Saturday, February 4, 2012

3K ಕಾವ್ಯಸಂಚಾರ - ಭಾಗ-1 - ಮಂಗಳೂರು, ಉಡುಪಿ

ಪ್ರೀತಿಯ ಬ್ಲಾಗ್ ಗೆಳೆಯರೇ,
ನಿಮಗೆಲ್ಲಾ ಅನಂತಾನಂತ ನಮನಗಳು. ನಿಮ್ಮೆಲ್ಲರಿಗೆ ಈ ಹಿಂದೆ ತಿಳಿಸಿದ್ದಂತೆ January 21st & 22nd ರಂದು ಮಂಗಳೂರಿನ ಸೂರತ್ಕಲ್ ಮತ್ತು ಉಡುಪಿಯಲ್ಲಿ ನಮ್ಮ ಕಾವ್ಯಸಂಚಾರದ ಕಾವ್ಯಸಂವಾದ ಕಾರ್ಯಕ್ರಮ ನಡೆಯಿತು. ಅದರ ಬಗ್ಗೆ ನಿಮ್ಮೆಲ್ಲರಿಗೂ ತಿಳಿಸಬೇಕೆಂದು ಒಂದು ಟಿಪ್ಪಣಿ ಬರೆಯೋಣ ಎಂದುಕೊಂಡೆ. ಆದರೆ ಸಮಯದ ಅಭಾವದಿಂದ ನನ್ನಿಂದ ಬರೆಯಲು ಸಾಧ್ಯವಾಗಲಿಲ್ಲ. ಆದರೆ ನಮ್ಮ ತಂಡದ ಸತೀಶ್ ಬಿ. ನಾಯಕ್ ಅವರು ತುಂಬಾ ಚೆನ್ನಾಗಿ ಬರೆದಿದ್ದಾರೆ ನಮ್ಮ ಕಾವ್ಯ ಪ್ರವಾಸದ ಬಗ್ಗೆ. ಆ ಎರಡು ದಿನಗಳ ಆಗುಹೋಗುಗಳನ್ನು ಕೇಳಿ ಅವರದೇ ಪದಗಳಲ್ಲಿ..

So over to our reporter Sathish B. Naik....

Camera man Pradeep ಜೊತೆ 3K Reporter Sathish B. Naik


ಬದುಕು ಯಾಂತ್ರಿಕ, ನಾಟಕೀಯ & ಅವಸರದ ಅವಘಡಗಳ ಜೊತೆ ಅರಿವಿರದೆ ಸಾಗುತ್ತಿರುವಾಗಲೇ ಕರಾವಳಿಯ ಮಡಿಲಿನಲ್ಲೆರಡು ಭವ್ಯ ದಿನಗಳನ್ನು ಕಡಲ ತಡಿಯಲಿ ಕಳೆದ ಮಾಂತ್ರಿಕ ಕ್ಷಣಗಳು, ಬದುಕು ಬರಡಾದರು ಮನದೊಳಗೆ ಯಾವತ್ತಿಗೂ ಹಸಿರೇ.. ಯೋಗ ಯೋಗ್ಯತೆ ಇಲ್ಲದೆ ರೋಗ ಕೂಡ ಬರೋದಿಲ್ಲ ಅನ್ನೋ ಮಾತು ಕೇಳಿದ್ದೆ. ನನ್ನದೇನು ಯೋಗವೋ..?? ನನ್ನದಂಥಾ ಯೋಗ್ಯತೆಯೂ..?? ನಾ ಕಲ್ಪನೆ ಮಾಡಿಕೊಂಡು ೧ ನಿರ್ಧಾರಕ್ಕೆ ಬರುವ ಮೊದಲೇ.. ಕರಾವಳಿಯ ತೀರದ ಕಾವ್ಯ ಸಂಚಾರ ಮುಗಿದು, ಮನಸ್ಸಿನ ಮನೆಯ ಯಾವುದೋ ಒಂದು ಮೂಲೆಯಲ್ಲಿ ಹಾಲುಕ್ಕಿದ ಸಂಭ್ರಮ.
ನನ್ನಂತೋರಿಗೆಲ್ಲ ಇದು ಬ್ರಹ್ಮಾಂಡನೀಯ ಕ್ಷಣಗಳೇ... ರದ್ದೀ ಕಾಗದವೊಂದು ಗಾಳಿಪಟವಾಗಿ ಆಗಸದಲ್ಲಿ ಹಾರಿದಂಥ ಸಾರ್ಥಕತೆ.. ಎಲ್ಲೋ ಬಿದ್ದಿದ್ದ ಬೀಜ ಇನ್ನೆಲ್ಲೋ ಹೂತು ಹೊಸ ಚಿಗುರ ಕಂಡು ಹೂವೊಂದ ಬಿಟ್ಟು ನಕ್ಕ ಸಂಭ್ರಮ.. ಬಾಡಿ ಮುದುಡಿ ಬಿದ್ದು ಹೋಗುವ ಹೂಗಳನ್ನೆಲ್ಲ ಬಿಡಿಸಿ ಆಯ್ದು, ಹಾರವ ಮಾಡಿ ದೇವರ ಮುಡಿಯಲ್ಲದಿದ್ದರೂ ಇನ್ನಾವುದೋ ಸಾರ್ಥಕತೆಗೆ ನಮ್ಮನು ಎಡೆಮಾಡಿಕೊಟ್ಟ ಆನಂದದ ಸಾಕ್ಷಾತ್ ಅನುಭವಗಳು ಕಾವ್ಯ ಸಂಚಾರದ ಎರಡು ದಿನ ಕಾಲದ ಕ್ಷಣ ಕ್ಷಣದಲ್ಲೂ, ಕಣ ಕಣದಲ್ಲೂ..
ಬೆಂಗಳೂರಿಂದ ಬಸ್ ಹತ್ತಿ, ಮತ್ತೆ ತಿರುಗಿ ಮಂಗಳೂರಿಂದ ಬಸ್ ಹತ್ತಿ ಬರುವಾಗಿನ ವರೆಗೆ ನಡೆದ ಘಟನೆಗಳೆಲ್ಲ ರೋಚಕ, ಸೋಜಿಗ & ಭವ್ಯ ಅನುಭವಗಳೇ. "ಕಾವ್ಯ ಸಂಚಾರ"ದ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಹೋಗಿದಿದ್ದಲ್ಲಿ ಕಾವ್ಯ ಸಂಚಾರ ವೆಂಬ ಪದದ ಮೂಲಾರ್ಥ ಕೂಡ ಎಂದಿಗೂ ಈ ಮನಸಿನ ಸ್ತಿಮಿತಕೆ ಸುಳಿದಿರದೆಂಬುದು ನಿಜ. ಬಸ್ ಇಳಿದು ಸುರತ್ಕಲ್ ನಲ್ಲಿ ಹೆಜ್ಜೆ ಇರಿಸಿದಾಗ ಮೊದಲನೆಯದಾಗಿ ಮಹೇಶ್ ಮೂರ್ತಿಗಳ ದರ್ಶನ & ಎರಡನೆಯ ದಾಗಿ ದಿ ಹಿಂದೂ ಪೇಪರ್ ನಲ್ಲಿನ ಮಂಗಳೂರು ಕಾವ್ಯ ಸಂಚಾರದ ಕುರಿತಾದ 3k ಯ ಕುರಿತಾದ ವರದಿ.ಮನಸ್ಸಿಗೆ ಹೇಗಾಗಿರಬೇಡ.. ಏನಾಗಿರಬೇಡ..??
ಪೇಪರ್ ಹಿಡಿದ ಕೈ ಇಂದಲೇ ಬಳಸಿ ಮಹೇಶ್ ಮೂರ್ತಿಗಳನೊಮ್ಮೆ ಅಪ್ಪಿದೆ.ದೇಹಕ್ಕೊಂದು ಮಧುರ ಅನುಭೂತಿ. ಆ ಅನುಭೂತಿ ಯನ್ನು ನೀಡಿದ ಕೀರ್ತಿಗೆ ಕಾರಣ, ಮಹೇಶ್ ಮೂರ್ತಿ ಯವರೊಂದಿಗಿನ ಅಪ್ಪುಗೆಯೋ ಅಥವಾ ಪೇಪರ್ ನಲ್ಲಿ ಬಂದ ವರದಿಯೋ.. ಈಗಲೂ ಕಗ್ಗಂಟು. ಅದಾದ ೧೦ ನಿಮಿಷದಲ್ಲಿ 3k ಯ ಉಳಿದ ಗೆಳೆಯ ಅಳಗದ ಆಗಮನ.. ರೂಪಕ್ಕ, ಅನು ಮೇಡಂ, ಅರುಣ್, ಪ್ರದೀಪ್, ಗೋಪಿನಾಥ್ ಸರ್ & ಮೇಘನ. ಭಾವ ಸಿಂಚನದ ಮೊದಲ ಅವತರಿಣಿಕೆಯ ಬಿಡುಗಡೆಯ ಸಂಧರ್ಭದಲ್ಲಿ ಕಂಡಿದ್ದ ದಿನದಿಂದ ಅಲ್ಲಿನ ವರೆಗೆ ಅವರುಗಳ ಅಸ್ಪಷ್ಟ ಚಿತ್ರಣ ಗಳಿಗೆ ಸ್ಪಷ್ಟ ಪೂರ್ಣ, ಭವ್ಯ ರೂಪ ಸಿಕ್ಕಿದ್ದು ಈ ಎರಡು ದಿನಗಳ ನಂತರ.
ಮುಂದೆ ನಡೆದದ್ದೆಲ್ಲ ಎಣಿಸಿಯೂ ಎಣಿಸದೆಯೂ ಶುಭಂ. ನಮಗೆಂದೇ ಕಾಯ್ದಿರಿಸಿದ್ದ ಹೋಟೆಲ್ಲಿನ ರೂಮಿನಲ್ಲಿ ನಾವು ತಯಾರಾಗಿ ಬಂದ ಬಳಿಕ ನಮ್ಮ ನೇರ ನಡೆ.. ಕಾಲ್ನಡಿಗೆಯಲ್ಲೇ.. ಹೋಟೆಲ್ ಸೂರಜ್ ಕಡೆಗೆ. ಬೆಳಗಿನ ತಿಂಡಿಗಾಗಿ. ನೀರ್ ದೋಸೆಯ ಮುಖವನ್ನ ಮೊದ ಮೊದಲು ನನಗೆ ಪರಿಚಯಿಸಿದ ಕೀರ್ತಿ ಆ ಹೋಟೆಲ್ ಗೆ.. ತಲಾ ಒಂದು ನೀರ್ ದೋಸೆ & ಒಂದೊಂದು ಬನ್ ಗಳ ಜೊತೆ ನಾವಾಡಿದ ತಿಂಡಿಯಾಟದ ನಂತರ ಅಶೋಕಣ್ಣ ನಮ್ಮನು ಬಂದು ಸೇರಿಕೊಂಡರು . ನಂತರ ನಡೆದದ್ದೆಲ್ಲ ಸಿನಿಮೀಯ ಕ್ಷಣಗಳು..
ಮಂಗಳೂರಿಗೆ ನಾವೆಲ್ಲಾ ಬಂದ ಮೂಲ ಉದ್ದೇಶ ಕಾವ್ಯ ಸಂಚಾರ. ಅದು ಪ್ರಾರಂಭ ಗೊಳ್ಳುವ ಮೊದಲೇ ನಮ್ಮೆಲರ ಪಾಲಿಗೊಂದು ಸುವಾರ್ತೆ.. ನಮ್ಮೆಲ್ಲರ ಸಂದರ್ಶನ ಸುವರ್ಣ (24X7 ನೇರ ದಿಟ್ಟ ನಿಂತರ) ಟೀವಿ ಗಾಗಿ. ಇದುವರೆವಿಗೂ ಅಂಥಾ ಕನಸು ಕೂಡಾ ಕಂಡಿರಲಿಲ್ಲ. ತಿಂಡಿ ತಿಂದ ಬಳಿಕ ಕಾವ್ಯ ಸಂಚಾರದ ಎರಡನೆಯ ಅವತರಣಿಕೆಯ ಅನಾವರಣ ಗೋಳ್ಳಬೇಕಿದ್ದ ಜಾಗ.. ಸುರತ್ಕಲ್ ನ ಗೋವಿಂದ ದಾಸ್ ಕಾಲೇಜ್ ಕಡೆ ಪಯಣ.. ನಿಶ್ಚಿತಾರ್ಥದ ಹೆಣ್ಣನ್ನು ನೋಡಲು ಬರುವ ಗಂಡಿನ ಮನೆಯವರಂತೆ.ಕಾಲೇಜಿನ ಆವರಣ ದೊಳಗೆ ಕಾಲಿಟ್ಟ ನಮಗೆ ಕಂಡದ್ದು ಪ್ರಶಾಂತ ಹಸಿರಿನ ನಡುವೆ ಸುಂದರ ಸುಸಜ್ಜಿತ ವ್ಯವಸ್ಥೆಯ ಕಾಲೇಜು. ಅಲ್ಲಿನ ಗ್ರಂಥಾಲಯ.. ಅದರ ಒಂದಿಂಚೂ ಬಿಡದೆ ಸುತ್ತಿ ಸುತ್ತಿ ನೋಡಿದೆವು.. ಗ್ರಂಥಾಲಯದ ಬಗ್ಗೆ ಹೇಳಲು ಅನು ಅಕ್ಕನೆ ಸರಿ. ಒಂದು ಅನುರೂಪ ಗ್ರಂಥಾಲಯ. ನಂತರ ಕಾರ್ಯಕ್ರಮ ನಡೆಯಲಿದ್ದ ವೇದಿಕೆಯ ಬಳಿ ಬಂದು ನಂತರ ಆಗಬೇಕಿದ್ದ ಆಗು ಹೋಗುಗಳ ಬಗ್ಗೆ ಚರ್ಚಿಸಿ ಹೊರಟದ್ದು ನೋಡಿ ಸುವರ್ಣ ಟೀವಿ ಯ ಕ್ಯಾಮೆರಾ ಕಣ್ಣಿನ ಕಡೆಗೆ. ಅಲ್ಲಿ ವರೆಗಿನ ಪಯಣವೂ ೧ ಸಿನಿಮೀಯ ಸಾಹಸವೇ. ಸಮಯ ನಿರ್ಧರಿಸಿಕೊಂಡು ಬಸ್ ಹತ್ತಿ ಹೋರಾಟ ನಮ್ಮ ಸುವರ್ಣ ಟೀವಿ ಸಂದರ್ಶನ ದ ಕನಸಿನ ಊಹಾ ಪೋಹಗಳ ಮಜಾ ಅನುಭವಿಸದಂತೆ ತಣ್ಣೀರು ಎರಚಿದ್ದು ಅನಿರೀಕ್ಷಿತ ಟ್ರಾಫಿಕ್ ಜಾಮ್. ಅದನ್ನು ದಾಟಿದ ನಂತರ ಎಲ್ಲವೂ ಸುರಾಗ.. ಎಲ್ಲವೂ ಸರಾಗ. ನಡು ನಡುವೆ ಗಂಗಾವತಿ ಅರುಣ್ ಬರಬೇಕಿದ ವಿಚಾರದಲ್ಲಿ ಕೊಂಚ ಗಲಿ ಬಿಲಿ.. ಅಂತೂ ಪೂರ್ಣ ನಿರ್ಭಂಧಿತ ವ್ಯವಸ್ಥೆ ಇಲ್ಲದೆಯೇ ಎಲ್ಲರೂ ಸುವರ್ಣ ಟೀವಿಯ ಕ್ಯಾಮೆರಾ ಮುಂದೆ ಹಲ್ಕಿರಿದು ಬಂದದ್ದಾಯ್ತು.. ಯಾರೂ ಕ್ಯಾಮೆರಾ ಮುಂದೆ ಏನು ಹೇಳಿದ್ದರೂ ಅದು ಅವರ ಮನದಾಳದ ಮುಕ್ತ ಮಾತುಗಳೆಂಬುದು ನಿಜ..
ನಮ್ಮ ನಂತರದ ಸಾಧನೆ ಮಹೇಶ್ ಮೂರ್ತಿಗಳ ಮನೆಯೂಟ. ಮನುಷ್ಯ ಮನಸ್ಪೂರ್ತಿ ಸಾಕು ಎನ್ನುವ ವಿಚಾರ ವೊಂದಿದ್ದರೆ ಅದು ಊಟವಂತೆ. ನಾವು ಸಾಕು ಸಾಕೆಂದರೂ ಬಿಡದೆ ಬೇಕು ಬೇಕೆಂದು ಬಡಿಸಿ ನಮ್ಮನ್ನು ಊಟ ಮಾಡಿಸಿದ ಮಹೇಶ್ ಮೂರ್ತಿಗಳ ಮನೆ, ಜನ, ಮನ, ಮನೆತನಗಳ ಪ್ರೀತಿ ಅಂಥಾದ್ದು. ಅವರ ಪ್ರೀತಿ ವಿಶ್ವಾಸಗಳಿಗೆ ಮುಕ್ಕಾಲು ಭಾಗ ತುಂಬಿ ಹೋಗಿದ್ದ ಹೊಟ್ಟೆಗೆ ಕೊಡಬಾರದ ಕಷ್ಟವನ್ನು ಕೊಟ್ಟು, ಇದ್ದ ಒಂದು ಹೊಟ್ಟೆಯ ಒಂದೂ ಮುಕ್ಕಾಲು ಭಾಗದಷ್ಟು ತುಂಬಿಸಿದ ಕೀರ್ತಿ, ಮಹೇಶ್ ಮೂರ್ತಿಗಳ ತಮ್ಮ ಪ್ರಸೀದ್ ರದ್ದು.. ಈಗೀಗ ಪಂಕ್ತಿ ಊಟವೆಂದರೆ ಪ್ರಸೀದ್ ನೆನಪಾಗುತ್ತಾರೆ.
ನಿಮ್ಮನ್ನು ನಮ್ಮನೆಗೆ ಕರೆದು.. ನಿಮಗೂ ಹಾಗೆ ಊಟ ಹಾಕಿಸಿ, ನಿಮಗೂ ಊಟದ ವಿಚಾರದಲ್ಲಿ ಕೊಡಬಾರದ ಕಷ್ಟವನ್ನು ಕೊಟ್ಟು ಸೇಡು ತೀರಿಸಿಕೊಳ್ಳುವ ವರೆಗೂ ನಿಮ್ಮನೆ ಊಟವನ್ನು ನಾನು ಅರಗಿಸಿ ಕೊಳ್ಳುವುದಿಲ್ಲ ಪ್ರಸೀದ್ ನೆನಪಿರಲಿ. ಇಂಥಾ ಒಂದು ಸಂಧರ್ಭವನ್ನು ಅರುಣ್ ಕೆಲವೊಂದು ಗಲಿಬಿಲಿಯಲ್ಲಿ ಮಿಸ್ ಮಾಡಿ ಕೊಂಡು ಬಿಟ್ರು.. ಬೇಜಾರಾಯ್ತು.
ಮಹೇಶ್ ಮೂರ್ತಿಗಳ ಮನೆಯೂ ಅಂಥಾದ್ದೆ.. ಮನೆಯಂಗಳವೇ ಮಿನಿ ಕ್ರಿಕೆಟ್ ಗ್ರೌಂಡ್.. ನಮಗೆ ಸ್ವಲ್ಪ ಸಾವಕಾಶ ವೆನಾದರು ಇದ್ದಿದ್ದರೆ ಅಲ್ಲೊಂದು ಮ್ಯಾಚ್ ಖಂಡಿತ ನಡೀತಿತ್ತು. ಅವರ ಮನೆ ಕಡೆಗೆ ಹೋಗುತ್ತಿರುವಾಗ ನನಗನ್ನಿಸಿದ್ದು ಕೇರಳದ ಯಾವುದೋ ಗಲ್ಲಿಗೆ ಕಾಲಿಟ್ಟ ಹಾಗೆ. ಸುತ್ತ ಹಸಿರು ಅಕ್ಕ ಪಕ್ಕ ಎರಡು ಮನೆ. ಮನೆಯ ಹಿಂಭಾಗಕ್ಕೆ ಒಂದು ಫಾರ್ಲಾಂಗ್ ನಡೆದರೆ ಸಾಗರ ತೀರ.. ಧ್ಯಾನದಿಂದ ಆಲಿಸಿದ್ದರೆ ಅಲೆಗಳ ಮೊರೆತ ಕೇಳಬಹುದು.. ಭಾಗ್ಯ ಅನ್ನೋದು ನಾವೆಲ್ಲಾ ಬಯಸಿದರೆ ಬರೋ ಅಂಥದಲ್ಲ ಬಿಡಿ.
ಮಹೇಶ್ ಮೂರ್ತಿಗಳ ಮನೆಯಿಂದ ಬಂದ ನಂತರ ಅರುಣ್ ನಮ್ಮನ್ನು ಸೇರಿ ಕೊಂಡರು. ಎಲ್ಲಾ ಪುನಹ ತಯಾರಾಗಿ.. ಗೋವಿಂದ ದಾಸ್ ಕಾಲೇಜ್ ಗೆ ಬಂದು ಆಗಲೇ ತಯಾರಾಗಿದ್ದ ವೇದಿಕೆಗೆ ತುರಾತುರಿಯಲಿ ತೂರಿಕೊಂಡು ಮಾಡಬೇಕಿದ್ದ ಮಾತಾಡಬೇಕಿದ್ದ ವಿಷಯಗಳ ಕಡೆ ತಲೆ ಕೊಟ್ಟೆವು. ಪೂರ್ತಿ ಕಾರ್ಯಕ್ರಮ ಒಂದು ಹಬ್ಬದೂಟ. ಆ ಕಾರ್ಯಕ್ರಮ ನಡೆದಷ್ಟು ಚಂದಗೆ ನಾನಿಲ್ಲಿ ಹೇಳಬಲ್ಲೇನಾ..?? ಗೊತ್ತಿಲ್ಲ. ಹೇಳಲು ಪುಟಗಳ ಸಂಖ್ಯೆ ಬೆರಳುಗಳ ಲೆಕ್ಖ ದಾಟಬಹುದು.. ಇರಲಿ ಊಹಿಸಿ ಅಷ್ಟೇ.. ಕಾರ್ಯಕ್ರಮ 3K ಯ ಒಂದು ಯಶಸ್ವಿ ಕಥನ.
ಭಾವಸಿಂಚನದ ಎರಡನೇ ಅವತರಣಿಕೆಯ ಕೊಡುಗೆ ನೀಡಿದ ಮಹಾಬಲ ಪೂಜಾರಿ ದಂಪತಿಗಳ ಸಮಕ್ಷಮದೊಂದಿಗೆ.. ಗೋವಿಂದ ದಾಸ್ ಕಾಲೇಜಿನ ಪ್ರಾಂಶುಪಾಲರು ಸೇರಿ ಹಲಾವಾರು ಗಣ್ಯರ ಹಿತ ನುಡಿ, ವಿಮರ್ಶೆ, ಚರ್ಚೆ & ಅಲ್ಲಿ ನೆರೆದಿದ್ದ ಹಲವು ಕವಿ ಮಹೋದಯ, ವೀಕ್ಷಕ & ವಿಧ್ಯಾರ್ಥಿ ಗಳನ್ನೊಳಗೊಂಡ ಕಾರ್ಯಕ್ರಮ ಸುಂದರ ಸುಂದರ ಸುಂದರ..
ಹಾಲುಂಡ ಮನಸ್ಸಿನೊಡನೆ ಕಾರ್ಯಕ್ರಮದ ಸವಿ ನೆನಪು & ಸವಿ ಮೆಲುಕುಗಳ ಜೊತೆ ನಮ್ಮ ಪಯಣ ಪನಂಬೂರ್ ಬೀಚ್ ಕಡೆ... kite festival ನೆಡೆ. ಬಾಲ್ಯದಲ್ಲಿ ಗಾಳಿಪಟ ಹಾರಿಸಿದ್ದು ಬಂಗಾರದ ನೆನಪು. ಕಡಲ ತಡಿಯಲಿ ಅಲೆಗಳ ಜೊತೆ ಸರಸವಾಡುತ್ತ, ಐಸ್ ಕ್ರೀಂ ಸವಿಯುತ್ತ.. ಗಾಳಿಪಟ ಹಾರಿಸುತ್ತ.. ಕಂಡ ಕಂಡ ಕಂಡದ್ದಕ್ಕೆಲ್ಲ ಕಟ್ಟು ಕತೆಗಳ ಕಟ್ಟುತ್ತಾ..ಮಸಾಲ ಭರಿತ ಚುರುಮುರಿ, ಕಡಲೇ ಕಾಯಿಗಳನ್ನು ಮೆಲ್ಲುತ್ತಾ..ಒಂದು ಗಂಟೆಗಳ ಕಾಲದ ವರೆಗೆ ಬಾಲ್ಯವನ್ನು ಮತ್ತೊಮ್ಮೆ ತಂದುಕೊಂಡು ಆನಂದಿಸಿದೆವು.

A Kite designed as Lord Ganesh's face... International Kite Festival, Panambur beach, Mangalore
ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂಥ ಕ್ರೀಡೆಯೊಂದನ್ನು ಪ್ರತ್ಯಕ್ಷ ನೋಡುತ್ತಿದ್ದೆ! ಅದು ಜೋಡು ಕೆರೆ ಕಂಬಳ! ವಾಹ್! ಎಂಥ ದೃಶ್ಯ ಅದು!
ನಾವು ಕಂಬಳ ನೋಡುತ್ತಿದ್ದಾಗ ಒಂದು ಹಾಸ್ಯ ಘಟನೆ ಸಂಭವಿಸಿತು.. ಜೋಡೆತ್ತುಗಳನ್ನು ಓಡಿಸುವವನು ಕೆಸರಿನಲ್ಲಿ ಕಾಲು ಜಾರಿ ಅಲ್ಲೆ ಬಿದ್ದ... ಆದರೆ ಅವನ್ ಕೋಣಗಳು ಮಾತ್ರ ಓಡುವುದು ನಿಲ್ಲಿಸಲಿಲ್ಲ. ಕೊನೆಗೆ ಈ ಯಜಮಾನನಿಲ್ಲದೆ ಕೋಣಗಳು ತಾವಾಗಿಯೇ ಓಡಿ ಸ್ಪರ್ಧೆಯಲ್ಲಿ ಮೊದಲು ಬಂದವು!! ಅಗ ನಾವೆಲ್ಲರೂ ಎದ್ದು ನಿಂತು ಸೀಟಿ ಹೊಡೆಯುವ ಮೂಲಕ ಕೋಣಗಳಿಗೆ ಪ್ರೋತ್ಸಾಹಿಸಿದೆವು!

ಒಟ್ಟಿನಲ್ಲಿ ಜನರ ನಡುವಿನಿಂದ ಬೆಂಕಿ ಉಗುಳುತ್ತಾ ವೇದಿಕೆ ಮೇಲೆ ಆಗಮಿಸಿದ ಮಹಿಷಾಸುರನ Entry ಭರ್ಜರಿಯಾಗಿತ್ತು.. ಹೆದರಿದ ಜನ ಚೆಲ್ಲಾಪಿಲ್ಲಿಯಾಗಿ ಓಡಿದರು.. ನಾವು ಸಹ!!


ಅಬ್ಬಬ್ಬಾ! ಎಂಥಾ ಭಯಂಕರ ಕಣ್ಣುಗಳು! ನಿಜವಾದ ರಾಕ್ಷಸನೇ ಬಂದುಬಿಟ್ಟನೇ ಎಂಬ ಭ್ರಮೆಹುಟ್ಟಿಸುತ್ತಿತ್ತು!

ನಂತರ ಮತ್ತದೇ ಸೂರಜ್ ಹೋಟೆಲಿ ನಲ್ಲಿ ಊಟ ಮುಗಿಸಿ, ಎಲ್ಲರ ಪಯಣ ಮೂಡ ಬಿದರಿಯ ಕಡೆಗೆ.. ಜೋಡು ಕರೆ ಕಂಬಳ, & ಯಕ್ಷಗಾನಗಳ ಮೊದಲ ಬಾರಿ ಕಣ್ಣಾರೆ ಕಂಡ ಧನ್ಯತೆ. ನಿಜಕ್ಕೂ ಅದೊಂದು ರೋಮಾಂಚಕ.. & ಅದ್ಭುತ ಕ್ರೀಡೆ.. we all loved .. ಕಂಬಳ ನೋಡುವ ತುಡಿತದೊಂದಿಗೆ ಆರಂಭಿಸಿದ ಪಯಣದಿಂದ ಹಿಡಿದು ಕಂಬಳ ಮುಗಿಸಿಕೊಂಡು ಸುರತ್ಕಲ್ ನಲ್ಲಿ ನಡೆಯುತ್ತಿದ್ದ ಭೂತಕೋಲ ವನ್ನು ನೋಡುವ ವರೆಗಿನ ಪಯಣದಲ್ಲಿ.. ಕಾರಿನಲ್ಲಿದ್ದ ನಮ್ಮಷ್ಟೂ ಜನರ ಬಾಯಿಂದ ಅದೆಷ್ಟು ಹಾಡುಗಳು ಅಂತ್ಯಾಕ್ಷರಿ ಹೆಸರಿನಲ್ಲಿ ನಲುಗಿ, ನಡುಗಿ ಹೋದವೋ ಗೊತ್ತಿಲ್ಲ.. ಆದ್ರೆ ಒಂದು ನಿಜವೆಂದರೆ.. ಅಲ್ಲಿ ಯಾರೊಬ್ಬರದು ಸೋಲದ ಮನಸು.. & ಎಲ್ಲರದು ಸುಶ್ರಾವ್ಯ ಕಂಠ. ಜೊತೆಗೆ ಕವಿ ಹೃದಯದ ಯಕ್ಷಗಾನದ ಕೇಕೆ ಅದ್ಭುತ.
ಭೂತಕೋಲಾಟದಲ್ಲಿ ತನ್ಮಯನಾಗಿ ಕುಣಿಯುತ್ತಿರುವ ಪಾತ್ರಧಾರಿ

ಒಂಧರ್ಧ ಗಂಟೆ ದೇವರೇ ಎದ್ದು ಬಂದು ಕುಣಿಯುತ್ತಿರುವನೆ ಎಂಬಂತೆ ಭಾಸವಾಗುತ್ತಿದ್ದ ಭೂತ ಕೋಲವನ್ನು ಕಂಡು ನಂತರ ನಾವು ಸಾಗಿದ್ದು ಮಹಿಷಾಸುರನ ನಾಟಕದೆಡೆಗೆ.. ಮಧ್ಯ ರಾತ್ರಿಯಾದರೂ ನಾವಾರು ಮರುಗದೆ.. ಕೊರಗದೆ ಕಂಡ ನಾಟಕವದು. ಮಹಿಷಾಸುರನ ಆಗಮನದ ಅದ್ಧೂರಿತನ ವನ್ನು ಕಣ್ಣಾರೆ ಕಂಡ ನಾಟಕ. ಅಂತೂ ಒಲ್ಲದ ಮನಸ್ಸಿಂದ ಮಿತಿ ಮೀರಿದ ಸಮಯಕ್ಕಂಜಿ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿ ಅರ್ಧ ರಾತ್ರಿಗೆ ಹೋಟೆಲ್ಲಿನ ಕಡೆಗೆ ಮರಳಿದೆವು. ನಾವು ೫ ಜನ ಹುಡುಗರೂ ಎರಡು ಹಾಸಿಗಯ ಮೇಲೆ ಒಟ್ಟಿಗೇ ಮಲಗಿದ್ದು ಹಳೆಯ ಹಾಸ್ಟೆಲ್ ಒಂದರ ನೆನಪನ್ನು ಮರಳಿಸಿ ಹೋಗಿತ್ತು.
ಹೆಚ್ಚೆಂದರೆ ನಾಲ್ಕು ಗಂಟೆ ನಿದ್ರಿಸಿರಬಹುದಷ್ಟೇ.. ಮತ್ತೆ ಮುಂಜಾನೆ ಧೂರ್ತರಂತೆ ಬಂದ ಮಹೇಶ್ ಮೂರ್ತಿಗಳ ಒತ್ತಾಯಕ್ಕೆ ಮಣಿದು ಬೆಳ್ಳಂಬೆಳಿಗ್ಗೆ ಎದ್ದು ಶುಚಿಯಾಗಿ ಮತ್ತೆ ಮಂಗಳೂರಿಗೆ ಹೊರಟ್ವು. ಕಲ್ಲಚ್ಚು ಬಳಗದ ಜೊತೆ ಆತ್ಮೀಯ ಸಂವಾದ ಅಚ್ಚು ಮೆಚ್ಚಾಯಿತು. ನಂತರ ನಾವು ಸಾಗಿದ್ದು ವಿಶೇಷ ಮಕ್ಕಳ ವಿಶೇಷ ಕೂಟ ದೆಡೆಗೆ. ಮಂಗಳೂರು ಸೀಮಿತದ ವಿಕಲಾಂಗ ಮಕ್ಕಳ ಬೃಹತ್ ಸಮ್ಮೆಳನವದು. ನೋಡಿದವರ ಕಣ್ಣು, ಮನಸು, ಕರುಳು ಎಲ್ಲ ತುಂಬಿ ಬರುವಂತಿತ್ತು.. ಅಲ್ಲಿನ ಕ್ಷಣಗಳು. ಅಲ್ಲಿ ಕೂಡ ಬಂದಿದ್ದ ಒಂದೆರಡು ಮಾಧ್ಯಮಗಳ ಜೊತೆ ಹರಟಿ, ವಿಶೇಷ ಕೂಟದ ವಿಶೇಷ ಸವಿ & ತಿನಿಸು ಗಳನ್ನೂ ಸವಿಯುತ್ತ ಮೆಲುಕುತ್ತ .. ಅಲ್ಲಿಯೇ ಮಧ್ಯಾನದ ಊಟ ಮುಗಿಸಿ ನೇರ ಉಡುಪಿಯೆಡೆಗೆ ಪಯಣ.

 
ಮಂಗಳೂರಿನ ರಸ್ತೆಯಲ್ಲಿ ಪಯಣಿಸುವಾಗ ನಮ್ಮ ತಂಡ "ಕರುನಾಡ ತಾಯಿ ಸದಾ ಚಿನ್ಮಯಿ.." ಹಾಡುತ್ತಿದ್ದರೆ ಮನದಾಳದಲ್ಲಿ ಎಲ್ಲೋ ಒಂದು ಕಡೆ ಕನ್ನಡದ ಕಂದಮ್ಮಗಳಾಗಿ ಹುಟ್ಟಿದ್ದಕ್ಕೂ ನಮ್ಮ ಜನ್ಮ ಸಾರ್ಥಕವಾಯಿತು ಎಂಬ ಭಾವ ಉಕ್ಕಿ ಬರುತ್ತಿತ್ತು!
ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್ ನಾಯಕ್ ಅವರೊಂದಿಗೆ 3K ತಂಡ ಸಂವಾದ ನಡೆಸಿತು.

ಮಂಗಳೂರಿನ ಖ್ಯಾತ ಸಾಹಿತಿ ಕು.ಗೋಪಾಲ ಭಟ್ ಅವರನ್ನು ಸನ್ಮಾನಿಸುತ್ತಿರುವ 3K ತಂಡ...

ಕು.ಗೋ.ರವರು ಹಿರಿಯ ಸಾಹಿತಿಗಳಾದರೂ ಮಗುವಿನಂಥ ಮನಸು, ಬಹಳ ಸಾದಾ ಸೀದ ನಡುವಳಿಕೆ.. ನಾವು ಉಡುಪಿಯಲ್ಲಿದ್ದಾಗ ಅವರು ನಮ್ಮೆಲ್ಲರಿಗೂ ತಮ್ಮದೇ ಹಾಗು ಕೆಲವು ಇತರರ ಪುಸ್ತಕಗಳನ್ನು ಉಚಿತವಾಗಿ ಹಂಚುತ್ತಿದ್ದರು. ನಾನು ಅವರನ್ನು ಕೇಳಿದೆ... "ಸಾರ್.. ನಮ್ಮ ಭಾವಸಿಂಚನ ಪುಸ್ತಕವನ್ನು ಎಲ್ಲರಿಗೂ ಉಚಿತವಾಗಿ ಕೊಡಬಾರದಿತ್ತು. ಅದಕ್ಕೆ ಒಂದು ಬೆಲೆಯನ್ನು ನಿಗದಿಪಡಿಸಬೇಕಿತ್ತು ಎಂದು ನಿಮ್ಮ ಭಾಷಣದಲ್ಲಿ ಹೇಳಿದಿರಿ. ಆದರೆ ನೀವೆ ನಿಮ್ಮ ಪುಸ್ತಕಗಳನ್ನು ನಮಗೆಲ್ಲ ಉಚಿತವಾಗಿ ನೀಡುತ್ತಿರುವುದು ಸರಿಯೆ?" ಅದಕ್ಕವರು "ನೀವು ನಿಮ್ಮ ಪುಸ್ತಕವನ್ನು ಎಲ್ಲರಿಗೂ ಉಚಿತವಾಗಿ ನೀಡಿದಿರಿ. ಅದಕ್ಕೆ ಬೇಡ ಎಂದೆ. ಇದು ನಾನು 3K ತಂಡಕ್ಕಷ್ಟೇ ಪ್ರೀತಿಯಿಂದ ಕೊಡುತ್ತಿರುವ ಉಡುಗೊರೆ. ಉಡುಗೊರೆಗೆ ಬೆಲೆ ಕಟ್ಟಲು ಸಾಧ್ಯವೇ?" ಎಂದು ತಮ್ಮ ಮುಗ್ಧ ನಗು ಬೀರುತ್ತಾ ಹೇಳಿದರು! ಅವರನ್ನು ನಾವು ಭೇಟಿಯಾಗುತ್ತಿದ್ದುದು ಅದೇ ಮೊದಲ ಬಾರಿ. ಆದರೂ ಅಷ್ಟು ಅಕ್ಕರೆಯಿಂದ ನಮ್ಮನ್ನು ಕಂಡ ಅವರ ವಿಶಾಲ ಮನಸ್ಸಿಗೆ ನೂರೊಂದು ನಮನಗಳು  
ಉಡುಪಿಯ ಕಿದಿಯೂರು ಹೋಟೆಲಿನಲ್ಲಿ ಸುಹಾಸಂ ಹಾಸ್ಯ ಪ್ರಿಯ & ಚುಟುಕು ಲೇಖಕರ ವತಿಯಿಂದ ಹಮ್ಮಿಕೊಳ್ಳಲಾದ ಸಂಜೆಯ ಸುಂದರ ಕಾರ್ಯಕ್ರಮ. ಅಲ್ಲಿನ ಹಿರಿಯ ಸಾಹಿತಿಗಳ ಸಮಕ್ಷಮದಲ್ಲಿ ಭಾವ ಸಿಂಚನದ ಬಗೆಗೆಗಿನ ಭಾವ ವರ್ಷ ನಮ್ಮದೆಯೊಳಗೆ ನೂರಾರು ಬಣ್ಣ ಬಣ್ಣದ ಭಾವನೆಗೆಳ ಹರ್ಷ. ಅನೇಕ ಹಿರಿಯ ಕಿರಿಯ ಸಾಹಿತಿಗಳ ಉಪಸ್ತಿತಿಯಲ್ಲಿ ಕಡಲ ಕಿನಾರೆಯ ಸಂಜೆಯ ಮಧುರ ಕಾರ್ಯಕ್ರಮದಲ್ಲಿ ನೆರೆದಿದ್ದ ಅನೇಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಗಳಿಸಿದವರ ನಡುವಲ್ಲಿ ಅಂದಿನ ಸಂಜೆಗೆ 3k ಬಳಗ ಧನ್ಯ. ಕು ಗೋ ರಂಥ ಮಹಾನ್ ಕವಿ & ಹಿತೈಷಿ ಗಳ ಪರಿಚಯ & ಸುಹಾಂ ನಂಥ ಒಂದು ಸಕ್ರಿಯ ಒಕ್ಕೂಟ ದೆಡೆಗಿನ ನಮ್ಮ ಬಳಗದ ನಂಟು ವರದಾನವೇ ಸರಿ.
ಸುಹಾಸಂ ಕಾರ್ಯಕ್ರಮದ ಬಳಿಕ ಮತ್ತೆ ನಮ್ಮದು ಅವಸರದ ಓಟ ದೌಡು..9 .30 ಗೆ ಕಾಯ್ದಿರಿಸಿದ್ದ ಬಸ್ಸು ಹಿಡಿಯಲು ಹರಸಾಹಸ. ದಡ ದಡನೆ ನಮ್ಮ ಲಗೇಜ್ ನೆಲ್ಲ ಪ್ಯಾಕ್ ಮಾಡಿ, ಅಂಜುತ್ತಲೇ ಊಟ ಮಾಡಿ, ಅಳುಕುತ್ತಲೇ ನೀರು ಕುಡಿದು, ಆತುರಾತುರದಲ್ಲಿ ಬಸ್ಸನೆರಿದ ಕ್ಷಣಗಳೆಲ್ಲ ಇಂದು ತುಟಿಯಂಚಲಿ ಸಣ್ಣ ನಗೆಯಾಗಿ ಆಗಾಗ ಪ್ರತಿ ಫಲಿಸುತ್ತಿರುತ್ತವೆ. ಕಾವ್ಯ ಸಂಚಾರದ ಮೊದಲ ಹೆಜ್ಜೆ ಅಮೋಘ ಯಶಸ್ಸಿನೊಂದಿಗೆ ಮುಕ್ತಾಯವಾದುದು ಮಾತ್ರವಲ್ಲ.. ನಮ್ಮ ಮುಂದಿನ ಹೆಜ್ಜೆಗಳ ಮೇಲೆ ಭಾರಿ ಭರವಸೆ ಗಳನಿತ್ತು, ದೊಡ್ಡ ಜವಾಬ್ದಾರಿ ಗಳನ್ನೂ ವಹಿಸಿ ಕಳಿಸಿದ್ದು ಸುಳ್ಳಲ್ಲ. ಇದೆ ಯಶಸ್ಸನ್ನು ಮುಂದುವರೆಸಿಕೊಂಡು ಸಾಗುತ್ತ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಳಿಲು ಸೇವೆ ನೀಡುವ 3k ಯ ಪ್ರತಿ ಹೆಜ್ಜೆಯೂ ಇತಿಹಾಸ ವಾಗಲೆಂಬ ಆಶಯದೊಂದಿಗೆ..
ಕಾಡುವ ಕೆಲ ನೆನಪುಗಳು..
<>
 
<>


 
-ಮಹೇಶ್ ಮೂರ್ತಿಗಳ ಸಾಗರದಂಥ ಮಾತು, ಕಾರ್ಯದಕ್ಷತೆ & ಶೈಲಿ.

 
-ರೂಪಕ್ಕನ ಸಾರ್ವಕಾಲಿಕ ಸಹಮತ & ಸೌಮ್ಯತನದ ಸಾರಥ್ಯ..
- ಅನು ಅಕ್ಕನ ಅದ್ಭುತ & ಅನನ್ಯ ಮಾತುಗಳು..
- ಕವಿ ಹೃದಯದ ನಿರೂಪಣೆ & ಹಾಸ್ಯ ಮನಸ್ಸು.
- ಗೋಪಿನಾಥರ ಹಾಡು & ಒಡನಾಟ
- ಪ್ರದೀಪರ ಫೋಟೋಗ್ರಫಿ & ಕವಿಯಾಗಿಸಿದ ಅವರ ದ್ವೇಷದ ಕಥೆ.
- ಅರುಣ್ ನವಲಿಯವರ ವ್ಯಕ್ತಿತ್ವ .
- ಅಶೋಕಣ್ಣನ ಕನ್ನಡ, ಸೌಹಾರ್ಧತೆ & ಸರಳತೆಯ ನಂಟು.
<>
- ಮೆಘನಳ ನಗು & ಚಿತ್ರ..
- ನೂತನ್ ರ ಸಹಭಾಗಿತ್ವ.
- ಮೋನಿಕಾ ರ ಸಾಥ್..
- ಅನೇಕ ಹಿರಿಯ & ಕಿರಿಯ ಕವಿ ಮನಗಳ ನುಡಿಮುತ್ತುಗಳು.
- 3k ಯ ಈ ಯಶಸ್ಸನ್ನು ಹಂಚಿಕೊಳ್ಳಲೇ ಬೇಕಿದ್ದ, ಈ ಕಾರ್ಯಕ್ರಮಕ್ಕೆ ಬರಲಾಗದೆ ಹೋದ ಗೆಳೆ ಮನಸ್ಸುಗಳೆಡೆಗಿನ ಮರುಕ.
ಧನ್ಯವಾದಗಳು


- ಸತೀಶ್ ನಾಯ್ಕ್
ಭದ್ರಾವತಿ.
17 comments:

 1. ಬರಹ ಹಾಗೂ ಚಿತ್ರಗಳನ್ನು ನೋಡಿ ಕುಶಿಯಾಯ್ತು ಪ್ರದೀಪ್. 3k ಬಳಗಕ್ಕೆ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು. :)

  ReplyDelete
  Replies
  1. ಧನ್ಯವಾದಗಳು ಚೇತನ ಮೇಡಮ್... ನನ್ನ ಬ್ಲಾಗಿಗೆ ಸ್ವಾಗತ..

   Delete
 2. nimma kaaryakramadalli naanu bhaagiyaagidde ennuvudakke khushiyaagatte...

  ReplyDelete
  Replies
  1. ನಿಮ್ಮ ಆಗಮನ ನನಗೂ ಬಹಳ ಖುಷಿ ತಂದಿತು ದಿನಕರ್ ಸಾರ್.. ಆಷ್ಟೆಲ್ಲಾ ಕ್ಯಾಮೆರಾ ಹಿಡ್ಕೊಂಡು ಓಡಾಡುತ್ತಿದ್ದವ ನಾನು.. ನಿಮ್ಮನ್ನು ನೋಡಿದ ಖುಷಿಯಲ್ಲಿ ನಿಮ್ಮ ಫೋಟೋ ತೆರೆಯುವುದೇ ಮರತೆ! ಛೆ!

   Delete
 3. idi karyakramavannu ille torisibittiri..Nice photos...Once again good luck to 3K..

  ReplyDelete
  Replies
  1. Tumba thanks Girish..

   nimma protsahakke naanendu aabhari.

   Delete
 4. ಸತೀಶ್ ರ ನೆನಪುಗಳಿಗೆ ಫೋಟೋಸ್ ಸೆಟ್ಟಿಂಗ್ ಸೂಪರ್ ಪ್ರದೀಪ್......ಮತ್ತೊಮ್ಮೆ ಏನೇನೆಲ್ಲಾ ಮಾಡಿದ್ದೀವಿ ಅಂತ ಮೆಲುಕು ಹಾಕಿದೆ.....ಜೈ ಹೋ ೩ ಕೆ

  ReplyDelete
 5. 3K ತಂಡದ ಕಾರ್ಯ ಶ್ಲಾಘನೀಯ. ಚಂದದ ಚಿತ್ರಗಳೊಂದಿಗೆ ಸುಂದರವಾದ ನಿರೂಪಣೆ! ತಂಡಕ್ಕೆ ಅಭಿನಂದನೆಗಳು.

  ReplyDelete
 6. hi Pradeep....
  mattommo photos nodi... mangalooru kavya sanchaara nenapaaythu....
  sooper!
  Roopa

  ReplyDelete
  Replies
  1. Hi Roopakka,

   Tumba.. tumba.. tumba.. thanks

   Heege barta iri..

   Delete
 7. ಪ್ರದೀಪ್ ಹೇಳಿದ್ರಿ ಸಿಕ್ಕಾಗ ಇದರ ಬಗ್ಗೆ... ಅಭಿನಂದನೆಗಳು ನಿಮ್ಮ ಪ್ರಯತ್ನಗಳು ಹೀಗೇ ಯಶಸ್ವಿಯಾಗಿರಲಿ....

  ReplyDelete
  Replies
  1. ಧನ್ಯವಾದಗಳು ಅಜ಼ಾದಣ್ಣ.. ನಿಮ್ಮ ಹಾರೈಕೆ, ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಬಯಸುತ್ತೇವೆ.

   Delete
 8. 3K ತ೦ಡದವರಿಗೆ ಅಭಿನ೦ದನೆಗಳು.
  ಶುಭವಾಗಲಿ.

  ReplyDelete
  Replies
  1. ಧನ್ಯವಾದಗಳು ಮನಮುಕ್ತಾರವರೇ

   Delete