ಸುಮಾರು ಒಂದು ವರ್ಷದ ಕೆಳಗೆ ಗೀಚಿದ್ದ ಕೆಲವು ಸಾಲುಗಳು.. ಇಂದು ಏಕೋ ಮತ್ತೆ ನೆನಪಾಯ್ತು.. ಹಳೇ ಬುಕ್ಕು, ಕಾಗದಗಳ ನಡುವೆ ಇದನ್ನು ಹುಡುಕಿ ತೆಗೆದು ಹಾಕಿರುವೆ. ವಿಳಂಬವಾಗಿದೆ.. ಲಂಬವಾಗಿಯೂ ಇದೆ.. ತಾಳ್ಮೆಯಿಂದ ಓದಬೇಕಾಗಿ ವಿನಂತಿ!
....................................................................................
ಈ ಲೋಕ ಒಂದು ವಿಶಾಲ ಸಾಗರ, ಬದುಕು ಅದರ ಮೇಲೆ ಮುಳುಗುವ ಭಯದಲ್ಲಿ ನಿತ್ಯ ಸಾಗುವ ಪಯಣ. ಈ ಪಯಣಕ್ಕೆ ಬಳಸುವ ಹಡಗುಗಳು ಜೀವನದ ವಿಧ ವಿಧ ಹಂತಗಳ ಸಂಕೇತ. ಜೀವನದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ತಲುಪಲು ಎಲ್ಲರೂ ಬೇರೆ ಬೇರೆ ಹಡಗುಗಳನ್ನು ಹಿಡಿದು, ಆಗಾಗ ಹಡಗುಗಳನ್ನು ಬದಲಿಸುತ್ತಾ ಸಾಗುತ್ತಿರುತ್ತಾರೆ. ಕೆಲವರು ಹಡಗು ಎಲ್ಲಿಂದ ಬಂದಿದೆ? ಎಲ್ಲಿ ತನಕ ಹೋಗುತ್ತದೆ? ಒಳಗೆ ಎಂಥವರು ಇದ್ದಾರೆ? ಎಂದು ಸಂಪೂರ್ಣ ಮಾಹಿತಿ ಪಡೆದೇ ಹಡಗನ್ನು ಹತ್ತುತ್ತಾರೆ. ಇನ್ನು ಕೆಲವರು ದಾರಿ ತಪ್ಪಿ ದಿಕ್ಕು ತೋಚದೇ ಸಿಕ್ಕ ಸಿಕ್ಕ ಹಡಗುಗಳನ್ನೆಲ್ಲ ಹತ್ತಿ ಗುರಿ ಸೇರುವ ಆಸೆಯಲ್ಲಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಅಲ್ಲಿಗೆ ಸುತ್ತಾಡುತ್ತಿರುತ್ತಾರೆ. ಬಾಳು ನಿತ್ಯ ಹಡಗುಗಳ ಹುಡುಕಾಟ!
ಒಂದಲ್ಲ ಒಂದು ಹಂತದಲ್ಲಿ ಅರಿತೋ ಅರಿವಿಲ್ಲದೆಯೋ ಮನಸು ತಾನಾಗಿಯೇ ಹತ್ತುವ ಹಡಗು, ಎಲ್ಲರೂ ಸದ್ದಿಲ್ಲದೆ ಮಾಡಿಯೇ ತೀರುವ ಪಯಣ... ಪ್ರೇಮದ ಪಯಣ! ಶಾಶ್ವತ ನೆಲೆಯ ಹುಡುಕಾಟದಲ್ಲಿರುವ ಇಂತಹ ಹಡಗಿನೊಂದಿಗೆ ಹುಡುಗಾಟವಾಡುತ್ತಾ, ದಾರಿ ತಪ್ಪಿಸಿ, ಹೊಂಚು ಹಾಕಿ, ಲೂಟಿ ಮಾಡುತ್ತಾ, Flirt ಮಾಡುವವರೇ..
ಕಡಲ್ಗಳ್ಳರು!
The Pirates of the Ocean!ಬಾಳೆಂಬ ಕಡಲಲ್ಲಿ ನಾನು
ಹುಚ್ಚು ಮನಸ್ಸಿನ ಪ್ರೀತಿಯ ಅಲೆಗಳ
ಹೊಡೆತಕ್ಕೆ ಸಿಕ್ಕಿ ಮುಳುಗುತ್ತಿದ್ದ
ಹಳೇ ಹಡಗಿನ ನಾವಿಕ.
ವಿಧಿಯ ಚಂಡಮಾರುತಕ್ಕೆ ಸಿಕ್ಕಿ
ಎಂದೋ ಮುಳುಗಿಹೋದ
ಬಣ್ಣಬಣ್ಣದ ಕನಸಿನ ಲೋಕದ
ದೊಡ್ಡ ದೊಡ್ಡ ಹಡಗುಗಳ
ಚೂರು ಚೂರಾದ ಭಾಗಗಳ, ಭಾವಗಳ,
ಕಾಲ ಪಾತಾಳದ ತಳದಿಂದ ಹೆಕ್ಕಿ ಹೆಕ್ಕಿ
ಮನದ ನೆನಪುಗಳ ಸಂಗ್ರಹಾಲಯಕ್ಕೆ
ತಂದು ಬೆಚ್ಚಗೆ ಬಚ್ಚಿಟ್ಟುಕೊಳ್ಳುವುದೇ
ಈ ನಾವಿಕನ ಕಾಯಕ!
ಮನದ ಹಡಗಿನಲಿ ಕಹಿ ನೆನಪುಗಳು ಅಪಾರ
ತುಂಬಿ ಹೋಗಿ ಗುಡಾಣ, ತಡೆಯಲಾಗದಷ್ಟು ಭಾರ
ಮುಳುಗಿ ಹೋಗುತಿತ್ತು ಬಾಳ ಹಡಗು!
ಆದರೆ ಗುರಿಯಿನ್ನೂ ಬಹಳ ಬಹಳ ದೂರ
ಚಿಂತಿಸಿ ದಿಕ್ಕೇ ತೋಚದೆ ಕುಳಿತಿರಲು ಎಲ್ಲರೂ
ಬಂದರೆಲ್ಲಿಂದಲೋ ಭಯಾನಕ ಕಡಲ್ಗಳ್ಳರು!
ಮುಗ್ಧ ಮನಗಳ ಮೇಲೆ ಅವರ ಮಾತುಗಳ ದಾಳಿ
ಕೊಳ್ಳೆ ಹೊಡೆದರು... ಹಡಗೆಲ್ಲಾ ಖಾಲಿ!
ಬೇಡ ಬೇಡವೆಂದರೂ ಬಾಚಿದರು,
ದಯವೇ ತೋರದೆ ದೋಚಿದರು
ಕೇಳಲೇ ಇಲ್ಲ ನಾವೆಷ್ಟೇ ಅಂಗಲಾಚಿದರೂ
ಛೆ! ಅವರು ಅದೆಂಥಾ ಹುಚ್ಚರು!
ಮೂಟೆಗಳಲ್ಲಿ ಅವರು ಕದ್ದಿದ್ದು ಬರೀ ಕಹಿ ನೆನಪು!
ಮೂಢರು! ಅವರಿಗೆ ಅವೆಲ್ಲಾ
ರತ್ನ ವಜ್ರ ವೈಢುರ‍್ಯಗಳೇನೋ ಎಂಬ ಹುರುಪು!
ತುಂಬಿಕೊಂಡರೆಲ್ಲವ ತಮ್ಮ ಹಡಗಿಗೆ ಬಿಡದೆ
ಘನ ಮನಸ್ಸಿನ ಭಾವಗಳ ವಜಿ ತಡೆಯದೆ
ತಕ್ಷಣವೇ ಬಿರಿಯಿತು ಆ ಕಳ್ಳ ಹಡಗಿನ ಎದೆ!
ಆದದ್ದು ಆಗಲೆ ಆ ಕಳ್ಳರಿಗೆ ತಮ್ಮ ತಪ್ಪಿನ ಅರಿವು
ನೆನಪುಗಳ ನಾವೆಯ ನಾವಿಕನೂ ಅಂದು ಬೇಡಿದ್ದ ಮರೆವು
ಮರುಕ್ಷಣವೇ ಮಾತಿಲ್ಲದೆ ಮುಳುಗಿತಾ ಹಡಗು,
ಮನ ಹಗುರವಾಗಿ, ಹೊಸಜೀವ ಬಂದಂತೆ,
ಸಾಗಿದೆವು ನಾವು ಮತ್ತೆ ಅನಂತದವರೆಗೂ.
ಕೊನೆಗೆ ಮನದ ಹಡಗಿನ ಮೇಲೆ ಉಳಿದದ್ದು ಬರೀ ಆ ಕಡಲ್ಗಳ್ಳರು ಬಂದುಹೋದ ಹೆಜ್ಜೆಗುರುತುಗಳ ನೆನಪು!
====================================================
© Pradeep Rao
Photo courtesy - www.fotosearch.com
Photo courtesy - www.hydrolance.net