ನಿಲ್ಲು ನಿಲ್ಲು ನಿಲ್ಲೇ ಓ ಪತಂಗ
ಹೊತ್ತೊಯ್ದೆ ಜೀವಗಳ ಅದೆಲ್ಲಿಗೆ ಸಂಗ?
ಪೂರ್ವ ನಿಶ್ಚಿತ ಪಥದಿಂದ ಏಕೀ ನಿಗೂಢ ಪಲ್ಲಟ?
ಆಜನ್ಮ ರ‍್ಯಾಡಾರು ಬಂಧನದಿಂದ ಮುಕ್ತವಾಗುವ ಹಠ
ಸಾರಥಿಯೇ ಸಾವ ಬಯಸಿ ಸಂಪರ್ಕ ಕಡಿದನೇ ದಿಟ?
ಹಿಂದೂ ಮಹಾಸಾಗರ ಸೇರಿತೇ ಸೂತ್ರ ಹರಿದ ಪಟ?
ಅಂತ್ಯ ಹಾಡಿದ ಪೈಲಟು ಹಾರೈಸಿ ಅಂತಿಮ ಶುಭರಾತ್ರಿ
ಹಗಲ ಮತ್ತೆ ಕಾಣೆವೆಂದು ಮೊದಲೇ ಇತ್ತೇ ಖಾತರಿ?
ಎಲ್ಲೆಲ್ಲೂ ಅಚ್ಚರಿ! ಅಲಭ್ಯ ಗುಪ್ತಯಾನದ ಮಾಹಿತಿ,
ಮತ್ತೆ ಹುಟ್ಟಿ ಬಂದನೇ ಒಸಾಮ ಕೆಡವಲು ನಿನ್ನಾಹುತಿ?
ಭೂಗೋಳವ ಜಾಲಾಡಿ ಸೋತರು ಅಂತರಾಷ್ಟ್ರೀಯ ಪಡೆ
ವಿಫಲವಾಯಿತು ಅಪೂರ್ವ ಶೋಧ ಹುಡುಕಿ ಎಲ್ಲ ಕಡೆ
ನಕ್ಕರು ಮಂಗಳಗ್ರಹ ಜೀವಿಗಳು ನೋಡಿ ನಮ್ಮೆಡೆ
ಸ್ವಗ್ರಹದಿ ವಿಮಾನದ ಸುಳಿವಿಲ್ಲ, ನಮ್ಮ ಹಿಡಿದಾರೆ? ಬಿಡೆ.
ವಾಯುವಿಹಾರದಿ ಸದ್ದಿಲ್ಲದೆ ಸುಖನಿದ್ರೆಯಾಯಿತು ಚಿರನಿದ್ರೆ
ತಲುಪಿದೆ ಆಗಸದಾಚೆಯ ಅಙ್ಞಾತ ದೇಶ, ಅನಂತ ಎತ್ತರ,
ಮತ್ತೆ ಮತ್ತೆ ಒಡಲ ಜೀವಗಳ ಎತ್ತೆತ್ತಿ ನೀರಿಗೆಸೆದು ಬಂದರೂ
ನೀನಂತೂ ಗಂಗೆಯಂತೆಯೇ ಪ್ರಶ್ನಾತೀತ, ನಿರ್ದಯಿ, ನಿರುತ್ತರ!
ನಿಲ್ಲು ನಿಲ್ಲು ನಿಲ್ಲೇ ಓ ಪತಂಗ
ಹೊತ್ತೊಯ್ದೆ ಜೀವಗಳ ಅದೆಲ್ಲಿಗೆ ಸಂಗ?