Wednesday, September 22, 2010

ಪರದೇಸಿ... ನಾ ನಿನ್ನ ನಂಬಿದೆ


ಪರದೇಸಿ ನೀನೆಂದೂ ಬಾರದಿರು ಸನಿಹ,
ಪರದೇಸಿಗೆ ನೀನೆಂದೂ ಒಲಿಯದಿರು ಹೃದಯ,
ಪರದೇಸಿ ನಿನಗೆ ನಿನದೆಂಬ ವಿಳಾಸ ಇದೆಯಾ?

ಇಂದು ಒಬ್ಬಳು ಚೆಲುವೆಯ ನೋಡು
ಮನವ ಗೆಲ್ಲುವ ಮಾತುಗಳ ಆಡು
ಬೆಚ್ಚಗೆ ಸೇರಿಕೊ ಅವಳೆದೆಯ ಗೂಡು
ಅನುಕ್ಷಣ ಅವಳೆದುರು ಪ್ರೀತಿಯ ಹಾಡು
ನಿನ್ನಾಸೆ ತೀರುತಲೆ, ಕೇಳುವರಿಲ್ಲ ಅವಳ ಪಾಡು
ಮೆಚ್ಚುವ ಮುನ್ನ ಈ ಪರದೇಸಿಯ
ಮನವೇ ನೀನೊಮ್ಮೆ ಯೋಚನೆ ಮಾಡು

ಮೋಡಿ ಮಾಡಿತ್ತು ಪರದೇಸಿಯ ಮಾತು
ಮಾತು ಬೇಸರವಾದಾಗ ನೀಡಿದ್ದ ಮುತ್ತು
ಜೊತೆಗೆ ಕುಳಿತು ತಿನಿಸಿದ್ದ ತುತ್ತು
ಕಪಟವರಿಯದ ಮನವು ಬುಟ್ಟಿಗೆ ಬಿತ್ತು
ಕಪಟವರಿತಾಗ ಕಳ್ಳಾಟಕೆ ಬರಲು ಕುತ್ತು
ಪ್ರೀತಿ ಹೆಚ್ಚಾಗಿ ಒತ್ತಿ ಬಿಡುವನು ಕತ್ತು
ನಂತರ "ಆಕೆ ಯಾರೊ? ಯಾರಿಗೆ ಗೊತ್ತು?"


ನೋಡುತಲೆ ಆಗಸದಿ ಮೂಡಿದ ಚಂದಿರ
ನೆನಪಾಗುವನು ಆಕೆಗೊಬ್ಬ ಸುಂದರ
ಮನಸಲ್ಲಿ ಕಟ್ಟಿದ ಕನಸುಗಳ ಮಂದಿರ
ಮುರಿದು ಮನಸು ಇಂದು ಬಂಜರ
ಅರಿವಿಲ್ಲದೆ ಸೇರಿದ್ದಳು ಪರದೇಸಿಯ ಪಂಜರ

ಕಾಮನಬಿಲ್ಲಂತೆ ಈ ಪರದೇಸಿಯ ಬಣ್ಣ
ಎಲ್ಲೇ ಇದ್ದರೂ ಸೆಳೆವನು ಚೆಲುವೆಯ ಕಣ್ಣ
ಜನುಮ ಜನುಮದ ಸಂಗಾತಿ ಎಂದ ಹೆಣ್ಣ
ಎಸೆವನು ಬೀಜದಂತೆ ಸವಿದ ನಂತರ ಹಣ್ಣ
ಇವನು ಪಾಪ ಪ್ರಙ್ಞೆಯಿರದ ಪರದೇಸಿಯಣ್ಣ
ಇವನು ಬರಲು, ಹೋಗಲು ಇರುವುದಿಲ್ಲ ಕಾರಣ



ಕಟ್ಟುವನು ಸಿಹಿ ಮಾತುಗಳಲ್ಲೆ ಅರಮನೆ
ಮಾಡುವನು ಅವಳೆದುರು ಅವಳದೇ ನಾಮ ಭಜನೆ
ದೋಚುವನು ಮೆಲ್ಲನೆ ಸ್ನೇಹ-ಪ್ರೀತಿಗಳ ಖಜಾನೆ
ಹೊರಟು ಬಿಡುವನು ಹೇಳದೆ ಮರುದಿನ ಮುಂಜಾನೆ

ಪರದೇಸಿ ನಾ ನಿನ್ನ ನಂಬಿದೆ
ನಿನ್ನ ಪ್ರೀತಿಗೆ ಮಿಡಿಯಿತು ನನ್ನೆದೆ
ಕಾರಣವೂ ಹೇಳದೆ ನೀನೇಕೆ ಹೊರಟು ಹೋದೆ?




ಈ ಕವನಕ್ಕೆ ಸ್ಫೂರ್ತಿ ತಂದ ಹಾಡು...


5 comments:

  1. pradeep....varnanege padagalilla.....in one word....superb.....especially i like these lines
    ಇಂದು ಒಬ್ಬಳು ಚೆಲುವೆಯ ನೋಡು
    ಮನವ ಗೆಲ್ಲುವ ಮಾತುಗಳ ಆಡು
    ಬೆಚ್ಚಗೆ ಸೇರಿಕೊ ಅವಳೆದೆಯ ಗೂಡು
    ಅನುಕ್ಷಣ ಅವಳೆದುರು ಪ್ರೀತಿಯ ಹಾಡು
    ನಿನ್ನಾಸೆ ತೀರುತಲೆ, ಕೇಳುವರಿಲ್ಲ ಅವಳ ಪಾಡು
    ಮೆಚ್ಚುವ ಮುನ್ನ ಈ ಪರದೇಸಿಯ
    ಮನವೇ ನೀನೊಮ್ಮೆ ಯೋಚನೆ ಮಾಡು

    ReplyDelete
  2. Sagaradaacheya inchara & Sathya... nimage tumba dhanyavaadagaLu.

    ReplyDelete