Wednesday, June 22, 2011

ಒಂದು ಹಡಗಿನ ಕಥೆ

ಸುಮಾರು ಒಂದು ವರ್ಷದ ಕೆಳಗೆ ಗೀಚಿದ್ದ ಕೆಲವು ಸಾಲುಗಳು.. ಇಂದು ಏಕೋ ಮತ್ತೆ ನೆನಪಾಯ್ತು.. ಹಳೇ ಬುಕ್ಕು, ಕಾಗದಗಳ ನಡುವೆ ಇದನ್ನು ಹುಡುಕಿ ತೆಗೆದು ಹಾಕಿರುವೆ. ವಿಳಂಬವಾಗಿದೆ.. ಲಂಬವಾಗಿಯೂ ಇದೆ.. ತಾಳ್ಮೆಯಿಂದ ಓದಬೇಕಾಗಿ ವಿನಂತಿ!
....................................................................................


ಈ ಲೋಕ ಒಂದು ವಿಶಾಲ ಸಾಗರ, ಬದುಕು ಅದರ ಮೇಲೆ ಮುಳುಗುವ ಭಯದಲ್ಲಿ ನಿತ್ಯ ಸಾಗುವ ಪಯಣ. ಈ ಪಯಣಕ್ಕೆ ಬಳಸುವ ಹಡಗುಗಳು ಜೀವನದ ವಿಧ ವಿಧ ಹಂತಗಳ ಸಂಕೇತ. ಜೀವನದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ತಲುಪಲು ಎಲ್ಲರೂ ಬೇರೆ ಬೇರೆ ಹಡಗುಗಳನ್ನು ಹಿಡಿದು, ಆಗಾಗ ಹಡಗುಗಳನ್ನು ಬದಲಿಸುತ್ತಾ ಸಾಗುತ್ತಿರುತ್ತಾರೆ. ಕೆಲವರು ಹಡಗು ಎಲ್ಲಿಂದ ಬಂದಿದೆ? ಎಲ್ಲಿ ತನಕ ಹೋಗುತ್ತದೆ? ಒಳಗೆ ಎಂಥವರು ಇದ್ದಾರೆ? ಎಂದು ಸಂಪೂರ್ಣ ಮಾಹಿತಿ ಪಡೆದೇ ಹಡಗನ್ನು ಹತ್ತುತ್ತಾರೆ. ಇನ್ನು ಕೆಲವರು ದಾರಿ ತಪ್ಪಿ ದಿಕ್ಕು ತೋಚದೇ ಸಿಕ್ಕ ಸಿಕ್ಕ ಹಡಗುಗಳನ್ನೆಲ್ಲ ಹತ್ತಿ ಗುರಿ ಸೇರುವ ಆಸೆಯಲ್ಲಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಅಲ್ಲಿಗೆ ಸುತ್ತಾಡುತ್ತಿರುತ್ತಾರೆ. ಬಾಳು ನಿತ್ಯ ಹಡಗುಗಳ ಹುಡುಕಾಟ!

ಒಂದಲ್ಲ ಒಂದು ಹಂತದಲ್ಲಿ ಅರಿತೋ ಅರಿವಿಲ್ಲದೆಯೋ ಮನಸು ತಾನಾಗಿಯೇ ಹತ್ತುವ ಹಡಗು, ಎಲ್ಲರೂ ಸದ್ದಿಲ್ಲದೆ ಮಾಡಿಯೇ ತೀರುವ ಪಯಣ... ಪ್ರೇಮದ ಪಯಣ! ಶಾಶ್ವತ ನೆಲೆಯ ಹುಡುಕಾಟದಲ್ಲಿರುವ ಇಂತಹ ಹಡಗಿನೊಂದಿಗೆ ಹುಡುಗಾಟವಾಡುತ್ತಾ, ದಾರಿ ತಪ್ಪಿಸಿ, ಹೊಂಚು ಹಾಕಿ, ಲೂಟಿ ಮಾಡುತ್ತಾ, Flirt ಮಾಡುವವರೇ..

ಕಡಲ್ಗಳ್ಳರು!

The Pirates of the Ocean!




ಬಾಳೆಂಬ ಕಡಲಲ್ಲಿ ನಾನು
ಹುಚ್ಚು ಮನಸ್ಸಿನ ಪ್ರೀತಿಯ ಅಲೆಗಳ
ಹೊಡೆತಕ್ಕೆ ಸಿಕ್ಕಿ ಮುಳುಗುತ್ತಿದ್ದ
ಹಳೇ ಹಡಗಿನ ನಾವಿಕ.

ವಿಧಿಯ ಚಂಡಮಾರುತಕ್ಕೆ ಸಿಕ್ಕಿ
ಎಂದೋ ಮುಳುಗಿಹೋದ
ಬಣ್ಣಬಣ್ಣದ ಕನಸಿನ ಲೋಕದ
ದೊಡ್ಡ ದೊಡ್ಡ ಹಡಗುಗಳ
ಚೂರು ಚೂರಾದ ಭಾಗಗಳ, ಭಾವಗಳ,
ಕಾಲ ಪಾತಾಳದ ತಳದಿಂದ ಹೆಕ್ಕಿ ಹೆಕ್ಕಿ
ಮನದ ನೆನಪುಗಳ ಸಂಗ್ರಹಾಲಯಕ್ಕೆ
ತಂದು ಬೆಚ್ಚಗೆ ಬಚ್ಚಿಟ್ಟುಕೊಳ್ಳುವುದೇ
ಈ ನಾವಿಕನ ಕಾಯಕ!

ಮನದ ಹಡಗಿನಲಿ ಕಹಿ ನೆನಪುಗಳು ಅಪಾರ
ತುಂಬಿ ಹೋಗಿ ಗುಡಾಣ, ತಡೆಯಲಾಗದಷ್ಟು ಭಾರ
ಮುಳುಗಿ ಹೋಗುತಿತ್ತು ಬಾಳ ಹಡಗು!
ಆದರೆ ಗುರಿಯಿನ್ನೂ ಬಹಳ ಬಹಳ ದೂರ

ಚಿಂತಿಸಿ ದಿಕ್ಕೇ ತೋಚದೆ ಕುಳಿತಿರಲು ಎಲ್ಲರೂ
ಬಂದರೆಲ್ಲಿಂದಲೋ ಭಯಾನಕ ಕಡಲ್ಗಳ್ಳರು!
ಮುಗ್ಧ ಮನಗಳ ಮೇಲೆ ಅವರ ಮಾತುಗಳ ದಾಳಿ
ಕೊಳ್ಳೆ ಹೊಡೆದರು... ಹಡಗೆಲ್ಲಾ ಖಾಲಿ!

ಬೇಡ ಬೇಡವೆಂದರೂ ಬಾಚಿದರು,
ದಯವೇ ತೋರದೆ ದೋಚಿದರು
ಕೇಳಲೇ ಇಲ್ಲ ನಾವೆಷ್ಟೇ ಅಂಗಲಾಚಿದರೂ
ಛೆ! ಅವರು ಅದೆಂಥಾ ಹುಚ್ಚರು!

ಮೂಟೆಗಳಲ್ಲಿ ಅವರು ಕದ್ದಿದ್ದು ಬರೀ ಕಹಿ ನೆನಪು!
ಮೂಢರು! ಅವರಿಗೆ ಅವೆಲ್ಲಾ
ರತ್ನ ವಜ್ರ ವೈಢುರ‍್ಯಗಳೇನೋ ಎಂಬ ಹುರುಪು!

ತುಂಬಿಕೊಂಡರೆಲ್ಲವ ತಮ್ಮ ಹಡಗಿಗೆ ಬಿಡದೆ
ಘನ ಮನಸ್ಸಿನ ಭಾವಗಳ ವಜಿ ತಡೆಯದೆ
ತಕ್ಷಣವೇ ಬಿರಿಯಿತು ಆ ಕಳ್ಳ ಹಡಗಿನ ಎದೆ!

ಆದದ್ದು ಆಗಲೆ ಆ ಕಳ್ಳರಿಗೆ ತಮ್ಮ ತಪ್ಪಿನ ಅರಿವು
ನೆನಪುಗಳ ನಾವೆಯ ನಾವಿಕನೂ ಅಂದು ಬೇಡಿದ್ದ ಮರೆವು



ಮರುಕ್ಷಣವೇ ಮಾತಿಲ್ಲದೆ ಮುಳುಗಿತಾ ಹಡಗು,
ಮನ ಹಗುರವಾಗಿ, ಹೊಸಜೀವ ಬಂದಂತೆ,
ಸಾಗಿದೆವು ನಾವು ಮತ್ತೆ ಅನಂತದವರೆಗೂ.

ಕೊನೆಗೆ ಮನದ ಹಡಗಿನ ಮೇಲೆ ಉಳಿದದ್ದು ಬರೀ ಆ ಕಡಲ್ಗಳ್ಳರು ಬಂದುಹೋದ ಹೆಜ್ಜೆಗುರುತುಗಳ ನೆನಪು!


====================================================
© Pradeep Rao
Photo courtesy - www.fotosearch.com
Photo courtesy - www.hydrolance.net

18 comments:

  1. Super kano...its very nice . i read it completly realy heart touching

    ReplyDelete
  2. Hey thanks buddy.. I am really shocked to see your comment here.. that too first one for this big kannada poem!! really very much welcome comment!

    ReplyDelete
  3. ಪ್ರದೀಪ್,
    ಕಡಲ್ಗಳ್ಳರು ನಮಗೆ ಅರಿವಿಲ್ಲದಂತೆಯೇ ನಮ್ಮ ಹಡಗಿಗೆ ಸೇರಿಕೊಳ್ಳುತ್ತಾರೆ. "ಕೊನೆಗೆ ಮನದ ಹಡಗಿನ ಮೇಲೆ ಉಳಿದದ್ದು ಬರೀ ಆ ಕಡಲ್ಗಳ್ಳರು ಬಂದುಹೋದ ಹೆಜ್ಜೆಗುರುತುಗಳ ನೆನಪು" ಹೆಜ್ಜೆ ಗುರುತು ಬಹಳ ಆಳ... ಮರತರೆ ಮನಸ್ಸು ಆಗುವುದು ನಿರಾಳ....

    ReplyDelete
  4. ಬಾಳು ನಿತ್ಯ ಹಡಗುಗಳ ಹುಡುಕಾಟ!
    ....this was superb,,and poem is marvellous..and that is ..my name sathya,,,

    ReplyDelete
  5. ಕಡಲ್ಗಳ್ಳರ ಬಗ್ಗೆ ನಿಮ್ಮ ವ್ಯಾಖ್ಯಾನ ಹೊಸತಾಗಿದೆ.

    ಚನ್ನಾಗಿದೆ.....

    ಹಡಗು ಹತ್ತುವ ಮುನ್ನ ಯಾರರಿವಿಗೆ ಬಂದೀತು.....
    ಕಳ್ಳರ ಕೈಗೆ ತುತ್ತಾದೀತೆಂದು....

    ReplyDelete
  6. ಕಡಲನ್ನು ಬಾಳಿಗೆ ಹೋಲಿಸಿ ಜನ್ಮಿಸಿದ ಈ ಕವನ ನವ ವಿಚಾರವನ್ನು ಹೊರ ಹೊಮ್ಮಿಸಿತು. ಉತ್ತಮ ಪ್ರಯತ್ನ ಪ್ರದೀಪ್. ಅಭಿನ೦ದನೆಗಳು.

    ಅನ೦ತ್

    ReplyDelete
  7. ಆಶಾರವರೇ,

    ತುಂಬಾ ನಿಜದ ಮಾತು. ಕವನದ ಕೊನೆಯ ಸಾಲುಗಳು ಹೇಳುವ ಹಾಗೆ ಆಗಲೇ ಮನ ನಿರಾಳವಾಗಿರುವ ಹಾಗಿದೆ..

    "ಮನ ಹಗುರವಾಗಿ, ಹೊಸಜೀವ ಬಂದಂತೆ,
    ಸಾಗಿದೆವು ನಾವು ಮತ್ತೆ ಅನಂತದವರೆಗೂ"

    ಧನ್ಯವಾದಗಳು!

    ReplyDelete
  8. ಬಾಳು ನಿತ್ಯ ಹಡಗುಗಳ ಹುಡುಕಾಟ..

    ಹುಡುಕಾಟವ ಮೆಚ್ಚಿದ್ದಕ್ಕೆ ಪಯಣಕ್ಕೆ ಜೊತೆಯಾದುದಕ್ಕೆ

    ತುಂಬಾ ಧನ್ಯವಾದಗಳು ಸತ್ಯ.

    ReplyDelete
  9. ಕನಸು ಕಂಗಳ ಹುಡುಗನಿಗೆ,

    ಕವನದ ವಿಭಿನ್ನತೆಯನ್ನು ಮೆಚ್ಚಿದುದಕ್ಕೆ ತುಂಬಾ ಧನ್ಯವಾದಗಳು.

    ನಿಜ.. ಹಡಗು ಹತ್ತುವ ಮುನ್ನ ಯಾರಿಗೂ ಕಡಲ್ಗಳ್ಳರು ಬರುವರೆಂಬ ಅರಿವಿರುವುದಿಲ್ಲ!

    ಬರಿ ಗುರಿ ಸೇರುವ ಕನಸುಗಳಿರುತ್ತವಷ್ಟೇ!

    ReplyDelete
  10. ಅನಂತ್ ರಾಜ್‍ರವರಿಗೆ,

    ನವ ರೀತಿಯ ಪ್ರಯತ್ನವ ಮೆಚ್ಚಿದಕ್ಕೆ ತುಂಬಾ ಧನ್ಯವಾದಗಳು

    ನಿಮ್ಮ ಪ್ರೋತ್ಸಾಹ ದೊರೆಯುತ್ತಿರಲಿ ಎಂದು ಆಶಿಸುವೆ!

    ReplyDelete
  11. ಚೆನ್ನಾಗಿ ಬರೆದಿದ್ದೀರಿ ಪ್ರದೀಪ್ ಅವರೇ ಮನದ ಭಾವನೆಗಳನ್ನು ಹಡಗಿನ ಕಥೆಯಲ್ಲಿ ಚೆನ್ನಾಗಿ ನಿರೂಪಿಸಿರುವಿರಿ..... ಬೆಳದಿಂಗಳಿಗೆ ಬಂದಿದ್ದಕ್ಕೆ ಧನ್ಯವಾದಗಳು...

    ReplyDelete
  12. ಗುರುಪ್ರಸಾದ್‍ರವರೇ ನಿರೂಪಣೆ ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..

    ಪಯಣಕ್ಕೆ ಜೊತೆಯಾಗಿದ್ದಕ್ಕೆ ತುಂಬಾ ಧನ್ಯವಾದಗಳು!

    ReplyDelete
  13. ಇಷ್ಟಪಟ್ಟಿದಕ್ಕಾಗಿ ತುಂಬಾ ಧನ್ಯವಾದಗಳು ಶಿವಪ್ರಕಾಶ್!

    ReplyDelete
  14. ಪ್ರದೀಪ್..
    ಚೆನ್ನಾಗಿದೆ..

    ಹೀಗೇ.. ಒ೦ದೆರಡು ಸಾಲುಗಳು..

    ಕಡಲ್ಗಳ್ಳರ ಹೆಜ್ಜೆ ಗುರುತಿನ ನೆನಪಾದರೂ ಏಕೆ..?
    ಮರೆವೆ೦ಬ ಬೀಸುಗಾಳಿಯ ಜೊತೆಗೆ ಸಾಗಿಹೋಗಲಿ..
    ನಾವಿಕನ ಮನದ ನೆನಪಿನ ಸ೦ಗ್ರಹಾಲಯದಲ್ಲಿ ಒಳ್ಳೆಯ ನೆನಪುಗಳೇ ಇರಲಿ..
    ಮುಗ್ದ ಮನ ನಸುನಗುತಾ ಸಾಗುತಿರಲಿ ಅನ೦ತಕೆ..

    ReplyDelete
  15. ಅರೇ ವಾಹ್! ತುಂಬಾ ಅರ್ಥಭರಿತವಾದ ಸಾಲುಗಳು ಮನಮುಕ್ತಾರವರೇ

    ಕಡಲು-ಹಡಗಿನ ಭಾಷೆಯಲ್ಲಿಯೇ ಒಳ್ಳೆಯ ತಿಳುವಳಿಕೆ ಹೇಳಿದ್ದೀರಿ

    ತುಂಬಾ ಧನ್ಯವಾದಗಳು!

    ReplyDelete
  16. 'ಹಡಗು' ಪ್ರತಿಮೆಯಾಗಿರುವ ಕವನ ಅರ್ಥಗರ್ಭಿತವಾಗಿದೆ. ಮನಮುಕ್ತಾ ರವರು ಹೇಳಿರುವ೦ತೆ ಕಹಿ ನೆನಪುಗಳನ್ನು ಅಳಿಸಿಹಾಕಿ ಧನಾತ್ಮಕವಾಗಲಿ ಬದುಕು. ಅಭಿನ೦ದನೆಗಳು.

    ReplyDelete
  17. ಪ್ರಭಾಮಣಿಯವರೆ, ಒಳ್ಳೆಯದನ್ನು ಹಾರೈಸಿದ್ದಕ್ಕೆ ತುಂಬಾ ಧನ್ಯವಾದಗಳು! ನಿಮ್ಮೆಲ್ಲರ ಅಭಿಮಾನ, ಹಾರೈಕೆ ಹೀಗೆ ಇರಲಿ ಎಂದು ಹಾರೈಸುವೆ.

    ReplyDelete