Monday, March 31, 2014

ಎಲೆ ನೆನಪೇ...

ಎಲೆ ನೆನಪೇ...    "ಬೆಳಿಗ್ ಬೆಳಿಗ್ಗೆ ನಮ್ಮನೆ ಮುಂದೆ ಹೊಗೆ ಹಾಕ್ತಿದ್ದೀಯ? ತಗೊಂಡ್ ಹೋಗ್ ಆ ಕಡೆಗೆ..."
    ಆ ಖಾಲಿ ಸೈಟಿನ ಎದುರು ಮನೆಯವ ರಸ್ತೆ ಗುಡಿಸುವವಳ ಮೇಲೆ ಚೀರಿದ್ದು ನಿಶ್ಯಬ್ಧ ರಸ್ತೆಯ ಇಕ್ಕೆಲಗಳಲ್ಲಿ ಪ್ರತಿಧ್ವನಿಸಿದವು. ಕಸ ಗುಡಿಸುವ ಆ ಪಾಲಿಕೆ ಕೆಲಸದವಳು ಗೊಣಗಿಕೊಳ್ಳುತ್ತಾ ಏನು ಮಾಡುವುದೆಂದು ತೋಚದೆ ಅತ್ತಿತ್ತ ನೋಡುತ್ತಿದ್ದಳು. ಪಾಪ ಅವಳದೇನೂ ತಪ್ಪಿಲ್ಲ ಬಿಡಿ. ಬಹಳ ಪ್ರಶಾಂತವಾಗಿರುವ ನಮ್ಮ ಮನೆಯ ರಸ್ತೆಯ ಎರಡೂ ಬದಿಗಳಲ್ಲಿ ಸಾಲು ಸಾಲು ಮರಗಳು ಸಮೃದ್ಧವಾಗಿ ಬೆಳೆದುಕೊಂಡಿವೆ. ಅವುಗಳ ರೆಂಬೆ ಕೊಂಬೆಗಳು ಒಂದಕ್ಕೊಂದು ಒತ್ತೊತ್ತಾಗಿ ಸೇರಿಕೊಂಡು ಇಡೀ ರಸ್ತೆಗೆ ಒಂದು ನೈಸಗರ್ಿಕ ಚಪ್ಪರ ನಿಮರ್ಾಣವಾಗಿದೆ. ಸದಾ ನೆರಳು, ಬೇಸಿಗೆಯಲ್ಲೂ ನೇರ ಬಿಸಿಲು ಬೀಳುವುದು ಕಷ್ಟ. ಮಳೆಗಾಲ ಬಂದರಂತೂ ಎಲೆ ಕೊಂಬೆಗಳ ನಡುವೆ ಮಳೆನೀರಿನ ಹನಿಗಳು ಶೇಖರಣೆ ಆಗಿ ರಸ್ತೆಯಲ್ಲಿ ನಡೆದು ಹೋಗುವವರಿಗೆ ಎಸಿ ಅನುಭವ! ಉದ್ಯಾನವೊಂದಕ್ಕೆ ಹೊಂದುಕೊಂಡಿರುವ ವಾಹನ ಸಂಚಾರವಿಲ್ಲದ ಈ ಡೆಡ್ಎಂಡ್ ರಸ್ತೆ ನಿಜಕ್ಕೂ ಇಂದಿಗೂ ನಿವೃತ್ತರ ಸ್ವರ್ಗವೆನಿಸಿದ್ದ 80ರ ದಶಕದ ಬೆಂಗಳೂರನ್ನು ನೆನಪಿಸುತ್ತದೆ. ಆದರೆ ಪ್ರತಿ ವರ್ಷ ಚಳಿಗಾಲ ಮುಗಿಯುವ ಹೊತ್ತಿಗೆ ಇಲ್ಲೊಂದು ಸಮಸ್ಯೆ ಶುರುವಾಗುತ್ತದೆ. ಅದೇ ಈ ಮರಗಳಿಂದ ಉದುರುವ ಒಣಗಿದ ಎಲೆಗಳು! ಫೆಬ್ರವರಿ ಬಂತೆಂದರೆ ಈ ರಸ್ತೆ ತರಗೆಲೆ ಪಥವಾಗುತ್ತದೆ. ಎಲ್ಲೆಲ್ಲೂ ಎಲೆಗಳೇ. ದಿನಕ್ಕೆರಡು ಬಾರಿ ಕಸ ಗುಡಿಸಿದರೂ ಮತ್ತೆ ಮತ್ತೆ ಎಲೆ ಉದುರಿಸಿ ಮರಗಳು ಕಸ ಗುಡಿಸುವವರ ಗೋಳು ಹೋಯ್ದುಕೊಳ್ಳುತ್ತದೆ. ಅವರೋ ಎಲ್ಲೆಂದರಲ್ಲಿ ಗುಡ್ಡೆ ಹಾಕಿ ಉರಿಯಿಟ್ಟು ಹೋಗಿಬಿಡುತ್ತಾರೆ. ಅದು ತಮ್ಮ ಮನೆಯ ಮುಂದೆಂದು ತಿಳಿದಾಗ ಮನೆಯವರಿಗೆ ಹೊಟ್ಟೆ ಉರಿಯುವುದು ಸಹಜ.
   
ಆದರೆ ನನಗೆ ಈ ಒಣಗಿ ಉದುರಿದ ಎಲೆಗಳನ್ನು ಕಂಡರೆ ಏನೋ ಒಂದು ರೀತಿಯ ಅಕ್ಕರೆ. ನನಗೂ ಅವುಗಳಿಗೂ ಏನೋ ಒಂದು ರೀತಿಯ ಅವಿನಾಭಾವ ಸಂಬಂಧ. ನನ್ನ ಛಾಯಾಗ್ರಹಣದ ಹವ್ಯಾಸಕ್ಕೆ ಅವು ಎಷ್ಟೋ ಬಾರಿ ಉತ್ತಮ ವಿಷಯವಾಗಿವೆ. ಬೋಳು ಮರದ ಟೊಂಗೆಗಳಲ್ಲಿ ಚಿತ್ರ ವಿಚಿತ್ರ ಆಕಾರಗಳು ಕಂಡರೆ ನನಗೆ ಸ್ಫೂತರ್ಿ ಸಿಕ್ಕಂತೆ. ಇನ್ನು ಕೆಲವೇ ದಿನ ಕಳೆದರೆ ಪ್ರಕೃತಿಯಲ್ಲಿ ವಸಂತದ ಸಂಭ್ರಮ ಶುರುವಾಗುತ್ತದೆ. ಅದರ ಸೊಬಗನ್ನು ಸಂಪೂರ್ಣ ವಣರ್ಿಸಲು ಹೋದರೆ ನಾನಂತೂ ಪದಗುಚ್ಛ ಸಾಲದೇ ಮೂಕನಾಗುತ್ತೇನೆ. ಪ್ರತಿ ವರ್ಷ ಈ ಸಮಯಕ್ಕೆ ನವವಧುವಿನಂತೆ ಸಜ್ಜಾಗುವ ಭೂತಾಯಿಯ ಸಂಭ್ರಮವ ಸೆರೆ ಹಿಡಿಯಲು ನನ್ನ  ಕ್ಯಾಮೆರಾ ಹಾತೊರೆದು ಕಾದಿರುತ್ತದೆ. ಎಳೆ ಚಿಗುರಿನ ಎಲೆಗಳ ಮೇಲೆ ಮುಂಜಾನೆಯ ಹಿತ ರಶ್ಮಿಕಿರಣಗಳು ನೃತ್ಯವಾಡುವ ದೃಶ್ಯ ಅನನ್ಯ! ಸೂಯರ್ೋದಯ ಸಮಯದಲ್ಲಂತೂ ಬಿಸಿಲುಕೋಲಿಗೂ ಕೊಂಬೆಗಳ ಮರೆಯ ಚಿಗುರೆಲೆಗಳಿಗೂ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿರುವಂತೆ ಅನುಭವವಾಗುತ್ತದೆ. ನಿಸರ್ಗದಲ್ಲಿನ ಈ ಸಲ್ಲಾಪ ಸೆರೆ ಹಿಡಿದು ನನ್ನ ಕ್ಯಾಮೆರವೂ ಧನ್ಯೋಸ್ಮಿ ಎಂದು ಪ್ರಕೃತಿ ಮಾತೆಗೆ ನಮಿಸುತ್ತದೆ!
    ಒಣಗಿ ಕೆಳಗುರುಳಿದ ಎಲೆಗಳು ಮನದ ಹಳೇ ನೆನಪುಗಳ ಸಂಕೇತವಾಗಿ ಅದೆಷ್ಟೋ ಮಹಾಸಾಹಿತಿಗಳ ಕಥೆ ಕವನಗಳಲ್ಲಿ ನೆಲೆ ಊರಿವೆ . ಹೇಳಿ ಕೇಳಿ ಮೊದಲೇ ನಾನೂ ಭಾವಜೀವಿ. ನನಗೂ ಇವು ಹಲವು ಸುಂದರ ಫ್ಲಾಶ್ಬ್ಯಾಕ್ ನೆನಪುಗಳನ್ನು ಕಟ್ಟಿಕೊಟ್ಟಿವೆ. ತಂಪಾದ ಗಾಳಿಯಲ್ಲಿ ಮೆಲ್ಲಗೆ ಚರಪರನೇ ಸದ್ದು ಮಾಡುತ್ತಾ ಹಾರಾಡುವ ಈ ಎಲೆಗಳು ನನ್ನನು ಜನಪ್ರಿಯ ಹಿಂದಿ ಚಿತ್ರ "ಮೊಹಬ್ಬತ್ತೆ" ರಿಲೀಸ್ ಆದ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ! ಆ ಚಿತ್ರದಲ್ಲಿ ಪ್ರತೀ ಬಾರಿ ದೃಶ್ಯ ಬದಲಾಗುವಾಗ ತೆರೆಯ ಮೇಲೆ ಹೊಂಬಣ್ಣದ ತರಗೆಲೆಗಳು ಹಾರಾಡಿ ಹೋಗುತ್ತದೆ. 
 ನಾನು ಆಗಷ್ಟೇ ಹೈ ಸ್ಕೂಲು ಸೇರಿದ್ದ ಕಾಲವದು. ಶಾರುಕ್ ಖಾನರ ದೊಡ್ಡ ಅಭಿಮಾನಿಯಾಗಿದ್ದ ನಾನು ಗೆಳೆಯರ ಜೊತೆ ಆ ಸಿನಿಮಾ ನೋಡಲು ಹೋಗಿದ್ದೆ. ಅಮಿತಾಬರ ಖಡಕ್ ಡೈಲಾಗ್ಗಳು, ಗಡಸು ಧ್ವನಿ, ಶಾರುಕ್ ಪಾತ್ರದ ಪ್ರೇಮಿಗಳ ಪರ ವಾದ, ಇನ್ನೂ ಮೂರು ಸುಂದರ ಹೊಸ ಜೋಡಿಗಳ ಪ್ರಣಯ, ಐಶ್ವರ್ಯ ರೈ ಮೋಡಿ, ಹಿನ್ನೆಲೆಯಲ್ಲಿ ಆಗಾಗ ಗುನುಗುನಿಸುತ್ತಿದ್ದ ಲತಾ ಮಂಗೇಶ್ಕರರ ಮಧುರ ಆಲಾಪ ಧ್ವನಿ. ಎಲ್ಲವೂ ಪ್ರೇಕ್ಷಕರ ಹೃದಯ ಗೆದ್ದಿತ್ತು. ಸಿನಿಮಾ ಮುಗಿದು ಹೊರ ಬರುವ ಹೊತ್ತಿಗೆ ಸ್ನೇಹಿತರೆಲ್ಲರೂ ಸೇರಿ ನನ್ನನು ದೊಡ್ಡ ಬಕರಾ ಮಾಡುವ ಹೊಂಚು ಹಾಕಿದ್ದರು! ಕನ್ನಡಕ ಧರಿಸಿದರೆ ಶಾರುಕ್ ಥೇಟ್ ನನ್ನಂತೆಯೇ ಕಾಣುತ್ತಾನೆಂದು ಎಲ್ಲರೂ ಹೇಳಲು ಶುರು ಮಾಡಿದರು! ತರಲೆಗಳಾ ಎಂದು ಬೈದು ನಾನು ಮನೆ ಕಡೆಗೆ ನಡೆದರೂ ಅವರ ಮಾತಿನಲ್ಲಿ ಸ್ವಲ್ಪವಾದರೂ ನಿಜವಿರಬಹುದೇ ಎಂಬ ಟೊಳ್ಳು ಜಂಭ ಒಳಗೊಳಗೇ ಚಿಗುರೊಡೆಯುತಿತ್ತು. ಮನದಲ್ಲೇ ಬೀಗುತ್ತಿದ್ದೆ! ಮನೆಗೆ ಹೋಗಿ ನಿಜವಾಗಿ ನನಗೂ ಶರುಕ್ ಖಾನಿಗೂ ಹೋಲಿಕೆ ಇರಬಹುದೇ ಎಂದು ಕನ್ನಡಿಯ ಮುಂದೆ ವಿಧ ವಿಧ ಕೋನಗಳಲ್ಲಿ ಮುಖ ಮಾಡಿ ನಿಂತು ನೋಡಿಕೊಂಡದ್ದು ಇಂದಿಗೂ ನೆನೆದಾಗಲೆಲ್ಲಾ ನಗು ತರಿಸುತ್ತದೆ. ಕನ್ನಡಿಗೂ ಬೆಳೆದು ನಿಂತ ಯೌವ್ವನಕ್ಕೆ ಸತ್ಯ ಹೇಳುವ ತಾಕತ್ತಿರಲಿಲ್ಲ! ಗೆಳೆಯರೂ

ಈ ಭ್ರಮೆಗೆ ಹಾಗೆ ದಿನವೂ ನೀರೆರೆಯುತ್ತಾ ಹೋದರು. ನನ್ನ ಶಾರುಕ್ ಹುಚ್ಚು ಹೆಮ್ಮರವಾಗಿ ಬೆಳೆಯುತ್ತಾ ಹೋಯಿತು. ಬಟ್ಟೆ, ನಡಿಗೆ, ಹೇರ್ ಸ್ಟೈಲ್ ಎಲ್ಲಾ ಅಂತೆಯೇ ಬದಲಾದವು. ಮುಂದೆಂದೋ ಒಂದಿನ ಗೆಳೆಯರ ಮಾತಿನಲ್ಲಿ ಎಳ್ಳಷ್ಟೂ ಸತ್ಯವಿಲ್ಲದಿರುವುದು ಅರಿವಾಗಿ ನನಗೆ ಙ್ಞನೋದಯವಾಯಿತು! ಆದರೂ ಅಂದಿನ ಹುಚ್ಚಾಟಗಳು, ಕಪಟ ಅರಿಯದೇ ಯಾರು ಏನೇ ಹೇಳಿದರೂ ನಂಬಿಬಿಡುವ ಮುಗ್ಧತೆ ಇಂದಿಗೂ ನೆನಪಾಗಿ ನಗಿಸುತ್ತದೆ. ಆ ಹುಚ್ಚಾಟಗಳ ನಿನಪಿಗೆಂದೇ ಕಾಲೇಜಿನ ದಿನಗಳ ಫೋಟೋಗಳಿಗೆ ಮೊಹಬ್ಬತ್ತೆಯ ಎಲೆಗಳಿರುವಂತಹ ಕಟ್ಟನ್ನು ಹಾಕಿಸಿಟ್ಟಿದೇನೆ.
    ಋತುಮಾನದ ವಸಂತದಂತೆ ಬಾಲ್ಯ, ಯೌವ್ವನ ಎಂಬುದು ನಮ್ಮ ಜೀವಮಾನದ ವಸಂತಗಳು. ಆ ವಸಂತಗಳ ನೆನಪುಗಳು ಎಳೆ ಚಿಗುರಿನಂತೆ ಎಂದೆಂದಿಗೂ ಹಚ್ಚ ಹಸುರು. ಅದ್ದರಿಂದಲೇ ಮಾನವ ತನ್ನ ವಯಸ್ಸನ್ನು ವಸಂತದೊಂದಿಗೆ ಗುರುತಿಸಿಕೊಂಡು ಇಷ್ಟು ವಸಂತಗಳನ್ನು ಕಂಡೆ ಎನ್ನುವುದು. ಋತುಮಾನ ಚಕ್ರದಲ್ಲೇನೋ ಪ್ರತೀ ಸರದಿಯಲ್ಲೂ ವಸಂತ ಬರಲೇಬೇಕು ಆದರೆ ಜೀವನದ ಚಕ್ರದಲ್ಲಿ ಅಂತಹ ನಿಯಮ ಅನ್ವಯವಾಗುವುದಿಲ್ಲ. ಎಲ್ಲಾ ಅವರವರು ಪಡೆದುಕೊಂಡು ಬಂದಂತೆ. ಇಡೀ ಜೀವಮಾನವೆಲ್ಲಾ ಒಂದೂ ವಸಂತ ಕಾಣದೇ ಬರದಲ್ಲಿಯೇ, ಬಡತನದಲ್ಲಿಯೇ, ಕಷ್ಟ ಕೋಟಲೆಗಳಲಿಯೇ ನರಳಿದ ಜೀವಗಳೆಷ್ಟೋ? ಆದರೂ ಜೀವನದ ವಸಂತಗಳು ತಮ್ಮ ತೊರೆಯದಿರಲಿ ಎಂದು ಹಾತೊರೆಯುವವರಲ್ಲಿ ನಾನೂ ಒಬ್ಬ. ಇಂದಿಗೂ ನಮ್ಮ ಬಾಲ್ಯ ಹಾಗೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಅಮ್ಮ ಇಂದಿಗೂ ಬಿಸಿ ಬಿಸಿ ರೊಟ್ಟಿಯ ಮಾಡಿ ಡಬ್ಬಿಗೆ ಹಾಕಿ "ದಾರಿಯಲ್ಲಿ ಹುಷಾರು ಮಗಾ" ಎನ್ನುತ್ತಾ ಶಾಲೆಗೆ ಕಳಿಸುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಸಂಜೆಯಾಗುತ್ತಲೇ ಬ್ಯಾಟು ಬಾಲು ಹಿಡಿದು ಪಕ್ಕದ ಮನೆಯವ ಬಂದು ಕಿಟಕಿಯಲ್ಲಿ ಸನ್ನೆ ಮಾಡಲು ಅಣ್ಣನ ಕಣ್ಣು ತಪ್ಪಿಸಿ ಕಾಂಪೌಂಡು ಹಾರಿ ಹೋಗುವಂತಿದ್ದರೆ, ಹಿತ್ತಲು ಮನೆಯವರ ತೋಟದಲ್ಲಿ ನಾವು ಇಂದಿಗೂ ಮಾವಿನಕಾಯಿ ಕದ್ದು ತಿನ್ನುವಂತಿದ್ದರೆ, ಮೂಲೆಯಲ್ಲಿ ಕುಟಾಣಿ ಕುಟ್ಟುತ್ತಾ ಕುಳಿತಿರುತ್ತಿದ್ದ ಅಜ್ಜಿ ಇಂದಿಗೂ ನಮ್ಮನ್ನು ಕರೆದು ಕಥೆ ಹೇಳುತ್ತಾ ತಟ್ಟಿ ಮಲಗಿಸುವಂತಿದ್ದರೆ, ಅಪ್ಪ ಇಂದಿಗೂ "ಚೆಲುವೆಯ ನೋಟ ಚೆನ್ನ..." ಎಂದು ಹಾಡುತ್ತಾ ಕಣ್ಣಲ್ಲೇ ಅಮ್ಮನನ್ನು ಛೇಡಿಸುವಂತಿದ್ದರೆ... ಉಫ್... ಹೇಳುತ್ತಾ ಹೋದರೆ ಒಂದೇ ಎರಡೇ? ವಸಂತದ ನೆನಪುಗಳು ಅತಿ ಮಧುರ, ಅನಂತ. ನೆನಪುಗಳ ಮೆರವಣಿಗೆಯಲ್ಲಿ ನನ್ನ ಮೈಮರೆಸಿದ ಈ ವಸಂತಕ್ಕೂ, ಒಣ ಎಲೆಗಳಿಗೂ ಮನಸ್ಸೂ ಧನ್ಯತಾಭಾವದಿಂದ ನಮಿಸುತ್ತದೆ. 

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಪ್ರಕೃತಿಯಂತೆಯೇ ಈ ಯುಗಾದಿಯು ನಿಮ್ಮೆಲ್ಲರ ಜೀವನದಲ್ಲಿ ನವವಸಂತ ತರಲಿ. ಮನದ ಮರದಲ್ಲಿ ಮಧುರ ನೆನಪುಗಳ ಎಲೆಗಳು ಚಿಗುರಲಿ....

Monday, March 10, 2014

ಹೂವೇ... ನಾ ಬರುವೆ..


ಹೂವೆ,

ರವಿ ಬಂದನೆಂದು
ಮುಖವರಳಿಸಿ ನಿಂತು
ಹಗಲುಗನಸಲಿ ತೇಲದಿರು
ನಿನ್ನ ಆವರಿಸಲು ನಿಶೆಯಾಗಿ ನಾ ಬರುವೆ

ಕತ್ತಲೆ ಕವಿದಿರಲು
ನಿನ್ನೊಲವಿನಾಗಸಕೆ
ಬೇರೆ ತಾರೆಯ ಹುಡುಕದಿರು
ನಿನ್ನ ಅರಳಿಸಲು ಉಷೆಯಾಗಿ ನಾ ಬರುವೆ

ಸೌಂದರ್ಯ ಚಿಲುಮೆಯೆ
ಅವರಿವರ ರಸಿಕತೆಯ
ತಂಗಾಳಿಗೆ ತೇಲಿ ಆವಿಯಾಗದಿರು
ನಿನ್ನ ಆಲಿಂಗಿಸಲು ಆಕಾಶವಾಗಿ ನಾ ನಿಲ್ಲುವೆ

ಈ ದುಂಬಿಗೇ ಮೀಸಲಿಡು
ನಿನ್ನ ಸುಗಂಧ ಸರ್ವಸ್ವವ
ಮಧುಬಟ್ಟಲಿನಮೃತವ ನನಗಾಗಿ ಕಾದಿರಿಸು
ನಿನ್ನಲ್ಲಿ ಆಸೆಗಳ ಹೂ ಪಕಳೆಯಂತೆ ಅರಳಿಸುವೆ


ಹಾರಿ ಹೋಯಿತು ದುಂಬಿ
ಮಧು ಮೋಜುಗಳಲ್ಲಿ ಎದೆತುಂಬಿ
ಬಂದಿಳಿದರು ಇವಳಂಗಳಕೆ ಹೊಸ ಅತಿಥಿ
ಇವಳು ಒಲ್ಲೆ ಎಂದು ಬಾಡುವ ಹಾಗಿಲ್ಲ
ಉಂಡು ಕೊಂಡು ಹೋದವ ತಿರುಗಿ ನೋಡುವುದಿಲ್ಲ
ಛೇ ಇಲ್ಲಿ ಪ್ರೇಮವಿಲ್ಲ, ಬರೀ ಪುರುಷ ಪ್ರಾಧಾನ್ಯವೇ!