Thursday, November 6, 2014

Technical ಲವ್


ಬಹುರಾಷ್ಟ್ರೀಯ ಕಂಪನಿಯಲ್ಲಿ ನೆಟ್‍ವರ್ಕ್ ಇಂಜಿನಿಯರ್ ಆಗಿರುವ ನನಗೆ ಪ್ರತಿನಿತ್ಯ ಚಿತ್ರವಿಚಿತ್ರ ರೀತಿಯ ತಾಂತ್ರಿಕ ತೊಂದರೆಗಳ ಬಗ್ಗೆ ಪ್ರಪಂಚದ ಎಲ್ಲಾ ಮೂಲೆಗಳಿಂದ ಈಮೇಲ್‍ಗಳು ಬರುತ್ತಿರುತ್ತವೆ. ಆ ತಾಂತ್ರಿಕ ದೋಷಗಳಿಗೆಲ್ಲಾ ಪರಿಹಾರ ಸೂಚಿಸುವುದೇ ನಮ್ಮ ಕೆಲಸ. ಕೆಲವೊಮ್ಮೆ ನಮ್ಮ ಜವಾಬ್ದಾರಿಯ ಪರಿಧಿಯಿಂದ ಹೊರತಾದ ಸಮಸ್ಯೆಗಳ ಬಗ್ಗೆಯೂ ಸಲಹೆಗಳನ್ನು ಕೋರಿ ಹಲವರು ಈಮೇಲ್ ಕಳುಹಿಸುತ್ತಿರುತ್ತಾರೆ. ಅಂತಹ ಸಮಯದಲ್ಲಿ ನಯವಾಗಿ ಇದು ನಮಗೆ ಸಂಬಂಧಪಟ್ಟಿದ್ದಲ್ಲ. ದಯವಿಟ್ಟು ನೀವು ಇಂಥವರನ್ನು ಸಂಪರ್ಕಿಸಿ ಎಂದು ಅವರ ಕೋರಿಕೆಗನುಸಾರವಾಗಿ  redirect ಮಾಡಬೇಕಾಗುತ್ತದೆ. 2011ರ ಜಪಾನಿನ ಪ್ರಳಯ ಸದೃಶ ಸ್ಥಿತಿಯಲ್ಲಿ "ನಮ್ಮನ್ನು ರಕ್ಷಿಸಿ" ಎಂದು ಬಂದಂಥ ಹೃದಯ ವಿದ್ರಾವಕ ಕರೆ ಇಂದ ಹಿಡಿದು "ಸರ್ವರ್ ರೂಮಿನಲ್ಲಿ ಬೆಕ್ಕಿನ ಮರಿ ಸಿಕ್ಕಿಹಾಕಿಕೊಂಡಿದೆ. ತಾತ್ಕಾಲಿಕವಾಗಿ ಅದಕ್ಕೇ ಅಲ್ಲೇ ಏನಾದರೂ ಆಹಾರದ ವ್ಯವಸ್ಥೆ ಮಾಡಿ" ಎಂಬ ಹಾಸ್ಯಾಸ್ಪದ ಈಮೇಲ್‍ಗಳನ್ನು ನನ್ನ  Inboxನಲ್ಲಿ ಕಾಣಬಹುದು. ನೆನ್ನೆ ದಿನ ಇಂತಹುದೇ ಒಂದು ವಿಚಿತ್ರ ಈಮೇಲ್ ನನ್ನ ಇನ್‍ಬಾಕ್ಸಿಗೆ ಬಂದು ಬಿತ್ತು. ತೆಗೆದುನೊಡಿದರೆ ಅದರಲ್ಲಿ ಬರೆದಿತ್ತು...

"LOVER NOT RESPONDING. PLEASE HELP!!!"

Loverboy ಥರ ಫೋಸ್ ಕೊಡುತ್ತಿದ್ದ ದಿನಗಳು, ಲವ್‍ಗುರು ಆಗಿ ಗೆಳೆಯರ ಪ್ರೇಮ ಪ್ರಸಂಗಗಳು ಕುದುರುವಂಥ ಸಲಹೆಗಳನ್ನು ನೀಡುತ್ತಿದ್ದ ವೈಭವದ ಕಾಲೇಜು ದಿನಗಳು ಮುಗಿದು ವರ್ಷಗಳೇ ಕಳೆದಿವೆ. ಆದರೆ ಇವರು ಯಾರೋ ನನ್ನ ಅಂದಿನ ಸಾಮರ್ಥ್ಯವನ್ನು ಅರಿತು ಈಗ ಸಂದೇಶ ಕಳುಹಿಸುತ್ತಿದ್ದಾರಲ್ಲ ಎಂದು ಅಚ್ಚರಿಪಟ್ಟೆ. ಎಲ್ಲೋ ಏನೋ ಮಿಸ್ ಹೊಡೀತಾ ಇದೆ ಅಂತ ಅಂದುಕೊಂಡೆ. ಕೂಲಂಕುಶವಾಗಿ ಮೇಲ್‍ಅನ್ನು ಪರಿಶೀಲಿಸಿದಾಗ ವಿಷಯ ಅರ್ಥವಾಯಿತು. ನಗುವೂ ಬಂದಿತು. ತಕ್ಷಣ ಮೇಲ್ ಕಳುಹಿಸಿದ್ದ ನನ್ನ ಆಪ್ತಗೆಳೆಯ ಸಹೋದ್ಯೋಗಿ ನವೀನ್‍ಗೆ ಕರೆ ಮಾಡಿದೆ.

"ಗರ್ಲ್‍ಫ್ರೆಂಡ್ ಜೊತೆ ಜಗಳ ಆಡಿದ್ದೀಯ?" ವಿಚಾರಿಸಿದೆ

"ಈಗ್ಯಾಕೋ ಅವೆಲ್ಲ.. ನಮ್ದು ದಿನಾಗಲೂ ಜಗಳ ಇದ್ದಿದ್ದೇ" ಎಂದ

"ಏನಾಯ್ತು ಅಂತ ಸ್ವಲ್ಪಬಿಡಿಸಿ ಹೇಳೋ" ಎಂದೆ

"ನೆನ್ನೆ ನಾನೇನೋ ತಪ್ಪು ಮಾತಂದೆ. ಅದಕ್ಕವಳು ಮುನಿಸಿಕೊಂಡು ಫೋನ್ ಸ್ವಿಚ್‍ಆಫ಼್ ಮಾಡಿದ್ದಾಳೆ ಕಣೋ" ಅಂದ

"ಹೂಂ. ಸರಿ ಒಂದು ಕೆಲಸ ಮಾಡು ನಿನಗೆ ನಿನ್ನವಳ ಗೆಳತಿಯರು ಪರಿಚಯವಿರಬೇಕಲ್ಲವೆ? ಅವರಿಗೆ ಕರೆ ಮಾಡಿ ಅವಳ ಮನಸ್ಸನ್ನು reboot ಮಾಡೋಕೆ ಹೇಳು. ಎಲ್ಲಾ ಸರಿ ಹೋಗುತ್ತೆ" ಎಂದೆ.

ಆತ ಸ್ವಲ್ಪ ಸಿಟ್ಟಿನಲ್ಲೇ "ಆಯ್ತಪ್ಪ ಪುಣ್ಯಾತ್ಮ ಲವ್ ಟೆಕ್ನಿಶಿಯನ್ ನೀನು... ಸರ್ವರ್ ರಿಪೇರಿ ಮಾಡು ಅಂದ್ರೆ ಲವರ್‌ನೇ ರಿಪೇರಿ ಮಾಡಿಸೋ ಸಲಹೆ ಕೊಡ್ತೀಯ!" ಎಂದ

ನಾನು ಉತ್ತರಿಸಿದೆ "ಏನು ಮಾಡೋದು ಸ್ವಾಮಿ ಜನ ಯಾವುದೇ ತೊಂದರೆ ಬಗ್ಗೆ ಮೇಲ್ ಬರೆದರೂ ಉತ್ತರ ನೀಡಬೇಕದದ್ದು ನಮ್ಮ ಕರ್ತವ್ಯ. ನಿಮ್ಮಂಥ ಪ್ರೇಮಾಂಧರಿಗೆ ಸರ್ವರ್‌ಗೂ ಲವರ್‌ಗೂ ವ್ಯತ್ಯಾಸನೇ ಗೊತ್ತಾಗಲ್ಲ ಅನ್ಸುತ್ತೆ ಈ ನಡುವೆ" ಎಂದೆ.

ಅವನು ತಬ್ಬಿಬ್ಬಾಗಿ ತನ್ನ  Sent items ಚೆಕ್ ಮಾಡಿದ. ಆಗಲೇ ಎಲ್ಲಿ ತಪ್ಪಗಿದೆ ಎಂದು ಅವನಿಗೆ ತಿಳಿದದ್ದು. ವಿಷಯ ತಿಳಿದು ಇಬ್ಬರೂ ಬಿದ್ದು ಬಿದ್ದು ನಕ್ಕೆವು.

ನಮ್ಮ ಕಂಪನಿಯಲ್ಲಿ ಸರ್ವರ್‌ಗಳಿಗೆ ಹೀಗೆ ಹೆಸರಿಡುವ ಪದ್ಧತಿ ಇದೆ.. ಬೆಂಗಳೂರಿನಲ್ಲಿರುವ ಸರ್ವರ್‌ಗೆ  BGSERVER  ನ್ಯೂಯಾರ್ಕ್‍ನಲ್ಲಿರುವ ಸರ್ವರ್‌ಗೆ  NYSERVER  ಹಾಗೆ ಲಂಡನ್‍ನಲ್ಲಿರುವ ಸರ್ವರ್‌ಗೆ  LOSERVER  ಎಂದು ಹೆಸರು!  "LOSERVER NOT RESPONDING. PLEASE HELP"  ಎಂದು ಟೈಪ್ ಮಾಡಬೇಕಿದ್ದ ಕಡೆ ಕೆಲವು ಅಕ್ಷರಗಳು ಮಾಯವಾಗಿ ಅದು  "LOVER NOT RESPONDING"  ಆಗಿತ್ತು.

"ಸರಿ ಮಾರಾಯ ಈಗ ಸರ್ವರ್ ಪ್ರಬ್ಲಮ್ ಗೆ ಏನು ಮಾಡೋದು ಹೇಳು" ಅಂದ.

"ನೋಡು ಗೆಳೆಯ ಈ ಸರ್ವರ್ ಕೂಡ ಒಂಥರಾ ನಿನ್ ಲವರ್ ಇದ್ದಂಗೆ. ನಾನು ಹೇಳಿದ Logic ಅನ್ನೇ ಅಲ್ಲೂ ಬಳಸು ಸರಿ ಹೋಗುತ್ತೆ" ಎಂದೆ

"ಹೀಗೆ ಒಗಟೊಗಟಾಗಿ ಮಾತಾಡಬೇಡ್ವೋ.. ನೆನ್ನೆ ಇಂದ ಕೆಲಸಗಳಾಗಿಲ್ಲ..." ಅವ ಗೋಗರೆದ.

"ನೋಡೋ ಈ ಸರ್ವರ್ ಕೂಡ ಒಂಥರಾ ನಿನ್ ಲವರ್ ಇದ್ದಂಗೆ. ಅವಳು ನೆನ್ನೆ ನೀನಾಡಿದ್ದ ಮಾತನ್ನು ತಪ್ಪಾಗಿ ಗ್ರಹಿಸಿ ಮುನಿದು ಫೋನ್ ಸ್ವಿಚಾಫ್ ಮಾಡಿದ್ದಾಳೆ. ಸರ್ವರ್ ಕೂಡ ನೆನ್ನೆ ನೀನು ಹೊಡೆದ  password  ತಪ್ಪಾಗಿದ್ದಿದ್ದರಿಂದ ಮುನಿದು ನಿನ್ನ  account deactivate ಮಾಡಿದೆ. ನಾನಂದೆ ನೀನು ಅವಳ ಗೆಳೆತಿಯರ ಕೈಲಿ ಅವಳ ಮನ ಓಲೈಸು. ಇಲ್ಲೂ ಅಷ್ಟೆ ಸರ್ವರ್ ಸ್ನೇಹಿತರು ಅಂದರೆ ಸರ್ವರ್ ಅಡ್ಮಿನ್‍ಗಳಿಗೆ ಕರೆ ಮಾಡಿ ನಿನ್ನ  Account reactivate ಮಾಡಿಸು. ಆಗ ನಿನ್ನ ಎರಡೂ ತೊಂದರೆಗಳೂ ನಿವಾರಣೆಯಾಗುತ್ತವೆ" ಎಂದೆ. ಆತ ಸಂತೃಪ್ತನಾಗಿ ಧನ್ಯವಾದ ಹೇಳಿ ಫೋನಿಟ್ಟ.

ತಂತ್ರಙ್ಞಾನದ ಹಲವು ವಿಷಯಗಳನ್ನು ಜೀವನದ ಕೆಲವು ಅಂಶಗಳಿಗೆ ತರ್ಜುಮೆ ಮಾಡಿ ಹೇಳುವುದು ನನಗೆ ಬಹಳ ಹಿಂದಿನಿಂದ ಬಂದ ಅಭ್ಯಾಸ. ಅಲ್ಲಿನ ಸಿದ್ಧಾಂತಗಳಿಗೂ ಇಲ್ಲಿನ ಸಂದರ್ಭಗಳಿಗೂ ಬಹಳಷ್ಟು ಸಾಮ್ಯತೆ ಇದೆ. ಈಗ ನೋಡಿ ಈ desktop computer ಎಂಬುದಿದೆಯಲ್ಲ ಅದೊಂಥರ ಹಿಂದಿನ ಕಾಲದ ಮಧ್ಯಮವರ್ಗದ ಗೃಹಿಣಿ ಇದ್ದ ಹಾಗೆ. ಅದೆಷ್ಟೇ ಸಮರ್ಥವಾಗಿ ಕೆಲಸ ಮಾಡಿದರೂ ಯಜಮಾನನಿಗೆ ಅದರ ಹೆಸರೆತ್ತಿದ ಕೂಡಲೇ ಅದರ ಗಜಗಾತ್ರದ,  glamourless looks ಕಣ್ಣಿಗೆ ಕುಕ್ಕುತ್ತದೆ. ಮನೆ ಹೆಂಗಸರಿಗಿರುವಂತೆ desktopಗೆ mouse, keyboard, modemಗಳ ಪಾರಂಪರಿಕ ಬಂಧನ, ಕಟ್ಟುಪಾಡುಗಳು. ಅವಳನ್ನು ಹೊರಗೊಯ್ಯಲು ಯಜಮಾನ ಯೋಚಿಸುತ್ತಾನೆ ಖರ್ಚಾಗುತ್ತದೆಂದು. ಆದರೆ ಈ ಮೊಬೈಲ್ ಇದೆಯಲ್ಲ ಅದು ಒಂಥರಾ glamorous girlfriend ಇದ್ದ ಹಾಗೆ. ಹೊರ ಹೋದಾಗಲೆಲ್ಲಾ ಅದರೊಡೆಯ ಜಾಲಿಯಾಗಿ ಕೈ ಹಿಡಿದು ಕರೆದುಕೊಂಡು ಹೋಗುತ್ತಾನೆ. ಅವಳೊಂದು ಚೂರು ಗೋಳಾಡಿದರೂ ತಕ್ಷಣ chargingಗೆ ಹಾಕಿ ಆರೈಕೆ ಮಾಡುತ್ತಾನೆ. ಅವಳು ಕೇಳದಿದ್ದರೂ "ಖರ್ಚಿಗೆ ಬೇಕಾಗುತ್ತೆ ಇಟ್ಕೋ ಚಿನ್ನ" ಎಂದು ಕರೆನ್ಸಿ ಹಾಕಿಸುತ್ತಾನೆ. ಕವರ್ ಹೊದ್ದಿಸಿ ಬೆಚ್ಚಗೆ ಜೋಪಾನ ಮಾಡುತ್ತಾನೆ ಆದರೆ ಪಾಪ desktopಗೆ ಮಾತ್ರ ಕೆಲಸವಿದ್ದಾಗಷ್ಟೆ ಕರೆಂಟು ಕೊಡುವುದು!

ಮೊಬೈಲ್ latest ಆಗಿದ್ದಷ್ಟು, stylish ಆಗಿದ್ದಷ್ಟು ಕೈ ಹಿಡಿದವ enjoy ಮಾಡುತ್ತಾನೆ. ಅಕ್ಕಪಕ್ಕದವರು ಇಂಥ ಮಾಡೆಲ್ ತಮಗೆ ಸಿಗಲಿಲ್ಲವಲ್ಲ ಎಂದು ಕೈ ಹಿಸುಕಿಕೊಳ್ಳುತ್ತಾರೆ. ದೊಡ್ಡ ಜೇಬಿರುವವರು ದೊಡ್ಡ ದೊಡ್ಡ "Touching" ಸೌಲಭ್ಯವಿರುವ "ಮಾಡೆಲ್"‍ಗಳನ್ನು ತಮ್ಮದಾಗಿಕೊಳ್ಳುತ್ತಾರೆ. ಅಂಥ ಅದೃಷ್ಟವಂತರು ಒಮ್ಮೆ ಸವರಿದರೆ ಸಾಕು ಅವಳ ಮನಸ್ಸು ಮೊಬೈಲ್ ಸ್ಕ್ರೀನ್‍ನಂತೆ unlock ಆಗಿಬಿಡುತ್ತೆ. ಹೊಸತರಲ್ಲಂತೂ ಅವಳ ಪ್ರತಿಯೊಂದು ಭಾವವೂ ಹೊಸದಾಗಿ ಡೌನ್‍ಲೋಡ್ ಮಾಡಿದ Free appನಂತೆ ಮುದ ನೀಡುತ್ತವೆ.

ಇನ್ನು ಈ ಸಿ.ಡಿ.ಗಳಿವೆಯಲ್ಲ ಅದಂತೂ desktopಗೆ ಹೆರಿಗೆಯಾದಂತೆ! ಮನೆ ಮಡದಿಯು ತುಂಬು ಗರ್ಭಿಣಿಯಾದಾಗ ಹುಟ್ಟುವ ಮಕ್ಕಳಂತೆ ಇವು desktopನ harddisk ತುಂಬಿದಾಗ CD drive ಗರ್ಭದಿಂದ ಅಚ್ಚಾಗಿ ಮಕ್ಕಳಂತೆ ಹೊರಬರುತ್ತವೆ. ಮುಂಚೆಯೆಲ್ಲಾ ಮನೆ ತುಂಬುವಷ್ಟು ಮಾಡಿಕೊಳ್ಳುತ್ತಿದ್ದರು. ಈಗ ಒಂದೇ ಸಾಕು ಎನ್ನುತ್ತಾರೆ (USB!!) ಅವೂ ಹೆಚ್ಚಾದಷ್ಟು ಖರ್ಚು ನಿರ್ವಹಣೆಯ ಹೊರೆ ಜಾಸ್ತಿ. ಆದ್ದರಿಂದಲೇ ಅಚಾತರ್ಯದಿಂದ ಮಕ್ಕಳಾಗುವುದನ್ನು (ಸಿ.ಡಿ.) ತಪ್ಪಿಸಲು ಈ ಗುಳಿಗೆ ಎಲ್ಲಿಗೆ ಹೋದರೂ ಜೊತೆಯಲ್ಲೇ ಇರಲಿ..  Pendrive  ಮಾರಾಯ್ರೇ ನೀವೇನಂದುಕೊಂಡ್ರಿ??
11 comments:

 1. ಚೆಂದದ ಹೋಲಿಕೆ ಮಾಡುತ್ತೀರಿ... ಯಾವಾಗಲೂ ರಿಪೇರಿ ಗುಂಗಿನಲ್ಲೇ ಇರುವವರು. . ಎಲ್ಲ ತರಹದ ಸಮಸ್ಯೆಗಳನ್ನು ನಿಮ್ಮ ರಿಪೇರಿಗೆ ಹೋಲಿಸಿ ಸಳಗೆ ಕೊಡುವವರು, ಚೆಂದವಿದೆ

  ReplyDelete
 2. ಅಣಾ ಅಡ್ಡಬಿದ್ದೆ!!!...
  ಚೆನಾಗಿದೆ :)

  ReplyDelete
 3. ಸಕತ್ ಆಗೈತೆ,,,,,, ತುಂಬಾ ನಕ್ಕು ಬಿಟ್ವಿ,,,,, ಮನಸು ರೀಬೂಟ್ ಆಯಿತು ಗೆಳೆಯ,,,,,

  ಅಲ್ಲಾ,,, ಮಹರಾಯ,,, ನಿನಗೆ ಅಲ್ಲಿ ಬಳಸೋಕೆ ನನ್ನ ಹೆಸರೇ ಬೇಕಿತ್ತಾ (ತಮಾಷೆಗೆ)

  ಒಳ್ಳೆಯ ಬರಹ,,,, ಧನ್ಯವಾದಗಳು

  ReplyDelete
 4. Fantastic! Carry on, ಗುರು!!

  ReplyDelete
 5. ಆಹಾ.. ಬಡ್ತಿ ಸಿಕ್ಕಾಗ ಎಂಥಹ ಬರಹಗಳು ಹೊರಗೆ ಬರುತ್ತವೆ.. ಸೂಪರ್ ಸೂಪರ್

  ReplyDelete
 6. ೨೦ ವರ್ಷಗಳ ಮುಂಚೆ ತಮ್ಮ inbox ಇದ್ದಿದ್ದರೆ ನಾನೂ ಸಹ ತಮಗೆ
  "LOVER NOT RESPONDING. PLEASE HELP!!!"
  ಅಂತಲೇ ಕಳಿಸುತ್ತಿದ್ದೆ! ;-)

  ಅದು, ಸರ್ವರ್‌ಗೂ ಲವರ್‌ಗೂ ವ್ಯತ್ಯಾಸ ಗೊತ್ತಗದ ವಯಸ್ಸು!


  Pen drive ಗುಳಿಗೆ ನಾನೂ ಬಳಸುತ್ತೇನೆ ಮಾರಾಯರೇ!

  your blog post has been shared at:
  https://www.facebook.com/photo.php?fbid=602047969839656&set=gm.483794418371780&type=1&theater

  ReplyDelete