Sunday, November 28, 2010

ಅಲೆ ಅಲೆ ಅಲೆಯೋ.. ನಡುವೆ ಭಿಕ್ಷುಕಿ ಬಾಲೆಯೋ...ಅವಳ ಹೆಸರು ಲಕ್ಷ್ಮಿ... ಬಹಳ ದಿನಗಳಿಂದ ಯಾರಾದರೂ ಕಡು ಬಡವರಿಗೆ ಸಹಾಯ ಮಾಡಬೇಕೆಂದು ಬಯಸುತ್ತಿದ್ದ ನನಗೆ ಮಿನರ್ವ ಸರ್ಕಲ್‍ನಲ್ಲಿ ಸಿಕ್ಕ ಒಂಟಿ ಕಾಲಿನ ಸುಮಾರು ಹತ್ತು ವರ್ಷದ ಭಿಕ್ಷೆ ಬೇಡುವ ಬಾಲಕಿ.
ನಾನು ಬಾ ಎಂದು ಕೈ ಬೀಸಿ ಕರೆದಾಗ ದುಡ್ಡು ಸಿಗುವುದೆಂಬ ಆಸೆಯಿಂದ ಬಂದ ಅವಳು, ನಾನು ಏನು ಕೆಲಸ ಮಾಡುತ್ತಿರುವೆ? ಎಲ್ಲಿ ವಾಸ? ಎಂದು ವಿಚಾರಿಸಿದಾಗ ನಾನು ಯಾರೋ ಭಿಕ್ಷುಕರನ್ನು ಹಿಡಿದು ಕೊಂಡು ಹೋಗಲು ಬಂದವನಿರಬೇಕೆಂದು ಭಾವಿಸಿ ಸರ ಸರನೇ ಕುಂಟುತ್ತಾ ಹೊರಟು ಹೋಗಲು ಪ್ರಯತ್ನಿಸಿದಳು. ನಾನು ಮತ್ತೆ ಕರೆದು ನೋಟು ತೋರಿಸಿದೆ. ಅವಳು ಮತ್ತೆ ಆಸೆಯಾಗಿ ನಿಂತಳು. ಇನ್ನೆರಡು ಮಾತುಗಳನ್ನು ಆಡಿಸುವಷ್ಟರಲ್ಲಿ ಪುಟ್ಟ ಬಾಲಕಿಯನ್ನು ಬೇಡಲು ಬೀದಿಗೆ ಬಿಟ್ಟು ತಾವು ಆರಾಮಾಗಿ ರಸ್ತೆಯ ಇನ್ನೊಂದು ಬದಿ ಕೂತಿದ್ದ ಅವಳ ತಾಯಿ ಹಾಗು ಅಕ್ಕ ಬಂದರು. ನಾನು ಅವರನ್ನು ಮಾತನಾಡಿಸುತ್ತಿದ್ದೆ. ಆ ಸಮಯದಲ್ಲಿ ಅವರು ಹೆದರಿ ಓಡಿಹೋಗದಿರಲಿ ಎಂದು ಪರ್ಸನ್ನು ಕೈಯಲ್ಲೆ ಹಿಡಿದಿದ್ದೆ. ಆ ದೃಶ್ಯವನ್ನು ಕಂಡು, ಈ ಭಿಕ್ಷುಕರು ನನ್ನ ಪರ್ಸನ್ನು ಕದ್ದಿರಬೇಕೆಂದು ಭಾವಿಸಿ ಸುತ್ತಮುತ್ತಲಿನ ಅಂಗಡಿಯವರು ನೆರೆದರು. ಕೆಲವರು "ಎಷ್ಟು ಸಲ ಓಡಿಸಿದರು ದಿನಾಗ್ಲೂ ಇಲ್ಲೆ ಬರ್ತಾರೆ.. ಹಾಳಾದೋರು" ಎಂದು ಅವರನ್ನು ಗದರಿದರು. "ಕಳ್ಳಮುಂಡೇವು" ಎನ್ನುತ್ತಾ ಕೆಲವರು ಅವರನ್ನು ಹೊಡೆಯಲೇ ಮುಂದಾದರು. ಅವರಿಂದ ಏನೂ ತೊಂದರೆಯಾಗಿಲ್ಲ ಎಂದು ತಿಳಿಸಿ ಅವರನ್ನು ಕಳಿಸುವಷ್ಟರಲ್ಲಿ ಶೂಟಿಂಗ್ ನೋಡುವಂತೆ ಸುತ್ತಲೂ ಜನ ನೆರೆದಿದ್ದರು. ರಸ್ತೆ ಅಪಘಾತವಾಗಿರಬೇಕೇನೋ ಎಂದು ಭಾವಿಸಿ ಟ್ರಾಫಿಕ್ ಪೋಲೀಸ್ ಪೇದೆಯೊಬ್ಬನೂ ಬಂದು ಬಿಟ್ಟಿದ್ದ! ಕೊನೆಗೆ ಅಲ್ಲಿ ಎಲ್ಲರೂ ಸೇರಿ ಏನು ನೋಡುತ್ತಿರುವರೆಂದು ಯಾರಿಗೂ ತಿಳಿಯದಿದ್ದರೂ "ಏನಾಗಿದೆ? ಏನಾಗಿದೆ?" ಎನ್ನುತ್ತಾ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದರು! ಆ ಜನ ಜಂಗುಳಿಯಿಂದ ತಪ್ಪಿಸಿಕೊಂಡು ಹೇಗೋ ನಾನು ಹೊರಗೆ ಬಂದೆ.. ಆ ಬಾಲಕಿಯ ಸಂಸಾರವಿಡೀ ನನ್ನ ಹಿಂದೆಯೇ ಓಡಿ ಬಂದಿತು.. ಕೊನೆಗೆ ರಸ್ತೆಯ ಕೊನೆಗೆ ಕರೆದುಕೊಂಡು ಹೋಗಿ ಅವಳ ಕೈಗೆ ಹಣವಿಟ್ಟಾಗ ಅವಳು ಒಂದು ಕ್ಷಣ ಆ ನೋಟನ್ನು ನೋಡಿ ಕೈ ಚಾಚುವುದನ್ನೇ ಮರೆತಂತೆ ಅನ್ನಿಸಿತು.. ಆ ಹಣ ನಾನೇ ಕೈಗೆ ಇಟ್ಟು.. ಈ ಕುಂಟು ಮಗುವನ್ನು ಇನ್ನೊಮ್ಮೆ ರಸ್ತೆಗೆ ಭಿಕ್ಷೆ ಬೇಡಲು ಬಿಡಬಾರದು ಎಂದು ಅವರ ಬಳಿ ಮಾತು ತೆಗೆದುಕೊಂಡೆ.. ಮನೆಗೆ ಬಂದ ಮೇಲೆ ಇನ್ನು ಆ ಬಾಲಕಿ ಹೇಳಿದ ಮಾತುಗಳು ನೆನಪಾಗುತ್ತಿದ್ದವು.. ಅವಳ ದನಿಯಿರುವ ಈ ಕವಿತೆಯನ್ನು ಬರೆದೆ..

ನನ್ನ ಊರು ಒಂದು ಮಹಾನಗರವಂತೆ!
ಜನ ‘ಮಹಾನ್’ ಅಲ್ಲ, ಆದರೂ ಇದು ಮಹಾನಗರ!
ಕರಾವಳಿಯಲ್ಲ, ಆದರೂ ಇಲ್ಲಿಹುದು ಸಾಗರ, ಜನಸಾಗರ!
ನಾ ನಿಂತಿರುವ ಈ ಟ್ರಾಫಿಕ್ ಸಿಗ್ನಲ್, ಒಂದು ಕಡಲ ತೀರ,
ರಸ್ತೆ ಬದಿಯ ಪಾದಚಾರಿ ಮಾರ್ಗವೇ ಮರಳು ದಂಡೆ,
ಇಲ್ಲಿ ಬಂದು, ಕೆಲವೊಮ್ಮೆ ಕ್ಷಣಮಾತ್ರ ನಿಂತು,
ಕೆಲವೊಮ್ಮೆ ನಿಲ್ಲು ಎಂದರೂ ನಿಲ್ಲದೇ,
ಓಡಿಹೋಗುವ ಲಕ್ಷ-ಲಕ್ಷಾಂತರ ಜನರು..
ಆ ಕಾಲ್ಪನಿಕ ಕಡಲ ಅಲೆಗಳು..

ದಿನವಿಡೀ ಈ ಅಲೆಗಳ ಮನವೊಲಿಸಲು
ನಾ ಮಾಡುವೆ ಭಗೀರಥ ಪ್ರಯತ್ನ..
ನಾ ಎಷ್ಟೇ ಕಾಡಿ, ಬೇಡಿ, ಕಾಲಿಗೇ ಬಿದ್ದರೂ
ಕೆಲವು ಅಲೆಗಳು ತಮ್ಮದೇ ಲೋಕದಲಿ ಮಗ್ನ!
ಅಡ್ಡ ನಿಂತವರ ಕಾಲ ತೊಳೆದು ಹೋಗುವ
ಉದಾರ ಭಾವನೆಯ ಅಲೆಗಳಲ್ಲ ಸ್ವಾಮಿ ಇವು,
ಒಮ್ಮೆ ಅಡ್ಡ ನಿಂತ ಅಪ್ಪನ ಮುಳುಗಿಸಿ,
ಅಲೆಯೊಂದು ನೀಡಿತ್ತು ಸಾವು!
ಮತ್ತೊಮ್ಮೆ ನನ್ನ ರಭಸದಿ ತಳ್ಳಿ, ಒಂಟಿ ಕಾಲ ಕಳೆದುಹೋಯಿತು,
ಮರೆತಿಲ್ಲ ನಾ, ಆ ಸುನಾಮಿ ಅಲೆ ಕೊಟ್ಟ ನೋವು.

ಈಗ ನನ್ನಲ್ಲಿಲ್ಲ ಈ ಕ್ರೂರ ಅಲೆಗಳ
ಎದುರು ನಿಂತು ಕೈ ಚಾಚುವ ಧೈರ್ಯ,
ನನ್ನ ಕಂಡು ಅಸಹ್ಯ ಪಟ್ಟು, ಈ ಅಹಂಕಾರದ ಅಲೆಗಳು,
ದಂಡೆಗೆ ತಂದೆಸೆಯುವ, ಮುರಿದ
ಕಪ್ಪೆ ಚಿಪ್ಪಿನ ಚೂರುಗಳ, ಕಸ ಕಡ್ಡಿಗಳ,
ದೂರದಿಂದಲೇ ಆಯ್ದು, ಕೈ ಮುಗಿವುದೇ ನನ್ನ ಕಾರ್ಯ!

ಇಂದು ಆಗುತ್ತಿದ್ದರೂ ಸಂಜೆಯ ಹೊತ್ತು
ಬೆಳಗಿನಿಂದ ಸಿಗಲಿಲ್ಲ ಒಂದೇ ಒಂದು ತುತ್ತೂ
ಆತುರದಿ ಅಲೆಯೊಂದು ಬಂದು
ಅವಸರದಿ ಹೋಗುವಾಗ, ಏನೋ ಬದಿಗೆ ಬಿತ್ತು,
ಏನೆಂದು ನೋಡಿದೆ..
ಮರಳ ದಂಡೆಯ ಮೇಲೆ, ಒಂದು ಅಮೂಲ್ಯ ಮುತ್ತು!photo courtesy: http://image.shutterstock.com

4 comments:

 1. nice poem deep....heloke padagalu sigtilla...paapa lakshmi.. :(

  ReplyDelete
 2. ಪ್ರದೀಪ್ ತುಂಬಾ...ಚೆನ್ನಾಗಿದೆ,,,,,ಮನ ಕಲಕುವ ಸಂದರ್ಬದ ವರ್ಣನೆ ,,,ಅದ್ಭುತ

  ReplyDelete
 3. thumba chennagide.
  aa balakiyu kooda heege yavattu nenasiralikkilla.
  nimma kalpane chennagide.
  karavalige comparision chennagide.

  ReplyDelete
 4. Thanks Sourabha, Sathya & Shamili

  ReplyDelete