Monday, December 16, 2013

3K ಸಂಜೆ - ಜಯಂತ್ ಕಾಯ್ಕಿಣಿಯೊಂದಿಗೆ


14th December 2013 ಶನಿವಾರ ಸಂಜೆ ಕೆಲವು ಅವಿಸ್ಮರಣೀಯ ಕ್ಷಣಗಳು ನನ್ನ ನೆನಪಿನ ಪುಟಗಳಲ್ಲಿ ಎಂದೆಂದಿಗೂ ಅಳಿಸದಂತೆ ಅಚ್ಚೊತ್ತಿ ಕುಳಿತವು. ನಮ್ಮ ಮೆಚ್ಚಿನ 3K  ಕನ್ನಡ ಕವಿತೆ ಕಥನ ತಂಡವು ಖ್ಯಾತ ಚಲನಚಿತ್ರ ಸಾಹಿತಿ ಡಾ. ಜಯಂತ್ ಕಾಯ್ಕಿಣಿ ಅವರನ್ನು ಭೇಟಿ ಮಾಡಿದ ಸಂಜೆ ಜೀವನದಲ್ಲಿ ಕೆಲವು ಅದ್ಭುತ ಕ್ಷಣಗಳನ್ನು ಕಟ್ಟಿಕೊಡುವಂತಿತ್ತು! ಎಲ್ಲರಲ್ಲೂ ಉತ್ಸಾಹ, ಕುತೂಹಲ, ರೋಮಾಂಚನ! ಕನ್ನಡ ಸಿನಿ ಲೋಕದಿ ಹಲವು ಅದ್ಭುತ ಹಾಡುಗಳನ್ನು ಸೃಷ್ಠಿಸಿ ಪದಗಳಲೇ ಜನರ ಮನಸೂರೆಗೊಳಿಸಿರುವ, ಕನ್ನಡ ನಾಡಿನ ಮನೆ ಮಾತಾಗಿರುವ ಜಯಂತ್ ಅವರ ಜೊತೆ ಕುಳಿತು ಹರಟೆ ಹೊಡೆಯುವ ಭಾಗ್ಯ ನಮಗಂದು ದೊರೆಯಿತು. ನಾವು ಅಂದು ಕಳೆದ 4  ಗಂಟೆಗಳಲ್ಲಿ ಅವರಾಡಿದ ಮಾತುಗಳು, ಯುವ ಕವಿಗಳಿಗೆ ಅವರು ನೀಡಿದ ಮಾರ್ಗದರ್ಶನ ಎಲ್ಲವನ್ನೂ ದಾಖಲಿಸಿ ಇಟ್ಟುಕೊಳ್ಳಬೇಕು. ಅದು ಸಾಹಿತ್ಯಲೋಕದ ಎಳೆ ಪೈರುಗಳಿಗೆ ರಸಗೊಬ್ಬರದಂತಾಗ ಬೇಕು ಎನ್ನುವ ಹಂಬಲದಲ್ಲಿ ಅವರು ಹೇಳಿದ ಕೆಲವು ಅಂಶಗಳಲ್ಲಿ ನನ್ನ ನೆನಪಿನಲ್ಲುಳಿದಷ್ಟನ್ನು ಬರೆದಿಡುವ ಪ್ರಯತ್ನ ಮಾಡಿದ್ದೇನೆ... ತಪ್ಪುಗಳಿದ್ದರೆ ಕ್ಷಮಿಸಿ, ಕಾರ್ಯಕ್ರಮಕ್ಕೆ ಬಂದಿದ್ದವರು ಯಾವುದಾದರೂ ವಿಷಯಗಳು ಬಿಟ್ಟುಹೋಗಿದ್ದರೆ ಸೇರಿಸಬೇಕಾಗಿ ವಿನಂತಿ. 

ಕಾವ್ಯರಚನೆಯ ಬಗ್ಗೆ, ಅವರ ಜೀವನದ ಬಗ್ಗೆ, ಸಮಕಾಲೀನ ಸಿನಿಮಾ ಹಾಗು ಸಾಹಿತ್ಯದ ಬಗ್ಗೆ ಅವರು ನಮಗೆ ತಿಳಿಸಿಕೊಟ್ಟ ಕೆಲವು ಅಂಶಗಳು... ಅವರದೇ ಮಾತುಗಳಲ್ಲಿ...


1. K. V. Tirumalesh ಅವರ ಪ್ರಭಾವ: ಜಯಂತ್ ಅವರ ಕಾವ್ಯಗಳ ಮೇಲೆ ಬಹಳ ಪರಿಣಾಮ ಬೀರಿದಂಥವರು ಕೆ. ವಿ. ತಿರುಮಲೇಶ್ ಅವರು. ತಿರುಮಲೇಶರ ಕಾವ್ಯ ಅವರು ಓದುವುದಕೂ ಮುನ್ನ ಅವರು ಬರೆದ ಕವಿತೆಗಳಿಗೂ, ನಂತರದ ಕವಿತೆಗಳಿಗೂ ವ್ಯತ್ಯಾಸ ಎದ್ದು ಕಾಣುತ್ತದೆ ಎಂದು ಅವರೇ ಹೇಳುತ್ತಾರೆ.

2. ಬರವಣಿಗೆ ಮುಖ್ಯ: ಇಂದು ಎಲ್ಲರೂ ಕೈಯಲ್ಲೇ ಮೊಬೈಲ್ ಹಿಡಿದು ಬರೀ ಹೆಬ್ಬೆರಳಿನಲ್ಲಿಯೇ ಟೈಪಿಸುತ್ತಾರೆ, ಅಂತರ್ಜಾಲದಲ್ಲಿ ಕವನಗಳನ್ನು ಅಂಚಿಸುತ್ತಾರೆ.  ಆದರೆ ಒಬ್ಬ ಲೇಖಕನಿಗೆ ಕೈ ಬರವಣಿಗೆ ಎಂಬುದು ಬಹಳ ಮುಖ್ಯ. ಅದು ವ್ಯಕ್ತಿತ್ವ ವಿಕಾಸದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ! ಆದ್ದರಿಂದ ಟೈಪಿಸುವುದರ ಜೊತೆಗೆ ಆಗಾಗ ಬರೆಯುವುದನ್ನು ಬಿಡಬಾರದು.

3. ಓದು ಮುಖ್ಯ: ಕವಿ ಬರಹಗಾರರಾಗಲು ಓದುವುದು ಬರವಣಿಗೆಗಿಂಥ ಬಹಳ ಮುಖ್ಯ, ಏಕೆಂದರೆ, ಉತ್ತಮ ಸಾಹಿತ್ಯವನ್ನು ಓದುವುದರಿಂದಲೇ ಬರಹಕ್ಕೆ ಸರಕು ಸಿಗುವುದು, ಓದುವುದರಿಂದಲೇ ಕಾವ್ಯ ಸ್ಪೂರ್ತಿ, ಪದಗಳ ಮೇಲಿನ ಹಿಡಿತ ವಿಕಸನಗೊಳ್ಳುವುದು. ಆದ್ದರಿಂದ ಉತ್ತಮ ಸಾಹಿತ್ಯಗಳನ್ನು ಓದುವುದು ತುಂಬಾ ಮುಖ್ಯ. ಜಯಂತ್ ಅವರು ಉನ್ನತ ವ್ಯಾಸಂಗದಲ್ಲಿ ಚಿನ್ನದ ಪದಕ ಪಡೆದವರು ಹಾಗು ಮುಂಬೈನ ದೊಡ್ಡ ದೊಡ್ಡ ಕಂಪನಿಗಳಲ್ಲಿ ಬೇರೆ ಬೇರೆ  Shiftಗಳಲ್ಲಿಸೇವೆ ಸಲ್ಲಿಸಿದವರು. ಆ ವ್ಯಸ್ಥತೆ, ಒತ್ತಡ ತುಂಬಿದ ದಿನಗಳಲ್ಲಿಯೂ ಸಹ ಜಯಂತ್ ಅವರು ಓದುವ ಗೀಳನ್ನು ಬಿಡಲಿಲ್ಲ. ದಿನ ದಿನವೂ ಉತ್ತಮ ಸಾಹಿತ್ಯದ ಕೆಲವು ಪುಟಗಳನ್ನು ತಿರುವಿ ಹಾಕಿದ ನಂತರವೇ ನಿದ್ರೆಗೆ ಹೋಗುತ್ತಿದ್ದುದು. ಆದ್ದರಿಂದ ಇಂದಿನ ಸಾಹಿತ್ಯ ಲೋಕದ ಎಳೆ ಚಿಗುರುಗಳಿಗೆ ಅವರ ಮೊದಲ ಕಿವಿ ಮಾತು ಸಹ ಅದೇ... ಪ್ರತೀದಿನ ತಪ್ಪದೇ ಉತ್ತಮ ಸಾಹಿತ್ಯಗಳನ್ನು ಓದುತ್ತಿರಿ.

4. ಕವಿತೆಗೆ ಅರ್ಥವಿರುವುದಿಲ್ಲ ಅದೊಂದು ಅನುಭವವಷ್ಟೇ: ಬಹಳಷ್ಟು ಜನ ಜಯಂತ್ ಅವರನ್ನು ಕವನಗಳಿಗೆ ಅರ್ಥ ಕೇಳಿರುತ್ತಾರೆ. ಅವರಿಗೆಲ್ಲಾ ಅವರದ್ದೊಂದೇ ಉತ್ತರ. ಕವಿತೆಯಲ್ಲಿರುವ ಪದಗಳಿಗೆ ಅರ್ಥ ಹುಡುಕಬಹುದು, ಸಾಲುಗಳಿಗೆ ಅರ್ಥ ಹುಡುಕಬಹುದು. ಆದರೆ ಒಂದು ಸಂಪೂರ್ಣ ಕವಿತೆಗೆ ಅರ್ಥವಿರುವುದಿಲ್ಲ. ಅದೊಂದು ಅನುಭವವಷ್ಟೇ!

5. ಕುವೆಂಪು ಕಾವ್ಯ: ಕುವೆಂಪುರವರು ತಮ್ಮ ಮಗ ತೇಜಸ್ವಿ ಮೂರು ವರ್ಷದವರಿದ್ದಾಗ ಬರೆದ ಒಂದು ಕವನದ ಮೂರು ಸಾಲುಗಳನ್ನು  ವಾಚಿಸಿ ಕಾವ್ಯ ರುಚಿಸಲು ಅದರಲ್ಲಿ ಏನಿರಬೇಕು ಎಂಬುದರ ನಿದರ್ಶನ ನೀಡಿದರು...

"ನಿನಗೂ ಮೂರು ವರುಷ
ನನಗೂ ಮೂರು ವರುಷ
ನಾವಿಬ್ಬರೂ ಒಂದೇ!"

ಇದರಲ್ಲಿ ಕವಿ ತಮ್ಮ ಮಗನ ತುಂಟಾಟಗಳ ಚಿತ್ರಣದಲ್ಲಿ ತಮ್ಮನ್ನೂ ಚಿತ್ರಿಸಿಕೊಂಡಿದ್ದಾರೆ.. ಒಂದು ಮಗು ಹುಟ್ಟಿದಾಗಲೇ ಒಬ್ಬ ತಂದೆಯೂ ಹುಟ್ಟಿರುತ್ತಾನೆ ಎಂಬ ಅನುಭವವನ್ನು ಕಟ್ಟಿ ಕೊಡುತ್ತಾರೆ. ನಾವಿಬ್ಬರು ಒಂದೇ ಎನ್ನುವಲ್ಲಿ ಒಂದು ಹೊಸತನ ಪ್ರಕಟವಾಗುತ್ತದೆ! ಈ ಮೂರು ಅಂಶಗಳು ಕಾವ್ಯಕ್ಕೆ ಬಹಳ ಮುಖ್ಯ.

6. ಸಿನಿಮಾ ಹಾಡುಗಳು ಕಾವ್ಯವಲ್ಲ: ಸಿನಿಮಾ ಹಾಡುಗಳು ಎಂದೂ ಕವನ ಆಗುವುದಕ್ಕೆ ಸಾಧ್ಯವಿಲ್ಲ. ಕಾರಣ ಇಷ್ಟೇ, ಕವನ ಎಂಬುದು ನಮ್ಮ ಅಂತರಂಗದ ದನಿಯಿಂದ ಬರುವಂಥದ್ದು ಅದು ನಮ್ಮ ಮನಸಿನ ಭಾವನೆಗಳನ್ನು ಪದ ಸಂಯೋಜಿಸಿ ಹೇಳುವಂಥದ್ದು. ಆದರೆ ಸಿನಿಮಾ ಹಾಡುಗಳು ಹಾಗಲ್ಲ, ಅದು ಚಿತ್ರ ಸಾಹಿತಿಯಾದವರು ತಮ್ಮ ಅಂತರಂಗವನ್ನು ಮರೆತು ನಾಯಕನಾಗಿಯೋ ನಾಯಕಿಯಾಗಿಯೋ ಇನ್ನ್ಯಾವುದೋ ಪಾತ್ರಧಾರಿಯಾಗಿಯೋ ಪರಕಾಯ ಪ್ರವೇಶ ಮಾಡಿ ಅವನ/ಅವಳ ಭಾವನೆಗಳನ್ನು ರಾಗಕ್ಕೆ ಸರಿಯಾಗಿ ಸಂಯೋಜಿಸುವಂಥದ್ದು. ಸಿನಿಮಾ ಸಾಹಿತ್ಯ ಬರೆಯಬೇಕಾದರೆ ಅದರ ಸಂದರ್ಭವನ್ನು ತಿಳಿದುಕೊಳ್ಳಬೇಕು. ಸಿನಿಮಾದಲ್ಲಿ ಆ ಹಾಡು ಮೊದಲನೆಯದೋ, ಎರಡನೆಯದೋ, ಮೂರನೆಯದೋ, ಹಾಡಿನ ಚಿತ್ರೀಕರಣ ಎಲ್ಲಿ ಯಾವ ಸಮಯದಲ್ಲಿ ನಡೆಯಲಿದೆ ಎಲ್ಲವನ್ನೂ ಗಮನಿಸಿ ಬರೆಯಬೇಕು. ಇಷ್ಟೆಲ್ಲಾ ಬೇಲಿಗಳಿರುವುದರಿಂದ ಸಿನಿಮಾ ಸಾಹಿತ್ಯದಲ್ಲಿ ನೈಜ ಭಾವನೆಗಳು ಮಂಕಾಗುತ್ತವೆ. ಆದರೆ ಕವನ ಹಾಗಲ್ಲ. ಅದರಲ್ಲಿ ಅಂತರಂಗವು ಸ್ವಚ್ಛಂದ ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಾಡುತ್ತದೆ.

7. Poetry is not a description of the picture: 
ಕಣ್ಣಿಗೆ ಕಂಡ ಚಿತ್ರಗಳ ವರ್ಣನೆಯಷ್ಟೇ ಕಾವ್ಯವಾಗುವುದಿಲ್ಲ. ಆ ಚಿತ್ರ  ನಿಮ್ಮೊಳಗೆ ಇಳಿಯಬೇಕು. ನೀವು ಚಿತ್ರದೊಳಗೆ ಇಳಿಯಬೇಕು. ಆ ಚಿತ್ರದಲ್ಲಿ ನೀವು ಒಬ್ಬರಾಗಿ ಅನುಭವಿಸಬೇಕು. ಹೊಸ ವಿಷಯ ಒಂದನ್ನು ಕಂಡುಕೊಳ್ಳಬೇಕು. ಆಗಷ್ಟೇ ಅದು ಪರಿಪೂರ್ಣ ಕಾವ್ಯವೆನಿಸುವುದು. ಇದ್ದಿದ್ದನ್ನು ಇದ್ದಂತೆ ವಿವರಿಸುವುದು ಕಾವ್ಯವಲ್ಲ!

8. Position of the poet should change:
ಕವನದ ಆದಿಗೂ, ಕವನದ ಅಂತ್ಯಕ್ಕೂ ಕವಿಯ ದೃಷ್ಠಿಯಲ್ಲಿ, ಅದರ ದಿಕ್ಕಿನಲ್ಲಿ ಬದಲಾವಣೆಯಿರಬೇಕು. ಕಾವ್ಯದ ಸನ್ನಿವೇಶದಲ್ಲಿ ಕವಿ ನಿಂತಲ್ಲಿಯೇ ನಿಲ್ಲಬಾರದು ಕವನದ ವಿಷಯದ ಬಗ್ಗೆ ಕವಿಯ ದೃಷ್ಠಿಕೋನ ಕವನ ಮುಗಿಯುವ ಮುಂಚೆ ಬದಲಾಗಬೇಕು. ಉದಾಹರಣೆಗೆ ವೇಶ್ಯೆಯ ಬಗ್ಗೆ ಬರೆದ ಕವನದಲ್ಲಿ ಕೊನೆಗೆ ಅವಳು ತನ್ನ ತಂಗಿಯಂತೆ ಕಾಣುವ ಪ್ರಸಂಗ ಬಂದರೆ ಅದು ವೈವಿಧ್ಯಮಯವೆನಿಸುತ್ತದೆ.

9. Poetry should connect the unconnected: ಕೇವಲ ಎದುರಿಗೆ ಕಣ್ಣಿಗೆ ಕಾಣುವ ವಸ್ತುಗಳ ಬಗ್ಗೆ ಬರೆದರೆ ಅದು ಕವನವಲ್ಲ, ವರದಿಯಾಗುತ್ತದೆ. ಕಣ್ಣಿಗೆ ಕಾಣುವ ವಸ್ತುಗಳನ್ನು ಒಳಗಣ್ಣಿಗೆ ಕಾಣುವ ಕಲ್ಪನೆಯನ್ನೂ ಒಟ್ಟಿಗೆ ಹೆಣೆದು ಒಂದೇ ಎಂಬಂತೆ ಚಿತ್ರಿಸಿಕೊಡಬೇಕು. ಉದಾಹರಣೆಗೆ ಬಸ್ಸಿನ ಮೆಟ್ಟಿಲ ಮೇಲೊಂದು ಪುಟ್ಟ ಮಗುವಿನ ಚಪ್ಪಲಿ ಬಿದ್ದಿರುವುದನ್ನು ನೀವು ನೋಡುತ್ತೀರಿ. ನೀವು ಅದರ ಮೇಲೊಂದು ಕವಿತೆ ಬರೆದರೆ ಅದು ಕೇವಲ ಮೆಟ್ಟಿಲ ಮೇಲೆ ಬಿದ್ದಿರುವ ಚಪ್ಪಲಿಯ ಬಗ್ಗೆ ಅಲ್ಲದೇ ಬೇರೆಡೆ ಎಲ್ಲೋ ಒಂದೇ ಕಾಲಿನ ಚಪ್ಪಲಿಯನ್ನು ತೊಟ್ಟು ಅಳುತ್ತಿರುವ ಮಗುವೂ  ಚಿತ್ರಿತವಾಗುವಂಥ ಸಾಲುಗಳಿರಬೇಕು. ಆಗಲೇ ಅದು ಪರಿಪೂರ್ಣವೆನಿಸುವುದು.

10. ಯೋಗರಾಜಭಟ್ಟರ ಪ್ರಶಂಸೆ:  ಯೋಗರಾಜ ಭಟ್ಟರ ಚಿತ್ರ ಸಾಹಿತ್ಯ ಇಂದು ಜನಪ್ರಿಯವಾಗಿರುವುದಕ್ಕೆ ಕಾರಣ ಅವರ ಕಾವ್ಯವಸ್ತುಗಳ ವೈವಿಧ್ಯತೆ ಹಾಗು ಸುತ್ತಲೂ ಕಾಣುವ ಜನರ ಜೀವನದ ಬಗ್ಗೆ down-to-earth  ರೀತಿಯ ವಿಶ್ಲೇಷಣೆ ಉದಾಹರಣೆಗೆ ಅವರ ಜಾಕಿ ಚಿತ್ರದ ಹಾಡೊಂದರಲ್ಲಿ ಜಾಕಿಗೆ ಮಾಡಲು ಬರುವ ಕೆಲಸಗಳ ಬಗ್ಗೆ ಕೆಲವು ಸಾಲುಗಳು ಈ ರೀತಿ ಇವೆ...

Maralu Dinnu, Baale Hannu, Puncture Angadi, Paani Poori,
Raagi Machine, Baddi Saala, Real Estate, Mori Clean-u,

ಇವೆಲ್ಲಾ ಅವರಿಗೆ ಹೊಳೆದದ್ದು ಬೆಂಗಳೂರಿಗೆ ವಲಸೆ ಬರುವ ಹಳ್ಳಿಗರ ಜೀವನವನ್ನು ಹತ್ತಿರದಿಂದ ವಿಶ್ಲೇಷಿಸಿದಾಗ. ಬರೀ ಪ್ರೀತಿ, ಪ್ರೇಮ, ಹೂವು ಹಕ್ಕಿ, ಹಸಿರು, ಮಳೆ ಅಂತಹ ಮಧುರ ಅನುಭವಗಳನ್ನು ಕೊಡುವ ವಸ್ತುಗಳನ್ನು ಹುಡುಕಿಕೊಂಡು ಹೋಗಿ ಕವನ ಬರೆದರೆ ಅದರಲ್ಲಿ ಏನೂ ಹೊಸತನವಿರುವುದಿಲ್ಲ. ಅದೆಲ್ಲಾ ಈಗಾಗಲೇ ಎಷ್ಟೋ ಶತಮಾನಗಳಿಂದ ಕಾವ್ಯದಲ್ಲಿ ಸರ್ವೇ ಸಾಮಾನ್ಯ ಬಿದ್ದು ಕೊಳೆಯುತ್ತಿರುವ ವಸ್ತುಗಳು. ಇಂದಿನ ಕವಿಗಳು ಅವುಗಳ ಹಂಗನ್ನು ತೊರೆದು ಹೊರಬರಬೇಕಿದೆ. ಟ್ರಾಫ಼ಿಕ್ ಜಾಮಿನಲ್ಲಿ ಸಿಕ್ಕಿಕೊಂಡಿರುವಾಗ ಸಿಗ್ನಲ್ಲಿನ ಮೇಲೆ ಕವನ ಬರೆಯಿರಿ. ಅಲ್ಲೇ ನಿಂತು ನಿದ್ರಿಸುತ್ತಿರುವ ಪೋಲೀಸನ ಮೇಲೆ ಕವನ ಬರೆಯಿರಿ, ಗಾಡಿಯಿಂದ ಗಾಡಿಗೆ ಓಡಿಬಂದು "ಅಣ್ಣಾ ಹೂವ ತಕ್ಕಳ್ಳಿ ಅಣ್ಣಾ" ಎನ್ನುತ್ತಾ ಗಾಜಿಂದ ಇಣುಕುವ ಪುಟ್ಟ ಹುಡುಗಿಯ ಮೇಲೆ ಕವನ ಬರೆಯಿರಿ. ಹೀಗೆ ವೈವಿಧ್ಯತೆಯ ಪ್ರಯೋಗ ನಡೆಯಲಿ.

11. ಬರೀ ಬಾಗಿಲು ಮಾಡುವವ ಕಾರ್ಪೆಂಟರ್ ಅಲ್ಲ: ಒಬ್ಬ ಕಾರ್ಪೆಂಟರ್ ಆದವನಿಗೆ ಬಾಗಿಲೂ ಮಾಡಲು ಗೊತ್ತಿರಬೇಕು, ಕಿಟಕಿ, ಮೇಜು ಕುರ್ಚಿ, ಮಂಚ ಎಲ್ಲವನ್ನೂ ಮಾಡಲು ಗೊತ್ತಿರಬೇಕು, ಅಂತೆಯೇ ಒಬ್ಬ ಕವಿಯಾದವನು ಒಂದು ವಿಷಯಕ್ಕೆ ಅಂಟಿಕೊಳ್ಳದೇ, ಯಾವುದೇ ವಸ್ತುವಿನ ಮೇಲೆ ಎಂತಹ ಭಾವನೆಗಳ ಬಗ್ಗೆಯೂ ಸರಾಗವಾಗಿ ಬರೆಯುವುದನ್ನು ಕಲಿಯಬೇಕು. ಆಗಷ್ಟೇ ಕವಿತ್ವ ಸಾರ್ಥಕತೆ ಪಡೆಯುವುದು. ಒಂದು ವಿಷಯದ ಬಗ್ಗೆ ಮಾತ್ರ ಬರೆಯುವುದು ಯವ್ವನದಲ್ಲಷ್ಟೇ ಮೊಡವೆ ಬಂದಂತೆ ಎಂದು ಟೀಕಿಸಿದರು.

12. ಕನ್ನಡ ಕವನದಲ್ಲಿ ಆಂಗ್ಲ ಪದ ತಪ್ಪಲ್ಲ! ಇಂದಿನ ಕನ್ನಡ ಕಾವ್ಯದಲ್ಲಿ ಸಾಲು ಸಾಲಿಗೂ ಪರಭಾಷೆಯ ಪದಗಳು ಇಣುಕುತ್ತವೆ. ಅದು ಇಂದಿನ ಜನರ ಆಡುಮಾತುಗಳಿಂದ ಪ್ರೇರಿತವಾಗಿರುವುದರಿಂದ ಈಗಾಗಲೆ ಪ್ರಚಲಿತವಾಗಿರುವ ಪರಭಾಷಾ ಪದಗಳನ್ನು ಕಾವ್ಯದಲ್ಲೂ ಯಥಾವತ್ತಾಗಿ ಬಳಸಬಹುದು. ಅದು ತಪ್ಪೇನಲ್ಲ! ಈಗಲೂ ಸಹ ನಾವು ಅಚ್ಚ ಕನ್ನಡದ ಹಂಗಿನಲ್ಲಿಯೇ ಇದ್ದರೆ ಸಾಹಿತ್ಯವು ಸಾಮಾನ್ಯ ಜನರಿಂದ ದೂರವಾಗಿ ಸುಲಭವಾಗಿ ಎಲ್ಲರಿಗೂ ನಿಲುಕದಂತಾಗುತ್ತದೆ. ನಮ್ಮ ಕವನಗಳು ಯಾರಿಗೂ ಅರ್ಥವಾಗದಂತಾಗುತ್ತದೆ. ಆದ್ದರಿಂದ ಎಲ್ಲೆಡೆ ನಿತ್ಯ ಹೊಸತನ ಗಮನ ಸೆಳೆವಂತೆ ಕನ್ನಡ ಕಾವ್ಯದಲ್ಲೂ ಪರಭಾಷಾ ಪದಗಳ ಬಳಕೆ ಆಗಲಿ ಅದರಲ್ಲಿ ತಪ್ಪೇನಿಲ್ಲ. ಉದಾಹರಣೆಗೆ ಯೋಗರಾಜಭಟ್ಟರ ಈ ಹಾಡು ನೋಡಿ:
"ಹೃದಯದ ಮೇಲೆ ಹೈ-ಹೀಲ್ಡು ಹಾಕಿ
ರಾಜಕುಮಾರಿ ಬಂದಂಗಾಯ್ತು"

ಅದೇ ಇಲ್ಲಿ ಹೃದಯದ ಮೇಲೆ ಕಾಲಿಟ್ಟು ರಾಜಕುಮಾರಿ ಬಂದಳು ಎಂದಿದ್ದರೆ ಅದು ಹಳೇ ಸರಕಾಗುತಿತ್ತು! ಹೈ-ಹೀಲ್ಡು ಎಂಬ ಪರಭಾಷಾ ಪದ ಒಂದರಿಂದಲೇ ಸಾಲು ಸ್ವಾರಸ್ಯಕರವೆನಿಸುತ್ತದೆ!

13. ಚುಟುಕು ಸಾಹಿತ್ಯ, ಹನಿಗವನಗಳೆಂದರೆ ಅಷ್ಟಕ್ಕಷ್ಟೆ: ಜಯಂತ್ ಅವರಿಗೆ ಚುಟುಕು ಸಾಹಿತ್ಯ, ಹನಿಗವನಗಳ ಬಗ್ಗೆ ಹೆಚ್ಚು ಆಸಕ್ತಿಯಿಲ್ಲ ಎಂದು ನನ್ನ ಅಭಿಪ್ರಾಯ. ಎಲ್ಲರ ಕಾವ್ಯವನ್ನು ಕೇಳಿ ಅವುಗಳ ಬಗ್ಗೆ ಒಂದಲ್ಲ ಒಂದು ರೀತಿಯ ಪ್ರತಿಕ್ರಿಯೆ ನೀಡಿದ ಅವರು ಬಹುಶಃ ಇದೇ ಕಾರಣಕ್ಕೆ ನನ್ನ ಎರಡು ಹನಿಗವನಗಳ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲಿಲ್ಲ! ನಾನು ಕವನ ವಾಚನ ಮಾಡುವುದಕ್ಕೂ ಮುಂಚೆಯೇ ಹನಿಗವನಗಳು ಕವನಗಳೇ ಅಲ್ಲ ಎಂದು ಘೋಷಿಸಿಬಿಟ್ಟರು! ಹನಿಗವನಗಳ, ಶಾಯರಿಗಳ ವಾಚನದಲ್ಲಿ ಖ್ಯಾತ ಬಗೆಯಾದ ಮೊದಲನೆಯ ಸಾಲನ್ನು ಎರೆಡೆರಡು ಬಾರಿ ವಾಚಿಸುವ ಶೈಲಿಯನ್ನು ಅಲ್ಲಗೆಳೆದರು.    

14. ಅತ್ಯಂತ ಕಡಿಮೆ ಸಮಯದಲ್ಲಿ ಬರೆದಂಥ ಹಾಡು: ಮುಂಗಾರು ಮಳೆಯ "ಅನಿಸುತಿದೆ ಯಾಕೋ ಇಂದು..."

15. ಅತ್ಯಂತ ಹೆಚ್ಚು ಸಮಯ ಹಿಡಿದ, ಹೆಚ್ಚು ತಲೆ ಕೆಡಿಸಿದ ಗೀತರಚನೆ: ಗಾಳಿಪಟದ "ಮಿಂಚಾಗಿ ನೀನು ಬರಲು..."

16. ಮೆಚ್ಚಿನ ಪತ್ರಿಕೆ: ಮಯೂರ

17. ಇಂದಿನ ಕನ್ನಡ ಚಲನಚಿತ್ರಗಳ ಬಗ್ಗೆ ಬೇಸರ: ಇಂದಿನ ಕನ್ನಡ ಚಲನಚಿತ್ರಗಳ ಗುಣಮಟ್ಟ ಜಯಂತ್ ಅವರಿಗೆ ಬೇಸರ ಮೂಡಿಸುತ್ತದೆ. ಇಡೀ ವರ್ಷದಲ್ಲಿ ಕೇವಲ ಒಂದೆರಡು ಚಿತ್ರಗಳು ಚೆಂದವೆನಿಸುತ್ತವೆ. ಕನ್ನಡ ಚಿತ್ರರಂಗದಲ್ಲಿ ಒಳಗೊಳಗೆ ನಡೆಯುವಂಥ ರಾಜಕೀಯ ಕುತಂತ್ರಗಳು ಸಹ ಬೇಸರ ಮೂಡಿಸುತ್ತದೆ.

18.  ಚಿತ್ರಗಳಲ್ಲಿ ಹೊಸಬರಿಗೆ ಅವಕಾಶ ಒದಗಿಸುವೆ: ಜಯಂತ್ ಅವರು ಯಾವುದೇ ಸಿನಿಮಾಗೆ ಒಪ್ಪಿಕೊಂಡರೂ ಅದರಲ್ಲಿ ಕನಿಷ್ಠ ಪಕ್ಷ ಒಂದು ಹಾಡಿಗಾದರೂ ಹೊಸಬರಿಗೆ ಸಾಹಿತ್ಯ ಬರೆಯಲು ಅವಕಾಶ ಮಾಡಿಕೊಡುವಂತೆ ನಿರ್ಮಾಪಕರಲ್ಲಿ ಒತ್ತಾಯಿಸುತ್ತಾರೆ.

ಇಷ್ಟೆಲ್ಲಾ ತಿಳಿಸಿಕೊಡುವ ಹೊತ್ತಿಗೆ ಜಯಂತ್ ಸರ್ ಗೆ ತುಂಬಾ ಆಯಾಸವಾಗಿತ್ತು! ಕದಂಬ ಹೋಟೆಲಿನಿಂದ ಬಂದ ಬಿಸಿ ಬಿಸಿ ವೆಜ್ ಬಿರಿಯಾನಿ, ಮೊಸರನ್ನ ಜೊತೆಗೆ ಬರ್ಫ಼ಿ ಸವಿಯುತ್ತಾ ನಾವೆಲ್ಲರೂ ಜೊತೆ ಕುಳಿತು ಊಟ ಮಾಡಿದ್ದಾಯ್ತು. ನಂತರ ಗುಂಪಿನಲ್ಲಿ ಹಾಗು ಒಬ್ಬೊಬ್ಬರಾಗಿ ನಿಂತು ಅವರ  photo session ನಡೆಸಿದ್ದಾಯ್ತು, ಕೈ ಗೆ ಸಿಕ್ಕಿದ ಪುಸ್ತಕಗಳ ಮೇಲೆಲ್ಲಾ ಅವರ ಹಸ್ತಾಕ್ಷರ ಪಡೆದಾಯ್ತು. ರೂಪಕ್ಕ, ಅನು ಅಕ್ಕ, ಸತೀಶ್ ನಾಯಕ್, ಗೋಪಿನಾಥ್, ಅರುಣ್ ಶೃಂಗೇರಿಯವರ ಕಂಠ ಮಾಧುರ್ಯ ಸವಿದದ್ದಾಯಿತು! ಕೊನೆಗೆ ನಮ್ಮೆಲ್ಲರ ಒತ್ತಾಯದ ಮೇರೆಗೆ ಜಯಂತ್ ಅವರು ಸಹ ಮಧುರ ಭಾವಗೀತೆಯೊಂದನ್ನು ಹಾಡಿ ನಮ್ಮೆಲ್ಲರ ಮನ ತಣಿಸಿದರು.  3K  ಕರಾವಳಿ ಪ್ರತಿನಿಧಿ, ಮಂಗಳೂರಿನ ಮಹೇಶ್ ಮೂರ್ತಿಯವರಿಂದ ಶಾಲು ಹೊದಿಸಿ ಚಿತ್ರಸಾಹಿತ್ಯ ಲೋಕದ ದಿಗ್ಗಜ, ಅಭಿಮಾನಿಗಳ ಕಣ್ಮಣಿ, ಜಯಂತ್ ಕಾಯ್ಕಿಣಿಯವರನ್ನು ಸನ್ಮಾನಿಸಲಾಯಿತು. 

 

ಹೊತ್ತಾಗುತ್ತಾ ಬಂದರೂ ನಮಗ್ಯಾರಿಗೂ ಅಲ್ಲಿಂದ ಹೋಗಲು ಮನಸೇ ಆಗುತ್ತಿರಲಿಲ್ಲ... ಸದಾ ಹಸನ್ಮುಖರಾಗಿ ಬಹಳ ಆಪ್ತವಾಗಿ ಮಾತನಾಡುವ ಅವರ ಮಾತುಗಳು ಇನ್ನು ಕೇಳುತ್ತಲೇ ಇರಬೇಕೆಂಬ ಹಂಬಲ ಇನ್ನು ಎಲ್ಲರಲ್ಲೂ ತುಂಬಿಕೊಂಡಿತ್ತು. ಸರಿ ನಾ ಹೊರಡುವೆ ಎಂದು ಅವರು ತಮ್ಮ ಕಾರಿನ ಬಳಿ ಹೆಜ್ಜೆ ಹಾಕುವಾಗಲೂ ಅವರ ಫೋಟೋ ತೆಗೆಯುತ್ತಾ ಹಿಂದೆ ಹಿಂದೆಯೇ ಸಾಗುತ್ತಿದ್ದ ನನ್ನ ನೋಡಿ ನಕ್ಕು ಹೆಗಲ ಮೇಲೆ ಕೈ ಹಾಕಿ "ಈ ಕ್ಯಾಮೆರಾ ಪುಣ್ಯತ್ಮನ ಜೊತೆಗೆ ನನ್ನದೊಂದು ಫೋಟೋ ತೆಗೆಯಪ್ಪಾ" ಎಂದರು. ಅರುಣ್ ಶೃಂಗೇರಿ ಕ್ಲಿಕ್ಕಿಸಿದ ಈ ಫೋಟೋಗೆ ನಾನು ಕಟ್ಟು ಹಾಕಿಸಿ ಇಟ್ಟಿಕೊಳುವುದು ಗ್ಯಾರಂಟಿ!



13 comments:

  1. Great Pradeep.. I understood you people had a very fabulous time with Kaikini...

    ReplyDelete
  2. ಹೀಗೊ೦ದು ಸ೦ಜೆ ಇವರ ಜೊತೆ ಕಳೆಯುತ್ತೇವೆ ಎ೦ದು ಕನಸಿನಲ್ಲೂ ಅ೦ದುಕೊ೦ಡವರಲ್ಲ.
    ಅವರ ಪ್ರತಿಯೊ೦ದು ಮಾತು, ಅನಿಸಿಕೆಗಳು - information bureau ಇದ್ದ ಹಾಗೆ, ಮಾಹಿತಿ ತು೦ಬಿದ ಖಣಜ.
    ಎಲ್ಲವನೂ ವಿಸ್ತಾರವಾಗಿ ಬರೆದು, ದಾಖಲಿಸಿರುವ ಶೈಲಿ ಸೂಪರ್ ಪ್ರ-ದೀ-ಪ..
    ಮೆಚ್ಚಬೇಕು......... ೧೦೦ ಮಾರ್ಕ್ಸ್ :)
    ಹಾಗೇ ಮತ್ತೊ೦ದು ಸೇರಿಸಿಕೊಳ್ಳಿ, "ಅವರಿಗೆ ಇತ್ತೀಚೆಗೆ ಇಷ್ಟವಾದ ಹಾಡು? : ಕವಿರಾಜ್ ಬರೆದ "ಗಗನವೇ ಬಾಗಿ"

    ReplyDelete
  3. Tumbaa ishTa aaytu nimma vivaraNe Pradeep... nimma jote Naanu idda haage aaytu.... nimma ee post print teed iduttene....

    ReplyDelete
  4. wonderful ree... ondu hosa kalike namagella.. thumba dhanyavadagalu nimage

    ReplyDelete
  5. Thank you sir

    thumba olleya vishaya thilisiddakke.

    ReplyDelete
  6. ಆಪ್ತವಾಗಿತ್ತು ನಿಮ್ಮ ಲೇಖನ. ಒಳ್ಳೆಯ ಅನುಭವ ನನಗೂ ಜಯಂತ್ ಸರ್ ಅವರೊಂದಿಗೆ ಮತ್ತು ಸ್ಮಿತಾ ಅಕ್ಕನವರೊಂದಿಗೆ ಕಳೆದ ಕ್ಷಣಗಳು ನಿಜಕ್ಕೂ ಮರೆಯಲಾರದಂತಹುದು.

    ReplyDelete
  7. Soooper Pradeep...

    badukinuddakku nenapittukollabekada amshagalu...:)

    ReplyDelete
  8. ಚೆನ್ನಾಗಿದೆ ನಿಮ್ಮ ವರ್ಣನೆ..

    ReplyDelete
  9. ಪ್ರೆದೀಪ್ ರಿಪೋರ್ಟರ್ ಆಗಬೇಕಿತ್ತು ನೀವು.. ತಪ್ಪಿ ಸಾಫ್ಟ್ ವೇರ್ ಜಗತ್ತಿನ ಸಾಫ್ಟ್ ಹುಡುಗ ಮೇಲಾಗಿ ಸಾಫ್ಟ್ ಕವಿ ಆಗಿ ಬಿಟ್ಟಿದ್ದೀರ.

    ಸಧ್ಯ ಅಲ್ಲಿ ನಡೆದ ಅಷ್ಟನ್ನೂ ಕಣ್ಣಿಗೆ ಕಾಣುವಂತೆ ಬರೆದು ನಾನು ಬರೆಯೊ ಶ್ರಮ ತಪ್ಪಿಸಿದ್ರಿ. ನಿಜ ಹೇಳಬೇಕು ಅಂದ್ರೆ ನಾನು ಇದರ ಬಗ್ಗೆ ಬರೆದಿದ್ರು ಕೂಡಾ ನಿಮ್ಮ ಹಾಗೆ ಈ ಉಪಯುಕ್ತ ಮಾಹಿತಿ ಸಲಹೆಗಳನ್ನ ಇಷ್ಟು ಅದ್ಭುತವಾಗಿ ಹಂಚಿಕೊಂಡಿರಲಾರೆನೇನೋ. ಬಹಳ ಒಳ್ಳೆಯ ಬರಹ ಪ್ರದೀಪ್. ನನ್ನಂಥ ನಾಲ್ಕು ಯುವ ಕವಿಗಳಿಗೆ ಖಂಡಿತ ಮಾರ್ಗದರ್ಶನ ನೀಡ ಬಲ್ಲದು.

    ReplyDelete
  10. ಜಯ೦ತ್ ಕಾಯ್ಕಿಣಿಯವರೊ೦ದಿಗಿನ ನಿಮ್ಮ ಅದ್ಭುತ ಕ್ಷಣಗಳನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು ಪ್ರದೀಪ್ ಅಣ್ಣ :)

    ReplyDelete
  11. ಜಯ೦ತ್ ಕಾಯ್ಕಿಣಿಯವರೊ೦ದಿಗಿನ ನಿಮ್ಮ ಅದ್ಭುತ ಕ್ಷಣಗಳನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು ಪ್ರದೀಪ್ ಅಣ್ಣ :)

    ReplyDelete
  12. ಪರಿಪೂರ್ಣ ಮಾರ್ಗದರ್ಶಕ ಲೇಖನ. ಕಾಯ್ಕಣಿಯವರು ಇಂದಿನ ಮಿಡಿತದ ಕವಿ. ಅವರನ್ನು ಭೇಟಿಯಾಗಿ ಬಂದ ತಾವೆಲ್ಲ ಮಾನ್ಯರು.

    ಈ ಬರಹವು ಸಂಗ್ರಹಾರ್ಹ.

    ReplyDelete