Monday, October 21, 2013

ಕೀಟಲೋಕ-೧ - ಕೌತುಕದ ಕಣಜ


              ಅದು ಮೇ ತಿಂಗಳ ಬಿರು ಬೇಸಿಗೆಯ ಮಟ ಮಟ ಮಧ್ಯಾಹ್ನ. ವಿದ್ಯುತ್ ಕಡಿತದಿಂದಾಗಿ ಮನೆಯೊಳಗೆ ಬಿಸಿ ಬಿಸಿ ಹಬೆ. ಮನೆಯಲ್ಲಿ ಎಲ್ಲರೂ ಕೈಗೊಂದು ಬೀಸಣಿಗೆ ಹಿಡಿದು ಪಟಪಟನೇ ಬೀಸಿಕೊಳ್ಳುತ್ತಿದ್ದರು. ಹಿತ್ತಲಿನಲ್ಲಿ ಅರ್ಧಗಂಟೆಯಷ್ಟೇ ಹಿಂದೆ ಒಣಗಿ ಹಾಕಿದ್ದ ಬಟ್ಟೆಗಳು ಬಿಸಿಲ ಝಳಕ್ಕೆ ಆಗಲೇ ಒಣಗಿ ಗರಿಗರಿಯಾಗಿದ್ದವು. ಬಟ್ಟೆಗಳ ಎಳೆದುಕೊಳ್ಳುತ್ತಾ ಬಂದ ನನಗೆ ಒಣಗಿಸುವ ತಂತಿಯ ತುದಿಯಲ್ಲಿ ಕಣಜ ಹುಳುಗಳ ಗೂಡೊಂದು ನೇತಾಡುತ್ತಿರುವುದು ಕಣ್ಣಿಗೆ ಬಿತ್ತು. ಛಾಯಾಗ್ರಹಣ ನೆಚ್ಚಿನ ಹವ್ಯಾಸವಾಗಿರುವ ನನಗೆ ಇಂಥ ಸೂಕ್ಷ್ಮ ಜೀವಿಗಳನ್ನು ಕಂಡರೆ ಎಲ್ಲಿಲ್ಲದ ಕುತೂಹಲ! ತಕ್ಷಣವೇ ಹೋಗಿ ನನ್ನ ಕ್ಯಾಮೆರಾ ತಂದೆ. ಉದ್ದನೆಯ ಜ಼ೂಮ್ ಲೆನ್ಸ್ ಬಳಸಿ ಆ ಸಣ್ಣ ಹುಳುಗಳ ದೊಡ್ದ ದೊಡ್ಡ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದೆ. ಜೋರಾಗಿದ್ದ ಬಿಸಿಲಿಗೆ ಫಳಫಳನೆ ಹೊಳೆಯುತ್ತಿದ್ದ ಕಣಜಗಳ ಮೈ ಸುಂದರವಾಗಿ ಸೆರೆ ಸಿಕ್ಕವು. ಹೊಳಪಿನ ತಿಳಿಗೆಂಪು ಬಣ್ಣದ ಮೈಯ್ಯ ಎರಡು ಬದಿಯಲ್ಲೂ ಪುಟ್ಟ ಪುಟ್ಟ ಹೊಳೆಯುವ ಪಾರದರ್ಶಕ ರೆಕ್ಕೆಗಳು, ಜೊತೆಗೆ ಅಲ್ಲಲ್ಲಿ ಹಳದಿ ಪಟ್ಟಿಗಳು ದುಂಡಾದ ದೇಹಕ್ಕೆ ಮೆರಗು ನೀಡುವಂತಿದ್ದವು. ಕಪ್ಪನೆಯ ಅಂಡಾಕಾರದ ದೊಡ್ಡ ದೊಡ್ಡ ಕಣ್ಣುಗಳು ಮುಖದ ಮುಕ್ಕಾಲು ಭಾಗ ಆವರಿಸಿ ಮುದ್ದಾಗಿ ಕಾಣುತ್ತಿದ್ದವು. ಅವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಮೂಡಿಸಿದವು.

              ಇವೇ ಕಾಗದದ ಕಣಜ (Paper Wasp) ಎಂಬುವ ಜಾತಿಗೆ ಸೇರಿದ ಪಾಲಿಸ್ಟೆಸ್ ಸ್ಟೆನೋಪಸ್ (Polistes Stenopus) ಎಂಬ ಉಪಜಾತಿಗೆ ಸೇರಿದ ಕೀಟ. 15-25 ಮಿ.ಮಿ. ಉದ್ದವಿರುವ ಈ ಕೀಟಗಳು ಮನೆಯ ಮೂಲೆಗಳಲ್ಲಿ ಕಂದು ಬಣ್ಣದ ಗೂಡುಗಳನ್ನು ಕಟ್ಟುವುದು ಸಾಮಾನ್ಯ. ಲೋಟದ ಆಕಾರವಿರುವ ಹಲವು ಗೂಡುಗಳನ್ನು ಒಂದು ಸಮೂಹದಂತೆ ಕಟ್ಟುವ ಇವು ಅದಕ್ಕಾಗಿ ಮರ-ಗಿಡಗಳ ಪೊಟರೆಯನ್ನು ಕೆರೆದು ಪುಡಿಮಾಡಿ ಅದಕ್ಕೆ ತನ್ನ ಎಂಜಲನ್ನು ಮಿಶ್ರಮಾಡಿ ತಯಾರು ಮಾಡಿದ ಕಾಗದದಂತಹ ಪದಾರ್ಥವನ್ನು ಬಳಸುತ್ತದೆ. ಆದ್ದರಿಂದಲೇ ಕಾಗದದ ಕಣಜವೆಂಬ ಹೆಸರು ಬಂದಿದೆ. ಹೆಸರಿಗೆ ಮಾತ್ರ ಕಾಗದ ಎನಿಸಿದರೂ ಈ ಗೂಡುಗಳು ಮಳೆ ನೀರಿನಿಂದ ಸಂಪೂರ್ಣ ರಕ್ಷಣೆ ನೀಡುತ್ತದೆ. ಎಷ್ಟೇ ಧಾರಾಕಾರ ಮಳೆ ಸುರಿದರೂ ಒಳಗಿರುವ ಮೊಟ್ಟೆಗಳು ಬೆಚ್ಚಗಿರುತ್ತವೆ! ಇದು  100% water-proof!  ಅಷ್ಟೇ ಅಲ್ಲ ಇವುಗಳ ಎಂಜಲು ಮಿಶ್ರಿತವಾದ ಪದಾರ್ಥವಾದ್ದರಿಂದ ಈ ಗೂಡುಗಳು ಒಂದು ರೀತಿಯ ವಾಸನೆ ಬೀರುತ್ತವೆ. ಈ ವಾಸನೆ ಸಹಿಸಲಾಗದೆ ಇರುವೆಗಳು ಸಹ ಗೂಡುಗಳ ಹತ್ತಿರ ಸುಳಿಯುವುದಿಲ್ಲ. ಮಕರಂದ ಸುರಕ್ಷಿತವಾಗಿರುತ್ತದೆ!
            ಸಾಮಾನ್ಯವಾಗಿ ಮನೆಯ ಯಾವುದೋ ಮೂಲೆಯಲ್ಲಿ ತಮ್ಮ ಪಾಡಿಗೆ ತಾವು ಸದ್ದಿಲ್ಲದೆ ಬದುಕುವ ಈ ಕೀಟಗಳು ಯಾರಾದರೂ ಗೂಡು ಅಥವ ಕೀಟ ಸಮೂಹಕ್ಕೆ ಹಾನಿಯುಂಟು ಮಾಡಿದಾಗ ಮಾತ್ರ ಮನುಷ್ಯನ ಮೇಲೆ ಗುಂಪು ಗುಂಪಾಗಿ ದಾಳಿ ಮಾಡುತ್ತವೆ. ಇವುಗಳ ದೇಹದ ತುದಿಯಲ್ಲಿರುವ ಮೊನಚಾದ ಮುಳ್ಳು ಮಾನವ ಚರ್ಮಕ್ಕೆ ಸೋಕಿದರೆ ಅತಿಯಾದ ತುರಿತ, ಊತ ಹಾಗು ಇನ್ನೂ ಗಂಭೀರವಾದ ಅಲರ್ಜಿಗಳು ಉಂಟಾಗಬಹುದು. ಹಾಗೆಂದ ಮಾತ್ರಕ್ಕೆ ಇವು ಅಪಾಯಕಾರಿ ಎಂದೇನಲ್ಲ. ಬೆಳೆಯನ್ನು ನಾಶಪಡಿಸುವ ಕೆಲವು ಕೀಟಗಳು ಇವಕ್ಕೆ ಆಹಾರವಾಗುವುದರಿಂದ ಇವು ರೈತರಿಗೆ ಉಪಕಾರಿ ಎಂದು ಹೇಳುತ್ತಾರೆ.

            ಹಾಗೆ ಬಗೆ ಬಗೆಯ ಕೋನಗಳಿಂದ ಈ ಹುಳುಗಳ ಫೋಟೋ ಕ್ಲಿಕ್ಕಿಸುತ್ತಾ ಅವುಗಳ ಚಟುವಟಿಕೆಗಳನ್ನು ಗಮನಿಸುತ್ತಾ ನಿಂತ ನನಗೆ ಅವುಗಳ ಕಾರ್ಯವೈಖರಿ ಕಂಡು ಅಚ್ಚರಿ ಮೂಡಿತು! ಎಂಥ ಮಹಾನಗರಗಳನ್ನೂ ಅವ್ಯವಸ್ಥೆಗಳು ಕಾಡುತ್ತವೆ. ಅಂಥದ್ದರಲ್ಲಿ ಈ ಕಣಜಗಳು ತಮ್ಮ ಜೀವನ ಶೈಲಿಯಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳು ವಿಸ್ಮಯಕಾರಿಯಾಗಿದೆ! ಆ ಪುಟ್ಟ ಗೂಡುಗಳ ಸಮೂಹದಲಿ ಸುಮಾರು ಹತ್ತರಿಂದ ಇಪ್ಪತ್ತು ಕಣಜಗಳು ವಾಸವಿದ್ದಿರಬಹುದು. ನಾನು ನೋಡಿದಾಗ ಬಹಳಷ್ಟು ಕಣಜಗಳು ಆಗಾಗ್ಗೆ ಬಂದು ಗೂಡಿಗೆ ಏನೇನೋ ತುರುಕಿ ಮರಳುತ್ತಿದ್ದವು. ಇನ್ನೆರಡು ಕಣಜಗಳು ಮಾತ್ರ ಗೂಡಿನ ಸಮೂಹದ ಮೇಲೆ ಎದುರು ಬದುರಾಗಿ ಅತ್ತಿಂದಿತ್ತ ಇತ್ತಿಂದಿತ್ತ ಕಾವಲುಗಾರರಂತೆ ಓಡಾಡುತ್ತಿದ್ದವು! ಅಷ್ಟೇ ಅಲ್ಲದೇ ಓಡಾಡುವಾಗ ಗೂಡಿನ ಸುತ್ತಲೂ ಗಾಳಿ ಹರಿದಾಡುವಂತೆ ಮಾಡಿ ತಮ್ಮ ಗೂಡುಗಳನ್ನು ತಂಪಾಗಿಡಲು ತಮ್ಮ ಸೂಕ್ಷ್ಮವಾದ ರೆಕ್ಕೆಗಳನ್ನು ಅತೀ ವೇಗದಲ್ಲಿ ನಿರಂತರವಾಗಿ ಬಡಿಯುತ್ತಿದ್ದವು! ಈ ಮೂಲಕ ಒಳಗಿರುವ ಮೊಟ್ಟೆಗಳೂ ಮಕರಂದವೂ ಬಿಸಿಲಿಗೆ ಬೆಂದು ಹೋಗುವುದನ್ನು ತಪ್ಪಿಸುತ್ತಿದ್ದವು!

            ಬೇಸಿಗೆಯ ಶಾಖ ನಿಯಂತ್ರಿಸಲು ಮನುಷ್ಯ ಬೀಸಣಿಗೆ, ಫ್ಯಾನು, ಹವಾನಿಯಂತ್ರಕ, ಹೀಗೆ ಏನೆಲ್ಲಾ ಆವಿಷ್ಕರಿಸಿದ್ದಾನೆ. ಆದರೆ ಈ ಸಣ್ಣ ಕಣಜಗಳಿಗೆ ತಮ್ಮ ರೆಕ್ಕೆಗಳನ್ನೇ ಬೀಸಣಿಗೆಯಂತೆ ಬಳಸುವ ತಂತ್ರ ಅದ್ಯಾರು ಹೇಳಿ ಕೊಟ್ಟರೋ? ಹೀಗೊಂದು ಚಿಕ್ಕ ಹುಳುವಿನ ಪರಿಚಯದ ಮೂಲಕ ಪ್ರಕೃತಿಯ ವಿಸ್ಮಯಗಳಿಗೊಂದ ಕನ್ನಡಿ ಹಿಡಿಯುವ ನನ್ನ ಪ್ರಯತ್ನ ಸಫಲವಾದಂತೆ ಅನುಭವವಾಯಿತು!


ಅಲ್ಲಿ ಇಲ್ಲಿ ಕಲೆಹಾಕಿದ ಮಾಹಿತಿಯನ್ನು ಪರಿಶೀಲಿಸಿ ಪ್ರೋತ್ಸಾಹಿಸಿದ ನಮ್ಮ  ವಿಙ್ಞಾನಿ ಡಾ. ಆಜ಼ಾದ್ ಅವರಿಗೆ ಧನ್ಯವಾದಗಳು

16 comments:

 1. ಅದ್ಭುತವಾದ ಚಿತ್ರಗಳೊಂದಿಗೆ ಉತ್ತಮವಾದ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

  ReplyDelete
  Replies
  1. ತುಂಬಾ ಧನ್ಯವಾದಗಳು ಸುನಾಥ್ ಸರ್... ಹೀಗೆ ಬರುತ್ತಿರಿ

   Delete
 2. ಉಪಯುಕ್ತ ಮಾಹಿತಿ :) :)

  ReplyDelete
  Replies
  1. ಧನ್ಯವಾದಗಳು ಚಿನ್ಮಯ್ :)

   Delete
 3. ಪ್ರದೀಪ್,
  ನೀವು ಮೊದಲಿಗೆ ಕೀಟ ಪ್ರಪಂಚದ ಫೋಟೊಗ್ರಫಿಗೆ ಕಾಲಿಟ್ಟಿದ್ದಕ್ಕೆ ಅಭಿನಂದನೆಗಳು. ಪ್ರಥಮ ಪ್ರಯತ್ನದಲ್ಲಿಯೇ ನೀವು ಯಶಸ್ವಿಯಾಗಿದ್ದೀರಿ...ಈ ವಿಷಯದ ಬಗ್ಗೆ ಇನ್ನಷ್ಟು ಉತ್ತಮ ಫೋಟೊಗ್ರಫಿ ಮಾಡಲು ಕೆಲವೊಂದು ಟಿಪ್ಸ್ ನಿಮಗೆ ಮೆಸೇಜ್ ಮಾಡುತ್ತೇನೆ.keep it up

  ReplyDelete
  Replies
  1. ಶಿವು ಸಾರ್, ನಾನು ನಿಮ್ಮ ಅಭಿಮಾನಿ. ನಿಮ್ಮ ಪ್ರತಿಕ್ರಿಯೆ, ಪ್ರೋತ್ಸಾಹ ನನಗೆ ತುಂಬಾ ಅಮೂಲ್ಯವಾದದ್ದು! ನಿಮ್ಮ ಮಾರ್ಗದರ್ಶನ ದೊರೆತದ್ದು ನನ್ನ ಅದೃಷ್ಟ. ಅನಂತ ಧನ್ಯವಾದಗಳು!

   Delete
 4. ವಾಹ್.. ಎಂಥಹಾ ಪೋಟೋಗಳು ಪ್ರದೀಪ್ ಸೂಪರ್. ಅದರ ಜೊತೆಗೆ ಮಾಹಿತಿ ಕಲೆಹಾಕಿ ನಮ್ಮೊಂದಿಗೆ ಹಂಚಿಕೊಂಡಿದ್ದು ಖುಷಿ ಆಯ್ತು. ಹೀಗೆ ಬರಲಿ ಮತ್ತಷ್ಟು

  ReplyDelete
  Replies
  1. ತುಂಬಾ ಧನ್ಯವಾದಗಳು ಸುಗುಣಾ ಮೇಡಮ್... ಹೀಗೇ ಬರುತ್ತಿರಿ

   Delete
 5. Nice clicks Pradeep... well done..keep it up..

  ReplyDelete
 6. chitraganthu wonderful... amazing pradeep.... eshtu chennagi thegediddira? wow!!!!

  ReplyDelete
 7. Hi Pradeep,
  ಅದ್ಭುತ ಚಿತ್ರಗಳು - ಜೊತೆಗೆ ಮಾಹಿತಿಯೂ ಸಹ :) ..... ತು೦ಬಾ ಇಷ್ಟವಾಯ್ತು :)

  ReplyDelete
  Replies
  1. ತುಂಬಾ ಧನ್ಯವಾದಗಳು ರೂಪಕ್ಕ... ಹೀಗೆ ಬರುತ್ತಿರಿ

   Delete
 8. ಮೈಕ್ರೋ ವಿಥ್ ಮ್ಯಾಕ್ರೋ ಸೂಪರ್ ಚಿತ್ರಗಳು ಸೂಪರ್ ವರ್ಡ್ಸ್
  ಪ್ರೇಮಕವಿಯ ಪ್ರೇಮ ಸೂಕ್ಷದರ್ಶಕ ದಂತೆ ಮೊನಚಾಗಿದೆ

  ReplyDelete
  Replies
  1. ತುಂಬಾ ಧನ್ಯವಾದಗಳು ಶ್ರೀಕಾಂತ್ ಸರ್...

   Delete