Wednesday, December 23, 2009

************* ಕೊನೆಯುಸಿರಲೂ ಪ್ರೀತಿ ************


ಕವನದ ಸನ್ನಿವೇಶ: ಇದು ಒಬ್ಬ ದುರಂತ ನಾಯಕ ಹಾಡಿರೋ ಹಾಡು. ಖಾಯಿಲೆ ಒಂದರಿಂದ ನರಳಿ ಸಾಯಲು ಇನ್ನು ಕೆಲವೇ ದಿನಗಳು ಬಾಕಿ ಇರಬೇಕಾದ್ರೆ ಅವನಿಗೆ ಒಬ್ಬಳ ಮೇಲೆ ಪ್ರೀತಿ ಹುಟ್ಟಿ ಬರುತ್ತದೆ. ಆದರೆ ಸಮಯ ಮೀರಿ ಹೊಯ್ತಲ್ಲ ಎಂದು ವ್ಯಥೆ ಪಡುತ್ತಾನೆ.

ಶಾಂತಿ ಇದೆ, ಪ್ರೀತಿ ಇದೆ,
ನನ್ನ ಕನಸಲ್ಲಿ
ಇವನ್ನು ಬಿಟ್ಟು ಎಲ್ಲಾ ಇದೆ
ಈ ಜಗದಲ್ಲಿ..

ಕತ್ತಲಾಗುತ್ತಾ ಬಂದಿತೋ
ಕಾಣುವ ಸಂಶಯ ನಾಳೆ..
ದೇವರು ಗೀಚಿ ಅಳಿಸಿದ
ಬದುಕಿನ್ನೂ ಖಾಲಿ ಹಾಳೆ
ಇದೇಕೆ? ಹೀಗೇಕೆ? ಓಡುವೆ ನನ್ನ ಕಿನ್ನರಿ..
ಬರುವೆನು ನಾನೂ ತಾಳೆ..

ನಿರ್ಧಾರವಾಗಿದೆ ನನ್ನ ವಿಧಿ
ನೀನೇಕೆ ಬಂದೆ ಮೊದಲು
ಹೇಳಲು ಹೋದರೂ ನಿನಗೆಲ್ಲಾ
ಮಾತಲ್ಲಿ ಏಕೋ ತೊದಲು
ಹೋಗುವವರಿರುವರೆ ಯಾರಾದರೂ..
ಅಲ್ಲಿಗೆ ನನ್ನ ಬದಲು?

ಮುಳುಗಿದರೇನು ಆ ಸೂರ್ಯ
ಚಂದಿರ ಬರುವನು ಬಾನಿಗೆ,
ಮುಳುಗಲು ನಾಳೆ ಈ ಬದುಕು..
ಬರುವುದು ಯಾರು ಎಲ್ಲಿಗೆ?
ಬಂದು ನಿಂದು ಹೋದೆ ನಾಲ್ಕು ಕ್ಷಣ
ನಿನ್ನ ಮನದ ಬಾಗಿಲ ಬಳಿಗೆ..

ನೀ ಬರುವ ಸಮಯಕೆ
ತಂಪಾಗಿ ಬೀಸಿದೆ ಗಾಳಿ
ಹೂಗಳು ಹೀಗೆ ನಗುತಿರಲಿ
ಎಂದೂ ನೀನಿರುವಲ್ಲಿ
ನೆನೆಸಿಕೊಂಡರೂ ನಾಳೆ ನೀ ನನ್ನ..
ಓ ಎನುವೆನು ನಾನಲ್ಲಿ..

7 comments: