ ಜಾಗ ಸಿಕ್ತೇ ಇವನಿಗೆ ಕೂತ್ಕೊಳೋಕೆ" ಎಂದುಕೊಂಡೆ. ಕೂರಲು ಕುಂಟುತ್ತಾ ಬಂದವನು ಸ್ವಲ್ಪದರಲ್ಲೆ ಎಡವಿ ಬೀಳುವ ಹಾಗಾಯಿತು. ನಾನು ತಕ್ಷಣವೇ ಆತನನ್ನು ಹಿಡಿದು ಕೂರಿಸಿದೆ.

"Thanks!" ಎಂದ
"No Problem!" ಎಂದೆ.

ಎರಡು ನಿಮಿಷ ಮೌನ ಆವರಿಸಿತ್ತು.

"Sir Relianceನಿಂದ ಒಳ್ಳೆ ಒಳ್ಳೇ offers ಇದೆ ನೋಡ್ತೀರ?" ಎಂದ
"ಇಲ್ಲ, ಬೇಡ.. Sorry" ಎಂದೆ
ಆದರೂ ಅವನು ಅದು ಇದು ಎಂದು ತಲೆ ತಿನ್ನುತ್ತಲೇ ಇದ್ದ.
"ಬೇಡ ಅಂತ ಹೇಳಲಿಲ್ವೇನ್ರಿ ನಿಮ್ಗೆ?" ರೇಗಿದೆ.
" sorry sir! ಬೇಜಾರಾಗ್ಬೇಡಿ ಏನೋ ಹೊಟ್ಟೆಪಾಡು ನಮ್ ಕೆಲ್ಸ ನಾವ್ ಮಾಡ್ತಾ ಇದ್ದೀವಿ ಅಷ್ಟೇ." ಎಂದ
ನನಗೂ ಪಾಪ ಎನ್ನಿಸಿತು. ನಂತರ ಮತ್ತೆ ಮೌನ ಆವರಿಸಿತು.

ನಮ್ಮ ಎದುರಿಗೆ ಕತ್ತಲಲ್ಲಿ ಎರಡು ಕರಿನೆರಳು ಒಂದಕ್ಕೊಂದು ತಬ್ಬಿಕೊಂಡು ನಡೆದುಕೊಂಡು ಹೋಗುತಿತ್ತು.. ಅದನ್ನು ಕಂಡು ನನ್ನ ಕುತೂಹಲ ಕೆರಳಿತು. ದಿಟ್ಟಿಸಿ ನೋಡಿದೆ. ರಸ್ತೆಯಲ್ಲಿ ಹಾದುಹೋದ ಕಾರೊಂದರ ಬೆಳಕಿನಲ್ಲಿ ಕ್ಷಣಮಾತ್ರ ಅವರು ಕಂಡರು. ಯಾರೋ ಪ್ರೇಮಿಗಳು.. ಒಬ್ಬರ ಕೈ ಒಬ್ಬರು ಹಿಡಿದು
ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ಕಗ್ಗತ್ತಲಲ್ಲೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರಲ್ಲ! ಏನು ಕಾಣುತ್ತಿರಬಹುದು ಅವರಿಗೆ ಎಂದುಕೊಂಡು ನಗು ಬಂದಿತು.. ತಾನಾಗಿಯೆ ಎಂದಿನಂತೆ ಬಾಯಿಂದ ಆ ಪದ ಜಾರಿತು.. "Lucky Couple!"
"ಏನ್ Lucky ಸಾರ್? ಕರ್ಮ!.. ಮುಂದೆ ಅನುಭವಿಸುತ್ತಾರೆ ಒಂದಿನ" ಅವನಂದ.
"ಏನೇ ಆದ್ರೂ ಅಂಥ ಪ್ರೀತಿ ಪಡೆಯೋಕೆ ಅದೃಷ್ಟ ಕೇಳ್ಕೊಂಡು ಬಂದಿರಬೇಕು. ಎಷ್ಟು ಸಂತೋಷವಾಗಿದ್ದಾರೆ.." ನಾನೆಂದೆ.
"ಅದು ಏನೋ ನಿಜಾನೇ. ಆದ್ರೆ ಈ ಸಮಾಜ ಅಂಥೋರನ್ನ ನೆಮ್ಮದಿಯಾಗಿ ಬದುಕುವುದಕ್ಕೆ ಬಿಡಬೇಕಲ್ಲ ಸಾರ್?" ಅವನಂದ.
"ಖಂಡಿತ ಬಿಡ್ತಾರೆ ಮಿಸ್ಟರ್.. ನಿಮ್ಮ ಬಳಿ ಹಣ ಇದ್ದರೆ ಜನ ಏನು ಮಾಡಿದರೂ ಸುಮ್ನಿರ್ತಾರೆ" ನಾನೆಂದೆ
"ಯಾಕೆ? ಹಣ ಇದ್ದೋರನ್ನ ಪ್ರೀತಿ ಎಂಬ ಮಾಯೆ ಹಾಳು ಮಾಡಿರುವುದು ನೋಡಿಲ್ವೆ?" ಅವನಂದ.
ಅವನ ಧ್ವನಿಯು ನನ್ನ ಮಾತಿನಿಂದ ಸ್ವಲ್ಪ ಕಂಗೆಟ್ಟವನಂತೆ ಕೇಳಿಸಿತು. ಅವನ ಮುಖ ನೋಡಿದೆ. ಕತ್ತಲಲ್ಲಿ ಅವನ ಕಪ್ಪು ಆಕಾರವಷ್ಟೇ ಕಾಣುತಿತ್ತು. ನಿಟ್ಟುಸಿರುಬಿಟ್ಟು.. ಗಂಭೀರವಾಗಿ...
"ಇಲ್ಲ.. ಸದ್ಯಕ್ಕೆ ಅದು ಹಣವಿಲ್ಲದವರನ್ನು ಮರುಳಾಗಿಸಿ ಹಾಳು ಮಾಡಿದ್ದನ್ನು ಮಾತ್ರ ತುಂಬಾ ಹತ್ತಿರದಿಂದ ನೋಡಿದ್ದೀನಿ"
ನನ್ನ ಮಾತಿನ ಗಾಂಭೀರ್ಯತೆ ಅವನನ್ನು ಎರಡು ನಿಮಿಷ ಮೌನವಾಗಿರಿಸಿತ್ತು.
"ನೀವು ನೋಡಿರಬಹುದು, ಆದರೆ ನಾನು ಅನುಭವಿಸಿದ್ದೀನಿ" ಈಗ ಅವನ ಧ್ವನಿಯೂ ಗಂಭೀರವಾಗಿತ್ತು!
ಜೇಬಿನಲ್ಲಿ ಹುಡುಕಾಡಿದ ನಂತರ ಸಿಗರೇಟ್ ತೆಗೆದ.. ನನಗೂ ಕೇಳಿದ.ನಾನು ಬೇಡವೆಂದು ಕೈ ಆಡಿಸಿದೆ.
"ಕೋಟ್ಯಾಧಿಪತಿಗಳ ಮಗ ನಾನು.. ಈ ಪ್ರೀತಿ ಹುಚ್ಚಿನಿಂದ ಈ ರೀತಿ ಬೀದಿಗಿಳಿದಿದ್ದೀನಿ.." ಎನ್ನುತ್ತಾ ಲೈಟರ್ ತೆಗೆದು ಸಿಗರೇಟ್ ಹೊತ್ತಿಸಿಕೊಳ್ಳಲು ಮುಂದಾದ...


[photo courtesy-gulfave.com]


ಆ ಲೈಟರ್ ಬೆಳಕಿನಲ್ಲಿ ಅವನ ಮುಖ ಕಂಡಿತು.. ನನ್ನ ಎದೆಯು ಒಂದು ಬಡಿತ ಹಾರಿತು.. ಸೊರಗಿ ಹೋದ ಆ ಮುಖ, ಹಣೆಯ ಮೇಲಿನ ಒಂದೆರಡು ಸುಕ್ಕಿನ ಗಂಟು,ಎದ್ದು ಕಾಣುವ ಒಂದೆರಡು ಹೊಲಿಗೆ ಹಾಕಿದ ಗುರುತುಗಳು, ಒರಟು ಗಡ್ಡ, ಕೊಂಚ ಬಿಳಿ ಕೂದಲುಗಳು.. ಇವೆಲ್ಲವುಗಳ ಮರೆಯಲ್ಲಿ ಬದಲಾಗದ ಅದೇ ಬೆಕ್ಕಿನ ಕಣ್ಣುಗಳು! ಅವುಗಳಿಂದಲಷ್ಟೇ ಹೇಳಬಹುದಿತ್ತು.. ಅವನು ನಮ್ಮ ಧೃವನೇ ಅಂತ..!!
ಧೃವ ಏಕೆ ಇಲ್ಲಿ? ಹೀಗೆ? ಸ್ವಾತಿ ಏನಾದಳು? ಮದುವೆಯಾದನೇ ಅಥವ..? ಅವನು ಕುಂಟುತ್ತಿರುವುದು ಏಕೆ?.. ಹೀಗೆ ಮನದಲ್ಲಿ ಸಾವಿರ ಪ್ರಶ್ನೆಗಳ ಪ್ರವಾಹ ಮನದಲ್ಲಿ ಉಕ್ಕಿ ಹರಿಯಿತು..
"ನೀವು ಬಹುಶಃ ಪ್ರೀತಿಯ ಒಂದು ಮುಖವನ್ನಷ್ಟೇ ಕಂಡಿರುವವರೆನ್ನಿಸುತ್ತದೆ.. ನಾನು ಅದರ ಇನ್ನೊಂದು ಕರಾಳ ಮುಖ ಕಂಡವನು. ಹೇಳ್ತೀನಿ ಕೇಳಿ. ಪ್ರೀತಿ ಸಿಕ್ಕವರು ಪಡೋ ಪಾಡು ನಿಮಗೆ ಗೊತ್ತಿಲ್ಲ. ಪ್ರೇಮಿಗಳಿಗೆ ಇಡೀ ಲೋಕವೇ ಶತ್ರುಗಳಾಗುತ್ತಾರೆ ಸಾರ್. ಯಾರೂ ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ.. ಬದುಕು ಹಾಳಾಗಿಹೋಗುವುದು ಸಾರ್."
ಮತ್ತೆ ಎರಡು ನಿಮಿಷದ ಮೌನ..
"ನಿಮ್ದು ಲವ್ ಮ್ಯಾರೇಜ?" ಎಂದೆ..
"ಹೌದ್ಸಾರ್.. ನಿಮ್ದು?" ಎಂದ.
"still no marriage" ಎಂದು ಮುಗುಳ್ನಕ್ಕೆ.. ಅವನು ನಕ್ಕ...
ಅವನ ಹೌದು ಎಂಬ ಉತ್ತರ ಕೇಳಿ ಮನಸ್ಸಿನಲ್ಲಿ ಎದ್ದಿದ್ದ ಅನುಮಾನದ ಅಲೆಗಳು ಸ್ವಲ್ಪ ಶಾಂತವಾದವು. ಸ್ವಾತಿ ಜೊತೆಯಲ್ಲೇ ಇರುವಳು ಎಂದು ಸಮಾಧಾನವಾಯಿತು!
"ಯಾಕೆ ಅಂತ ಕೇಳಬಹುದ?" ಅವನು ಪ್ರಶ್ನಿಸಿದ್ದ..
ಇನ್ನು ಮುಚ್ಚಿಡಲು ನನ್ನ ಕುತೂಹಲ ಬಿಡಲಿಲ್ಲ... "ಅದು ನಿಮಗೆ ಗೊತ್ತಿಲ್ಲವೇ ಮಿಸ್ಟರ್ ಧೃವರಾಜ್?"
ನಾನು ಅವನು ಹೆಸರನ್ನು ಅದೂ ವಿಚಿತ್ರ ರೀತಿಯಲ್ಲಿ ಹೇಳಿದ್ದನ್ನು ಕೇಳಿ ಅವನಿಗೆ ಆಶ್ಚರ್ಯವಾಯಿತು...
"ಯಾರ್.. ನೀವ್..." ಅವನು ಮಾತು ಮುಗಿಸುವಷ್ಟರಲ್ಲಿ ಎಲ್ಲೊ ಹೊಂಚು ಹಾಕಿ ಕುಳಿತಿದ್ದಂತಿದ್ದ ಕರೆಂಟು ಬಂದು, ಪಕ್ಕದಲ್ಲೆ ಇದ್ದ ದೀಪ ’ಪಳಕ್’ ಎಂದು ಬೆಳಗಿತು.
ಹದಿನೈದು ವರ್ಷಗಳ ನಂತರ ಮತ್ತೆ ಅದೇ ಜಾಗದಲ್ಲಿ ನಾನು, ಧೃವ ಭೇಟಿಯಾಗುತ್ತೇವೆ ಎಂದು ನಾನು ಕನಸಲ್ಲೂ ಭಾವಿಸಿರಲಿಲ್ಲ. ಅದೂ ಧೃವನನ್ನು ಈ ಗತಿಯಲ್ಲಿ ನೋಡುತ್ತೇನೆಂದು ಖಂಡಿತ ನೆನೆಸಿರಲಿಲ್ಲ.
ಇಬ್ಬರಿಗೂ ಆ ಕ್ಷಣ ಮಾತೇ ಹೊರಡಲಿಲ್ಲ! "ಹೇ! ನೀನೇನೋ" ಎಂದು ಅಷ್ಟೇ ನುಡಿದು ತಬ್ಬಿಕೊಂಡೆವು.
ಏನೋ ಕೇಳಬೇಕು ಎಂದು ಹೋದ ನನ್ನ ಮಾತುಗಳು ಯಾರೋ ಮೂರನೆಯವರು ಮಾತಾಡಿದ್ದು ಕೇಳಿ ಅರ್ಧಕ್ಕೇ ನಿಂತಿತು....

"ಓಹೋಹೋ ನಮಸ್ಕಾರ ಸ್ವಾಮಿ... ಏನ್ ಬಹಳ ಖುಶೀಲಿರೋ ಹಂಗಿದೆ?" ಧಡೂತಿ ಮನುಷ್ಯನೊಬ್ಬ ಕೈ ಮುಗಿದು ಕೊಂಡು ಬಳಿ ಬರುತಿದ್ದ.
"ಓಹ್! ನೀವಾ ಹಾಗೇನಿಲ್ಲ..." ಧೃವನ ಮುಖ ತಬ್ಬಿಬ್ಬಾದ ಹಾಗಿತ್ತು.
"ಇರ್ತೀರ್ ಬಿಡಿ.. ಲಕ್ಷಾಂತರೂಪಾಯ್ ಸಾಲ ಇಸ್ಕೊಂಡು ಅದನ್ನು ವಾಪಸ್ ಕೊಡೋ ಯೋಚನೇನೆ ಮಾಡದಿದ್ದರೆ ಯಾರಾದ್ರು ಖುಶಿಯಾಗೇ ಇರ್ತಾರೆ."
"ಅದೆಲ್ಲ ಇಲ್ಲಿ ಬೇಡರೀ ನೀವು.." ಧೃವ ಏನೋ ಸಿಟ್ಟಿನಿಂದ ಹೇಳಲು ಹೋದ.
"ಸಾಕ್ ಸುಮ್ಕಿರಯ್ಯ ಕಂಡೀವ್ನಿ.. ಏನ್ ಮಹಾ ದೊಡ್ಡ ಮರ್ಯಾದಸ್ತ ಇವ್ನು.. ನಿನ್ ಹುಡ್ಕೊಂಡು ಮನೆ ಆಫ಼ೀಸು ಅಲೆದಿದ್ದಾಯ್ತು.. ಮನೆ ಹತ್ರ ಮಾತಾಡಿದ್ರೆ ಆಯಮ್ಮ ಕಣ್ಣೀರ್ ಹಾಕತ್ತೆ... ಈಯಪ್ಪನು ಕೈಗೆ ಸಿಗಾಕಿಲ್ಲ ಅಂತಾನೆ.. "
ಧೃವನಿಗೆ ಸಿಟ್ಟು ತಡೆಯಲಾಗದೇ ಅವನೊಡನೇ ಕಾದಾಟಕ್ಕಿಳಿದ.. ಅವನು ಇವನ ಶರ್ಟನ್ನು ಹಿಡಿದು ಎಳೆದ. ಇವನು ಅವನ ಕೋಟು ಹಿಡಿದುಕೊಂಡ. ಜಗಳ ನಿಲ್ಲಿಸಲು ನಾನು ಮಧ್ಯೆ ಹೋಗಿ, ಕಾಲರ್ ಪಟ್ಟಿ ಹರಿದುಕೊಂಡೆ. ಹೇಗೋ ಮಾಡಿ ಅವರಿಬ್ಬರನ್ನು ಬಿಡಿಸಿದರೂ ಮತ್ತೆ ಜಗಳ ಶುರುವಾಗುತಿತ್ತು. ಕೊನೆಗೆ ಆ ದಢೂತಿ ಆಸಾಮಿಯನ್ನು ಪಕ್ಕಕ್ಕೆ ಎಳೆದು, "ನಿಮ್ಮ ದುಡ್ಡು ನಾನ್ ಕೊಡ್ತೀನಿ ಸುಮ್ನಿರ್ರೀ.. ಸುಮ್ನಿರ್ರೀ.." ಎಂದರೂ
"ಇವಾಗ್ಲೆ ತೆಗೆದು ಮಡಗು ಇಲ್ಲಿ ಇಲ್ದೆ ಇದ್ರೆ.. " ಎಂದು ಮತ್ತೆ ಧೃವನತ್ತ ನುಗ್ಗಿದ...ಮತ್ತೆ ಅವನನ್ನು ಹಿಡಿದು..ಅವನ ಭಾಷೆಯಲ್ಲೇ "ತಗಳ್ರೀ ಇಲ್ಲೆ ಕೊಟ್ಟೆ ತೊಗೊಳ್ರೀ" ಎನ್ನುತ್ತ ನನ್ನ ಕೋಟಿನೊಳಗಿದ್ದ check book, pen ತೆಗೆದೆ. ಅದನ್ನು ಕಂಡ ಮೇಲೆಯೇ ಆತ ಸುಮ್ಮನಾಗಿದ್ದು...
ಎಲ್ಲರೂ ಸುಸ್ತಾಗಿ ಬಂದು ಬೆಂಚಿನ ಮೇಲೆ ಕುಳಿತೆವು.
ನಾನು "ಎಷ್ಟೈತ್ರಿ ನಿಮ್ ಸಾಲ?"
ಅವನು "ಬಡ್ಡಿಯೆಲ್ಲಾ ಸೇರಿಸಿ ಒಂದು ಲಕ್ಷ ಅರವತ್ತು ಸಾವಿರ... ಈಯಪ್ಪನು ಅದೆಂತದ್ದೋ ಬಿಸಿನೆಸ್‍ಗೆ ಅಂತ..." ಇನ್ನು ಏನೇನೋ ಹೇಳುತ್ತಿದ್ದ..
ಧೃವ ಬೇಡವೆಂದು ಕೈ ಹಿಡಿದ.. ನಾನು ಬಿಡಿಸಿಕೊಂಡು ನೀನು ಇವಾಗ್ ಸುಮ್ನಿರಪ್ಪಾ ಆಮೇಲೆ ಮಾತಾಡೋಣ ಎಂದೆ.
ಅವನು ಹೇಳಿದಷ್ಟು ಲೆಕ್ಕ ಸರಿಯೆ ಎಂದು ಧೃವನನ್ನು ಕೇಳಿ ಬರೆದು ಸಹಿ ಹಾಕಿಬಿಟ್ಟೆ. ಚೆಕ್ ಪಡೆದವನೇ ಸೇಟು ಹಿಂದೆ ಮುಂದೆ ನೋಡದೆ ಹೊರಟು ಹೋದ.
ಆನಂತರ ಮತ್ತೆ ಮೌನ.. ಧೃವನ ಕಡೆ ತಿರುಗಿ ನೋಡಿದೆ.. ಅವನು ಕಣ್ಣಲ್ಲಿ ನೀರು ಹಾಕಿಕೊಂಡು ಕುಳಿತಿದ್ದ.
ಅವನ ಮೇಲೆ ಕೈ ಹಾಕಿ ಸಮಾಧಾನ ಮಾಡಿದೆ.
ಅಳುವ ದನಿಯಲ್ಲಿ ಧೃವ "ತುಂಬಾ ಥ್ಯಾಂಕ್ಸ್ ಕಣೋ.. ನಾನು.." ಎಂದು ಏನೋ ಹೇಳಲು ಹೋದ..
"ನಿನ್ನ ಥ್ಯಂಕ್ಸ್ ನೀನೆ ಇಟ್ಕೊಳಪ್ಪ.. ಎಷ್ಟು ಚೆನ್ನಾಗಿದ್ದಲ್ಲೋ.. ನೀನ್ಯಾಕೆ ಹೀಗಾದೆ? ಅದೇನಾಯ್ತು ಅಂತ ಹೇಳಿ ಪುಣ್ಯ ಕಟ್ಟಿಕೊಳ್ಳಪ್ಪ" ಎಂದೆ.

"ನಿನಗೆ ಗೊತ್ತಿರುವ ಹಾಗೆ ಸ್ವಾತಿ ಆಂಧ್ರದ ರಾಯಲ್ ಸೀಮಾದವಳು.. ನೀನು ಊರು ಬಿಟ್ಟು ಹೋಗಿ ಒಂದು ವರ್ಷದೊಳಗೆ ಅವರ ಮನೆಯಲ್ಲಿ ನಮ್ಮ ಸುದ್ದಿ ತಿಳಿಯಿತು. ಅವರ ಮನೆಯಲ್ಲಿ ಅವಳ ಓದು ನಿಲ್ಲಿಸಿ ಮದುವೆ ಮಾಡಲು ಮುಂದಾದರು.. ಆಗ ನಾವಿನ್ನೂ ಇಂಜಿನಿಯರಿಂಗ್‍ನಲ್ಲಿದ್ದೆವು. ವಿಧಿಯಿಲ್ಲದೇ ಇಬ್ಬರೂ ಮನೆ ಬಿಟ್ಟುಬಂದೆವು. ತಿರುಪತಿಯಲ್ಲಿ ಮದುವೆ ನಡೆಯಿತು. ಇಬ್ಬರ ಓದೂ ಅಲ್ಲಿಗೆ ನಿಂತು ಹೋಯಿತು. ನಾನು ಅರ್ಹತೆ ಇಲ್ಲದೇಇದ್ದ ಕಾರಣ ಸಣ್ಣ ಕೆಲಸ ಹುಡುಕಿಕೊಂಡೆ. ಆದರೆ ಅವಳ ಮನೆಯವರು ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡಲಿಲ್ಲ. ನಾವು ಹೋದಲೆಲ್ಲಾ ಹುಡುಕಿಕೊಂಡು ಬಂದು ಹಿಂಸಿಸುತಿದ್ದರು. ನನ್ನನು ಮುಗಿಸಿಬಿಟ್ಟು ಸ್ವಾತಿಯನ್ನು ಮನೆಗೆ ಎಳೆದುಕೊಂಡು ಹೋಗಲೂ ಹೊಂಚುಹಾಕಿದ್ದರು. ಆ ಅಪಘಾತದಲ್ಲಿ ನನ್ನ ಬಲಗಾಲು ಕುಂಟಾಯಿತು. ನಾವು ಅವರಿಂದ ತಪ್ಪಿಸಿಕೊಳ್ಳಲು ಊರೂರು ಅಲೆಯುತ್ತಾ ಹೋದೆವು. ಎಲ್ಲೂ ಸರಿಯಾಗಿ ಕೆಲಸ ಮಾಡಲು, ಬಿಸಿನೆಸ್ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಸಾಲಗಳಿಗೆ ಕೈ ಚಾಚಬೇಕಾಯಿತು. ಹೀಗಾಗಿ ಇಂದು ಇಲ್ಲಿ ನಾನು ಹೀಗಿದ್ದೀನಿ..." ಎಂದು ಹೇಳುವಷ್ಟರಲ್ಲಿ ಅವನ ಕಣ್ಣು ತುಂಬಿ ಬಂತು.
"ಫ್ರೀಂ... ಫ್ರೀಂ.." ಉದ್ಯಾನ ಮುಚ್ಚುವ ಸಮಯವಾಗಿತ್ತು. ಮಾಲಿ ಸೀಟಿ ಊದುತ್ತಾ ಬರುತ್ತಿದ್ದ. ಧೃವ ತಾನಾಗೆ ಕಣ್ಣು ಒರೆಸಿಕೊಂಡು ಎದ್ದು ನಿಂತ.. "ಸರಿ ನಡಿ.. ಮನೆಗೆ ಹೋಗೋಣಂತೆ..". ನಾನೂ ಎದ್ದು ನಿಂತೆ.



ಹೊರಡುವ ಮುನ್ನ ಮತ್ತೊಮ್ಮೆ ಆ ಮರದ ಮೇಲಿನ ಹೃದಯವನ್ನು ಮುಟ್ಟಿದೆ.. ಧೃವನೂ ಅದನ್ನು ನೋಡಿ.. ಇನ್ನೊಂದು ಹೃದಯವನ್ನು ಮುಟ್ಟಿದ.. "ಹೇ! ಈ ಹೃದಯ ಇನ್ನೂ ಜೀವಂತವಾಗಿದೆ ಕಣೋ ಬಹುಶಃ ಇದು ನೀವು ಕೆತ್ತಿದಿರಬೇಕು.." ಎಂದೆ ಧೃವ ನಕ್ಕ. ಉದ್ಯಾನದ ಹೊರಗೆ ಧೃವ ಸ್ವಾತಿಗಾಗಿ ಹೂವು ಕೊಂಡುಕೊಂಡ. ಇಬ್ಬರೂ ಕಾರು ಏರಿ ಹೊರಟೆವು. ಹೋಗುವಾಗ ಧೃವ ನನ್ನ ಬಗ್ಗೆ ಹೇಳಬೇಕೆಂದು ಬೇಡಿದ. ನಡೆದದ್ದೆಲ್ಲಾ ಅವನಿಗೆ ತಿಳಿಸಿದೆ. ಅವನು ಬಹಳ ಸಂತೋಷಪಟ್ಟ. ಸ್ವಲ್ಪ ದೂರ ಚಲಿಸಿದ ನಂತರ ಧೃವನ ಮನೆ ಬಂದಿತು. ಮನೆಗೆ ಬಾ ಎಂದು ಧೃವ ತುಂಬಾ ಬಲವಂತ ಮಾಡಿದ. ನನ್ನ ಹರಿದ ಶರ್ಟ್ ತೋರಿಸಿ ಈ ಅವತಾರದಲ್ಲಿ ಬೇಡ ನಾಳೆ ಖಂಡಿತ ಬಂದು ಹೋಗುತ್ತೇನೆ ಎಂದು ಒಪ್ಪಿಸಿದೆ. ಇಳಿಯುವಾಗ ಧೃವ ಏನೋ ನೆನಪಿಸಿಕೊಂಡು ವಿಚಿತ್ರವಾಗಿ ನನ್ನ ಕಡೆ ನೋಡಿದ..
"ನೀನು ಕೊಟ್ಟ ಚೆಕ್ಕು.."
"ಧೃವ.. ನನ್ನ ಬಳಿ ಏನು ಇಲ್ಲದಿದ್ದಾಗ ನೀನು ಎಷ್ಟು ಬಾರಿ ನನಗೆ ಸಹಾಯ ಮಾಡಿರಲಿಲ್ವ.. ಅದನ್ನೆಲ್ಲ ನಾನು ಒಂದು ದಿನ ನಿನಗೆ ವಾಪಸ್ ನೀಡಬೇಕೆಂದು ಒಂದು ಕಡೆ ಲೆಕ್ಕ ಬರೆದಿಡುತಿದ್ದೆ. ಆದರೆ ನಂತರ ನಿನ್ನ ಬಳಿ ಇಸ್ಕೊಂಡ ಹಣದ ಲೆಕ್ಕ ಬರೆಯಲು ಹಾಳೆಗಳೇ ಖಾಲಿಯಾದವು.. ಅಂದು ನಿನ್ನ ಬಳಿ ಪಡೆದಿದ್ದ ಸಾಲವನ್ನೆಲ್ಲ ಬಡ್ಡಿ ಸೇರಿಸಿ ಕೊಟ್ಟೆ ಅಷ್ಟೇ.."
ಮತ್ತೆ ಧೃವನ ಕಣ್ಣಲ್ಲಿ ನೀರು ತುಂಬಿದವು.. ಏನೂ ಹೇಳಲಾಗದೆ ಅವನು ಕೆಳಗಿಳಿದು ಮನೆಯತ್ತ ನಡೆದ.. ಮನೆಯ ಮುಂದೆ ಸ್ವಾತಿ ಕಾಯುತ್ತಾ ನಿಂತಿದ್ದಳು. ಇವನು ಬಂದೊಡನೆ. ಅವಳ ಮುಖದಲ್ಲಿ ಸಂತೋಷದ ನಗೆ ತುಂಬಿತು.. ಗೇಟಿನೊರಗೂ ಬಂದು, ಅವನ ಕೈಯಲ್ಲಿದ್ದ ಛತ್ರಿಯನ್ನು ಇಸ್ಕೊಂಡು ಅವನ ಕುಂಟುಗಾಲಿನ ಕಡೆಯ ಕೈ ಹಿಡಿದು ನಡೆಸಿಕೊಂಡು ಮನೆಯೊಳಗೆ ಕರೆದುಕೊಂಡು ಹೋದಳು. ಆ ದೃಶ್ಯವನ್ನು ಕಂಡು ನನಗೂ ಸಂತೋಷವಾಯಿತು. ಬಡವರಾದರೂ ಎಷ್ಟು ಅನ್ಯೋನ್ಯವಾಗಿದ್ದಾರಲ್ಲಾ ಎನ್ನಿಸಿತು. ಜೊತೆಗೆ 15 ವರ್ಷಗಳಿಂದ ನನ್ನ ಕಾಡುತ್ತಿದ್ದ ಕೆಲವು ಪ್ರಶ್ನೆಗಳಿಗೆ ಎಲ್ಲೋ ಉತ್ತರಗಳು ದೊರೆತಂತೆ ಅನಿಸುತಿತ್ತು..ಜನರು ಹಣವಿಲ್ಲದ ಮಾತ್ರಕ್ಕೆ ಧೃವನನ್ನು "ಸ್ವಾತಿ" ಮಳೆಯ ಪ್ರವಾಹದಲ್ಲಿ ಕೊಚ್ಚಿ ಹೋದವನು ಎಂದುಕೊಂಡಿದ್ದರು.. ಆದರೆ ಇಂದು ನನಗನಿಸಿತ್ತು.. "ಇಲ್ಲ.. ಅವನು ಪ್ರೀತಿಯ ಬಾನಂಗಳವ ಬೆಳಗಲು ಮರಳಿ ಬಂದ ಧೃವತಾರೆ!"
"ಕೀ ಕೀಂಗ್..." ಹಿಂದಿನಿಂದ ಬಂದ ಗಾಡಿಯೊಂದು ಹಾರ್ನ್ ಮಾಡುತಿತ್ತು.. ನಾನು ಗಾಡಿ ಶುರು ಮಾಡಿಕೊಂಡು ಹೊರಟೆ..
ಹೋಗುವಾಗ ದಾರಿಯಲ್ಲಿ ಮನದ ತುಂಬಾ ಸಾವಿರಾರು ಭಾವನೆಗಳು ಉಕ್ಕಿ ಹರಿಯುತ್ತಿದ್ದವು..ಇವರನ್ನು ನೋಡಿದಾಗ ತಿಳಿಯಿತು.. ನಿಜವಾದ ಪ್ರೀತಿಗೆ ಎಂದೂ ಹಣದ ಹಂಗಿರುವುದಿಲ್ಲ. ಆದರೆ ಲೋಕಕ್ಕೆ ಅದು ಯಾವಾಗಲೂ ಇದ್ದೆ ಇರುತ್ತದೆ. ಪ್ರೀತಿಯು ಲೋಕದಲ್ಲಿ ಇರಬೇಕಾದರೆ ಅದು ಲೋಕದ ಈ ದುರಾಸೆಗೆ ತಲೆಬಾಗಲೇಬೇಕು. ಈ ಬದುಕೆಂಬ ದೋಣಿ ಪ್ರೀತಿ ಹಾಗು ಹಣವೆಂಬ ಘೋರ ಸಾಗರಗಳ ಮಧದಲ್ಲಿ ಸಾಗುವ ಪಯಣ.. ದೋಣಿ ಅಂದಿನ ಅವಳಂತೆ ಬರಿ ಹಣದೆಡೆಗೆ ಬಾಗಿದರೂ ತೊಂದರೆ... ಇಂದಿನ ಇವರಂತೆ ಬರೀ ಪ್ರೀತಿಯೆಡೆಗೆ ಬಾಗಿದರೂ ತೊಂದರೆ... ಸಮರಸ ಸಾರಿದಾಗ ಮಾತ್ರ ಬದುಕು, ಪ್ರೀತಿ ಮತ್ತು ಐಶ್ವರ್ಯಗಳು ನಿಮ್ಮೊಂದಿಗೆ ಸಮರಸದಿಂದಿರುತ್ತದೆ..
ಪ್ರೀತಿಯ ಕಡೆಗೇ ವಾಲಿದ್ದ ಧೃವನ ದೋಣಿ, ಸಾಲ ತೀರಿದ್ದರಿಂದ ಸ್ವಲ್ಪ ಹಗುರವಾದಂತಾಗಿತ್ತು.. ಹಹ್! ಇನ್ನು ಹಣದ ಕಡೆಗೇ ಮಗುಚಿಕೊಳ್ಳುವಂತಿದ್ದ ಈ ನನ್ನ ದೋಣಿಯ ಗತಿಯೇನು ಎಂಬ ಚಿಂತೆಯಲ್ಲಿ ಗಾಡಿ ಸಾಗುತ್ತಿತ್ತು.. FMನಲ್ಲಿ ಹಾಡು ಬರುತ್ತಿತ್ತು..
"ಪ್ರೀತಿ ಮಾಯೆ ಹುಷಾರು..
ಕಣ್ಣೀರ್ ಮಾರೋ ಬಜ಼ಾರು"
ಮರುದಿನ ಬೆಳಿಗ್ಗೆ ಏಳು ಗಂಟೆಗೆ ಮೊಬೈಲ್ ರಿಂಗಣಿಸಿದ ಸದ್ದಿಗೆ ಎಚ್ಚರವಾದೆ.. sms ಬಂದಿತ್ತು.. ಅದನ್ನು ಓದಿದಾಗಲೇ ನೆನಪಾದದ್ದು ಅಂದು Valentine's Day ಎಂದು.. ದಶಕಗಳ ನಂತರ ಮತ್ತೆ ಯಾರೋ ನನಗೆ valentine's day message ಕಳುಹಿಸಿದ್ದನ್ನು ಕಂಡು ಸ್ವಲ್ಪ ಸಂತೋಷವಾಯಿತು.. ಆಫ಼ೀಸಿಗೆ ಹೋಗುವ ದಾರಿಯಲ್ಲಿ ಶಿಲ್ಪಾಗೆಂದು ಕೆಂಪು ಗುಲಾಬಿ ಕೊಂಡುಕೊಳ್ಳುವ ಆಸೆಯಾಗುತ್ತಿತ್ತು..
ಮನದ ದೋಣಿ ಹಗುರವಾಗಿತ್ತು.. ಸಮರಸದ ತೀರವ ಕಾಣುವ ಹಂಬಲದಲ್ಲಿ ಉತ್ಸಾಹದಿಂದ ಸಾಗಿತ್ತು...