Monday, March 10, 2014

ಹೂವೇ... ನಾ ಬರುವೆ..


ಹೂವೆ,

ರವಿ ಬಂದನೆಂದು
ಮುಖವರಳಿಸಿ ನಿಂತು
ಹಗಲುಗನಸಲಿ ತೇಲದಿರು
ನಿನ್ನ ಆವರಿಸಲು ನಿಶೆಯಾಗಿ ನಾ ಬರುವೆ

ಕತ್ತಲೆ ಕವಿದಿರಲು
ನಿನ್ನೊಲವಿನಾಗಸಕೆ
ಬೇರೆ ತಾರೆಯ ಹುಡುಕದಿರು
ನಿನ್ನ ಅರಳಿಸಲು ಉಷೆಯಾಗಿ ನಾ ಬರುವೆ

ಸೌಂದರ್ಯ ಚಿಲುಮೆಯೆ
ಅವರಿವರ ರಸಿಕತೆಯ
ತಂಗಾಳಿಗೆ ತೇಲಿ ಆವಿಯಾಗದಿರು
ನಿನ್ನ ಆಲಿಂಗಿಸಲು ಆಕಾಶವಾಗಿ ನಾ ನಿಲ್ಲುವೆ

ಈ ದುಂಬಿಗೇ ಮೀಸಲಿಡು
ನಿನ್ನ ಸುಗಂಧ ಸರ್ವಸ್ವವ
ಮಧುಬಟ್ಟಲಿನಮೃತವ ನನಗಾಗಿ ಕಾದಿರಿಸು
ನಿನ್ನಲ್ಲಿ ಆಸೆಗಳ ಹೂ ಪಕಳೆಯಂತೆ ಅರಳಿಸುವೆ


ಹಾರಿ ಹೋಯಿತು ದುಂಬಿ
ಮಧು ಮೋಜುಗಳಲ್ಲಿ ಎದೆತುಂಬಿ
ಬಂದಿಳಿದರು ಇವಳಂಗಳಕೆ ಹೊಸ ಅತಿಥಿ
ಇವಳು ಒಲ್ಲೆ ಎಂದು ಬಾಡುವ ಹಾಗಿಲ್ಲ
ಉಂಡು ಕೊಂಡು ಹೋದವ ತಿರುಗಿ ನೋಡುವುದಿಲ್ಲ
ಛೇ ಇಲ್ಲಿ ಪ್ರೇಮವಿಲ್ಲ, ಬರೀ ಪುರುಷ ಪ್ರಾಧಾನ್ಯವೇ!

10 comments:

  1. ಮೊದಲಿಗೆ ದು೦ಬಿಯು ಹೂವಲ್ಲಿ ತನಗೆ ಮಾತ್ರ ಜೇನನ್ನು ಮೀಸಲಿಡು ಎ೦ದ್ನು ವೇದಿಸಿ , ನ೦ತರ ಮದುವನ್ನು ಹೀರಿ ತನ್ನ ಪಾಡಿಗೆ ತಾನು ಹಾರಿ ಹೋಗುವ ಅದರ ವರ್ತನೆ....
    ನಿಮ್ಮ ಕವನದ ಸಾಲುಗಳಲ್ಲಿ ಸೊಗಸಾಗಿ ಮೂಡಿಬ೦ದಿದೆ....ಹೂವನ್ನು ಹೆಣ್ಣಿನ ಮನಸಿಗೆ, ದು೦ಬಿಯನ್ನು ಪುರುಷ ಪ್ರಧಾನಕ್ಕೆ ಹೋಲಿಸಿದ ಪರಿ ಇಷ್ಟವಾಯ್ತು ಪ್ರದೀಪ್.....
    By the way, lovely photography too :)

    ReplyDelete
  2. ಸುಂದರ ಕವಿತೆ. ಎಲ್ಲ ದುಂಬಿಗಳ ಆಕಾಂಕ್ಷೆ ಇದೆ ಇರಬಹುದೆನೊ. ನಿಮಗೆ ಶುಭವಾಗಲಿ.
    ಪ್ರಸಾದ್, ಅಡಿಲೈಡ್

    ReplyDelete
  3. ಪ್ರದೀಪಣ್ಣಾ...ಚೆಂದದ ಚಿತ್ರಗಳು :) :)
    "ಮಧು" ಮತ್ತು " ಮೋಜು"ಗಳನ್ನು ಸೇರಿಸಿದ್ದು ವಿಶೇಷ ಅನಿಸ್ತು...ಅವುಗಳ ನಡುವೆ ಒಂದು ಸೂಕ್ಷ್ಮಗೆರೆಯಿದೆಯಲ್ಲಾ ಅದು ಮುಖ್ಯ ಅಷ್ಟೇ.... :)
    ಬರಿರಿ ಬರಿರಿ :)..ಪೋಟೋಗೂ,ಸಾಲುಗಳಿಗೂ ಅದ್ ಹೆಂಗೆ ಅಷ್ಟ ಛಂದ ತಾಳಮೇಳ ಕೂಡುಸ್ತೀರಪ್ಪಾ......:) :)

    ಆ ಎರಡು ಚಿತ್ರಗಳು ಬರೆಸಿಕೊಂಡ ಸಾಲುಗಳಿವು.....

    ಸೊಗೆದಷ್ಟೂ ಬೊಗಸೆತುಂಬ ಮುಗ್ಧ ನಗೆಯಭಿತ್ತರಿಸುತ
    ಮೊಗೆಮೊಗೆದು ಖುಷಿಯೂಡಿಸುವೆ ಬಾ ಮಧುವಾಹನರಸಿಕನೆ
    ಆಗಿದ್ದು ಈಗಿಲ್ಲವಾಗುವ ಸಹಜಸೃಷ್ಟಿಯಿಂದಾದ ಬೀಳುಕುಸುಮ
    ಲಗೋರಿಗೆ ಸಹಭಾಗಿಯಾಗು ಬಾ ಜೀವಯಾನದಾ ಸಹಪಥಿಕನೆ

    ಧನ್ಯವಾದಗಳು ನಮಸ್ತೆ :)

    ReplyDelete
  4. ವಾಸ್ತವ ಹಾಗು ಕಲ್ಪನೆಗಳ ಸುಂದರ ಸಮ್ಮೇಳ!

    ReplyDelete
  5. ಕಣ್ಣೆತ್ತ ಸಾಗುತಿದೆ ನಿನ್ನೆಯ ಕಡೆಗೆ ಎನ್ನುವ ಹಾಡಿನಂತೆ.. ಪದಗಳ ಕಡೆ ಕಣ್ಣಾಡಿಸಿದರೆ ಚಿತ್ರಗಳು ಕಾಡುತ್ತವೆ.. ಚಿತ್ರಗಳನ್ನು ನೋಡುತ್ತಿದ್ದರೆ ಪದಗಳು ಕಾಡುತ್ತವೆ..

    ಕೀಲಿ ಮಣೆ.. ಮಸೂರ ಎರಡರಲ್ಲೂ ಜಾದೂ ಮಾಡುವ ಸರದಾರ ನೀವು ಪ್ರದೀಪ್..

    ಹೂವನ್ನು ಮೇಲೇರಿಸಿ.. ಅದರ ಸೌಂದರ್ಯವನ್ನು ವರ್ಣಿಸುತ್ತಲೇ.. ಅದರ ಸೊಬಗಿಗೆ ಸುಂದರ ಚೌಕಟ್ಟು ಹಾಕುವ ನಿಮ್ಮ ಕಲಾವಂತಿಕೆ ಇಷ್ಟವಾಯಿತು..

    ಸೂಪರ್ ಸೂಪರ್ ಅಂಡ್ ಸೂಪರ್

    ReplyDelete
  6. ಸುಂದರ ಕವಿತೆ...ಸೂಪರ್ ಚಿತ್ರಗಳು :)

    ReplyDelete