Saturday, November 27, 2010

ಪುಟ್ಟ ದೀಪದ ದೀಪಾವಳಿ ನೆನಪು




ಒಂದು ಪುಟ್ಟ ದೀಪದ ದೀಪಾವಳಿಯ ನೆನಪುಗಳು..

ಸಡಗರ! ಸಂಭ್ರಮ! ಎಲ್ಲರ ಈ ಹರುಷ
ನೆನಪಿಸುತಿದೆ ನನ್ನ, ಬಾಳಿಗೆ ಹೊಸ ಬೆಳಕ ತಂದ
ಆ ದಿವ್ಯ ದೀಪಾವಳಿಯ ವರ್ಷ

ಅದು ಸಂಜೆಯ ಹೊತ್ತು,
ಸುತ್ತ ದೀಪಗಳ ಬೆಳಕು ಪ್ರಜ್ವಲಿಸುತ್ತಿತ್ತು,
ಕಂಗಳು ಕಾತುರದಿ ಯಾರಿಗೋ ಕಾದಿತ್ತು,
ಬಂದಳವಳು ಹೊರಗೆ, ಪುಟ್ಟ ದೀಪವ ಹೊತ್ತು




ಹೊತ್ತು ಹೊಳೆವ ದೀವಿಗೆ,
ಬಂದಳವಳು ಬೀದಿಗೆ,
ಬೀದಿಯ ತುಂಬಾ ಬೆಳಕು!
ಬೆಳಕಿಗೆ ಕಾರಣ..
ಅವಳು ಹಿಡಿದ ಜ್ಯೋತಿಯೋ?
ಅವಳ ಮುಖದ ಕಾಂತಿಯೋ?
ಬೆಳಕು ಎಂಬುದೇ ನನ್ನ ಭ್ರಾಂತಿಯೋ?
ಅಂದು ತಿಳಿಯಲಿಲ್ಲ...
ಇಂದಿಗೂ ತಿಳಿದಿಲ್ಲ..

ತನ್ನ ಮನೆಯ ಅವಳು ಬೆಳಗಿಸಿಕೊಂಡಳು
ಸುತ್ತ ಹಲವು ದೀಪಗಳ ಇಟ್ಟು,
ಅವಳ ನೆನಪುಗಳಲ್ಲೆ ನನ್ನ ನಾ ಮುಳುಗಿಸಿಕೊಂಡೆ
ಮನದಲ್ಲಾಗಲು ಪ್ರೇಮವೆಂಬ ಪಾಪದ ಹುಟ್ಟು



ತನ್ನ ಮನೆಯ ಸುತ್ತ ಹಾಕುತ್ತಲೇ ಅವಳು ರಂಗೋಲಿ
ನನ್ನ ಮನದ ಸುತ್ತ ಹಾಕಿದ್ದಳು ಪ್ರೀತಿಯ ಬೇಲಿ
ಸುತ್ತಲೂ ಉರಿವ ದೀಪಗಳ ಮೆರಗು,
ನನ್ನನೇ ಉರಿಸುತ್ತಿತ್ತು ಎದೆಯಲ್ಲೊಂದು ಕೊರಗು.

ಅವಳ ನೆನಪುಗಳಲ್ಲೇ ಉರಿದೆ,
ಹಗಲಿರುಳು ಉರಿಯುತಲಿ..
ಅವಳು ಕೈಯಾರೆ ಬೆಳಗಿದ ದೀಪವಾದೆ..

ಮೊದಲ ಬಾರಿಗೆ ಈ ದೀಪವ ಬೆಳಗಿ,
ಬಾಳಿಗೆ ಹೊಸ ಬೆಳಕ ತಂದ ಆ ದೀಪಾವಳಿ,
ಮುಗಿದ ಮರು ದಿನವೇ ಪ್ರಳಯಾಂತಕ ಬಿರುಗಾಳಿ!



ಗಾಳಿಯ ಸೆಳೆತಕ್ಕೆ ಸಿಕ್ಕಿ
ಆರಿಹೋಯಿತು ಈ ಆಸೆಗಳ ಜ್ಯೋತಿ,
ಸುಟ್ಟು ಕಪ್ಪಾಯಿತು ಈ ಜೀವದ ಬತ್ತಿ,
ಜೀವನವೆಲ್ಲಾ ಹೊಗೆಯಾಡಿತು, ಹಗೆಯಾಯಿತು,
ಶಾಂತವಾಯಿತು ಕೊನೆಗೆ ಈ ಪ್ರೇಮದ ದೀಪ
ಇನ್ನೂ ಕಾದು ಕುಳಿತಿದೆ ಇಂದು... ಪಾಪ!
ಮರಳಿ ಬರಬಹುದೆಂದು..
ಬಂದು ಮತ್ತೊಮ್ಮೆ ತನ್ನ ಬೆಳಗಬಹುದೆಂದು..
ಅಂತಹುದೇ ಮತ್ತೊಂದು ದೀಪಾವಳಿ!


.....ಆ ದೀಪಾವಳಿಯ ನಿರೀಕ್ಷೆಯಲ್ಲಿರುವ ದೀಪ

.....ಪ್ರ‘ದೀಪ’


11 comments:

  1. ತುಂಬಾ ಧನ್ಯವಾದಗಳು ಸೀತಾರಾಮವ್ರೇ.. ನಿಮ್ಮ ಅನಿಸಿಕೆ ಏನೆಂದು ಇನ್ನು ಸ್ವಲ್ಪ ವಿವರವಾಗಿ ತಿಳಿಸಿದ್ದರೆ ಚೆನ್ನಾಗಿರುತಿತ್ತು.

    ReplyDelete
  2. ಕವನವನ್ನು ಚೆನ್ನಾಗಿ ಬರೆದಿದ್ದೀರಿ...
    ಓದುತ್ತಾ ಓದುತ್ತಾ ಕೊನೆಯಲ್ಲಿ ಮನಸ್ಸು ಭಾರವಾಯಿತು..
    ಬದುಕಲ್ಲಿ ಸದಾ ಬೆಳಕು ಬೆಳಗುತ್ತಿರಲಿ... ಶುಭವಾಗಲಿ.

    ReplyDelete
  3. hai sir,,,mattomme nimma baalalli aa belaku aavarisikollali,,,,kavite tumba chennagide

    ReplyDelete
    Replies
    1. ಕವನ ಚೆನ್ನಾಗಿ ಮೂಡಿಬಂದೆ

      Delete
  4. ದೀಪಾವಳಿಯ ಸಂದರ್ಭದಲ್ಲಿ ಸುಡುವುದು, ಕಪ್ಪಿಡುವುದು ಇದೆಲ್ಲಾ ಇದ್ದರೂ ಅದನ್ನು ಬರೆಯುವುದು ವಿಹಿತವಲ್ಲ, ಹಿಂದೆ ಇವೆಲ್ಲಾ ಇರಲಿಲ್ಲ, ಪ್ರೇಮಕ್ಕೋ-ಕಾಮಕ್ಕೋ ಕಲ್ಪನೆಗೋ ಕಾಲವನ್ನು ನೋಡಿ ಬರೆದರೆ ಅದು ಸೂಕ್ತ, ನಿಮ್ಮಿಂದ ಉತ್ತಮ ಕವನಗಳು ಬರಲಿ, ಹಾರ್ದಿಕ ಶುಭಾಶಯಗಳು

    ReplyDelete
  5. ತುಂಬಾ ಧನ್ಯವಾದಗಳು ಮನಮುಕ್ತರವರೇ.. ನಿಮಗೂ ಕೂಡ ಶುಭವಾಗಲಿ.

    ReplyDelete
  6. ತುಂಬಾ ಧನ್ಯವಾದಗಳು ಸತ್ಯರವರೇ.. ನನ್ನ ಈ ಕವನ ನನ್ನ ಹಾಗು ನನ್ನ ಸುತ್ತಮುತ್ತಲಿನ ಜನರ ನಿಜ ಜೀವನದ ಕೆಲವು ಸನ್ನಿವೇಷಗಳು ಹಾಗು ಇನ್ನು ಹೆಚ್ಚಿನ ಪ್ರಮಾಣದಲ್ಲಿ ನನ್ನ ಕಲ್ಪನೆಯಿಂದ ಕೂಡಿದೆ.. ಆದ್ದರಿಂದಾಗಿ ಕವನದಲ್ಲಿ ಕತ್ತಲಾಯಿತು.. ದೀಪ ಆರಿಹೋಯಿತು ಎಂದ ಮಾತ್ರಕ್ಕೆ ನನ್ನ ಬಾಳಲ್ಲಿ ಆ ಕೊರತೆಯಿದೆ ಎಂದು ಭಾವಿಸದಿರಿ.. ಕವನ ಭಾವನಾತ್ಮಕವಾಗಿರಲಿ ಎಂದು ಅಂಥ ಸಾಲುಗಳನ್ನು ಬಳಸಿಕೊಂಡಿರುವೆ.. ನಿಮ್ಮೆಲ್ಲರ ಹಾರೈಕೆಗಳಿಂದಾಗಿ ನನ್ನ ಬಾಳಲ್ಲಿ ಸದಾ ಕಾಲ ಬೆಳಕು ಇದ್ದೆ ಇರುತ್ತದೆ. ತುಂಬಾ ಧನ್ಯವಾದಗಳು!

    ReplyDelete
  7. ತುಂಬಾ ಧನ್ಯವಾದಗಳು ವಿ.ಆರ್.ಭಟ್‍ರವರಿಗೆ.. ನಿಮ್ಮ ಅಪರೂಪದ ಕಾಮೆಂಟನ್ನು ಕೇಳಿ ಸಂತಸವಾಯಿತು.. ಕವನದ ವಿಷಯವಾದ ಪವಿತ್ರ ದೀಪಾವಳಿ ಹಬ್ಬಕ್ಕೂ ಪ್ರೇಮಕ್ಕೂ ಸಂಬಂಧ ಹೆಣೆದಿರುವುದಕ್ಕೆ ಕ್ಷಮಿಸಬೇಕು.. ಕವನದಲ್ಲಿ ಆ ಲೋಪವಾಗಿದೆ ಎಂಬುದು ನಿಜವಿರಬಹುದು.. ಪ್ರೇಮಕವಿ ಎಂದು ಎನಿಸಿಕೊಂಡ ನನಗೆ ಎಲ್ಲಾ ಸುಂದರ ವಿಷಯಗಳನ್ನು ಪ್ರೇಮದ ದೃಷ್ಟಿಯಿಂದ ನೋಡಿ ಅಭ್ಯಾಸ.. ನಾನು ಪ್ರೇಮವನ್ನು ಸಹ ಪವಿತ್ರ ದೃಷ್ಟಿಯಿಂದ ನೋಡುತ್ತೇನೆ.. ಆದ್ದರಿಂದ ಈ ರೀತಿ ‘ಲೋಪ’ ಆಗಿರಬಹುದು ಎಂದುಕೊಳ್ಳುತ್ತೇನೆ. ಪ್ರೇಮಕ್ಕೂ-ಕಾಮಕ್ಕೂ ಸಮಯವನ್ನು ನೋಡಿ ಬರೆಯಬೇಕು ಎಂಬ ನಿಮ್ಮ ಸಲಹೆಯನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ. ಈ ರೀತಿ ಒಳ್ಳೆಯ ವಿಷಯ ತಿಳಿಸಿದಿರಿ. ತುಂಬಾ ಧನ್ಯವಾದಗಳು. ನಿಮ್ಮ ಕಾಮೆಂಟುಗಳು ಹೀಗೆ ಬರುತ್ತಿರಲಿ ಎಂದು ಆಶಿಸುವೆ..

    ReplyDelete