Sunday, November 28, 2010

3K ಸಂಭ್ರಮ - ಕವಿಗಳ ಸಂಗಮ!

ಆರ್ಕೂಟ್ ನ ಪ್ರಸಿದ್ದ ಕಮ್ಯುನಿಟಿ ಆದ 3K - Kannada Kavite Kavana ದ ಸದಸ್ಯರು ಮೊದಲ ಬಾರಿಗೆ ಅಂತರ್ಜಾಲದಿಂದ ಹೊರಬಂದು ಎಲ್ಲರು ಒಂದು ಕಡೆ ಸೇರಿ, ಕಮ್ಯುನಿಟಿ ಜನ್ಮ ಪಡೆದ ಸದುದ್ದೇಶ ಯಶಸ್ವಿಯಾಗಿ ಹಲವಾರು ಮೈಲಿಗಲ್ಲುಗಳನ್ನೂ ಸಾಧಿಸಿದುದಕ್ಕೆ ಸಂಭ್ರಮಿಸಿದರು. ತಮ್ಮ ಸಂಘದ ಮುಂದಿನ ಗುರಿಗಳ ಬಗ್ಗೆಯೂ ಮಾತುಕತೆ ನಡೆಯಿತು. ಅತಿ ಶೀಘ್ರದಲ್ಲಿ ಕಮ್ಯುನಿಟಿಯಲ್ಲಿರುವ ಕವಿಗಳ ಶ್ರೇಷ್ಠ ಕವನಗಳನ್ನು ಒಂದು ಕವನ ಸಂಕಲನ ರೀತಿಯಲ್ಲಿ ಹೊರ ತರುವತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ.

3K ಕಮ್ಯುನಿಟಿ ಮೈಲಿಗಲ್ಲುಗಳು
- 200 ಸಧಸ್ಯರ ಗಡಿ ದಾಟಿದುದು
- ಪ್ರಬುದ್ಧ ಕವಿಗಳಿಂದ ಕೂಡಿರುವ ಹೆಗ್ಗಳಿಕೆ
- 700ಕ್ಕೂ ಹೆಚ್ಚು ಕವನಗಳ ಮಹಾಪೂರ
- ಪ್ರತಿಯೊಬ್ಬ ಕವಿಯನ್ನು ಆತ್ಮಿಯತೆಯಿಂದ ಕಾಣುವ ಹಾಗು ಪೋಷಿಸುವ ಆಶಯ
- ಆರ್ಕೂಟ್ ನಲ್ಲಿ ಅತ್ಯಂತ ಹೆಚ್ಚಿಗೆ ಚಟುವಟಿಕೆಯಿರುವ ಕಮ್ಯುನಿಟಿ ಗಳಲ್ಲಿ ಒಂದು


Community link: http://www.orkut.co.in/Main#Community?cmm=53031642

Owner: Roopa Krishnamurthy (ಬಾಳೊಂದು ಭಾವಗೀತೆ)

Moderatoars: Quicky Arun, Anitha Naresh & Ashok V Shetty





Round table conference! - ಎಡದಿಂದ ಬಲಕ್ಕೆ - ಅರುಣ್ (Quicky), ಪ್ರದೀಪ್ ರಾವ್ (ನಾನು), ನವೀನ್ ಕೆ. , ಅನುಪಮ ಹೆಗ್ಡೆ , ರೂಪ ಸತೀಶ್ (ಅಧ್ಯಕ್ಷರು), ಅಶೋಕ್ ವಿ. ಶೆಟ್ಟಿ, JVM, ಮಹೇಶ್ ಮೂರ್ತಿ, ಪ್ರಮೋದ್ ಎಸ್. ಗೌಡ, ಅರುಣ್ ಕುಮಾರ್, ಸಂದೀಪ್.
***************************************************************************

28th ನವೆಂಬರ್ 2010, ಮಲ್ಲೇಶ್ವರಂನ ಸಾಯಿ ಬಾಬಾ ಮಂದಿರದ ಎದುರಿಗಿರುವ Coffee Day, 3K ಕಮ್ಯುನಿಟಿಯವರಿಗೆ ಒಂದು ಅಪೂರ್ವ ಸಂಧರ್ಭ, ಸ್ಮರಣೀಯ ದಿನ!
ಅಂದು ಮುಂಬೈಯಿಂದ ಬಂದ ಅಶೋಕ್ ರವರೂ ಮತ್ತು ಮಂಗಳೂರಿಂದ ಬಂದ ಮಹೇಶ್ ಮೂರ್ತಿಯವರು 10:45 AM ಗೆ ಸ್ಥಳದಲ್ಲಿ ಹಾಜರಿದ್ದರು. 10:55 ಕ್ಕೆ ನಾನು ಬಂದು ಸುತ್ತ ಮುತ್ತ ನೋಡಿದೆ.. ಬ್ಲಾಗಿನಲ್ಲಿ ಅಶೋಕ್ ರವರನ್ನು ನೋಡಿದ್ದರಿಂದ ಎದುರಿಗೆ ನಿಂತಿದ್ದ ಅಶೋಕ್ ರವರನ್ನು ಗುರುತು ಹಿಡಿದೆ. ನಾನೇ ಹೋಗಿ ಪರಿಚಯ ಮಾಡಿಕೊಂಡೆ. ಸ್ವಲ್ಪ ಹೊತ್ತಿನಲ್ಲೇ ಅರುಣ್ ಕುಮಾರ್ ಆಗಮಿಸಿದರು. ಅವರೊಡನೆ ಮಾತನಾಡಿದಾಗ ನಾವಿಬ್ಬರು ಒಂದೇ ವೃತ್ತಿಯಲ್ಲಿರುವವರು ಎಂದು ತಿಳಿದು ಸಂತಸವಾಯಿತು. ಐದನೆಯವರಾಗಿ ನಮ್ಮ ಅಧ್ಯಕ್ಷರಾದ ರೂಪ ಆಗಮಿಸಿದರು. ಈ ಸಂಧರ್ಭಕ್ಕೆಂದೇ ಬೇರೆ ಊರಿಂದ ಬಂದವರನ್ನು ಕಂಡು ಅವರಿಗೆ ತುಂಬಾ ಆಶ್ಚರ್ಯದೊಂದಿಗೆ ಸಂತೋಷವಾಯಿತು.. ಆರನೆಯವರಾಗಿ JVM ಆಗಮಿಸಿದರು. ಏಳನೇ ಹಾಗು ಎಂಟನೇಯವರಾಗಿ ಬಳ್ಳಾರಿಯ ನವೀನ್ ಹಾಗು ಅರುಣ್ ಆಗಮಿಸಿದರು. ಒಬ್ಬತ್ತನೆಯವರು ಪ್ರಮೋದ್ ಎಸ್. ಗೌಡ.. ಸಾಂಪ್ರದಾಯಕ ಕವಿಯ ಧಿರಿಸಿನಲ್ಲಿ ಕಾಣಿಸಿಕೊಂಡ ಅವರು ತಮ್ಮದೇ ಖರ್ಚಿನಲ್ಲಿ ನಮ್ಮೆಲ್ಲರ ಕವನಗಳ print out ತಂದಿದ್ದರು. ಹತ್ತನೆಯವರು ಅನುಪಮ ಹೆಗಡೆಯವರು.. ಹನ್ನೊಂದನೆಯವರು ನಮ್ಮ ಸಂದೀಪ್ ರವರು.. late ಆಗಿ ಬಂದರೂ latest ಆಗಿ ಎಲ್ಲರಿಗೂ Mohabbattein ಚಿತ್ರದ ಶಾರುಖ್ ಖಾನ್ ಥರ Entry scene ನಲ್ಲೆ ಗುಲಾಬಿ ಹಂಚಿದರು.
ಎಲ್ಲರು ತಮ್ಮ ತಮ್ಮ ಪರಿಚಯಗಳನ್ನು ಮಾಡಿಕೊಂಡರು. ಮಹೇಶ್ ಮೂರ್ತಿಯವರ ಮಾತುಗಳು ಎಲ್ಲರ ಗಮನ ಸೆಳೆಯಿತು.. JVM ರವರು ವೈರಾಗ್ಯ ಕವಿ ಎಂಬಾ ಬಿರುದು ಪಡೆದರು. ತುಂಬಾ ಚೆನ್ನಾಗಿ ತಿಂಡಿ ತೀರ್ಥಗಳು ನಡೆದವು. ಅರುಣ್ ಹಾಗು ಅಶೋಕ್ ಕಮ್ಯುನಿಟಿಯ ನೂತನ Moderator ಗಳಾಗಿ ಅವಿರೋಧವಾಗಿ ಆಯ್ಕೆಯಾದರು. ಮಹೇಶ್ ಮೂರ್ತಿಯವರು ಕವನ ಸಂಕಲನಕ್ಕೆ ಸೂಕ್ತ ಪ್ರಕಾಶಕರನ್ನು ಹುಡುಕುವ ಜವಾಬ್ದಾರಿವಹಿಸಿಕೊಂಡರು. ಪ್ರಮೋದ್ ರವರು ಎಲ್ಲರ ಕವನಗಳನ್ನು ಕವಿ ಮಂಜುನಾಥ್ ರವರಿಂದ ಸಂಕಲನಕ್ಕೆ ಆಯ್ಕೆ ಮಾಡಿಸುವ ಜವಾಬ್ದಾರಿ ಹೊತ್ತುಕೊಂಡರು. ನಾವೆಲ್ಲರೂ ಸೇರಿದ್ದು ಒಳ್ಳೆ ಎಂದೋ ಬೇರಾದ ಕಾಲೇಜಿನ ಗೆಳೆಯರನ್ನು ಮತ್ತೆ ಭೇಟಿಯಾದಷ್ಟು ಖುಷಿಯಾಯಿತು. ಕೊನೆಗೊಂದು ಫೋಟೋ session ನಡೆಸಿ ನಾವೆಲ್ಲಾ ನಮ್ಮ ನಮ್ಮ ದಾರಿ ಹಿಡಿದೆವು.
ಅನುಪಮರವರು ನಮ್ಮ ಕಮ್ಯುನಿಟಿಗೆ ಒಂದು ಹೊಸ Logo ಬೇಕೆಂದು ನುಡಿದರು. ನಾನು ಅದರ ಬಗ್ಗೆ ಈ ಹಿಂದೆಯೇ ಯೋಚಿಸಿ ಒಂದು ಉಪಾಯ ಮಾಡಿದ್ದೆನಾದ್ದರಿಂದ "ನನ್ನ ಬಳಿ ಒಂದು ಡಿಸೈನ್ ರೆಡಿ ಇದೆ" ಎಂದು ನುಡಿದ್ದಿದ್ದೆ ತಡ.. ರೂಪಕ್ಕ ಹೊಸ Logo ಜವಾಬ್ದಾರಿಯನ್ನು ನನಗೆ ವಹಿಸಿಬಿಟ್ಟರು. ಈಗ ನಮ್ಮ ಹೊಸ ಕವನ ಸಂಕಲನದ ಮುಖಪುಟಕ್ಕೆ ಅದೇ Logo ಬರಬೇಕೆಂದು ಅನುಪಮರವರು ನುಡಿದರು.. ನೋಡೋಣ ನಾ ಗೀಚಿದ Logo ಯಾರಿಗಾದರು ಹಿಡಿಸುವುದೋ ಎಂದು..

******************************************************************************

ಅಶೋಕ್ ರವರ 15 ವರ್ಷಗಳ ಸಾಧನೆಗೆ ಎಲ್ಲರಿಂದ ಜೋರು ಚಪ್ಪಾಳೆಗಳು ಬಿದ್ದವು... ನಿಜಕ್ಕೂ ಹೆಮ್ಮೆಯ ವಿಷಯ ಎನ್ನಿಸಿತು... Actually ನಾನು ಅಂತ ಸಾಧನೆಗೆ ಕೈ ಹಾಕಿದ್ದೆ ಸಿವಾ... ಆದ್ರೆ ಏನು ಮಾಡೋದು ಒಂದೇ ವರ್ಷಕ್ಕೆ ಕಂಪನಿಯವರೇ ಬೇಡ ಎಂದು ಬಿಡೋದ..??!! (ಕ್ಸಮೆ ಇರ್ಲಿ ಸಿವಾ... ನನ್ನ ಬಗ್ಗೆ ನಾ ಹೇಳೋದೆಲ್ಲ ತಮಾಷೆಗಾಗಿ..)
***************************************************************************


JVM ರವರ ಮಾತು ಗಮನ ಸೆಳೆಯಿತು.. ರೂಪಕ್ಕ ಒಳ್ಳೆ obedient student ಥರ ಕೇಳುತ್ತಿದ್ದಾರೆ!
***************************************************************************


ಬಹಳ ಒತ್ತಾಯದ ನಂತರ ನವೀನ್ ಗೌಡರವರು ಮಾತನಾಡಲು ಒಪ್ಪಿಕೊಂಡರು... ರೂಪಕ್ಕ ಮತ್ತೆ obedient student!
***************************************************************************


ಬಂಡಲ್ ಬಡಾಯೀ ಮಾದೇವಾ... ಬಿಡುವನೋ ಕಂಬಿ ಇಲ್ಲದ ರೈಲು ವಾರೇ ವಾಹ್!!!
ಹೌದು ಸಿವ... ನಮಂತೋರ್ಗು ಅಲ್ಲಿ ಮಾತಡ್ಲಿಕೆ ಅವಕಾಸ ಸಿಕ್ತು ಸಿವಾ....!!!
***************************************************************************


ಪ್ರಮೋದ್ ರವರು "ಇವರೆಲ್ಲಾ ಬಹಳ ಕೊರಿತವ್ರೆ.. ತಲೆ ನೋವು ಬರೋಕೆ ಮುಂಚೆ ಒಂದು strong coffee order ಮಾಡಿ ಬಿಡೋಣ ಎಂದುಕೊಳ್ಳುತಿರೋ ಹಾಗಿದೆ...!!"
***************************************************************************


ಮಹೇಶ್ ರವರು king size coffee order ಮಾಡುತ್ತಿರೋಹಾಗಿದೆ!!
***************************************************************************


ಎಲ್ಲರಿಗೂ ಗುಲಾಬಿ ಹಂಚುತ್ತಿರುವ ನಮ್ಮ ಕಮ್ಯುನಿಟಿಯ 'ಶಾರುಕ್ ಖಾನ್' - ಸಂದೀಪ್
***************************************************************************


ಕ್ಯಾಮೆರಾ ಎದುರು ಬಂದಾಗ ಮಾತ್ರ chocolate ತಿನ್ನುವುದು ನಿಲ್ಲಿಸುತ್ತಿದ್ದ ಮಹೇಶ್ ರವರು ಈ ಸಲವೂ ತಪ್ಪಿಸಿಕೊಂಡೆ ಎಂದು ನಗೆ ಬೀರುತ್ತಿದ್ದಾರೆ.. ಆದರೆ ಫೋಟೋದಲ್ಲಿ ಅರ್ಧ chocolate cover ಆಗಿದೆ ಎಂದು ಈಗ ತಿಳಿದಿರಬಹುದು!
***************************************************************************


ತಿಂಡಿ ತೀರ್ಥಗಳಿಗೀನು ಕಮ್ಮಿ ಇರಲಿಲ್ಲ.. cold coffee, ice tea, 2-3 ಥರದ pastry, samosa, chocolates ಇತ್ಯಾದಿ..
***********************************************************************************


ಪ್ರಮೋದ್ ರವರು ಕಷ್ಟಪಟ್ಟು ಎಲ್ಲರ ಕವನಗಳನ್ನು ಸ್ವಂತ ಖರ್ಚಿನಲ್ಲಿ print out ತೆಗೆದುಕೊಂಡು ಬಂದಿದ್ದರು. Full love feeling ನಲ್ಲಿ ಬರೆದಿದ್ದ ನನ್ನ "ಸ್ನೇಹನಾ? ಪ್ರೀತಿನಾ?" ಕವನ ಗುಲಾಬಿಯೊಂದನ್ನು ತನ್ನೆಡೆಗೆ ಸೆಳೆದುಕೊಂಡಿತ್ತು...
***********************************************************************************


ಕೊನೆಗೆ ಬಿಲ್ ಬಂದಾಗ ಅರುಣ್ ಕುಮಾರ್ ಅವರು ಕೂತ ಕುರ್ಚಿಯಿಂದ ಇನ್ನೇನು ಬೀಳುವ ಹಾಗಿದ್ದರು..!! ಪ್ರಮೋದ್ ರವರಿಗೂ shock ಆಗಿರೋ ಹಾಗಿದೆ...!!!
*********************************************************************



ಅನುಪಮರವರು ಬಂದಿದ್ದು ರೂಪಕ್ಕಗೆ ಒಳ್ಳೆ ಕಂಪನಿ ಸಿಕ್ಕ ಹಾಗಾಯ್ತು. ಹೋಗಬೇಕಾದರಂತು ಸಂತೋಷದಲ್ಲಿ ಇಬ್ಬರು ತಬ್ಬಿಕೊಂಡು ಬೀಳ್ಕೊಟ್ಟರು!
***************************************************************

My Blueprint for the proposed new logo for 3K

** Please click on the image for a larger view **

ಗೆಳೆಯರೇ ಈ "Rough diagram" ಚಿತ್ರ 3K Logo ಆಗಲು ಅರ್ಹವೇ ತಿಳಿಸಿ.. ಇದು ಕೇವಲ "Skeleton Diagram" ಮಾತ್ರ ಇದು ಎಲ್ಲರಿಗೂ ಒಪ್ಪಿಗೆಯಾದಲ್ಲಿ ಇನ್ನಷ್ಟು ಆಕರ್ಷಕ ರೀತಿಯಲ್ಲಿ ಇದನ್ನು ಮಾರ್ಪಾಡು ಪಡಿಸಿ ಸುಂದರ ಬಣ್ಣಗಳನ್ನು ತುಂಬಿ ಪ್ರಸ್ತುತಪಡಿಸುತ್ತೇನೆ.
ಚಿತ್ರದ ಮಧ್ಯದಲ್ಲಿರುವ ಚಿಟ್ಟೆಯ ಎಡ ಭಾಗದ ರೆಕ್ಕ್ಕೆಯ ಮೇಲೆ "3" ಮತ್ತು ಬಲಭಾಗದ ರೆಕ್ಕೆಯ ಮೇಲೆ "ಕೆ" ಎಂಬ ಅಕ್ಷರಗಳು ನಿಮಗೆ ಗೋಚರಿಸಬಹುದು... ನಿಮ್ಮ ಕಣ್ಣುಗಳಿಗೆ ಇನ್ನು ಸ್ವಲ್ಪ ತ್ರಾಸ ಕೊಟ್ಟರೆ ಚಿಟ್ಟೆಯ ರೆಕ್ಕೆಗಳ ಮೇಲೆ 3K ಸಂಭ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರ ಕನ್ನಡ ಹೆಸರಿನ ಮೊದಲನೆಯ ಅಕ್ಷರಗಳು ಗೋಚರಿಸಬಹುದು! (ಸ್ವಲ್ಪ ಅಕ್ಷರಗಳ ರೂಪ ಡಿಸೈನ್ಗೆ ತಕ್ಕಂತೆ ಬದಲಾಗಿದೆ. ಅಡ್ಜಸ್ಟ್ ಮಾಡ್ಕೊಳ್ಳಿ!)

ಧನ್ಯವಾದಗಳು.. ಶುಭವಾಗಲಿ.. ಜೈ ಕರ್ನಾಟಕ ಮಾತೆ!
###############೮೮೮೮೮೮೮೮೮###############

ಅಲೆ ಅಲೆ ಅಲೆಯೋ.. ನಡುವೆ ಭಿಕ್ಷುಕಿ ಬಾಲೆಯೋ...



ಅವಳ ಹೆಸರು ಲಕ್ಷ್ಮಿ... ಬಹಳ ದಿನಗಳಿಂದ ಯಾರಾದರೂ ಕಡು ಬಡವರಿಗೆ ಸಹಾಯ ಮಾಡಬೇಕೆಂದು ಬಯಸುತ್ತಿದ್ದ ನನಗೆ ಮಿನರ್ವ ಸರ್ಕಲ್‍ನಲ್ಲಿ ಸಿಕ್ಕ ಒಂಟಿ ಕಾಲಿನ ಸುಮಾರು ಹತ್ತು ವರ್ಷದ ಭಿಕ್ಷೆ ಬೇಡುವ ಬಾಲಕಿ.
ನಾನು ಬಾ ಎಂದು ಕೈ ಬೀಸಿ ಕರೆದಾಗ ದುಡ್ಡು ಸಿಗುವುದೆಂಬ ಆಸೆಯಿಂದ ಬಂದ ಅವಳು, ನಾನು ಏನು ಕೆಲಸ ಮಾಡುತ್ತಿರುವೆ? ಎಲ್ಲಿ ವಾಸ? ಎಂದು ವಿಚಾರಿಸಿದಾಗ ನಾನು ಯಾರೋ ಭಿಕ್ಷುಕರನ್ನು ಹಿಡಿದು ಕೊಂಡು ಹೋಗಲು ಬಂದವನಿರಬೇಕೆಂದು ಭಾವಿಸಿ ಸರ ಸರನೇ ಕುಂಟುತ್ತಾ ಹೊರಟು ಹೋಗಲು ಪ್ರಯತ್ನಿಸಿದಳು. ನಾನು ಮತ್ತೆ ಕರೆದು ನೋಟು ತೋರಿಸಿದೆ. ಅವಳು ಮತ್ತೆ ಆಸೆಯಾಗಿ ನಿಂತಳು. ಇನ್ನೆರಡು ಮಾತುಗಳನ್ನು ಆಡಿಸುವಷ್ಟರಲ್ಲಿ ಪುಟ್ಟ ಬಾಲಕಿಯನ್ನು ಬೇಡಲು ಬೀದಿಗೆ ಬಿಟ್ಟು ತಾವು ಆರಾಮಾಗಿ ರಸ್ತೆಯ ಇನ್ನೊಂದು ಬದಿ ಕೂತಿದ್ದ ಅವಳ ತಾಯಿ ಹಾಗು ಅಕ್ಕ ಬಂದರು. ನಾನು ಅವರನ್ನು ಮಾತನಾಡಿಸುತ್ತಿದ್ದೆ. ಆ ಸಮಯದಲ್ಲಿ ಅವರು ಹೆದರಿ ಓಡಿಹೋಗದಿರಲಿ ಎಂದು ಪರ್ಸನ್ನು ಕೈಯಲ್ಲೆ ಹಿಡಿದಿದ್ದೆ. ಆ ದೃಶ್ಯವನ್ನು ಕಂಡು, ಈ ಭಿಕ್ಷುಕರು ನನ್ನ ಪರ್ಸನ್ನು ಕದ್ದಿರಬೇಕೆಂದು ಭಾವಿಸಿ ಸುತ್ತಮುತ್ತಲಿನ ಅಂಗಡಿಯವರು ನೆರೆದರು. ಕೆಲವರು "ಎಷ್ಟು ಸಲ ಓಡಿಸಿದರು ದಿನಾಗ್ಲೂ ಇಲ್ಲೆ ಬರ್ತಾರೆ.. ಹಾಳಾದೋರು" ಎಂದು ಅವರನ್ನು ಗದರಿದರು. "ಕಳ್ಳಮುಂಡೇವು" ಎನ್ನುತ್ತಾ ಕೆಲವರು ಅವರನ್ನು ಹೊಡೆಯಲೇ ಮುಂದಾದರು. ಅವರಿಂದ ಏನೂ ತೊಂದರೆಯಾಗಿಲ್ಲ ಎಂದು ತಿಳಿಸಿ ಅವರನ್ನು ಕಳಿಸುವಷ್ಟರಲ್ಲಿ ಶೂಟಿಂಗ್ ನೋಡುವಂತೆ ಸುತ್ತಲೂ ಜನ ನೆರೆದಿದ್ದರು. ರಸ್ತೆ ಅಪಘಾತವಾಗಿರಬೇಕೇನೋ ಎಂದು ಭಾವಿಸಿ ಟ್ರಾಫಿಕ್ ಪೋಲೀಸ್ ಪೇದೆಯೊಬ್ಬನೂ ಬಂದು ಬಿಟ್ಟಿದ್ದ! ಕೊನೆಗೆ ಅಲ್ಲಿ ಎಲ್ಲರೂ ಸೇರಿ ಏನು ನೋಡುತ್ತಿರುವರೆಂದು ಯಾರಿಗೂ ತಿಳಿಯದಿದ್ದರೂ "ಏನಾಗಿದೆ? ಏನಾಗಿದೆ?" ಎನ್ನುತ್ತಾ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದರು! ಆ ಜನ ಜಂಗುಳಿಯಿಂದ ತಪ್ಪಿಸಿಕೊಂಡು ಹೇಗೋ ನಾನು ಹೊರಗೆ ಬಂದೆ.. ಆ ಬಾಲಕಿಯ ಸಂಸಾರವಿಡೀ ನನ್ನ ಹಿಂದೆಯೇ ಓಡಿ ಬಂದಿತು.. ಕೊನೆಗೆ ರಸ್ತೆಯ ಕೊನೆಗೆ ಕರೆದುಕೊಂಡು ಹೋಗಿ ಅವಳ ಕೈಗೆ ಹಣವಿಟ್ಟಾಗ ಅವಳು ಒಂದು ಕ್ಷಣ ಆ ನೋಟನ್ನು ನೋಡಿ ಕೈ ಚಾಚುವುದನ್ನೇ ಮರೆತಂತೆ ಅನ್ನಿಸಿತು.. ಆ ಹಣ ನಾನೇ ಕೈಗೆ ಇಟ್ಟು.. ಈ ಕುಂಟು ಮಗುವನ್ನು ಇನ್ನೊಮ್ಮೆ ರಸ್ತೆಗೆ ಭಿಕ್ಷೆ ಬೇಡಲು ಬಿಡಬಾರದು ಎಂದು ಅವರ ಬಳಿ ಮಾತು ತೆಗೆದುಕೊಂಡೆ.. ಮನೆಗೆ ಬಂದ ಮೇಲೆ ಇನ್ನು ಆ ಬಾಲಕಿ ಹೇಳಿದ ಮಾತುಗಳು ನೆನಪಾಗುತ್ತಿದ್ದವು.. ಅವಳ ದನಿಯಿರುವ ಈ ಕವಿತೆಯನ್ನು ಬರೆದೆ..

ನನ್ನ ಊರು ಒಂದು ಮಹಾನಗರವಂತೆ!
ಜನ ‘ಮಹಾನ್’ ಅಲ್ಲ, ಆದರೂ ಇದು ಮಹಾನಗರ!
ಕರಾವಳಿಯಲ್ಲ, ಆದರೂ ಇಲ್ಲಿಹುದು ಸಾಗರ, ಜನಸಾಗರ!
ನಾ ನಿಂತಿರುವ ಈ ಟ್ರಾಫಿಕ್ ಸಿಗ್ನಲ್, ಒಂದು ಕಡಲ ತೀರ,
ರಸ್ತೆ ಬದಿಯ ಪಾದಚಾರಿ ಮಾರ್ಗವೇ ಮರಳು ದಂಡೆ,
ಇಲ್ಲಿ ಬಂದು, ಕೆಲವೊಮ್ಮೆ ಕ್ಷಣಮಾತ್ರ ನಿಂತು,
ಕೆಲವೊಮ್ಮೆ ನಿಲ್ಲು ಎಂದರೂ ನಿಲ್ಲದೇ,
ಓಡಿಹೋಗುವ ಲಕ್ಷ-ಲಕ್ಷಾಂತರ ಜನರು..
ಆ ಕಾಲ್ಪನಿಕ ಕಡಲ ಅಲೆಗಳು..

ದಿನವಿಡೀ ಈ ಅಲೆಗಳ ಮನವೊಲಿಸಲು
ನಾ ಮಾಡುವೆ ಭಗೀರಥ ಪ್ರಯತ್ನ..
ನಾ ಎಷ್ಟೇ ಕಾಡಿ, ಬೇಡಿ, ಕಾಲಿಗೇ ಬಿದ್ದರೂ
ಕೆಲವು ಅಲೆಗಳು ತಮ್ಮದೇ ಲೋಕದಲಿ ಮಗ್ನ!
ಅಡ್ಡ ನಿಂತವರ ಕಾಲ ತೊಳೆದು ಹೋಗುವ
ಉದಾರ ಭಾವನೆಯ ಅಲೆಗಳಲ್ಲ ಸ್ವಾಮಿ ಇವು,
ಒಮ್ಮೆ ಅಡ್ಡ ನಿಂತ ಅಪ್ಪನ ಮುಳುಗಿಸಿ,
ಅಲೆಯೊಂದು ನೀಡಿತ್ತು ಸಾವು!
ಮತ್ತೊಮ್ಮೆ ನನ್ನ ರಭಸದಿ ತಳ್ಳಿ, ಒಂಟಿ ಕಾಲ ಕಳೆದುಹೋಯಿತು,
ಮರೆತಿಲ್ಲ ನಾ, ಆ ಸುನಾಮಿ ಅಲೆ ಕೊಟ್ಟ ನೋವು.

ಈಗ ನನ್ನಲ್ಲಿಲ್ಲ ಈ ಕ್ರೂರ ಅಲೆಗಳ
ಎದುರು ನಿಂತು ಕೈ ಚಾಚುವ ಧೈರ್ಯ,
ನನ್ನ ಕಂಡು ಅಸಹ್ಯ ಪಟ್ಟು, ಈ ಅಹಂಕಾರದ ಅಲೆಗಳು,
ದಂಡೆಗೆ ತಂದೆಸೆಯುವ, ಮುರಿದ
ಕಪ್ಪೆ ಚಿಪ್ಪಿನ ಚೂರುಗಳ, ಕಸ ಕಡ್ಡಿಗಳ,
ದೂರದಿಂದಲೇ ಆಯ್ದು, ಕೈ ಮುಗಿವುದೇ ನನ್ನ ಕಾರ್ಯ!

ಇಂದು ಆಗುತ್ತಿದ್ದರೂ ಸಂಜೆಯ ಹೊತ್ತು
ಬೆಳಗಿನಿಂದ ಸಿಗಲಿಲ್ಲ ಒಂದೇ ಒಂದು ತುತ್ತೂ
ಆತುರದಿ ಅಲೆಯೊಂದು ಬಂದು
ಅವಸರದಿ ಹೋಗುವಾಗ, ಏನೋ ಬದಿಗೆ ಬಿತ್ತು,
ಏನೆಂದು ನೋಡಿದೆ..
ಮರಳ ದಂಡೆಯ ಮೇಲೆ, ಒಂದು ಅಮೂಲ್ಯ ಮುತ್ತು!



photo courtesy: http://image.shutterstock.com

Saturday, November 27, 2010

ಮೋಸಗಾರ ನಾ....


ದಿನವೂ ಕನಸಲಿ ಬರುವಳು ಅವಳು
ಮಲಗಿರುವ ನನ್ನ ಎಬ್ಬಿಸುವಳು ತಟ್ಟಿ,
ಮಾತಿಲ್ಲದೆ , ಅಳುತಲಿ, ಹೊರಟುಬಿಡುವಳು ಕಟ್ಟಿ,
ನನ್ನ ಹಣೆಗೆ ಮೋಸಗಾರ ಎಂಬ ಪಟ್ಟಿ

ನನಗಾಗಿ ಹಂಬಲಿಸದ ನಿನಗಾಗಿ
ಕಾಯುತಿದ್ದೆ ನಾನು ದಿನವೂ
ಅದಲ್ಲವೇ ನಿಜವಾದ ಒಲವು?

ನನ್ನ ಕಡೆಗಣಿಸಿದ ನಿನಗಾಗಿ
ಇಡೀ ಲೋಕವನ್ನೇ ಕಡೆಗಣಿಸಿತ್ತು ನನ್ನ ಮನವು,
ಅದಲ್ಲವೇ ನಿಜವಾದ ಒಲವು?

ದೇವಿಯಂತೆ ಪೂಜಿಸಿದ್ದೆ ನಿನ್ನ,
ದ್ವೇಷಿಸಲು ಇದ್ದರೂ ಕಾರಣ ಹಲವು,
ಅದಲ್ಲವೆ ನಿಜವಾದ ಒಲವು?

ಕಾಡುವೆ ಏಕೆ ಈಗ ಈ ರೀತಿ ದಿನವೂ?
ತಪ್ಪು ನನ್ನದೆ ಅರಿಯದಿದ್ದರೆ, ನೀ ನನ್ನ ಒಲವು?

ಸರಿ ತಪ್ಪು ಗಳ ಚರ್ಚಿಸಿ
ಈಗ ಸಾಧಿಸಬೇಕಾದುದದರೂ ಏನು?
ಸಂತೋಷವೇ ನಿನಗೆ, ಕೊನೆಗೆ ಒಪ್ಪಿಕೊಂಡೆನು ನಾನು?
ನೀನು ನನಗೆ ಕೊಟ್ಟ
ಮೋಸಗಾರ ಎಂಬ ಪಟ್ಟ!


ಪುಟ್ಟ ದೀಪದ ದೀಪಾವಳಿ ನೆನಪು




ಒಂದು ಪುಟ್ಟ ದೀಪದ ದೀಪಾವಳಿಯ ನೆನಪುಗಳು..

ಸಡಗರ! ಸಂಭ್ರಮ! ಎಲ್ಲರ ಈ ಹರುಷ
ನೆನಪಿಸುತಿದೆ ನನ್ನ, ಬಾಳಿಗೆ ಹೊಸ ಬೆಳಕ ತಂದ
ಆ ದಿವ್ಯ ದೀಪಾವಳಿಯ ವರ್ಷ

ಅದು ಸಂಜೆಯ ಹೊತ್ತು,
ಸುತ್ತ ದೀಪಗಳ ಬೆಳಕು ಪ್ರಜ್ವಲಿಸುತ್ತಿತ್ತು,
ಕಂಗಳು ಕಾತುರದಿ ಯಾರಿಗೋ ಕಾದಿತ್ತು,
ಬಂದಳವಳು ಹೊರಗೆ, ಪುಟ್ಟ ದೀಪವ ಹೊತ್ತು




ಹೊತ್ತು ಹೊಳೆವ ದೀವಿಗೆ,
ಬಂದಳವಳು ಬೀದಿಗೆ,
ಬೀದಿಯ ತುಂಬಾ ಬೆಳಕು!
ಬೆಳಕಿಗೆ ಕಾರಣ..
ಅವಳು ಹಿಡಿದ ಜ್ಯೋತಿಯೋ?
ಅವಳ ಮುಖದ ಕಾಂತಿಯೋ?
ಬೆಳಕು ಎಂಬುದೇ ನನ್ನ ಭ್ರಾಂತಿಯೋ?
ಅಂದು ತಿಳಿಯಲಿಲ್ಲ...
ಇಂದಿಗೂ ತಿಳಿದಿಲ್ಲ..

ತನ್ನ ಮನೆಯ ಅವಳು ಬೆಳಗಿಸಿಕೊಂಡಳು
ಸುತ್ತ ಹಲವು ದೀಪಗಳ ಇಟ್ಟು,
ಅವಳ ನೆನಪುಗಳಲ್ಲೆ ನನ್ನ ನಾ ಮುಳುಗಿಸಿಕೊಂಡೆ
ಮನದಲ್ಲಾಗಲು ಪ್ರೇಮವೆಂಬ ಪಾಪದ ಹುಟ್ಟು



ತನ್ನ ಮನೆಯ ಸುತ್ತ ಹಾಕುತ್ತಲೇ ಅವಳು ರಂಗೋಲಿ
ನನ್ನ ಮನದ ಸುತ್ತ ಹಾಕಿದ್ದಳು ಪ್ರೀತಿಯ ಬೇಲಿ
ಸುತ್ತಲೂ ಉರಿವ ದೀಪಗಳ ಮೆರಗು,
ನನ್ನನೇ ಉರಿಸುತ್ತಿತ್ತು ಎದೆಯಲ್ಲೊಂದು ಕೊರಗು.

ಅವಳ ನೆನಪುಗಳಲ್ಲೇ ಉರಿದೆ,
ಹಗಲಿರುಳು ಉರಿಯುತಲಿ..
ಅವಳು ಕೈಯಾರೆ ಬೆಳಗಿದ ದೀಪವಾದೆ..

ಮೊದಲ ಬಾರಿಗೆ ಈ ದೀಪವ ಬೆಳಗಿ,
ಬಾಳಿಗೆ ಹೊಸ ಬೆಳಕ ತಂದ ಆ ದೀಪಾವಳಿ,
ಮುಗಿದ ಮರು ದಿನವೇ ಪ್ರಳಯಾಂತಕ ಬಿರುಗಾಳಿ!



ಗಾಳಿಯ ಸೆಳೆತಕ್ಕೆ ಸಿಕ್ಕಿ
ಆರಿಹೋಯಿತು ಈ ಆಸೆಗಳ ಜ್ಯೋತಿ,
ಸುಟ್ಟು ಕಪ್ಪಾಯಿತು ಈ ಜೀವದ ಬತ್ತಿ,
ಜೀವನವೆಲ್ಲಾ ಹೊಗೆಯಾಡಿತು, ಹಗೆಯಾಯಿತು,
ಶಾಂತವಾಯಿತು ಕೊನೆಗೆ ಈ ಪ್ರೇಮದ ದೀಪ
ಇನ್ನೂ ಕಾದು ಕುಳಿತಿದೆ ಇಂದು... ಪಾಪ!
ಮರಳಿ ಬರಬಹುದೆಂದು..
ಬಂದು ಮತ್ತೊಮ್ಮೆ ತನ್ನ ಬೆಳಗಬಹುದೆಂದು..
ಅಂತಹುದೇ ಮತ್ತೊಂದು ದೀಪಾವಳಿ!


.....ಆ ದೀಪಾವಳಿಯ ನಿರೀಕ್ಷೆಯಲ್ಲಿರುವ ದೀಪ

.....ಪ್ರ‘ದೀಪ’