Monday, January 27, 2014

ಓಂ ನಿಯಮಾಯ ನಮಃ !!

"ಓಂಸ್ ಲಾ" ಕೊನೆಯ ಬೆಂಚಿನಲ್ಲಿ ಮಲಗಿರುವವರೆಲ್ಲಾ ಬೆಚ್ಚಿಬಿದ್ದು ಏಳುವಷ್ಟು ಜೋರು ದನಿಯಲ್ಲಿ ಪ್ರೊಫ಼ೆಸ್ಸರ್ರು ಅರಚಿದರು. ವರ್ಷಾನುವರ್ಷಗಳಿಂದ ಎಲೆಕ್ಟ್ರಾನಿಕ್ಸ್ ಪಾಠಗಳು ಶುರುವಾಗುವುದೇ ಈ ನಿಯಮದೊಂದಿಗಾದರೂ ಅದು ಈಗಷ್ಟೇ ತಾವೇ ಆವಿಷ್ಕಾರಿಸಿದ ಹೊಸ ವಿಷಯವೇನೋ ಎಂಬಂತೆ ವಿವರಿಸಿವುದು ನಮ್ಮ ಪ್ರೊಫ಼ೆಸ್ಸರ್ರಿನ ಅಭ್ಯಾಸ.



 "The amount of current flowing through a conductor is directly proportional to strength of the voltage applied across it"  ಕಪ್ಪು ಬೋರ್ಡಿನ ಮೇಲೆ ಜೇಡರ ಬಲೆಯಂತೆ ಕಾಣುವ ಒಂದು ಸರ್ಕಿಟ್ ಚಿತ್ರ ಬಿಡಿಸಿ ಗೆದ್ದ ಹುಮ್ಮಸ್ಸಿನಲ್ಲಿ ಪ್ರೊಫ಼ೆಸ್ಸರ್ರು ನಮ್ಮೆಡೆಗೆ ತಿರುಗುವ ಮುಂಚೆ, ನಾನಿನ್ನು ನಿಮ್ಮ ಶೋಷಣೆ ತಾಳಲಾರೆ ಎಂದು ಅರಚಿ ಹೇಳುತ್ತಾ ಪ್ರಾಣ ಬಿಡುವಂತೆ, ಅವರ ಕೈಯ್ಯಲ್ಲಿದ್ದ ಬಳಪದ ಕೋಲು ಪಟಕ್ಕನೇ ಮುರಿದು ಕೆಳಗುರುಳಿ ಆತ್ಮಹತ್ಯೆ ಮಾಡಿಕೊಂಡಿತು! ತೂಕಡಿಸುವ ಹುಡುಗರತ್ತ ಗುರಿ ಮಾಡಿ ಎಸೆಯಲು ನಮ್ಮ ಪ್ರೊಫ಼ೆಸ್ಸರ್ರು ಸದಾ ಬಳಿ ಇಟ್ಟುಕೊಳ್ಳುವ ತಮ್ಮ ತುಂಡು ಬಳಪಗಳ ಬತ್ತಳಿಕೆಗೆ ಮತ್ತೊಂದು ಕ್ಷಿಪಣಿ ಸೇರಿತು!

ನಾನು ಮೊದಲಿನಿಂದಲೂ ಇತರರಿಗಿಂತ ಭಿನ್ನ... ತೂಕಡಿಸುವ ಬದಲು ಯಾವುದೋ ಕತೆ ಕವನಗಳ ಗುಂಗಿನಲ್ಲಿ ತರಗತಿಯಲ್ಲಿ ಅನಿವಾರ್ಯವಾಗಿ ಕಳೆಯಲೇಬೇಕಾದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದೆ...  C-Progams  ಬರೆದುಕೊಂದು ಹೋಗಬೇಕಿದ್ದ  Lab Record book ನಲ್ಲಿ ಧೈರ್ಯವಾಗಿ ಒಂದು ರೇಖಾ ಚಿತ್ರದ ಜೊತೆಗೆ ವಿರಹಗೀತೆ ಬರೆದು ಉಪನ್ಯಾಸಕಿಗೆ ಕೊಟ್ಟ ಖ್ಯಾತಿಗೆ ಪಾತ್ರನಾಗಿದ್ದೆ!

ಅಂದು ಮೇಷ್ಟ್ರು ಹೇಳುತ್ತಿದ್ದ ಓಂಸ್ ಲಾ ವಿಷಯಗಳು ಮತ್ತು ನನ್ನ ತಲೆಯಲ್ಲಿದ್ದ ಪ್ರೀತಿ ಪ್ರೇಮದ ವಿಷಯಗಳು ಬೆರಕೆಯಾಗಿ ಹೊಸದ್ಯಾವುದೋ ಲಾ ಆವಿಷ್ಕಾರಗೊಳ್ಳುವಂತೆ ಕಾಣುತಿತ್ತು. ಪಾಪ ಅವನ್ಯಾರೋ ಓಂ ಅನ್ನುವವನು ಹೇಳಿರೋ ಮಾತು ಶತ ಪ್ರತಿಶತ ಸತ್ಯ ಕಣ್ರೀ! ಜೀವನದಲ್ಲಿ ನಾವು ಏನೇ ಕೆಲಸಗಳನ್ನು ಮಾಡಲು ಹೋದರು ಒಂದಲ್ಲ ಒಂದು ರೀತಿಯ ಅಡ್ಡಿ ತಡೆಗಳು ಉಂಟಾಗುತ್ತವೆ. ಯಾಕೆ ಎಂದು ಕೇಳಿದರೆ ಪಾಪ-ಪುಣ್ಯ, ಅದೃಷ್ಟ, ಗ್ರಹಗತಿ, ಹಣೆಬರಹ, ಪಡ್ಕೊಂಡು ಬಂದಿದ್ದು, ಕೇಳ್ಕೊಂಡು ಬಂದಿದ್ದು ಅಂತ ನೂರಾರು ಕಾರಣಗಳನ್ನು ಕೊಡುತ್ತಾರೆ. ಅವನ್ನೆಲ್ಲಾ ಸೇರಿಸಿ ಓಂ ಒಂದೇ ಒಂದು ಪದದಲ್ಲಿ ವಿವರಣೆ ನೀಡಿದ್ದಾನೆ... ಅದೇ "Resistance" ಪಾಪಿಗಳಿಗೆ ಅದು ಹೆಚ್ಚಿರುತ್ತೆ ಅದಕ್ಕೆ ಅವರ ಕೆಲಸ ಕಾರ್ಯಗಳಲ್ಲಿ ಹೆಚ್ಚು ಅಡೆ ತಡೆ ಎದುರಾಗುತ್ತೆ. ಈ ಪುಣ್ಯ ಮಾಡಿದವರು, ಅದೃಷ್ಟವಂತರು, ಕೇಳ್ಕೊಂಡು ಬಂದಿರುವವರು ಎನ್ನುತ್ತಾರಲ್ಲ ಅವರಿಗೆ ಭಗವಂತ ಕಮ್ಮಿ Resistance ಹಾಕಿ ಕಳುಹಿಸಿರುತ್ತಾನೆ ಕಣ್ರೀ, ಅದಕ್ಕೆ ಅವರ ಸರ್ಕಿಟ್ ಅಂದರೆ ಜೀವನದಲ್ಲಿ ಬೇಕಾದಷ್ಟು ಕರೆಂಟ್ ಅಂದರೆ ಕಾರ್ಯಗಳು ಸರಾಗವಾಗಿ ಹರಿದುಹೋಗುತ್ತದೆ! ಓಂ ಹೇಳಿರುವಂತೆ ಅಂಥವರು ತಮ್ಮ ಜೀವನದ ಸರ್ಕೀಟ್‍ನಲ್ಲಿ ಹೆಚ್ಚಿಗೆ ಕರೆಂಟ್ ಹರಿಸಲು ನತದೃಷ್ಟರಂತೆ ಆ ಕಡೆಯಿಂದಲೂ ಈ ಕಡೆಯಿಂದಲೂ ಭಾರಿ ಪ್ರಮಾಣದ Voltage ಹಾಕಬೇಕಿಲ್ಲ, ಹೆಚ್ಚು ಶ್ರಮ ಪಡಬೇಕಿಲ್ಲ, ನಸೀಬಿನ ಅವಾಹಕತ್ವದ ವಿರುದ್ಧ ಹೆಚ್ಚು ಹೋರಾಟ ನಡೆಸಬೇಕಿಲ್ಲ. ಆದರೆ ಪಾಪ ಈ ನತದೃಷ್ಟರ ಪಾಡು ಹಾಗಲ್ಲ... ಹೆಚ್ಚಿಗೆ ಹೇಳುವುದು ಯಾಕೆ? ಈ ಕೆಳಗಿನ ಚಿತ್ರ ನೋಡಿದರೆ ನಿಮಗೇ ಅರ್ಥವಾಗುತ್ತದೆ.


ಮನಸಲ್ಲಿ ಹೀಗೆಲ್ಲ ಹರಿದಾಡುತ್ತಿದ್ದ ವಿಚಾರಧಾರೆಗಳ ಮಧ್ಯೆ ತೇಲಾಡುತ್ತಿದ್ದ ನನ್ನ ಯಾವುದೋ ಕೈಬಳೆಗಳ ಝಲ್ ಝಲ್ ಸದ್ದು ಎಚ್ಚರಮಾಡಿ ಮತ್ತೆ ನನ್ನ ಕ್ಲಾಸಿಗೆ ಎಳೆದು ತಂದಿತು... ಪಕ್ಕದ ಸಾಲಿನಲ್ಲಿದ್ದ ನಳಿನಿ ಅಂದು ಕೈಗೆ ಒಂದು ಡಜ಼ನ್ ಹೊಸ ಬಳೆಗಳನ್ನು ಹಾಕಿಬಂದಂತಿತ್ತು... ಬಳೆಗಳ ಝಲ್ಲಿಗೆ ಸೋಲದ ರಸಿಕನುಂಟೆ? "ಹಸಿರು ಗಾಜಿನ ಬಳೆಗಳೇ..." ಹಾಡಿನ ಸುಧಾರಾಣಿಯಂತೆ ಕಾಣುತ್ತಿದ್ದ ಅವಳನ್ನೇ ಎರಡು ಸೆಕೆಂಡು ಅರಿವಿಲ್ಲದೆ ನೋಡಿದೆ.. ಅವಳು ಒಮ್ಮೆ ನನ್ನೆಡೆಗೆ ಕೆಂಗಣ್ಣು ಬೀರಿ ಸಿಟ್ಟಿನಿಂದ ಮುಖ ತಿರುಗಿಸಿಕೊಂಡಳು! ಮನೆಗಳಿಗೆ ಸೂರಿನ ಮೇಲೆ ಸಿಂಟೆಕ್ಸ್ ತೊಟ್ಟಿ ಇಟ್ಟಿರುವಂತೆ ಈ ಹುಡುಗಿಯರಿಗೆ ಮೂಗಿನ ಮೇಲೆ ಸಿಟ್ಟಿನ ಸಿಂಟೆಕ್ಸ್ ಟ್ಯಾಂಕ್ ಇರುತ್ತೆ ಕಣ್ರೀ... ನಮ್ಮಂತ ಬಡಪಾಯಿಗಳು ಒಮ್ಮೆ ತಿರುಗಿ ನೋಡಿದರೂ ಪುಸುಕ್ ಅಂತ ಹರಿದು ಬಂದು ಮುಖವೆಲ್ಲ ಕೆಂಪಾಗಿಸಿಬಿಡುತ್ತದೆ! ಅವಳು ಮುಖ ತಿರುವಿದಂತೆ ನಾನೂ ತಿರುವಿ ಬೋರ್ಡಿನೆಡೆಗೆ ನೋಡಿದೆ...

ಮೇಷ್ಟ್ರು ಅಲ್ಲಿ ಹಾಕಿದ್ದ ಆ ಸರ್ಕಿಟ್ ಚಿತ್ರ ಯಾಕೋ ನನ್ನ ಕಣ್ಣು ಸೆಳೆಯಿತು. ಎಷ್ಟು ಚೆನ್ನಾಗಿದೆ ಈ ಚಿತ್ರ. ಇದು ಬರಿ ಓಂನ ತತ್ವವಲ್ಲ ನಮ್ಮಂತಹ ಕಾಲೇಜು ಹುಡುಗರ ಜೀವನ ತತ್ವವನ್ನೂ ಸಾರುವಂತಿದೆಯಲ್ಲಾ ಎಂಬ ಯೋಚನೆ ತಲೆಯೊಳಗೆ ಹರಿಯುತ್ತಿರುವಂತೆ ಅವರು ಬರೆದ ಆ ಚಿತ್ರ ನನ್ನ ಕಣ್ಣುಗಳಲ್ಲಿ ಹಾಗೇ ಮಾರ್ಪಾಡಾದವು! ಆ ಚಿತ್ರದಲ್ಲಿ ಒಂದೆಡೆಗೆ + ಅಂದರೆ ಪಾಸಿಟಿವ್ ಶಕ್ತಿ ಇದೆ. ಇನ್ನೊಂದೆಡೆ - ಅಂದರೆ ನೆಗೆಟೀವ್ ಶಕ್ತಿ ಇದೆ. ನಮ್ಮ ಕಾಲೇಜಲ್ಲೂ ಹಾಗೆ... ಎಲ್ಲಾ ಕ್ಲಾಸಲ್ಲಿ ಕೂಡ ಹುಡುಗರೆಲ್ಲಾ ಒಂದು ಕಡೆ, ಹುಡುಗಿಯರೆಲ್ಲಾ ಒಂದು ಕಡೆ. ನಿಜ ಹೇಳಬೇಕಂದರೆ ಆ ಚಿತ್ರದಲ್ಲಿರೋ + ಹುಡುಗರಿಗೇ ಸಂಬಂಧಪಟಿದ್ದು. ಈ ಹುಡುಗರು ಯಾವಾಗ್ಲೂ  "additive in nature"  ಎಷ್ಟೇ ಜನ ಹುಡುಗಿಯರು ಬಂದರು ಅವರು ತಮ್ಮ  Crush list ನಲ್ಲೋ Friend list  ನಲ್ಲೋ  "add"  ಮಾಡ್ಕೋತಾನೆ ಹೋಗುತ್ತಾರೆ. ಈ ನಳಿನಿಯ ಹಾಗಂತೂ ಯಾವತ್ತೂ ಯಾರಿಗೂ ಮೂತಿ ತಿರುವೋದಿಲ್ಲ... ಕಾಲೇಜಿನಲ್ಲಿ ಯಾರೇ ಹೊಸ ಪರಿಚಯವಾದರೂ ತಕ್ಷಣ Facebookನಲ್ಲಿ  friend request ಕಳಿಸೋದು  Twitter  ನಲ್ಲಿ  Follow  ಮಾಡೋದು ಬಡಪಾಯಿ ಹುಡುಗರೇ ತಾನೆ. ಹಾಗಂತ ಕೀಳರಿಮೆ ಬೇಡ. "+" ಪಾಸಿಟಿವ್ ಅನ್ನಿಸ್ಕೊಳ್ಳೋಕೆ ಇನ್ನು ಒಂದು ಕಾರಣ ಇದೆ. ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಎಲ್ಲವನ್ನೂ ಪಾಸಿಟಿವ್ ಆಗಿ ತಗೊತಾರೆ. ಬೇಕಿದ್ರೆ ಹುಡುಗಿಯರೆದುರು ಸದಾ ಹಲ್ಲು ಕಿರಿಯೋ ಹುಡುಗರನ್ನ ನಿಮ್ಮ ಎಷ್ಟು  subjects  ಬಾಕಿ ಇದೆ ಎಂದು ಕೇಳಿ ನೋಡಿ ನೋಡೋಣ. ಎಷ್ಟೆಲ್ಲಾ ಬಾಕಿ ಇದ್ದರೂ ಅಷ್ಟು ಪಾಸಿಟಿವ್ ಆಗಿ ನಗುವ ಅಭ್ಯಾಸ ಹುಡುಗಿಯರಿಗೆಲ್ಲಿ ಬರಬೇಕು? ಹುಡುಗಿಯರು ಯಾವಾಗ್ಲೂ - ಅಂದರೆ ನೆಗೆಟೀವ್ ಸೈಡ್ ಕಣ್ರೀ... ತಾಜ್‍ಮಹಲ್ ತಂದುಕೊಡ್ತೀನಿ ಅಂದರು ಇಲ್ಲಿವರೆಗೆ ನನಗೆ ಎಲ್ಲರೂ "NO" ಅಂತಾನೆ ಹೇಳಿರೋದು! ಆದರೂ ನನ್ನ ಹೃದಯ ಮೃದು ಕಣ್ರೀ ಹುಡುಗಿಯರು ನೆಗೆಟೀವ್ ಅಂತ ಹೆಚ್ಚು ಒತ್ತಿ ಹೇಳಿದರೆ ಅವರು ನೊಂದ್ಕೋತಾರೆ ಪಾಪ! ಇನ್ನು ಪಾಸಿಟೀವ್ ನೆಗೆಟೀವ್‍ಗಳ ಮಧ್ಯೆ ಯಾವಾಗಲೂ ಕರೆಂಟ್ ಇದ್ದಿದ್ದೇ. ಯಾವ ಕರೆಂಟು ಅಂತೀರ? ಸುಂದರವಾದ ಹುಡುಗಿ ಸ್ಮೈಲ್ ಕೊಟ್ಟಾಗ ಮೈ ಜುಮ್ ಅನ್ನೋಲ್ವ? ಅದು ಈ ಕರೆಂಟಿಂದ ಕಣ್ರೀ... ಇನ್ನು ಈ ಕರೆಂಟಿಗೆ ಇದ್ದೆ ಇರಬೇಕಲ್ಲ Resistance...  ನಮ್ಮ ಪ್ರೊಫ಼ೆಸ್ಸರಂತೋರು, ಕ್ಯಾಂಪಸಲ್ಲಿ ಎಲ್ಲೆಂದರಲ್ಲಿ ಮಾತಾಡುತ್ತ ನಿಲ್ಲುವ ಹಾಗಿಲ್ಲ ಅನ್ನೋ ನಿಯಮಗಳು, ಲೈಬ್ರರಿನಲ್ಲಿ ಮುಖ ನೋಡಿದ್ರೆ ಕೆಂಗಣ್ಣು ಬೀರೋ ಲೈಬ್ರರಿಯನ್, ಅಸೈನ್ಮೆಂಟು, ಇಂಟರ್ನಲ್ಸು ಹಾಳು ಮೂಳು ಕೆಲವು ಸಲ ಸಹಪಾಠಿಗಳು ಕೂಡ Resistance  ಆಗಿಬಿಡ್ತಾರೆ ಕಣ್ರೀ... ಇದನೆಲ್ಲಾ ಮೀರಿ ಹುಡುಗ ಹುಡುಗಿಯರ ಮಧ್ಯೆ ಕರೆಂಟ್ ಹರಿಯಬೇಕಂದ್ರೆ ಅವರಿಗೆ ಮೀಟ್ರಿರಬೇಕು... ಕ್ಷಮಿಸಿ Voltage ಇರಬೇಕು ಕಣ್ರೀ!

ಮತ್ತೊಮ್ಮೆ ಎಚ್ಚರ ಆಯ್ತು! ತಲೆಯೆತ್ತಿ ಅಬ್ಬಬ್ಬಾ! ಕಪ್ಪುಬೋರ್ಡಿನ ತುಂಬಾ ಆಗಲೇ ಎಂದೂ ಕಂಡರಿಯದ ಭಾಷೆಯ ಫ಼ಾರ್ಮುಲಾಗಳನ್ನು ತುಂಬಿಸಿ, ಕೊನೆಯ ಸಾಲಿನ ಕೆಳಗೆ ಎರಡು ಗೆರೆ ಎಳೆಯುತ್ತಾ ಗೆಲುವಿನ ನಗೆ ಬೀರಿ "Hence the theorem is proved" ಎನ್ನುತ್ತಾ ನಮ್ಮೆಡೆಗೆ ತಿರುಗಿದ ಪ್ರೊಫ಼ೆಸ್ಸರ್ರು ನನಗೆ ಭೀಷ್ಮ ಪಿತಾಮಹಾರಂತೆ ಕಂಡರು! ನಿಜವಾಗಿ ಅಂದು ತುಂಬಿದ್ದ ಆ ಬೋರ್ಡು ಆಗ ತಾನೆ ಕುರುಕ್ಷೇತ್ರ ಯುದ್ಧ ಮುಗಿದ ರುದ್ರಭೂಮಿಯಂತೆ ಕಾಣುತಿತ್ತು! ಅದರ ತುಂಬಾ ಚೆಲ್ಲಾಡಿದ್ದ ಥೀಟಾ, ಬೀಟಾ, ಗಾಮಾಗಳು ಯುಧ್ಧದಲ್ಲಿ ಹತರಾದ ಸೈನಿಕರಂತೆ, ಇನ್ನು ಕೆಲವು ದೊಡ್ಡ ದೊಡ್ಡ ಡೆಲ್ಟಾಗಳು ತಲೆಕೆಳಕಾಗಿ ಬಿದ್ದ ಕುದುರೆ, ಆನೆಗಳಂತೆ ಕಂಡವು! ಆ ಭಯಾನಕ ದೃಶ್ಯವನ್ನು ಅರಗಿಸಿಕೊಳ್ಳುವಷ್ಟರಲ್ಲಿ "ಸಾರ್ ಒಂದ್ ಕೊಶೆನ್" ಎಂದು ನಮ್ಮ ಬೆಂಚಿನ ಕೊನೆಯಲ್ಲಿದ್ದ ಪವನ್ ಕೈ ಎತ್ತಿದ್ದ. ಸಧ್ಯ ಪಾಠ ಮುಗೀತು ಎಂದು ಸಂತಸದಲ್ಲಿದ್ದ ನಾನು ಬೇಸರದಿಂದ ತಿರುಗಿ ನೋಡಿದೆ... ನಮ್ಮ ಬೆಂಚಿನಲ್ಲಿದ್ದ ಐದೂ ಜನ ಮೇಧಾವಿಗಳು ನನಗೆ ಪಂಚ ಪಾಂಡವರಂತೆ ಗೋಚರಿಸಿದರು! ಮಹಾಭಾರತದ ಯುಧ್ಧಭೂಮಿಗೆ ಪಂಚಪಾಂಡವರು ಒಬ್ಬರಾದ ಮೇಲೆ ಒಬ್ಬರು ಇಳಿದು ಬಂದಂತೆ ಒಬ್ಬರಾದ ಮೇಲೆ ಒಬ್ಬರು ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಎದ್ದೆದ್ದು ಪ್ರಶ್ನೆ ಕೇಳುತ್ತಿದ್ದರೆ ನನಗೆ ಅವರೆಲ್ಲರೂ ಭೀಷ್ಮನೆಡೆಗೆ ಬಾಣ ಪ್ರಹಾರ ಮಾಡುತ್ತಿದ್ದಂತೆ ತೋರಿತು! 

 ಭೀಷ್ಮನೋ ನೋಡು ನಿನ್ನ ಆಪ್ತ ಸೈನಿಕ ಇಲ್ಲಿ ಸತ್ತು ಬಿದ್ದಿದ್ದಾನೆ.... ನಿನ್ನ ಮೆಚ್ಚಿನ ಅನೆ ಇಲ್ಲಿ ಸತ್ತು ಬಿದ್ದಿದೆ ಎಂದು ಬೋರ್ಡಿನ ಮೇಲಿನ ಬೀಟಾ, ಗಾಮಾ, ಡೆಲ್ಟಾಗಳ ಕಡೆ ಕೈ ತೋರಿ ತೋರಿ ಅವರನ್ನು ಹೆದರಿಸಿ ಕೂರಿಸುತ್ತಿದಂತೆ ಅನ್ನಿಸುತ್ತಿತ್ತು! ಕೊನೆಯವನು ಸಮಾಧಾನ ಪಟ್ಟುಕೊಂಡು ಕುಳಿತ ತಕ್ಷಣ ಎಂದಿನಂತೆ  45 ನಿಮಿಷ ತಡವಾಗಿ ಬಂದ ಸೀನ ಬಾಗಿಲಲ್ಲಿ  ಪ್ರೊಫ಼ೆಸ್ಸರ್ ಮುಖನೋಡುತ್ತಾ ನಿಂತ... ನನಗೆ ಆಶ್ಚರ್ಯ, ಅರೆರೆ ಈ ಚಕ್ರವ್ಯೂಹ ಭೇದಿಸಲು  ಸಜ್ಜಾಗಿ ಬಂದಿಹನಲ್ಲಾ ಈ ಅಭಿಮನ್ಯು! ಭಲೇ!

23 comments:

  1. ಹಹಹ ಸಕ್ಕತ್ ಕ್ಲಾಸಿಕ್ ಲೇಖನ ಪ್ರದೀಪ್. ಮೇಷ್ಟು ಮಾಡುವ ಪಾಠವನ್ನೇಲ್ಲಾ ತಿರುಚಿ ನಿಮಗೆ ಬೇಕಾದಂತೆ ವರ್ಣಿಸಿಕೊಳ್ಳುವ ಪ್ರವೃತ್ತಿಗೆ ಜೈ... ಕಾಲೇಜ್ ಜೀವನವೇ ಜೀವನ ಅಂದಿನ ಖುಷಿ ಮತ್ತೆಂದೂ ಸಿಗದು

    ReplyDelete
  2. Wah Pradeep, a different read. Thoroughly enjoyed from the beginning to the very end. I'm sure non science friends would have also understood OHM's law by now. :)

    ReplyDelete
  3. :) ಪಾಠ ಕೇಳಿದ್ದೀರಿ ಅಂತಾಯ್ತು .. :)

    ReplyDelete
  4. :) Nam pradeepa heegella maaDthidna ... for example "C-Progams ಬರೆದುಕೊಂದು ಹೋಗಬೇಕಿದ್ದ Lab Record book ನಲ್ಲಿ ಧೈರ್ಯವಾಗಿ ಒಂದು ರೇಖಾ ಚಿತ್ರದ ಜೊತೆಗೆ ವಿರಹಗೀತೆ ಬರೆದು ಉಪನ್ಯಾಸಕಿಗೆ ಕೊಟ್ಟ ಖ್ಯಾತಿಗೆ ಪಾತ್ರನಾಗಿದ್ದೆ!".... :) Nice article :)

    ReplyDelete
  5. ಯಾರಿಗಾದ್ರು" Ohm's Law..ಅರ್ಥ ಆಗ್ತಿಲ್ಲ ಅಂದ್ರೆ ನಿಮ್ಮನ್ನ ಕೇಳೋಕೆ ಹೇಳ್ತಿನಿ...ನಿಮ್ಮ ಲೇಖನವನ್ನ ಒಮ್ಮೆ ಓದಿದರೆ..ಕಾಲೇಜಿನಲ್ಲಿ ಮೇಷ್ಟ್ರು ಗಂಟೆಗಟ್ಟಲೆ ಹೇಳಿಕೊಟ್ಟಿದ್ರು ಅರ್ಥಆಗಿಲ್ಲ ಅಂದೋರ್ಗು ಅರ್ಥವಾಗುತ್ತೆ...ಅಬ್ಬಾ...ಎಲ್ಲಿಂದ ಎಲ್ಲಿಗೆ ತಳುಕು ಹಾಕಿದ್ದಿರಾ....ಹು ಒಂದ್ ಥರ ಅನ್ವಯವಾಗುತ್ತೆ.

    ReplyDelete
  6. ಹಾಗೇ ನ್ಯೂಟನ್ನನ ನಿಯಮಗಳೂ ಇಲ್ಲಿ ಸಾಧಿಸಲ್ಪಡುತ್ತಿವೆ.

    1. ಒಂದನೇ ನಿಯಮ: ಬಲಪ್ರಯೋಗದ ಹೊರತಾಗಿ ವಸ್ತುಗಳು ತಮ್ಮ ಚಲನೆಯ ಸ್ಥಿತಿಯನ್ನು ಬದಲಿಸಲಾರವು.
    ನಳಿನಿಯ ಘಲ್ ಘಲ್ ಶಬ್ದದ ಬಲ ಪ್ರಯೋಗದಿಂದ ನಿಮ್ಮ ನಿದ್ರೆಯ ಚಲನೆಗೆ ಭಂಗವಾದದ್ದು!

    2.ಎರಡನೇ ನಿಯಮ: ಒಂದು ವಸ್ತುವಿನ ವೇಗೋತ್ಕರ್ಷವು ಅದರ ಮೇಲೆ ಪ್ರಯೋಗಿಸಲ್ಪಟ್ಟ ಒಟ್ಟು ಬಲಕ್ಕೆ ಸದಶೀಯವಾಗಿ ನೇರ ಸಂಬಂಧದಲ್ಲಿರುತ್ತದೆ.
    ನಳಿನಿಯ ಮೂಗಿಂದ ಸಿಟ್ಟು ಹೊರಬಂದ ವೇಗದ ಉತ್ಕರ್ಷವು ನಿಮ್ಮ ನೋಟದ ಬಲಕ್ಕೆ ಸದಶೀಯವಾಗಿ ನೇರ ಸಂಬಂಧದಲ್ಲಿತ್ತು.

    3.ಮೂರನೆಯ ನಿಯಮ:ಕ್ರಿಯೆ ಮತ್ತು ಪ್ರತಿಕ್ರಿಯೆಗಳು ವಿರುದ್ಧ ದಿಕ್ಕಿನಲ್ಲಿ ಸಮಪ್ರಮಾಣದಲ್ಲಿರುತ್ತವೆ.
    ಅವಳು ಮುಖ ತಿರುವಿದಂತೆ ನೀವೂ ತಿರುವಿ ಬೋರ್ಡಿನೆಡೆಗೆ ನೋಡಿದಿರಿ...

    ಈ ನಿಯಮಗಳನ್ನು ಸರಿಯಾಗಿ ಬಳಸಿಕೊಳ್ಳುವುದರಿಂದ ಅವುಗಳ ಪ್ರಯೋಜನವನ್ನೂ ಪಡೆಯಬಹುದು. ಈಗ ನೀವು 3 ರಿಂದ ಒಂದರ ಕ್ರಮದಲ್ಲಿ ಪ್ರಯೋಗಿಸಿ ನೋಡಿ! :D

    3. ಬೋರ್ಡಿನಿಂದ ಅವಳತ್ತ ಮುಖ ತಿರುಗಿಸಿ.......
    2. ನಗೆಯ ಬಲಪ್ರಯೋಗ ಮಾಡಿ...
    1. ಮೊದಲೆರಡು ನಿಯಮಗಳ ಮೂಲಕ ಒಂದನೇ ನಿಯಮ ತನ್ನಿಂತಾನೇ ಸಾಧಿತವಾಗುತ್ತದೆ ..

    ReplyDelete
  7. ಹಹಹ ...ಇಷ್ಟವಾಯಿತು ಲೇಖನ :)

    ReplyDelete
  8. Ohm's Law na ee tharanu imagine madbahudu antha gothe irlilla...But namdu Mechanical....Ella positive....no negative... super aagi bardidira Pradeep.. :)

    ReplyDelete
  9. ho ho...sooper pradeepanna..neevu istela mojina baraha baritira andkondiilla...sakhat agide..












    nangu study hol.s :-P..odtane idde :-D

    ReplyDelete
    Replies
    1. This comment has been removed by the author.

      Delete
  10. "ಸುಂದರವಾದ ಹುಡುಗಿ ಸ್ಮೈಲ್ ಕೊಟ್ಟಾಗ ಮೈ ಜುಮ್ ಅನ್ನೋಲ್ವ? ಅದು ಈ ಕರೆಂಟಿಂದ ಕಣ್ರೀ... " ಎಂತಹ ಮಾತು ಪ್ರೇಮ ಕವಿಯೇ. ಕಾಲೇಜು ದಿನಗಳಿಗೆ ನನ್ನನ್ನು ಪಾರ್ಸೆಲ್ ಮಾಡಿದ ನಿಮಗೆ ಶರಣು.

    ReplyDelete
  11. Hilarious.. Never had an idea y guys feel an electric shock whn they look at gals.. Thanks to ur article, i know it now n its OHM'S LAW..;)

    ReplyDelete
  12. ಪ್ರದೀಪ ಸsರ್,
    ಇನ್ನಷ್ಟು ಪಾಠಗಳನ್ನು ಹೇಳಿಕೊಡಿ; ಉಪಕೃತನಾಗುತ್ತೇನೆ.

    ReplyDelete
  13. ಎಂದಿನಂತೆ ವಿಭಿನ್ನ ಬರಹ... ತುಂಬಾ ಇಷ್ಟವಾಯಿತು... ಒಮ್ಸ್ ನಿಯಮದ ಪ್ರಯೋಗ ಅದ್ಬುತ... ಕಲ್ಪನೆ, ಹುಚ್ಚು ಭಾವನೆಗಳು, ನಗು, ಕೋಪ, ಉಪಮೆ , ರೂಪಕಾಲಂಕಾರ, ರೇಖಾಚಿತ್ರಗಳು ಎಲ್ಲವೂ ತುಂಬಾ ಚೆನ್ನಾಗಿ ನಿಮ್ಮ ಬರವಣಿಗೆಯಲ್ಲಿ ಮೂಡಿಬಂದಿದೆ.. ಉತ್ತಮ ಲೇಖನಕ್ಕೆ ಧನ್ಯವಾದಗಳು... ಹಾಗೇನೆ ನೂತನ ಎಚ್ ಬಿ ಸರ್ ಅವರ ನ್ಯೂಟನ್ನನ ನಿಯಮಗಳ ಪ್ರತಿಕ್ರಿಯೆ ಕೂಡ ತುಂಬಾ ಸೊಗಸಾಗಿದೆ...

    ReplyDelete
  14. Thumba chennagide baraha :) imagination chennagi gari bichchide :)

    ReplyDelete
  15. nim ee articlena ee bariya kannadaprabha ugadi visheshankadalli nodi :)

    ReplyDelete
    Replies
    1. Tumba tumba dhanyavadagalu Reshma avre... Bahala santoshavaguttide... Nimma upakaarakke nanendu chiraruni... :)

      Delete
  16. tumbaa chennagide baraha,,,,, vijnana haasya anta kareyabahude ?

    ReplyDelete
  17. what an explanation mam awesome...really i enjoyed keep writing

    ReplyDelete
  18. ಹ ಹ ಹ , ನೀವೊಬ್ಬ ಪ್ರೀತಿಯ ಸ್ಪೆಷಲಿಸ್ಟ್ ವಿಜ್ಞಾನಿ ಕಣ್ರೀ ಪ್ರದೀಪ್, ಓಂ'ಸ ಲಾ ನ ಪ್ರೀತಿಯ ಲಾ ಎನ್ನುವ ಹಾಗೆ ಬಿಡಿಸಿ , ಹೇಳಿದ್ದೀರಿ, ಬಹುಷಃ ಓಂ' ಸ ಇದ್ದಿದ್ದರೆ ಇದನ್ನು ಓದಿ ಬಹಳ ಸಂತಸ ಪಡುತ್ತಿದ್ದ, ಹುಡುಗಾಟದ ಕಾಲೇಜು ಹುಡುಗರ ಮನಸಿನ ತುಮುಲ ಚೆನ್ನಾಗಿ ಮೂಡಿದೆ . ಓದುತ್ತಾ ಓದುತ್ತಾ ಅಲ್ಫಾ , ಬೀಟಾ, ಓಂ'ಸ ಎಲ್ಲರೂ ಕಣ್ಣ ಮುಂದೆ ಬಂದರು, ಹೊಸ ಪ್ರಯತ್ನಕ್ಕೆ ಅಭಿನಂದನೆಗಳು, ಮುಂದಿನ ಪೋಸ್ಟ್ ನಲ್ಲಿ ನ್ಯೂಟನ್ ನಿಯಮಗಳ ಬಗ್ಗೆ ಬರೆಯಿರಿ ಪ್ರದೀಪ್ ಮಜಾ ಇರುತ್ತೆ .

    ReplyDelete