Monday, December 16, 2013

3K ಸಂಜೆ - ಜಯಂತ್ ಕಾಯ್ಕಿಣಿಯೊಂದಿಗೆ


14th December 2013 ಶನಿವಾರ ಸಂಜೆ ಕೆಲವು ಅವಿಸ್ಮರಣೀಯ ಕ್ಷಣಗಳು ನನ್ನ ನೆನಪಿನ ಪುಟಗಳಲ್ಲಿ ಎಂದೆಂದಿಗೂ ಅಳಿಸದಂತೆ ಅಚ್ಚೊತ್ತಿ ಕುಳಿತವು. ನಮ್ಮ ಮೆಚ್ಚಿನ 3K  ಕನ್ನಡ ಕವಿತೆ ಕಥನ ತಂಡವು ಖ್ಯಾತ ಚಲನಚಿತ್ರ ಸಾಹಿತಿ ಡಾ. ಜಯಂತ್ ಕಾಯ್ಕಿಣಿ ಅವರನ್ನು ಭೇಟಿ ಮಾಡಿದ ಸಂಜೆ ಜೀವನದಲ್ಲಿ ಕೆಲವು ಅದ್ಭುತ ಕ್ಷಣಗಳನ್ನು ಕಟ್ಟಿಕೊಡುವಂತಿತ್ತು! ಎಲ್ಲರಲ್ಲೂ ಉತ್ಸಾಹ, ಕುತೂಹಲ, ರೋಮಾಂಚನ! ಕನ್ನಡ ಸಿನಿ ಲೋಕದಿ ಹಲವು ಅದ್ಭುತ ಹಾಡುಗಳನ್ನು ಸೃಷ್ಠಿಸಿ ಪದಗಳಲೇ ಜನರ ಮನಸೂರೆಗೊಳಿಸಿರುವ, ಕನ್ನಡ ನಾಡಿನ ಮನೆ ಮಾತಾಗಿರುವ ಜಯಂತ್ ಅವರ ಜೊತೆ ಕುಳಿತು ಹರಟೆ ಹೊಡೆಯುವ ಭಾಗ್ಯ ನಮಗಂದು ದೊರೆಯಿತು. ನಾವು ಅಂದು ಕಳೆದ 4  ಗಂಟೆಗಳಲ್ಲಿ ಅವರಾಡಿದ ಮಾತುಗಳು, ಯುವ ಕವಿಗಳಿಗೆ ಅವರು ನೀಡಿದ ಮಾರ್ಗದರ್ಶನ ಎಲ್ಲವನ್ನೂ ದಾಖಲಿಸಿ ಇಟ್ಟುಕೊಳ್ಳಬೇಕು. ಅದು ಸಾಹಿತ್ಯಲೋಕದ ಎಳೆ ಪೈರುಗಳಿಗೆ ರಸಗೊಬ್ಬರದಂತಾಗ ಬೇಕು ಎನ್ನುವ ಹಂಬಲದಲ್ಲಿ ಅವರು ಹೇಳಿದ ಕೆಲವು ಅಂಶಗಳಲ್ಲಿ ನನ್ನ ನೆನಪಿನಲ್ಲುಳಿದಷ್ಟನ್ನು ಬರೆದಿಡುವ ಪ್ರಯತ್ನ ಮಾಡಿದ್ದೇನೆ... ತಪ್ಪುಗಳಿದ್ದರೆ ಕ್ಷಮಿಸಿ, ಕಾರ್ಯಕ್ರಮಕ್ಕೆ ಬಂದಿದ್ದವರು ಯಾವುದಾದರೂ ವಿಷಯಗಳು ಬಿಟ್ಟುಹೋಗಿದ್ದರೆ ಸೇರಿಸಬೇಕಾಗಿ ವಿನಂತಿ. 

ಕಾವ್ಯರಚನೆಯ ಬಗ್ಗೆ, ಅವರ ಜೀವನದ ಬಗ್ಗೆ, ಸಮಕಾಲೀನ ಸಿನಿಮಾ ಹಾಗು ಸಾಹಿತ್ಯದ ಬಗ್ಗೆ ಅವರು ನಮಗೆ ತಿಳಿಸಿಕೊಟ್ಟ ಕೆಲವು ಅಂಶಗಳು... ಅವರದೇ ಮಾತುಗಳಲ್ಲಿ...


1. K. V. Tirumalesh ಅವರ ಪ್ರಭಾವ: ಜಯಂತ್ ಅವರ ಕಾವ್ಯಗಳ ಮೇಲೆ ಬಹಳ ಪರಿಣಾಮ ಬೀರಿದಂಥವರು ಕೆ. ವಿ. ತಿರುಮಲೇಶ್ ಅವರು. ತಿರುಮಲೇಶರ ಕಾವ್ಯ ಅವರು ಓದುವುದಕೂ ಮುನ್ನ ಅವರು ಬರೆದ ಕವಿತೆಗಳಿಗೂ, ನಂತರದ ಕವಿತೆಗಳಿಗೂ ವ್ಯತ್ಯಾಸ ಎದ್ದು ಕಾಣುತ್ತದೆ ಎಂದು ಅವರೇ ಹೇಳುತ್ತಾರೆ.

2. ಬರವಣಿಗೆ ಮುಖ್ಯ: ಇಂದು ಎಲ್ಲರೂ ಕೈಯಲ್ಲೇ ಮೊಬೈಲ್ ಹಿಡಿದು ಬರೀ ಹೆಬ್ಬೆರಳಿನಲ್ಲಿಯೇ ಟೈಪಿಸುತ್ತಾರೆ, ಅಂತರ್ಜಾಲದಲ್ಲಿ ಕವನಗಳನ್ನು ಅಂಚಿಸುತ್ತಾರೆ.  ಆದರೆ ಒಬ್ಬ ಲೇಖಕನಿಗೆ ಕೈ ಬರವಣಿಗೆ ಎಂಬುದು ಬಹಳ ಮುಖ್ಯ. ಅದು ವ್ಯಕ್ತಿತ್ವ ವಿಕಾಸದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ! ಆದ್ದರಿಂದ ಟೈಪಿಸುವುದರ ಜೊತೆಗೆ ಆಗಾಗ ಬರೆಯುವುದನ್ನು ಬಿಡಬಾರದು.

3. ಓದು ಮುಖ್ಯ: ಕವಿ ಬರಹಗಾರರಾಗಲು ಓದುವುದು ಬರವಣಿಗೆಗಿಂಥ ಬಹಳ ಮುಖ್ಯ, ಏಕೆಂದರೆ, ಉತ್ತಮ ಸಾಹಿತ್ಯವನ್ನು ಓದುವುದರಿಂದಲೇ ಬರಹಕ್ಕೆ ಸರಕು ಸಿಗುವುದು, ಓದುವುದರಿಂದಲೇ ಕಾವ್ಯ ಸ್ಪೂರ್ತಿ, ಪದಗಳ ಮೇಲಿನ ಹಿಡಿತ ವಿಕಸನಗೊಳ್ಳುವುದು. ಆದ್ದರಿಂದ ಉತ್ತಮ ಸಾಹಿತ್ಯಗಳನ್ನು ಓದುವುದು ತುಂಬಾ ಮುಖ್ಯ. ಜಯಂತ್ ಅವರು ಉನ್ನತ ವ್ಯಾಸಂಗದಲ್ಲಿ ಚಿನ್ನದ ಪದಕ ಪಡೆದವರು ಹಾಗು ಮುಂಬೈನ ದೊಡ್ಡ ದೊಡ್ಡ ಕಂಪನಿಗಳಲ್ಲಿ ಬೇರೆ ಬೇರೆ  Shiftಗಳಲ್ಲಿಸೇವೆ ಸಲ್ಲಿಸಿದವರು. ಆ ವ್ಯಸ್ಥತೆ, ಒತ್ತಡ ತುಂಬಿದ ದಿನಗಳಲ್ಲಿಯೂ ಸಹ ಜಯಂತ್ ಅವರು ಓದುವ ಗೀಳನ್ನು ಬಿಡಲಿಲ್ಲ. ದಿನ ದಿನವೂ ಉತ್ತಮ ಸಾಹಿತ್ಯದ ಕೆಲವು ಪುಟಗಳನ್ನು ತಿರುವಿ ಹಾಕಿದ ನಂತರವೇ ನಿದ್ರೆಗೆ ಹೋಗುತ್ತಿದ್ದುದು. ಆದ್ದರಿಂದ ಇಂದಿನ ಸಾಹಿತ್ಯ ಲೋಕದ ಎಳೆ ಚಿಗುರುಗಳಿಗೆ ಅವರ ಮೊದಲ ಕಿವಿ ಮಾತು ಸಹ ಅದೇ... ಪ್ರತೀದಿನ ತಪ್ಪದೇ ಉತ್ತಮ ಸಾಹಿತ್ಯಗಳನ್ನು ಓದುತ್ತಿರಿ.

4. ಕವಿತೆಗೆ ಅರ್ಥವಿರುವುದಿಲ್ಲ ಅದೊಂದು ಅನುಭವವಷ್ಟೇ: ಬಹಳಷ್ಟು ಜನ ಜಯಂತ್ ಅವರನ್ನು ಕವನಗಳಿಗೆ ಅರ್ಥ ಕೇಳಿರುತ್ತಾರೆ. ಅವರಿಗೆಲ್ಲಾ ಅವರದ್ದೊಂದೇ ಉತ್ತರ. ಕವಿತೆಯಲ್ಲಿರುವ ಪದಗಳಿಗೆ ಅರ್ಥ ಹುಡುಕಬಹುದು, ಸಾಲುಗಳಿಗೆ ಅರ್ಥ ಹುಡುಕಬಹುದು. ಆದರೆ ಒಂದು ಸಂಪೂರ್ಣ ಕವಿತೆಗೆ ಅರ್ಥವಿರುವುದಿಲ್ಲ. ಅದೊಂದು ಅನುಭವವಷ್ಟೇ!

5. ಕುವೆಂಪು ಕಾವ್ಯ: ಕುವೆಂಪುರವರು ತಮ್ಮ ಮಗ ತೇಜಸ್ವಿ ಮೂರು ವರ್ಷದವರಿದ್ದಾಗ ಬರೆದ ಒಂದು ಕವನದ ಮೂರು ಸಾಲುಗಳನ್ನು  ವಾಚಿಸಿ ಕಾವ್ಯ ರುಚಿಸಲು ಅದರಲ್ಲಿ ಏನಿರಬೇಕು ಎಂಬುದರ ನಿದರ್ಶನ ನೀಡಿದರು...

"ನಿನಗೂ ಮೂರು ವರುಷ
ನನಗೂ ಮೂರು ವರುಷ
ನಾವಿಬ್ಬರೂ ಒಂದೇ!"

ಇದರಲ್ಲಿ ಕವಿ ತಮ್ಮ ಮಗನ ತುಂಟಾಟಗಳ ಚಿತ್ರಣದಲ್ಲಿ ತಮ್ಮನ್ನೂ ಚಿತ್ರಿಸಿಕೊಂಡಿದ್ದಾರೆ.. ಒಂದು ಮಗು ಹುಟ್ಟಿದಾಗಲೇ ಒಬ್ಬ ತಂದೆಯೂ ಹುಟ್ಟಿರುತ್ತಾನೆ ಎಂಬ ಅನುಭವವನ್ನು ಕಟ್ಟಿ ಕೊಡುತ್ತಾರೆ. ನಾವಿಬ್ಬರು ಒಂದೇ ಎನ್ನುವಲ್ಲಿ ಒಂದು ಹೊಸತನ ಪ್ರಕಟವಾಗುತ್ತದೆ! ಈ ಮೂರು ಅಂಶಗಳು ಕಾವ್ಯಕ್ಕೆ ಬಹಳ ಮುಖ್ಯ.

6. ಸಿನಿಮಾ ಹಾಡುಗಳು ಕಾವ್ಯವಲ್ಲ: ಸಿನಿಮಾ ಹಾಡುಗಳು ಎಂದೂ ಕವನ ಆಗುವುದಕ್ಕೆ ಸಾಧ್ಯವಿಲ್ಲ. ಕಾರಣ ಇಷ್ಟೇ, ಕವನ ಎಂಬುದು ನಮ್ಮ ಅಂತರಂಗದ ದನಿಯಿಂದ ಬರುವಂಥದ್ದು ಅದು ನಮ್ಮ ಮನಸಿನ ಭಾವನೆಗಳನ್ನು ಪದ ಸಂಯೋಜಿಸಿ ಹೇಳುವಂಥದ್ದು. ಆದರೆ ಸಿನಿಮಾ ಹಾಡುಗಳು ಹಾಗಲ್ಲ, ಅದು ಚಿತ್ರ ಸಾಹಿತಿಯಾದವರು ತಮ್ಮ ಅಂತರಂಗವನ್ನು ಮರೆತು ನಾಯಕನಾಗಿಯೋ ನಾಯಕಿಯಾಗಿಯೋ ಇನ್ನ್ಯಾವುದೋ ಪಾತ್ರಧಾರಿಯಾಗಿಯೋ ಪರಕಾಯ ಪ್ರವೇಶ ಮಾಡಿ ಅವನ/ಅವಳ ಭಾವನೆಗಳನ್ನು ರಾಗಕ್ಕೆ ಸರಿಯಾಗಿ ಸಂಯೋಜಿಸುವಂಥದ್ದು. ಸಿನಿಮಾ ಸಾಹಿತ್ಯ ಬರೆಯಬೇಕಾದರೆ ಅದರ ಸಂದರ್ಭವನ್ನು ತಿಳಿದುಕೊಳ್ಳಬೇಕು. ಸಿನಿಮಾದಲ್ಲಿ ಆ ಹಾಡು ಮೊದಲನೆಯದೋ, ಎರಡನೆಯದೋ, ಮೂರನೆಯದೋ, ಹಾಡಿನ ಚಿತ್ರೀಕರಣ ಎಲ್ಲಿ ಯಾವ ಸಮಯದಲ್ಲಿ ನಡೆಯಲಿದೆ ಎಲ್ಲವನ್ನೂ ಗಮನಿಸಿ ಬರೆಯಬೇಕು. ಇಷ್ಟೆಲ್ಲಾ ಬೇಲಿಗಳಿರುವುದರಿಂದ ಸಿನಿಮಾ ಸಾಹಿತ್ಯದಲ್ಲಿ ನೈಜ ಭಾವನೆಗಳು ಮಂಕಾಗುತ್ತವೆ. ಆದರೆ ಕವನ ಹಾಗಲ್ಲ. ಅದರಲ್ಲಿ ಅಂತರಂಗವು ಸ್ವಚ್ಛಂದ ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಾಡುತ್ತದೆ.

7. Poetry is not a description of the picture: 
ಕಣ್ಣಿಗೆ ಕಂಡ ಚಿತ್ರಗಳ ವರ್ಣನೆಯಷ್ಟೇ ಕಾವ್ಯವಾಗುವುದಿಲ್ಲ. ಆ ಚಿತ್ರ  ನಿಮ್ಮೊಳಗೆ ಇಳಿಯಬೇಕು. ನೀವು ಚಿತ್ರದೊಳಗೆ ಇಳಿಯಬೇಕು. ಆ ಚಿತ್ರದಲ್ಲಿ ನೀವು ಒಬ್ಬರಾಗಿ ಅನುಭವಿಸಬೇಕು. ಹೊಸ ವಿಷಯ ಒಂದನ್ನು ಕಂಡುಕೊಳ್ಳಬೇಕು. ಆಗಷ್ಟೇ ಅದು ಪರಿಪೂರ್ಣ ಕಾವ್ಯವೆನಿಸುವುದು. ಇದ್ದಿದ್ದನ್ನು ಇದ್ದಂತೆ ವಿವರಿಸುವುದು ಕಾವ್ಯವಲ್ಲ!

8. Position of the poet should change:
ಕವನದ ಆದಿಗೂ, ಕವನದ ಅಂತ್ಯಕ್ಕೂ ಕವಿಯ ದೃಷ್ಠಿಯಲ್ಲಿ, ಅದರ ದಿಕ್ಕಿನಲ್ಲಿ ಬದಲಾವಣೆಯಿರಬೇಕು. ಕಾವ್ಯದ ಸನ್ನಿವೇಶದಲ್ಲಿ ಕವಿ ನಿಂತಲ್ಲಿಯೇ ನಿಲ್ಲಬಾರದು ಕವನದ ವಿಷಯದ ಬಗ್ಗೆ ಕವಿಯ ದೃಷ್ಠಿಕೋನ ಕವನ ಮುಗಿಯುವ ಮುಂಚೆ ಬದಲಾಗಬೇಕು. ಉದಾಹರಣೆಗೆ ವೇಶ್ಯೆಯ ಬಗ್ಗೆ ಬರೆದ ಕವನದಲ್ಲಿ ಕೊನೆಗೆ ಅವಳು ತನ್ನ ತಂಗಿಯಂತೆ ಕಾಣುವ ಪ್ರಸಂಗ ಬಂದರೆ ಅದು ವೈವಿಧ್ಯಮಯವೆನಿಸುತ್ತದೆ.

9. Poetry should connect the unconnected: ಕೇವಲ ಎದುರಿಗೆ ಕಣ್ಣಿಗೆ ಕಾಣುವ ವಸ್ತುಗಳ ಬಗ್ಗೆ ಬರೆದರೆ ಅದು ಕವನವಲ್ಲ, ವರದಿಯಾಗುತ್ತದೆ. ಕಣ್ಣಿಗೆ ಕಾಣುವ ವಸ್ತುಗಳನ್ನು ಒಳಗಣ್ಣಿಗೆ ಕಾಣುವ ಕಲ್ಪನೆಯನ್ನೂ ಒಟ್ಟಿಗೆ ಹೆಣೆದು ಒಂದೇ ಎಂಬಂತೆ ಚಿತ್ರಿಸಿಕೊಡಬೇಕು. ಉದಾಹರಣೆಗೆ ಬಸ್ಸಿನ ಮೆಟ್ಟಿಲ ಮೇಲೊಂದು ಪುಟ್ಟ ಮಗುವಿನ ಚಪ್ಪಲಿ ಬಿದ್ದಿರುವುದನ್ನು ನೀವು ನೋಡುತ್ತೀರಿ. ನೀವು ಅದರ ಮೇಲೊಂದು ಕವಿತೆ ಬರೆದರೆ ಅದು ಕೇವಲ ಮೆಟ್ಟಿಲ ಮೇಲೆ ಬಿದ್ದಿರುವ ಚಪ್ಪಲಿಯ ಬಗ್ಗೆ ಅಲ್ಲದೇ ಬೇರೆಡೆ ಎಲ್ಲೋ ಒಂದೇ ಕಾಲಿನ ಚಪ್ಪಲಿಯನ್ನು ತೊಟ್ಟು ಅಳುತ್ತಿರುವ ಮಗುವೂ  ಚಿತ್ರಿತವಾಗುವಂಥ ಸಾಲುಗಳಿರಬೇಕು. ಆಗಲೇ ಅದು ಪರಿಪೂರ್ಣವೆನಿಸುವುದು.

10. ಯೋಗರಾಜಭಟ್ಟರ ಪ್ರಶಂಸೆ:  ಯೋಗರಾಜ ಭಟ್ಟರ ಚಿತ್ರ ಸಾಹಿತ್ಯ ಇಂದು ಜನಪ್ರಿಯವಾಗಿರುವುದಕ್ಕೆ ಕಾರಣ ಅವರ ಕಾವ್ಯವಸ್ತುಗಳ ವೈವಿಧ್ಯತೆ ಹಾಗು ಸುತ್ತಲೂ ಕಾಣುವ ಜನರ ಜೀವನದ ಬಗ್ಗೆ down-to-earth  ರೀತಿಯ ವಿಶ್ಲೇಷಣೆ ಉದಾಹರಣೆಗೆ ಅವರ ಜಾಕಿ ಚಿತ್ರದ ಹಾಡೊಂದರಲ್ಲಿ ಜಾಕಿಗೆ ಮಾಡಲು ಬರುವ ಕೆಲಸಗಳ ಬಗ್ಗೆ ಕೆಲವು ಸಾಲುಗಳು ಈ ರೀತಿ ಇವೆ...

Maralu Dinnu, Baale Hannu, Puncture Angadi, Paani Poori,
Raagi Machine, Baddi Saala, Real Estate, Mori Clean-u,

ಇವೆಲ್ಲಾ ಅವರಿಗೆ ಹೊಳೆದದ್ದು ಬೆಂಗಳೂರಿಗೆ ವಲಸೆ ಬರುವ ಹಳ್ಳಿಗರ ಜೀವನವನ್ನು ಹತ್ತಿರದಿಂದ ವಿಶ್ಲೇಷಿಸಿದಾಗ. ಬರೀ ಪ್ರೀತಿ, ಪ್ರೇಮ, ಹೂವು ಹಕ್ಕಿ, ಹಸಿರು, ಮಳೆ ಅಂತಹ ಮಧುರ ಅನುಭವಗಳನ್ನು ಕೊಡುವ ವಸ್ತುಗಳನ್ನು ಹುಡುಕಿಕೊಂಡು ಹೋಗಿ ಕವನ ಬರೆದರೆ ಅದರಲ್ಲಿ ಏನೂ ಹೊಸತನವಿರುವುದಿಲ್ಲ. ಅದೆಲ್ಲಾ ಈಗಾಗಲೇ ಎಷ್ಟೋ ಶತಮಾನಗಳಿಂದ ಕಾವ್ಯದಲ್ಲಿ ಸರ್ವೇ ಸಾಮಾನ್ಯ ಬಿದ್ದು ಕೊಳೆಯುತ್ತಿರುವ ವಸ್ತುಗಳು. ಇಂದಿನ ಕವಿಗಳು ಅವುಗಳ ಹಂಗನ್ನು ತೊರೆದು ಹೊರಬರಬೇಕಿದೆ. ಟ್ರಾಫ಼ಿಕ್ ಜಾಮಿನಲ್ಲಿ ಸಿಕ್ಕಿಕೊಂಡಿರುವಾಗ ಸಿಗ್ನಲ್ಲಿನ ಮೇಲೆ ಕವನ ಬರೆಯಿರಿ. ಅಲ್ಲೇ ನಿಂತು ನಿದ್ರಿಸುತ್ತಿರುವ ಪೋಲೀಸನ ಮೇಲೆ ಕವನ ಬರೆಯಿರಿ, ಗಾಡಿಯಿಂದ ಗಾಡಿಗೆ ಓಡಿಬಂದು "ಅಣ್ಣಾ ಹೂವ ತಕ್ಕಳ್ಳಿ ಅಣ್ಣಾ" ಎನ್ನುತ್ತಾ ಗಾಜಿಂದ ಇಣುಕುವ ಪುಟ್ಟ ಹುಡುಗಿಯ ಮೇಲೆ ಕವನ ಬರೆಯಿರಿ. ಹೀಗೆ ವೈವಿಧ್ಯತೆಯ ಪ್ರಯೋಗ ನಡೆಯಲಿ.

11. ಬರೀ ಬಾಗಿಲು ಮಾಡುವವ ಕಾರ್ಪೆಂಟರ್ ಅಲ್ಲ: ಒಬ್ಬ ಕಾರ್ಪೆಂಟರ್ ಆದವನಿಗೆ ಬಾಗಿಲೂ ಮಾಡಲು ಗೊತ್ತಿರಬೇಕು, ಕಿಟಕಿ, ಮೇಜು ಕುರ್ಚಿ, ಮಂಚ ಎಲ್ಲವನ್ನೂ ಮಾಡಲು ಗೊತ್ತಿರಬೇಕು, ಅಂತೆಯೇ ಒಬ್ಬ ಕವಿಯಾದವನು ಒಂದು ವಿಷಯಕ್ಕೆ ಅಂಟಿಕೊಳ್ಳದೇ, ಯಾವುದೇ ವಸ್ತುವಿನ ಮೇಲೆ ಎಂತಹ ಭಾವನೆಗಳ ಬಗ್ಗೆಯೂ ಸರಾಗವಾಗಿ ಬರೆಯುವುದನ್ನು ಕಲಿಯಬೇಕು. ಆಗಷ್ಟೇ ಕವಿತ್ವ ಸಾರ್ಥಕತೆ ಪಡೆಯುವುದು. ಒಂದು ವಿಷಯದ ಬಗ್ಗೆ ಮಾತ್ರ ಬರೆಯುವುದು ಯವ್ವನದಲ್ಲಷ್ಟೇ ಮೊಡವೆ ಬಂದಂತೆ ಎಂದು ಟೀಕಿಸಿದರು.

12. ಕನ್ನಡ ಕವನದಲ್ಲಿ ಆಂಗ್ಲ ಪದ ತಪ್ಪಲ್ಲ! ಇಂದಿನ ಕನ್ನಡ ಕಾವ್ಯದಲ್ಲಿ ಸಾಲು ಸಾಲಿಗೂ ಪರಭಾಷೆಯ ಪದಗಳು ಇಣುಕುತ್ತವೆ. ಅದು ಇಂದಿನ ಜನರ ಆಡುಮಾತುಗಳಿಂದ ಪ್ರೇರಿತವಾಗಿರುವುದರಿಂದ ಈಗಾಗಲೆ ಪ್ರಚಲಿತವಾಗಿರುವ ಪರಭಾಷಾ ಪದಗಳನ್ನು ಕಾವ್ಯದಲ್ಲೂ ಯಥಾವತ್ತಾಗಿ ಬಳಸಬಹುದು. ಅದು ತಪ್ಪೇನಲ್ಲ! ಈಗಲೂ ಸಹ ನಾವು ಅಚ್ಚ ಕನ್ನಡದ ಹಂಗಿನಲ್ಲಿಯೇ ಇದ್ದರೆ ಸಾಹಿತ್ಯವು ಸಾಮಾನ್ಯ ಜನರಿಂದ ದೂರವಾಗಿ ಸುಲಭವಾಗಿ ಎಲ್ಲರಿಗೂ ನಿಲುಕದಂತಾಗುತ್ತದೆ. ನಮ್ಮ ಕವನಗಳು ಯಾರಿಗೂ ಅರ್ಥವಾಗದಂತಾಗುತ್ತದೆ. ಆದ್ದರಿಂದ ಎಲ್ಲೆಡೆ ನಿತ್ಯ ಹೊಸತನ ಗಮನ ಸೆಳೆವಂತೆ ಕನ್ನಡ ಕಾವ್ಯದಲ್ಲೂ ಪರಭಾಷಾ ಪದಗಳ ಬಳಕೆ ಆಗಲಿ ಅದರಲ್ಲಿ ತಪ್ಪೇನಿಲ್ಲ. ಉದಾಹರಣೆಗೆ ಯೋಗರಾಜಭಟ್ಟರ ಈ ಹಾಡು ನೋಡಿ:
"ಹೃದಯದ ಮೇಲೆ ಹೈ-ಹೀಲ್ಡು ಹಾಕಿ
ರಾಜಕುಮಾರಿ ಬಂದಂಗಾಯ್ತು"

ಅದೇ ಇಲ್ಲಿ ಹೃದಯದ ಮೇಲೆ ಕಾಲಿಟ್ಟು ರಾಜಕುಮಾರಿ ಬಂದಳು ಎಂದಿದ್ದರೆ ಅದು ಹಳೇ ಸರಕಾಗುತಿತ್ತು! ಹೈ-ಹೀಲ್ಡು ಎಂಬ ಪರಭಾಷಾ ಪದ ಒಂದರಿಂದಲೇ ಸಾಲು ಸ್ವಾರಸ್ಯಕರವೆನಿಸುತ್ತದೆ!

13. ಚುಟುಕು ಸಾಹಿತ್ಯ, ಹನಿಗವನಗಳೆಂದರೆ ಅಷ್ಟಕ್ಕಷ್ಟೆ: ಜಯಂತ್ ಅವರಿಗೆ ಚುಟುಕು ಸಾಹಿತ್ಯ, ಹನಿಗವನಗಳ ಬಗ್ಗೆ ಹೆಚ್ಚು ಆಸಕ್ತಿಯಿಲ್ಲ ಎಂದು ನನ್ನ ಅಭಿಪ್ರಾಯ. ಎಲ್ಲರ ಕಾವ್ಯವನ್ನು ಕೇಳಿ ಅವುಗಳ ಬಗ್ಗೆ ಒಂದಲ್ಲ ಒಂದು ರೀತಿಯ ಪ್ರತಿಕ್ರಿಯೆ ನೀಡಿದ ಅವರು ಬಹುಶಃ ಇದೇ ಕಾರಣಕ್ಕೆ ನನ್ನ ಎರಡು ಹನಿಗವನಗಳ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲಿಲ್ಲ! ನಾನು ಕವನ ವಾಚನ ಮಾಡುವುದಕ್ಕೂ ಮುಂಚೆಯೇ ಹನಿಗವನಗಳು ಕವನಗಳೇ ಅಲ್ಲ ಎಂದು ಘೋಷಿಸಿಬಿಟ್ಟರು! ಹನಿಗವನಗಳ, ಶಾಯರಿಗಳ ವಾಚನದಲ್ಲಿ ಖ್ಯಾತ ಬಗೆಯಾದ ಮೊದಲನೆಯ ಸಾಲನ್ನು ಎರೆಡೆರಡು ಬಾರಿ ವಾಚಿಸುವ ಶೈಲಿಯನ್ನು ಅಲ್ಲಗೆಳೆದರು.    

14. ಅತ್ಯಂತ ಕಡಿಮೆ ಸಮಯದಲ್ಲಿ ಬರೆದಂಥ ಹಾಡು: ಮುಂಗಾರು ಮಳೆಯ "ಅನಿಸುತಿದೆ ಯಾಕೋ ಇಂದು..."

15. ಅತ್ಯಂತ ಹೆಚ್ಚು ಸಮಯ ಹಿಡಿದ, ಹೆಚ್ಚು ತಲೆ ಕೆಡಿಸಿದ ಗೀತರಚನೆ: ಗಾಳಿಪಟದ "ಮಿಂಚಾಗಿ ನೀನು ಬರಲು..."

16. ಮೆಚ್ಚಿನ ಪತ್ರಿಕೆ: ಮಯೂರ

17. ಇಂದಿನ ಕನ್ನಡ ಚಲನಚಿತ್ರಗಳ ಬಗ್ಗೆ ಬೇಸರ: ಇಂದಿನ ಕನ್ನಡ ಚಲನಚಿತ್ರಗಳ ಗುಣಮಟ್ಟ ಜಯಂತ್ ಅವರಿಗೆ ಬೇಸರ ಮೂಡಿಸುತ್ತದೆ. ಇಡೀ ವರ್ಷದಲ್ಲಿ ಕೇವಲ ಒಂದೆರಡು ಚಿತ್ರಗಳು ಚೆಂದವೆನಿಸುತ್ತವೆ. ಕನ್ನಡ ಚಿತ್ರರಂಗದಲ್ಲಿ ಒಳಗೊಳಗೆ ನಡೆಯುವಂಥ ರಾಜಕೀಯ ಕುತಂತ್ರಗಳು ಸಹ ಬೇಸರ ಮೂಡಿಸುತ್ತದೆ.

18.  ಚಿತ್ರಗಳಲ್ಲಿ ಹೊಸಬರಿಗೆ ಅವಕಾಶ ಒದಗಿಸುವೆ: ಜಯಂತ್ ಅವರು ಯಾವುದೇ ಸಿನಿಮಾಗೆ ಒಪ್ಪಿಕೊಂಡರೂ ಅದರಲ್ಲಿ ಕನಿಷ್ಠ ಪಕ್ಷ ಒಂದು ಹಾಡಿಗಾದರೂ ಹೊಸಬರಿಗೆ ಸಾಹಿತ್ಯ ಬರೆಯಲು ಅವಕಾಶ ಮಾಡಿಕೊಡುವಂತೆ ನಿರ್ಮಾಪಕರಲ್ಲಿ ಒತ್ತಾಯಿಸುತ್ತಾರೆ.

ಇಷ್ಟೆಲ್ಲಾ ತಿಳಿಸಿಕೊಡುವ ಹೊತ್ತಿಗೆ ಜಯಂತ್ ಸರ್ ಗೆ ತುಂಬಾ ಆಯಾಸವಾಗಿತ್ತು! ಕದಂಬ ಹೋಟೆಲಿನಿಂದ ಬಂದ ಬಿಸಿ ಬಿಸಿ ವೆಜ್ ಬಿರಿಯಾನಿ, ಮೊಸರನ್ನ ಜೊತೆಗೆ ಬರ್ಫ಼ಿ ಸವಿಯುತ್ತಾ ನಾವೆಲ್ಲರೂ ಜೊತೆ ಕುಳಿತು ಊಟ ಮಾಡಿದ್ದಾಯ್ತು. ನಂತರ ಗುಂಪಿನಲ್ಲಿ ಹಾಗು ಒಬ್ಬೊಬ್ಬರಾಗಿ ನಿಂತು ಅವರ  photo session ನಡೆಸಿದ್ದಾಯ್ತು, ಕೈ ಗೆ ಸಿಕ್ಕಿದ ಪುಸ್ತಕಗಳ ಮೇಲೆಲ್ಲಾ ಅವರ ಹಸ್ತಾಕ್ಷರ ಪಡೆದಾಯ್ತು. ರೂಪಕ್ಕ, ಅನು ಅಕ್ಕ, ಸತೀಶ್ ನಾಯಕ್, ಗೋಪಿನಾಥ್, ಅರುಣ್ ಶೃಂಗೇರಿಯವರ ಕಂಠ ಮಾಧುರ್ಯ ಸವಿದದ್ದಾಯಿತು! ಕೊನೆಗೆ ನಮ್ಮೆಲ್ಲರ ಒತ್ತಾಯದ ಮೇರೆಗೆ ಜಯಂತ್ ಅವರು ಸಹ ಮಧುರ ಭಾವಗೀತೆಯೊಂದನ್ನು ಹಾಡಿ ನಮ್ಮೆಲ್ಲರ ಮನ ತಣಿಸಿದರು.  3K  ಕರಾವಳಿ ಪ್ರತಿನಿಧಿ, ಮಂಗಳೂರಿನ ಮಹೇಶ್ ಮೂರ್ತಿಯವರಿಂದ ಶಾಲು ಹೊದಿಸಿ ಚಿತ್ರಸಾಹಿತ್ಯ ಲೋಕದ ದಿಗ್ಗಜ, ಅಭಿಮಾನಿಗಳ ಕಣ್ಮಣಿ, ಜಯಂತ್ ಕಾಯ್ಕಿಣಿಯವರನ್ನು ಸನ್ಮಾನಿಸಲಾಯಿತು. 

 

ಹೊತ್ತಾಗುತ್ತಾ ಬಂದರೂ ನಮಗ್ಯಾರಿಗೂ ಅಲ್ಲಿಂದ ಹೋಗಲು ಮನಸೇ ಆಗುತ್ತಿರಲಿಲ್ಲ... ಸದಾ ಹಸನ್ಮುಖರಾಗಿ ಬಹಳ ಆಪ್ತವಾಗಿ ಮಾತನಾಡುವ ಅವರ ಮಾತುಗಳು ಇನ್ನು ಕೇಳುತ್ತಲೇ ಇರಬೇಕೆಂಬ ಹಂಬಲ ಇನ್ನು ಎಲ್ಲರಲ್ಲೂ ತುಂಬಿಕೊಂಡಿತ್ತು. ಸರಿ ನಾ ಹೊರಡುವೆ ಎಂದು ಅವರು ತಮ್ಮ ಕಾರಿನ ಬಳಿ ಹೆಜ್ಜೆ ಹಾಕುವಾಗಲೂ ಅವರ ಫೋಟೋ ತೆಗೆಯುತ್ತಾ ಹಿಂದೆ ಹಿಂದೆಯೇ ಸಾಗುತ್ತಿದ್ದ ನನ್ನ ನೋಡಿ ನಕ್ಕು ಹೆಗಲ ಮೇಲೆ ಕೈ ಹಾಕಿ "ಈ ಕ್ಯಾಮೆರಾ ಪುಣ್ಯತ್ಮನ ಜೊತೆಗೆ ನನ್ನದೊಂದು ಫೋಟೋ ತೆಗೆಯಪ್ಪಾ" ಎಂದರು. ಅರುಣ್ ಶೃಂಗೇರಿ ಕ್ಲಿಕ್ಕಿಸಿದ ಈ ಫೋಟೋಗೆ ನಾನು ಕಟ್ಟು ಹಾಕಿಸಿ ಇಟ್ಟಿಕೊಳುವುದು ಗ್ಯಾರಂಟಿ!



Monday, November 25, 2013

ನಗುಬೆಳಕ ಚೆಲ್ಲುತಿರು ಹೀಗೇ...


ಕತ್ತಲೆಯ ಕ್ಷಣಗಳು..
ನನ್ನ ಕಾಡುವವು ಗೆಳತಿ..
ನಿನ್ನ ಮೌನದಂತೆ..

ನನ್ನ ಅವ್ಯಕ್ತ ಆಸೆಗಳೇ
ನನಗೆ ಮುಳುವಾಗುವವು..

ನಿನ್ನ ಒಲವಿನ ಹಣತೆಯ ಸುತ್ತ
ಹಾರಾಡುವ ಹುಳುವಾಗುವವು..

ಸಾಯುವವು ವಿರಹದಗ್ನಿಯಲಿ
ರೆಕ್ಕೆ ಸುಟ್ಟು...

ನೀ ನಗುಬೆಳಕ ಚೆಲ್ಲಲು
ಅವಕೆ ಮರುಹುಟ್ಟು...

ಎರೆಯುತಿರು ಕಣ್ಣಲ್ಲೆ
ಪ್ರೀತಿಯ ತೈಲವ ಹೀಗೆ...

ಬೆಳಗುತಿರು ಮನೆ ಮನದಿ
ಅನಂತ ಅನುರಾಗದ ದೀವಿಗೆ! 
=========================================
 
ಚಿತ್ರದಲ್ಲಿರುವವರು: ದಿಲೀಪ್ ರಾವ್ &  ಸಂಧ್ಯಾ ಎಂ. ಎಸ್. (ನನ್ನ ಅಣ್ಣ ಮತ್ತು ಅತ್ತಿಗೆ)

Monday, November 11, 2013

ಬೆಳಕಾಗುವವು ನಿನ್ನ ನಗು...


ಕತ್ತಲೆ ಕವಿದ
ಏಕಾಂತದ ಹಾದಿಯಲಿ...
ಆದಿಯಿಂದ
ಅಂತ್ಯದವರೆಗೂ...

ಹೆಜ್ಜೆ ಹೆಜ್ಜೆಗೂ...

ಬೆಳಗುವ
ಪುಟ್ಟ ಪುಟ್ಟ
ನೆನಪುಗಳ ಮಿನುಗು...

ಅಣ್ಣನ ಬಾಳ
ಬೆಳಗುವುದು ಇಂದಿಗೂ..

ಅತ್ತಿಗೆ,
ಆ ನಿಮ್ಮ ಮುಗ್ಧ ಕಾಂತಿಯ ನಗು!


---------------------------------------------
ಚಿತ್ರದಲ್ಲಿರುವವರು: ಸಂಧ್ಯಾ ಎಂ. ಎಸ್. (ನನ್ನ ಅತ್ತಿಗೆ)


Monday, October 21, 2013

ಕೀಟಲೋಕ-೧ - ಕೌತುಕದ ಕಣಜ


              ಅದು ಮೇ ತಿಂಗಳ ಬಿರು ಬೇಸಿಗೆಯ ಮಟ ಮಟ ಮಧ್ಯಾಹ್ನ. ವಿದ್ಯುತ್ ಕಡಿತದಿಂದಾಗಿ ಮನೆಯೊಳಗೆ ಬಿಸಿ ಬಿಸಿ ಹಬೆ. ಮನೆಯಲ್ಲಿ ಎಲ್ಲರೂ ಕೈಗೊಂದು ಬೀಸಣಿಗೆ ಹಿಡಿದು ಪಟಪಟನೇ ಬೀಸಿಕೊಳ್ಳುತ್ತಿದ್ದರು. ಹಿತ್ತಲಿನಲ್ಲಿ ಅರ್ಧಗಂಟೆಯಷ್ಟೇ ಹಿಂದೆ ಒಣಗಿ ಹಾಕಿದ್ದ ಬಟ್ಟೆಗಳು ಬಿಸಿಲ ಝಳಕ್ಕೆ ಆಗಲೇ ಒಣಗಿ ಗರಿಗರಿಯಾಗಿದ್ದವು. ಬಟ್ಟೆಗಳ ಎಳೆದುಕೊಳ್ಳುತ್ತಾ ಬಂದ ನನಗೆ ಒಣಗಿಸುವ ತಂತಿಯ ತುದಿಯಲ್ಲಿ ಕಣಜ ಹುಳುಗಳ ಗೂಡೊಂದು ನೇತಾಡುತ್ತಿರುವುದು ಕಣ್ಣಿಗೆ ಬಿತ್ತು. ಛಾಯಾಗ್ರಹಣ ನೆಚ್ಚಿನ ಹವ್ಯಾಸವಾಗಿರುವ ನನಗೆ ಇಂಥ ಸೂಕ್ಷ್ಮ ಜೀವಿಗಳನ್ನು ಕಂಡರೆ ಎಲ್ಲಿಲ್ಲದ ಕುತೂಹಲ! ತಕ್ಷಣವೇ ಹೋಗಿ ನನ್ನ ಕ್ಯಾಮೆರಾ ತಂದೆ. ಉದ್ದನೆಯ ಜ಼ೂಮ್ ಲೆನ್ಸ್ ಬಳಸಿ ಆ ಸಣ್ಣ ಹುಳುಗಳ ದೊಡ್ದ ದೊಡ್ಡ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದೆ. ಜೋರಾಗಿದ್ದ ಬಿಸಿಲಿಗೆ ಫಳಫಳನೆ ಹೊಳೆಯುತ್ತಿದ್ದ ಕಣಜಗಳ ಮೈ ಸುಂದರವಾಗಿ ಸೆರೆ ಸಿಕ್ಕವು. ಹೊಳಪಿನ ತಿಳಿಗೆಂಪು ಬಣ್ಣದ ಮೈಯ್ಯ ಎರಡು ಬದಿಯಲ್ಲೂ ಪುಟ್ಟ ಪುಟ್ಟ ಹೊಳೆಯುವ ಪಾರದರ್ಶಕ ರೆಕ್ಕೆಗಳು, ಜೊತೆಗೆ ಅಲ್ಲಲ್ಲಿ ಹಳದಿ ಪಟ್ಟಿಗಳು ದುಂಡಾದ ದೇಹಕ್ಕೆ ಮೆರಗು ನೀಡುವಂತಿದ್ದವು. ಕಪ್ಪನೆಯ ಅಂಡಾಕಾರದ ದೊಡ್ಡ ದೊಡ್ಡ ಕಣ್ಣುಗಳು ಮುಖದ ಮುಕ್ಕಾಲು ಭಾಗ ಆವರಿಸಿ ಮುದ್ದಾಗಿ ಕಾಣುತ್ತಿದ್ದವು. ಅವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಮೂಡಿಸಿದವು.

              ಇವೇ ಕಾಗದದ ಕಣಜ (Paper Wasp) ಎಂಬುವ ಜಾತಿಗೆ ಸೇರಿದ ಪಾಲಿಸ್ಟೆಸ್ ಸ್ಟೆನೋಪಸ್ (Polistes Stenopus) ಎಂಬ ಉಪಜಾತಿಗೆ ಸೇರಿದ ಕೀಟ. 15-25 ಮಿ.ಮಿ. ಉದ್ದವಿರುವ ಈ ಕೀಟಗಳು ಮನೆಯ ಮೂಲೆಗಳಲ್ಲಿ ಕಂದು ಬಣ್ಣದ ಗೂಡುಗಳನ್ನು ಕಟ್ಟುವುದು ಸಾಮಾನ್ಯ. ಲೋಟದ ಆಕಾರವಿರುವ ಹಲವು ಗೂಡುಗಳನ್ನು ಒಂದು ಸಮೂಹದಂತೆ ಕಟ್ಟುವ ಇವು ಅದಕ್ಕಾಗಿ ಮರ-ಗಿಡಗಳ ಪೊಟರೆಯನ್ನು ಕೆರೆದು ಪುಡಿಮಾಡಿ ಅದಕ್ಕೆ ತನ್ನ ಎಂಜಲನ್ನು ಮಿಶ್ರಮಾಡಿ ತಯಾರು ಮಾಡಿದ ಕಾಗದದಂತಹ ಪದಾರ್ಥವನ್ನು ಬಳಸುತ್ತದೆ. ಆದ್ದರಿಂದಲೇ ಕಾಗದದ ಕಣಜವೆಂಬ ಹೆಸರು ಬಂದಿದೆ. ಹೆಸರಿಗೆ ಮಾತ್ರ ಕಾಗದ ಎನಿಸಿದರೂ ಈ ಗೂಡುಗಳು ಮಳೆ ನೀರಿನಿಂದ ಸಂಪೂರ್ಣ ರಕ್ಷಣೆ ನೀಡುತ್ತದೆ. ಎಷ್ಟೇ ಧಾರಾಕಾರ ಮಳೆ ಸುರಿದರೂ ಒಳಗಿರುವ ಮೊಟ್ಟೆಗಳು ಬೆಚ್ಚಗಿರುತ್ತವೆ! ಇದು  100% water-proof!  ಅಷ್ಟೇ ಅಲ್ಲ ಇವುಗಳ ಎಂಜಲು ಮಿಶ್ರಿತವಾದ ಪದಾರ್ಥವಾದ್ದರಿಂದ ಈ ಗೂಡುಗಳು ಒಂದು ರೀತಿಯ ವಾಸನೆ ಬೀರುತ್ತವೆ. ಈ ವಾಸನೆ ಸಹಿಸಲಾಗದೆ ಇರುವೆಗಳು ಸಹ ಗೂಡುಗಳ ಹತ್ತಿರ ಸುಳಿಯುವುದಿಲ್ಲ. ಮಕರಂದ ಸುರಕ್ಷಿತವಾಗಿರುತ್ತದೆ!
            ಸಾಮಾನ್ಯವಾಗಿ ಮನೆಯ ಯಾವುದೋ ಮೂಲೆಯಲ್ಲಿ ತಮ್ಮ ಪಾಡಿಗೆ ತಾವು ಸದ್ದಿಲ್ಲದೆ ಬದುಕುವ ಈ ಕೀಟಗಳು ಯಾರಾದರೂ ಗೂಡು ಅಥವ ಕೀಟ ಸಮೂಹಕ್ಕೆ ಹಾನಿಯುಂಟು ಮಾಡಿದಾಗ ಮಾತ್ರ ಮನುಷ್ಯನ ಮೇಲೆ ಗುಂಪು ಗುಂಪಾಗಿ ದಾಳಿ ಮಾಡುತ್ತವೆ. ಇವುಗಳ ದೇಹದ ತುದಿಯಲ್ಲಿರುವ ಮೊನಚಾದ ಮುಳ್ಳು ಮಾನವ ಚರ್ಮಕ್ಕೆ ಸೋಕಿದರೆ ಅತಿಯಾದ ತುರಿತ, ಊತ ಹಾಗು ಇನ್ನೂ ಗಂಭೀರವಾದ ಅಲರ್ಜಿಗಳು ಉಂಟಾಗಬಹುದು. ಹಾಗೆಂದ ಮಾತ್ರಕ್ಕೆ ಇವು ಅಪಾಯಕಾರಿ ಎಂದೇನಲ್ಲ. ಬೆಳೆಯನ್ನು ನಾಶಪಡಿಸುವ ಕೆಲವು ಕೀಟಗಳು ಇವಕ್ಕೆ ಆಹಾರವಾಗುವುದರಿಂದ ಇವು ರೈತರಿಗೆ ಉಪಕಾರಿ ಎಂದು ಹೇಳುತ್ತಾರೆ.

            ಹಾಗೆ ಬಗೆ ಬಗೆಯ ಕೋನಗಳಿಂದ ಈ ಹುಳುಗಳ ಫೋಟೋ ಕ್ಲಿಕ್ಕಿಸುತ್ತಾ ಅವುಗಳ ಚಟುವಟಿಕೆಗಳನ್ನು ಗಮನಿಸುತ್ತಾ ನಿಂತ ನನಗೆ ಅವುಗಳ ಕಾರ್ಯವೈಖರಿ ಕಂಡು ಅಚ್ಚರಿ ಮೂಡಿತು! ಎಂಥ ಮಹಾನಗರಗಳನ್ನೂ ಅವ್ಯವಸ್ಥೆಗಳು ಕಾಡುತ್ತವೆ. ಅಂಥದ್ದರಲ್ಲಿ ಈ ಕಣಜಗಳು ತಮ್ಮ ಜೀವನ ಶೈಲಿಯಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳು ವಿಸ್ಮಯಕಾರಿಯಾಗಿದೆ! ಆ ಪುಟ್ಟ ಗೂಡುಗಳ ಸಮೂಹದಲಿ ಸುಮಾರು ಹತ್ತರಿಂದ ಇಪ್ಪತ್ತು ಕಣಜಗಳು ವಾಸವಿದ್ದಿರಬಹುದು. ನಾನು ನೋಡಿದಾಗ ಬಹಳಷ್ಟು ಕಣಜಗಳು ಆಗಾಗ್ಗೆ ಬಂದು ಗೂಡಿಗೆ ಏನೇನೋ ತುರುಕಿ ಮರಳುತ್ತಿದ್ದವು. ಇನ್ನೆರಡು ಕಣಜಗಳು ಮಾತ್ರ ಗೂಡಿನ ಸಮೂಹದ ಮೇಲೆ ಎದುರು ಬದುರಾಗಿ ಅತ್ತಿಂದಿತ್ತ ಇತ್ತಿಂದಿತ್ತ ಕಾವಲುಗಾರರಂತೆ ಓಡಾಡುತ್ತಿದ್ದವು! ಅಷ್ಟೇ ಅಲ್ಲದೇ ಓಡಾಡುವಾಗ ಗೂಡಿನ ಸುತ್ತಲೂ ಗಾಳಿ ಹರಿದಾಡುವಂತೆ ಮಾಡಿ ತಮ್ಮ ಗೂಡುಗಳನ್ನು ತಂಪಾಗಿಡಲು ತಮ್ಮ ಸೂಕ್ಷ್ಮವಾದ ರೆಕ್ಕೆಗಳನ್ನು ಅತೀ ವೇಗದಲ್ಲಿ ನಿರಂತರವಾಗಿ ಬಡಿಯುತ್ತಿದ್ದವು! ಈ ಮೂಲಕ ಒಳಗಿರುವ ಮೊಟ್ಟೆಗಳೂ ಮಕರಂದವೂ ಬಿಸಿಲಿಗೆ ಬೆಂದು ಹೋಗುವುದನ್ನು ತಪ್ಪಿಸುತ್ತಿದ್ದವು!

            ಬೇಸಿಗೆಯ ಶಾಖ ನಿಯಂತ್ರಿಸಲು ಮನುಷ್ಯ ಬೀಸಣಿಗೆ, ಫ್ಯಾನು, ಹವಾನಿಯಂತ್ರಕ, ಹೀಗೆ ಏನೆಲ್ಲಾ ಆವಿಷ್ಕರಿಸಿದ್ದಾನೆ. ಆದರೆ ಈ ಸಣ್ಣ ಕಣಜಗಳಿಗೆ ತಮ್ಮ ರೆಕ್ಕೆಗಳನ್ನೇ ಬೀಸಣಿಗೆಯಂತೆ ಬಳಸುವ ತಂತ್ರ ಅದ್ಯಾರು ಹೇಳಿ ಕೊಟ್ಟರೋ? ಹೀಗೊಂದು ಚಿಕ್ಕ ಹುಳುವಿನ ಪರಿಚಯದ ಮೂಲಕ ಪ್ರಕೃತಿಯ ವಿಸ್ಮಯಗಳಿಗೊಂದ ಕನ್ನಡಿ ಹಿಡಿಯುವ ನನ್ನ ಪ್ರಯತ್ನ ಸಫಲವಾದಂತೆ ಅನುಭವವಾಯಿತು!


ಅಲ್ಲಿ ಇಲ್ಲಿ ಕಲೆಹಾಕಿದ ಮಾಹಿತಿಯನ್ನು ಪರಿಶೀಲಿಸಿ ಪ್ರೋತ್ಸಾಹಿಸಿದ ನಮ್ಮ  ವಿಙ್ಞಾನಿ ಡಾ. ಆಜ಼ಾದ್ ಅವರಿಗೆ ಧನ್ಯವಾದಗಳು

Monday, September 23, 2013

ಈರುಳ್ಳಿರಾಜನ ಆಸ್ಥಾನದಲ್ಲಿ...

ಅದು ಈರುಳ್ಳಿರಾಜನ ರಾಜ್ಯ....
 ಮಾರುಕಟ್ಟೆಯ ಒಂದು ಗಲ್ಲಿಯಲ್ಲಿ ಮುಂಜಾನೆ ಅಂಗಡಿಗಳು ಬಾಗಿಲು ತೆರೆಯುತ್ತಿವೆ. ಅಲ್ಲಿನ ಪ್ರಜೆಗಳು ಬಹಳ ಪರಿಶ್ರಮದ ಜೀವಿಗಳು. ಬೆಳಗ್ಗೆ ಬೇಗನೇ ಎದ್ದು ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಮಾರುಕಟ್ಟೆಯ ಮಧ್ಯದಲ್ಲಿ ಒಂದು ಆಭರಣಗಳ ಅಂಗಡಿ ಬಾಗಿಲು ತೆರೆಯಿತು. ಅದರೊಳಗಡೆ ಎಲ್ಲೆಡೆ ಪ್ರಕಾಶಮಾನವಾದ ದೀಪಗಳು ಪ್ರಜ್ವಲಿಸುತ್ತಿದೆ. ದೀಪದ ಬೆಳಕನ್ನು ಪ್ರತಿಬಿಂಬಿಸುವ ಕನ್ನಡಿಯ ಗೋಡೆಗಳು. ಎಲ್ಲೆಡೆ ಫಳ ಫಳನೇ ಮೆರಗು! ಕೆಳಗೊಂದು ಮೇಲೊಂದು ಬೀಗ ಹಾಕಿ ಭದ್ರ ಮಾಡಿದ ಗಾಜಿನ ಶೋಕೇಸುಗಳು! ಆ ಶೋಕೇಸಿನ ಒಳಗೆ ಹೊಳೆಯುತ್ತಿದ್ದವು ವಿವಿಧ ಬಣ್ಣಗಳ ಬೇರೆ ಬೇರೆ ಗಾತ್ರದ ಈರುಳ್ಳಿಗಳು!

ಹೌದು, ಆ ರಾಜ್ಯದಲ್ಲಿ ಈರುಳ್ಳಿಗಳೇ ಸರ್ವ ಶ್ರೇಷ್ಠ ವಸ್ತು! ಈರುಳ್ಳಿಗಿಂತ ಮಿಗಿಲಾದ ವಸ್ತು ಇನ್ನೊಂದಿಲ್ಲ! ಇದು ಈರುಳ್ಳಿರಾಜನ ಅಪ್ಪಣೆಯಾಗಿತ್ತು!

ಆ ಆಭರಣದ ಅಂಗಡಿಗಳ ಮುಂದೆ ಒಂದು ತಳ್ಳುವ ಗಾಡಿ ಸಾಗುತ್ತಿದೆ. ಒಣಗಿ ಹೋದ ಬಡ ಬದನೆಕಾಯಿಯೊಂದು ಹರಿದ ಬನಿಯನ್ನು, ಲುಂಗಿ ತೊಟ್ಟು ಏದುಸಿರುಬಿಡುತ್ತಾ ಆ ಕೈಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದೆ. ಜೊತೆಗೆ ಆಗಾಗ ಸ್ವಲ್ಪ ನಿಂತು ಸುಧಾರಿಸಿಕೊಂಡು ಬೆವರೊರೆಸಿಕೊಳ್ಳುತ್ತಾ "ಹತ್ರುಪಾಯ್ಗ್ ಮೂರು, ಹತ್ರುಪಾಯ್ಗ್ ಮೂರು..." ಎಂದು ಕೂಗುತ್ತಿದೆ. ಸುತ್ತಲೂ ಹೋಗುತ್ತಿರುವವರು ಇದರ ಅವಸ್ಥೆ ಕಂಡು, ಕನಿಕರಪಟ್ಟು ತಮ್ಮ ಪಾಡಿಗೆ ತಾವು ಹೋಗುತ್ತಿದ್ದಾರೆಯೇ ಹೊರತು ಯಾರೂ ಖರೀದಿಸಲು ಮುಂದಾಗುತ್ತಿಲ್ಲ. ಹಾಂ! ಹೇಳುವುದೇ ಮರತೆ ಆ ಕೈಗಾಡಿಯಲ್ಲಿ ಬಡ ಬದನೆಕಾಯಿ ಮಾರುತ್ತಿದ್ದುದು ಚಿನ್ನ-ಬೆಳ್ಳಿಯ ಪಾತ್ರೆಗಳು, ಉಂಗುರ, ಸರ, ಕೈಬಳೆ, ಕಾಲ್ಗೆಜ್ಜೆಗಳು ಜೊತೆಗೆ ಸ್ವಲ್ಪ ರತ್ನ, ವಜ್ರಗಳು ಅಷ್ಟೇ!!!

ಅದು ಸುಂದರವಾದ ಅರಮನೆ. ಸುತ್ತಲೂ ದೊಡ್ಡ ದೊಡ್ಡ ಕಂಬಗಳು. ಅದರ ಸೌಂದರ್ಯ ವರ್ಣನೆಗೆ ಮೀರಿದ್ದು.


 ಒಳಗೆ ಆಸ್ಥಾನದಲ್ಲಿ ಮುಖ್ಯಮಂತ್ರಿಗಳಾದ ಅಲೂಗಡ್ಡೆ ಮೊದಲಾಗಿ, ಪಂಡಿತರಾದ ಸೌತೆಕಾಯಿ, ಹಣಕಾಸು ಸಚಿವ ಹಾಗಲಕಾಯಿ, ಆರೋಗ್ಯ ಸಚಿವ ಕೆಂಪು ಮೂಲಂಗಿ, ಗೃಹ ಸಚಿವೆ ಟೊಮ್ಯಾಟೋ ದೇವಿ ಮುಂತಾದವರು ಉಪಸ್ಥಿತರಿದ್ದರು. ರಾಜ ಬರುವ ಮಾರ್ಗದಲ್ಲಿ ಅಲ್ಲಲ್ಲಿ ಸೈನಿಕ ಹುರುಳೀಕಾಯಿಗಳು ತಮಗಿಂತ ತೆಳ್ಳಗಿರುವ ಈಟಿಯನ್ನು ಹಿಡಿದು ನಿಂತಿದ್ದಾರೆ. ಅವರ ಪಕ್ಕದಲ್ಲಿ ಹಸಿರು ಸೀರೆಯನುಟ್ಟ ಎಲೆಕೋಸುದೇವಿಯರು ಅಗಲವಾದ ತಟ್ಟೆಗಳಲ್ಲಿ ಈರುಳ್ಳಿ ಸಿಪ್ಪೆಯ ತುರಿ ಹಿಡಿದು ರಾಜನ ಬರುವನ್ನೇ ಕಾಯುತ್ತಿದ್ದಾರೆ. ಘೋಷ ಮೊಳಗುತ್ತದೆ...
"ರಾಜಾಧಿ ರಾಜsss.... ತೇಜ ಭೋಜsss....
ವೀರಾಧಿ ವೀರsss....  ಅಪ್ರತಿಮ ಶೂರsss....
ಈರುಳ್ಳಿ ರಾಜಾsss....  ಆಗಮಿಸುತ್ತಿದ್ದಾರೆsss.... "



ಈರುಳ್ಳಿರಾಜ ಕೈಯಲೊಂದು ಹೂವಿನಾಕೃತಿಯಲ್ಲಿ ಕತ್ತರಿಸಿದ ಈರುಳ್ಳಿಯನ್ನು ಹಿಡಿದು ಅದರ ಸುಗಂಧವನ್ನು ಹೀರುತ್ತಾ ಬರುತ್ತಿದ್ದಾನೆ. ಬದಿಯಲ್ಲಿ ನಿಂತಿದ್ದ ಎಲೆಕೋಸುಗಳು ಈರುಳ್ಳಿ ಸಿಪ್ಪೆಯ ತುರಿಗಳನ್ನು ಹೂವಿನಂತೆ ರಾಜನ ಮೇಲೆ ಹಾಕುತ್ತಿದ್ದಾರೆ. ಇದರಿಂದ ರಾಜನಿಗೆ ಮತ್ತಷ್ಟು ಸಂತೋಷ ಉಂಟಾಗಿ ಹಸನ್ಮುಖನಾಗಿ ಅಸ್ಥಾನಕ್ಕೆ ಬರುತ್ತಿದ್ದಾನೆ. ಎಲ್ಲರೂ ಎದ್ದು ನಿಂತಿದ್ದಾರೆ. ಈರುಳ್ಳಿರಾಯನು ಬಂದು ತನ್ನ ಸಿಂಹಾಸನವನ್ನು ಅಲಂಕರಿಸಿದನು. ಅವನ ಪಕ್ಕದಲ್ಲೆ ಅವನ ಸಹೋದರನಾದ ಬೆಳ್ಳುಳ್ಳಿರಾಯನೂ ಉಪಸಿಂಹಾಸನದ ಮೇಲೆ ಕುಳಿತನು. ಎಂದಿನಂತೆ ಮೊದಲಿಗೆ ಸಂಗೀತ ಕಾರ್ಯಕ್ರಮವಿತ್ತು. ಮಂತ್ರಿಯಾದ ಆಲೂಗಡ್ಡೆಯು ಮುಂದೆ ಬಂದು ಕಾರ್ಯಕ್ರಮದ ಪರಿಚಯ ಮಾಡಿಸಿದನು.

"ಇಂದು ನಿಮ್ಮನ್ನು ರಂಜಿಸಲು ನಮ್ಮ ನಾಡಿನ ಉತ್ತರ ಭಾಗದಿಂದ ಕೆಲವು ಈರುಳ್ಳಿಗಳ ತಂಡ ಬಂದಿದೆ. ಅವರು ನಮ್ಮ ರಾಜಣ್ಣನವರ ಜೀವನ ಚೈತ್ರ ಚಿತ್ರದ ಹಾಡೊಂದನ್ನು ಹಾಡಲಿದ್ದಾರೆ.

ರಾಜನ ಅಪ್ಪಣೆ ದೊರೆಯಿತು. ಸಂಗೀತ ಶುರುವಾಯಿತು... ತೆಳ್ಳಗೆ ಬೆಳ್ಳಗೆ ಇರುವ ಈರುಳ್ಳಿಯೊಂದು ರಾಜ್‍ಕುಮಾರ್ ಸ್ಟೈಲಿನಲ್ಲಿ ಚೂಪು ಮೀಸೆ ಬಿಟ್ಟು ಮುಗುಳ್ನಗೆ ಬೀರುತ್ತಾ ವೇದಿಕೆಗೆ ಬಂದಿತು. ಹಿಂದೆ ಚಿಕ್ಕ ಚಿಕ್ಕ ಈರುಳ್ಳಿಗಳ ಗುಂಪು ವಾದ್ಯ ನುಡಿಸುತ್ತಿತ್ತು!

ಈರುಳ್ಳಿಯಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ
ಹೊಲ ಬಿಟ್ಟು ಏರಿದ್ ನಾವು ಎತ್ತಿನ್ ಬಂಡಿ
ದೋಸೆ ಪಲ್ಯ ಪಕೋಡ ಅಂತ ಆದ್ವಿ ತಿಂಡಿ
ಕೇಜಿ ರೇಟು ಎಂಭತ್ತಾದ್ರು ತಿನ್ನಿ ಉಳ್ಳಾಗಡ್ಡಿ!

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು
ಈರುಳ್ಳಿ ಬೆಳ್ಳುಳ್ಳಿ ಎಷ್ಟು ಚೆನ್ನಾಗ್ ಬೆಳೀತಾವ್ ನೋಡು
ನಾವು ಕೈಯ್ಯ ಕೊಟ್ಟ್ರೆ ಪಾಪ ರೈತರ ಪಾಡು
ಸಾಲ ತೀರ‍್ಸೋಕಾಗ್ದೆ ಸೇರಿದ್ ಸುಡುಗಾಡು

ಅಣ್ಣಾ ಹಜ಼ಾರೆ, ಬಾಬಾ ಅಂಥೋರ್ ಮಾಡ್ತಾರ್ ಉಪವಾಸ
ಅವರ‍್ನ ನಂಬ್ಕೊಂಡ್ ಜೊತೇಗ್ ಕುಂತೋರ‍್ಗ್ ಜೈಲುವಾಸ
ಏನೇ ಹೇಳಿ ಯೆಡ್ದಿ-ರೆಡ್ದಿಗಳ್ದ್ ಭಾಳಾ ಮೋಸ
ಸತ್ಯ-ಧರ್ಮ ಹೊಂಟೋದ್ವಂತೆ ವನವಾಸ

|| ಈರುಳ್ಳಿಯಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ...||


ಸಂಗೀತ ಅಲ್ಲಿಗೆ ಮುಗಿಯುತ್ತದೆ. ಚಪ್ಪಾಳೆಗಳ ಸುರಿಮಳೆಯಾಗುತ್ತದೆ. ಕಲಾವಿದರು ಮರಳುತ್ತಾರೆ. ರಾಜನು ಮಂತ್ರಿಯನ್ನು ಕರೆದು ಮೆಲ್ಲಗೆ ಕಿವಿಯಲ್ಲಿ ಹೇಳುತ್ತಾನೆ,
"ಮಂತ್ರಿಗಳೇ ಅದೇ ಹಳೇ ರೀತಿಯ ಮನೋರಂಜನಾ ಕಾರ್ಯಕ್ರಮಗಳು ಬೇಸರ ಮೂಡಿಸುತ್ತಿವೆ.. ಹೊಸ ಥರದ್ದೇನಾದರೂ ತೋರಿಸಿ..."
"ಮಹಾ ಪ್ರಭು, ಯಾವ ರೀತಿಯ ಕಾರ್ಯಕ್ರಮವೆಂದು ತಾವೇ ಸೂಚಿಸಿದರೆ ಸೂಕ್ತ..."
"ಅದೇ ಬಾಲಿವುಡ್‍ನ ಐಟಮ್ ಸಾಂಗ್ ಥರದ್ದು.." ಎಂದು ಈರುಳ್ಳಿರಾಜ ನಾಚುತ್ತಲೇ ನುಡಿದ!
"ಓಹ್! ಆಗಲಿ ಮಹಾಪ್ರಭು!" ಎಂದು ಆಶ್ಚರ್ಯದಿಂದ ನಗುತ್ತಲೇ ಮಂತ್ರಿ ತನ್ನ ಸೇವಕನ ಕಿವಿಯಲ್ಲಿ ಏನೋ ಮೆಲ್ಲಗೆ ನುಡಿದು ನಂತರ ಘೋಷಿಸುತ್ತಾನೆ...
"ಮುಂದಿನ ಕಾರ್ಯಕ್ರಮ ನರ್ತನೆ... ನರ್ತಕಿ ಮುಂಬೈಯಿಂದ ಬಂದ ಖಾರಾ ಕೈಫ್!!!"

ತುಂಡುಡುಗೆ ತೊಟ್ಟ ಹಚ್ಚ ಹಸುರಿನ ತೆಳ್ಳನೆಯ ಮೈಯ್ಯ ಮೆಣಸಿನಕಾಯಿಯೊಂದು ವೇದಿಕೆಯ ಮೇಲೆ ಪ್ರತ್ಯಕ್ಷವಾಗುತ್ತದೆ! ಎಲ್ಲಾ ತರಕಾರಿಗಳೂ ಕಣ್ಣು ಬಾಯಿ ಅಗಲಿಸಿ ನೋಡುತ್ತಿದಾರೆ. ಸಂಗೀತ ಶುರುವಾಗುತ್ತದೆ...


Oh zara zara cut me, cut me, cut me,
Oh zara zara chew me, chew me, chew me,
oh zara zara taste me, taste me, taste me,
oh zara zara ooh ooh...


ಎಲ್ಲರೂ ಖಾರಾ ಕೈಫ್‍ನ ಮೋಹಕ ಮೈಮಾಟವನ್ನು ನೋಡುತ್ತಾ ಅವಳ ಹಾಡಿನ ಅಮಲಿನಲ್ಲಿ ಮುಳುಗಿ ಹೋಗಿರುವಾಗ ಅಲ್ಲಿಗೆ ಗೋರಿಕಾಯೊಂದು ಓಡಿ ಬಂದು ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡುತ್ತದೆ. ಸಿಟ್ಟಾದ ರಾಜನ ಮುಂದೆ ಕೈ ಮುಗಿದು
"ಕ್ಷಮಿಸಬೇಕು ಮಹಾಪ್ರಭು.. ನಿಮ್ಮ ಅಪ್ಪಟ ವೈರಿಯೊಬ್ಬ ಸೆರೆ ಸಿಕ್ಕ ಸಿಹಿ ಸುದ್ಧಿಯನ್ನು ತಿಳಿಸಲು ಬಂದೆ"
"ಏನು! ನಮ್ಮ ವೈರಿ ಸೆರೆ ಸಿಕ್ಕನೆ? ಯಾರು? ಯಾರದು ಆ ವೈರಿ?"
ಆ ಸಮಯಕ್ಕೆ ಸರಿಯಾಗಿ ರಾಜನ ಆಪ್ತ ಸೇನಾಧಿಪತಿಯಾದ ಬೆಂಡೇಕಾಯಿ ಕುದುರೆಯ ಮೇಲೆ ದುಂಡಾದ ವಸ್ತು ಒಂದನ್ನು ಸರಪಳಿಗಳಿಂದ ಬಂಧಿಸಿ ಆಸ್ಥನಕ್ಕೆ ಕರೆ ತಂದು ಸರಪಳಿ ಬಿಚ್ಚುತ್ತಾನೆ. ಆ ದುಂಡಾದ ವಸ್ತು ತಕ್ಷಣವೇ ಕೆಳಗುರುಳಿ ಬಿದ್ದು ಹೊರಳಾಡಿ ಎದ್ದೇಳಲು ಕಷ್ಟ ಪಡುತ್ತಿರುತ್ತದೆ. ಸೈನಿಕರಿಬ್ಬರು ಬಂದು ಅದನ್ನು ಎಬ್ಬಿಸಿ ರಾಜನೆಡೆಗೆ ಮುಖಮಾಡಿ ನಿಲ್ಲಿಸುತ್ತಾರೆ. ಸೇನಾಧಿಪತಿ ಬೆಂಡೇಕಾಯಿ ನುಡಿಯುತ್ತಾನೆ. ..
"ಮಹಾಪ್ರಭು, ಇವನು ನಿಮ್ಮ ಬದ್ಧ ವೈರಿ ಔರಂಗಜೇಬುವಿನ ತಮ್ಮ ಔರಂಗಸೇಬು!"
ಎಲ್ಲರೂ ಓಹ್! ಎಂದು ಉದ್ಗಾರ ತೆಗೆದರು.



"ಈರುಳ್ಳಿಗಳ ಬೆಲೆ ಗಗನಕ್ಕೇರಿದ್ದರಿಂದ ಸೇಬುಗಳ ರಾಜ್ಯ ಕುಸಿದು ಇಂದು ನಿಮ್ಮಲಿಗೆ ತಾನೇ ಶರಣಾಗಲು ಬಂದಿದ್ದಾನೆ"

ಈರುಳ್ಳಿರಾಜ ಅಟ್ಟಹಾಸದಲ್ಲಿ ನಗುತ್ತ "ಓಹೋ! ಹಾಗೇನು? ಏಕೆ ಔರಂಗಸೇಬರೇ ಮುಗಿದು ಹೋಯಿತೇ ನಿಮ್ಮ ವಿಜಯನಗರದ ವೈಭವ?" ಎಂದು ಕೇಳಲು ಸಭೆಯಲ್ಲಿದ್ದ ಎಲ್ಲರೂ ಬಿದ್ದು ಬಿದ್ದು ನಕ್ಕರು.

ಆ ಸೇಬೋ ಮುಖ ಟೊಮ್ಯಾಟೋಗಿಂಥ ಕೆಂಪು ಮಾಡಿಕೊಂಡಿತ್ತು. ಅವನನ್ನು ಬಂಧನದಲ್ಲಿರಿಸಲು ರಾಜಾಜ್ಞೆಯಾಯಿತು.

"ಮಹಾಪ್ರಭು, ತಮಗಾಗಿ ಮತ್ತೊಂದು ಸುದ್ದಿಯನ್ನು ತಂದಿದ್ದೇನೆ. ದೂರದ ಸಿದ್ಧರಾಮಯ್ಯನವರ ರಾಜ್ಯದಲ್ಲಿ ಅಮೂಲ್ಯವಾದ ಈರುಳ್ಳಿಗಳನ್ನು ರಸ್ತೆಯ ಬದಿಯಲ್ಲಿಟ್ಟುಕೊಂಡು ಮಾರುತ್ತಿರುವರೆಂಬ ಮಾಹಿತಿ ದೊರೆತಿದೆ. ಅಷ್ಟೇ ಅಲ್ಲ... ಕೇಜಿಗೆ ಒಂದು ರುಪಾಯಿಯ ಬೆಲೆಯ ಅಕ್ಕಿಯ ಜೊತೆಗೆ ಈರುಳ್ಳಿಯನ್ನೂ ಇಟ್ಟುಕೊಂಡು ಮಾರುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ..."

"ಓಹೋ! ಹಾಗೋ! ಸೇನಾಧಿಪತಿಗಳೇ ಶೀಘ್ರವೇ ಆ ಸಿದ್ಧರಾಮಯ್ಯನ ರಾಜ್ಯದ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಳ್ಳಿ ಆ ರಾಜ್ಯವನ್ನು ಗೆದ್ದು ನಮ್ಮ ವಂಶಸ್ಥ ಈರುಳ್ಳಿಗಳ ಮರ್ಯಾದೆ ಉಳಿಸೋಣ. ಮತ್ತೆ ಅವರ ರಾಜ್ಯದಲ್ಲಿ ಈರುಳ್ಳಿಗಳ ಬೆಲೆ ಏರಿ, ನಮ್ಮವರಿಗೆ ಸೂಕ್ತ ಸ್ಥಾನಮಾನ ದೊರೆಯುವಂತೆ ಮಾಡೋಣ. ಬನ್ನಿ ಯುದ್ಧ ಮಾಡೋಣ ಬನ್ನಿ..."

ಸಭೆಯಿಂದ ಈರುಳ್ಳಿರಾಜ ದ್ವೇಷದ ಕಿಡಿ ಕಾರುತ್ತಾ ಹೊರ ನಡೆಯುತ್ತಾನೆ!  

Thursday, July 4, 2013

Jiah Khan - RIP



She believed in love
She believed in its purity
She embraced with innocence
A bond without surety

Gave her heart to a traitor
Overlooked all his deeds
He left her a gift in belly
Satisfying his youthful needs
 
Such a bold actress onscreen
Couldn’t make up her mind
Cowardly gave up her life for him
Really love is blind!

Love thrills... but speed kills...

Monday, June 24, 2013

ಹತ್ತು ಜನರಿಂದ ಒಂದೊಂದು ತುತ್ತು...




 ಹಾಕಿ ಕಚ್ಚೆ
ಬಣ್ಣ ಹಚ್ಚೆ
ಕೈ ಬೀಸಿ ಕರೆದಿದೆ ವೇದಿಕೆ,



ಗಾಂಪರ ಹಾಡು
ಕುಣಿದು ನೋಡು
ಹಿರಿಯ ಕಿರಿಯ ಭೇದವದೇಕೆ?
ಬಣ್ಣದ ಗಾಜು
ತೊಡಲೆಂಥ ಮೋಜು
ನಾಳಿನ ಕನಸುಗಳು ಬಣ್ಣ ಬಣ್ಣ

 

ಶರ್ಟು ಪ್ಯಾಂಟಿನಲ್ಲಿ
ಒಂದೆರಡು ಬಟನ್ ಇಲ್ಲಾ
ಉಜ್ವಲ ಭವಿಷ್ಯದ ನಂಬಿಕೆಯಣ್ಣಾ

 
ಹತ್ತು ಜನರಿಂದೊಂದೊಂದು ತುತ್ತು
ಟೈ, ಬೆಲ್ಟು ಶೂ ಹೊತ್ತು
ತಂದು ಪುಟಾಣಿಗಳಿಗೆ ಹಂಚಿದ್ದಾಯ್ತು

 

ಫೋಟೋ ಕೃಪೆ -  Srikant Manjunath

ಗೆಳೆಯರೆಲ್ಲಾ ಒಟ್ಟಾಗಿ ಕೂತು
ಗಂಟೆಗಟ್ಟಲೇ ಹರಟೆ ಮಾತು
ಅಣಕಿಸುತ ಅವರಿವರ ಫೋಟೋ ತೆಗೆದಿದ್ದಾಯ್ತು

 

ಆಡಿದರು ಕೆಲವರು ಕುಸ್ತಿ
ಮಾಡಿದರು ಕೆಲವರು ಮಸ್ತಿ
ಹೊಸಬರು ಇವರೇಕೆ ಹೀಗೆ ಅಂದ್ರೆ

 
ನಮಗೆ ಪ್ರೀತಿ ಜಾಸ್ತಿ
ಅದುವೆ ನಮ್ಮ ಆಸ್ತಿ
ಮಕ್ಕಳಾಗಿ ಬಿಡುವೆವು ಒಟ್ಟಾಗಿ ಬಂದ್ರೆ

 ಪ್ರೇಮ ಕವಿಗಳಿಬ್ಬರ ಭೇಟಿ - ಇದೊಂಥರ "ಕಲ್ಯಾಣ" ಭಾಗ್ಯ
ಕಾರ್ಯಕ್ರಮವನ್ನು ಆಯೋಜಿಸಿದ ಸತೀಶ್ ಬಿ. ಕನ್ನಡಿಗರವರಿಗೆ ನಾವೆಲ್ಲರೂ ಚಿರಋಣಿಗಳು!

ಎಂಥಾ ಸುಂದರ ಕಾರ್ಯಕ್ರಮ... ತಡೀರಿ ದೃಷ್ಟಿ ತೆಗೆದು ಬಿಡ್ತೀನಿ... ಕಾಗೆ ಕಣ್ಣು ಗೂಬೆ ಕಣ್ಣು....





Friday, June 7, 2013

ಗಣಕ-ಗಮಕ


 3K ಬಳಗದ ಶತಮಾನಂಭವತಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಂಸಲೇಖರವರು "ಕವಿತ್ವಕ್ಕೆ ಗ್ರಾಮ್ಯ ಸೊಗಡು ಅಗತ್ಯ. ಜಗತ್ತಿನಲ್ಲಿ ಮುಗ್ಧತೆಯನ್ನು ಹುಡುಕಲು ಹೊರಟಾಗ ಅದು ನಮಗೆ ಕಾಣಸಿಗುವುದು ಹಳ್ಳಿಗಾಡಿನ ಜನರಲ್ಲಿ ಎಂಬುದನ್ನು ಮರೆಯಬಾರದು" ಎಂದು ಅಭಿಪ್ರಾಯಪಟ್ಟಿದ್ದರು. ಅದೇ ಕಾರಣಕ್ಕೆ ನನ್ನ ಈ ಕವನವನ್ನು ಅವರು ಮೆಚ್ಚಿಕೊಂಡರು ಎಂದು ಕೇಳಿ ನನಗೆ ಅಪಾರ ಸಂತೋಷವಾಯಿತು! ಈ ಹಿಂದೆ ನೀವೆಲ್ಲಾ ಓದಿರಬಹುದು... ಮತ್ತೊಮ್ಮೆ ಶತಮಾನಂಭವತಿಯಲ್ಲಿ ಪ್ರಕಟಗೊಂಡ ನೆನಪಿಗೆ...

ಛಾಯಾಚಿತ್ರ ಕೃಪೆ - ಅಂತರ್ಜಾಲ

 ಗಣಕ-ಗಮಕ

ಹಳ್ಳಿ ಹೈದರು ನಾವ್ ನಿನ್ನೀ ತನಕ
ಕಂಡಿರಲಿಲ್ಲ ಪ್ರತ್ಯಕ್ಷ ಒಂದೂ ಗಣಕ
ಇವತ್ಯಾಕೋ ನಮ್ಗೂ ತಿಳ್ಕೊಳ್ಳೋ ತವಕ
ಕಲಿಸಿದರೆ ಕಲೀತೀವ್ರಿ ಹಾಡ್ಕೊಂಡೇ ಗಮಕ!

ಬೆಳಗೈತಿ ಇದು ಇಂದು ಎಲ್ಲರ ಬದುಕ
ನೀಡೈತಿ ಇದ ಕಲಿತವಗೆ ಧನ ಕನಕ
ನಮ್ಮ್ಯಾಗೂ ದಯೆ ತೋರೋ ಓ ಬೆನಕ
ನಿನ್ಹಾಂಗ ಐತಲ್ಲೊ ಇಲಿಯೊಂದು ಇದಕ

ಮೋಡಿ ಮಾಡೈತ್ರಿ ಆ ಬಣ್ಣದ ಪರದೆ
ನೋಡಾಕಿದು ಥೇಟ್ ನಮ್ ಟಿವಿ ಥರದ್ದೇ
ಬೇಕಾದ್ ಕಡಿ ಕ್ಲಿಕ್ಕಿಸಬಹುದು ಇಲಿ ಹಿಡಿದ್ರೆ
ಕಣ್ಮುಚ್ಚಿ ತೆಗೆಯೋದ್ರೋಳಗ ಜಗತ್ತೇ ನಿಮ್ ಮುಂದೆ!

ಬೆರಳಚ್ಚು ಯಂತ್ರದ ಪುಟ್ಟ ಶಾಖೆ
ಕೊಟ್ಟರು ಒತ್ತಲು ನಮ್ಮೆಲ್ಲರ ಕೈಗೆ
ನೂರೊಂದು ಗುಂಡಿಗಳು ಇತ್ತು ರೀ ಅದಕೆ
ಮೇಷ್ಟ್ರಂದ್ರು ಏನೇನೋ ಒತ್ತೀರಿ ಜೋಕೆ!

ಗೊಂಯ್ಗುಡ್ತಿತ್ತು ಮೇಜಿನ ಕೆಳಗೊಂದು CPU
ಅದುವೇ ಗಣಕಯಂತ್ರದ ಪ್ರಧಾನ ಕಛೇರಿಯು
ಇರುವಂತೆ ನಮ್ಮ ಹಳ್ಳಿಗೊಬ್ಬ ಆಪೀಸರ್ರು
ಒಳಗೆ ಕುಂತೌನಂತೆ ಇಲ್ಲೊಬ್ಬ ಪ್ರೊಸೆಸ್ಸರ್ರು!

ಬಲು ಮೋಸ ತಮ್ಮ ಈ ಕಂಪ್ಯೂಟರ್ರು
ಮೇಜಿನ ಕೆಳಗೆ ಕೈ ಚಾಚಿದರೆ ಆ ಆಪೀಸರ್ರು
ಲಂಚದ ಆಸೆ ಹೆಚ್ಚಾಗಿ ಕಳ್ ಬಡ್ಡೀ ಮಗ
ಮೇಜಿನ ಕೆಳಗೇ ಕುಂತು ಬಿಟ್ಟೌನಲ್ಲಾ ಈ ಪ್ರೊಸೆಸ್ಸರ್ರು!

=============================

Tuesday, May 14, 2013

ಶತಮಾನಂಭವತಿ




ಮೇ 12th  ಭಾನುವಾರ ಸಂಜೆ 5:30

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶತಮಾನಂಭವತಿ ಬಿಡುಗಡೆ

ನೂರುಜನ ಕವಿಗಳನ್ನು ಒಂದುಗೂಡಿಸಿ ಒಂದು ಕವನ ಸಂಕಲನ ಬಿಡುಗಡೆ ಮಾಡಿದ ಅಭೂತಪೂರ್ವ ಪ್ರಯತ್ನದಲ್ಲಿ 3K ಯಶಸ್ಸು ಕಂಡಿದೆ!

ನಮ್ಮೆಲ್ಲರ ಏಕತೆಯ ಸಂಕೇತ.. 3K Badge!
 3Kಯಲ್ಲಿ ಹುರುಪಿನ ಬಾವುಟವನ್ನು ಹಾರಿಸಿದ ಅಧಿನಾಯಕಿ ರೂಪಕ್ಕನವರೊಡನೆ ನಾನು!

ನೋಡಿ ನಮ್ಮ ಬಾಲಣ್ಣನವರ ಮುಗ್ಧ ಕೀಟಲೆಗಳು!




ಕ್ಯಾಮೆರಾ ಭರಾಟೆ ಜೋರೋ ಜೋರು!


ನಮ್ಮ ಬದರಿನಾಥ್ ಪಲವಳ್ಳಿ ಮುಖದಲ್ಲಿ ರಾಜ ಗಾಂಭೀರ್ಯ!


ಮೃದು ಸ್ವಭಾವದ ಸರಳ ಜೀವಿಗಳು... ಮಣಿಕಾಂತ್ ಮತ್ತು ಶೀಕಾಂತ್


ಛೇ ಇಲ್ಲಿ ಏನೋ ವಾಸನೆ ಬರುತ್ತಿದೆಯಲ್ಲಾ!


ಮೊದಲು ಹುಡುಗಿನಾ ಒಪ್ಪಿಸಿಬಿಡು ಜಗನ್... ಮಿಕ್ಕಿದ್ದೆಲ್ಲಾ ನಾವ್ ನೋಡ್ಕೋತೀವಿ...


ಉಪಹಾರ ತಿಂದು ಖುಷಿಪಟ್ಟವರು...


ನಾನು ಅಲ್ಲಿಯೂ ಕನ್ನಡ ಪದ ಕೇಳಿದ್ದಕ್ಕೆ ಇರಬಹುದೇ ಈ ನಗು?



ಹಂಸಲೇಖರ ಕಾಲಿಗೆ ಬಿದ್ದು "ಶತಮಾನಂಭವತಿ" ಎಂದು ಆಶೀರ್ವಾದ ಪಡೆದ ರೂಪಕ್ಕ


ಮರೆಯಲಾಗದ ಕ್ಷಣ... ಹಂಸಲೇಖರೊಂದಿಗೆ...


ಮತ್ತೊಂದು ಮರೆಯಲಾಗದ ಕ್ಷಣ.. 3K ತಂಡ ವಸುಧೇಂದ್ರ ಹಾಗು ಹಂಸಲೇಖರೊಂದಿಗೆ...



ಮುಖದ ಮೇಲೆ ಮಿಂಚಿ ಮರೆಯಾಗುವ ಕ್ಷಣಿಕ ಭಾವನೆಗಳನ್ನು ಅದ್ಭುತವಾಗಿ ಸೆರೆ ಹಿಡಿದ ಕ್ಯಾಮೆರಾ ಜಾದೂಗಾರ ಶಿವು ಕಾಳಯ್ಯ




Public TV ವರದಿಗಾರರು 3K ತಂಡದ ಸಂದರ್ಶನ ನಡೆಸಿದರು

 
ಸಂದರ್ಶನದಲ್ಲಿ ಮಿಂಚಿದ ರೂಪಕ್ಕ! 



ಸಮಾರಂಭದ ಮೂವರು ಮುಖ್ಯ ಅಥಿತಿಗಳು - ವಸುಧೇಂದ್ರ (ಬರಹಗಾರರು), ಹಂಸಲೇಖ (ಚಲನಚಿತ್ರ ಸಾಹಿತಿ ಹಾಗು ಸಂಗೀತ ನಿರ್ದೇಶಕರು) ಮಂಜುನಾಥ್ ಕೊಳ್ಳೇಗಾಲ (ಲೇಖಕರು)


ಶತಮಾನಂಭವತಿಗೆ ಮುಖಪುಟ ಹಾಗು ನಮಫಲಕ ವಿನ್ಯಾಸ, 3K ಗೆ ಲಾಂಛನ ವಿನ್ಯಾಸ ಮಾಡಿಕೊಟ್ಟ ತೇಜ್ಪಾಲ್ ಮುಗುಳ್ನಗೆಯಲ್ಲಿ ಗೋಪಿನಾಥ್ ಅವರೊಂದಿಗೆ


ಒಂದಾನೊಂದು ಕಾಲದಲ್ಲಿ ಈತನೂ ಒಬ್ಬ ಮಹಾಸಾಹಿತಿಯಂತೆ!

ಗಾನಬ್ರಹ್ಮ ಹಂಸಲೇಖರಿಗೆ ಗೋಪಿನಾಥ್ ಶಾಲು ಹೊದ್ದಿಸಿ ಗೌರವ ಸೂಚಿಸಿದರು!


ಬರಹಗಾರರಾದ ವಸುಧೇಂದ್ರ ಅವರಿಗೆ ಶಾಲು ಹೊದ್ದಿಸಿ ಸನ್ಮಾನಿಸಿದರು...


ಖ್ಯಾತ ಲೇಖಕರಾದ ಮಂಜುನಾಥ್ ಕೋಳ್ಳೇಗಾಲ ಅವರಿಗೆ ನವೀನ್ ಶಾಲು ಹೊದ್ದಿಸಿ ಸನ್ಮಾನ ಮಾಡಿದರು


ಅರುಣ್ ಹಾಗು ಸತೀಶ್ ನಾಯಕ್ ನಡುವಿನ ಪ್ರಶ್ನಾವಳಿ ಮನಸೆಳೆಯಿತು


3K ಲಾಂಛನ ಬಿಡುಗಡೆಯಾದ ಕ್ಷಣ


ಅಮೃತಘಳಿಗೆ! ಶತಮಾನಂಭವತಿ ಲೋಕಾರ್ಪಣೆ!

"ಈ ಭೂಮಿ ಬಣ್ಣದ ಬುಗುರಿ...." ಹಾಗು "ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಾಬೇಕು..." ಸಂಗೀತವನ್ನು ಅದ್ಭುತವಾಗಿ ಹಾಡಿದ ಗೋಪಿನಾಥ್ ಮತ್ತು ಸತೀಶ್ ನಾಯಕ್‍ರವರನ್ನು ಜನ ಚಪ್ಪಾಳೆ ತಟ್ಟಿ ಅಭಿನಂದಿಸಿದರು!


ಶತಮಾನಂಭವತಿ ಎಂಬ ಪದವನ್ನು ನಮ್ಮ ಪುಸ್ತಕಕ್ಕೆ ಹೆಸರಾಗಿ ಮೊದಲು ನಾಮಕರಣ ಮಾಡಿದವರು ನಮ್ಮೆಲ್ಲರ ಮೆಚ್ಚಿನ ಕವಿ ಬದರಿನಾಥ್ ಪಲವಳ್ಳಿ ಕಳೆದ 3K ಸಂಭ್ರಮದಲ್ಲಿ ಅತ್ಯುತ್ತಮ ಕವಿತೆಯ ಪ್ರಶಸ್ತಿ ಕೂಡ ಇವರಿಗೆ ಸಂದಿತು.


ಬಂದಿದ್ದವರಲ್ಲಿ ಅರ್ಧ ಜನ ಜಾಗ ಖಾಲಿ ಮಾಡಿದ ಮೇಲೆ ಕಣಕ್ಕಿಳಿದ 12th Man ನಾನು... ವಂದನಾರ್ಪಣೆಗಳು - ಪುಣ್ಯದ ಕೆಲಸ ಎಂದು ನನ್ನ ನಂಬಿಕೆ!!


Group Snap - 3K Core Team


ಕುಚ್ಚುಕ್ಕೂ ಗೆಳೆಯರು..


Online ಗೆಳೆಯರ ದಂಡು!


Hurrayyyyyyyy!!!!! ರೂಪಕ್ಕ, ಮಗಳು ಮೇಘನಾ ಪುಟಣಿಗಳ ಜೊತೆ ಗೂಡಿ ಸಂಭ್ರಮಿಸಿದ್ದು ಹೀಗೆ... ಅವರಲ್ಲಿ Worldcup ಗೆದ್ದಂಥ ಹುರುಪು!!


ಏನ್ ಚೆಂದ ಕಾಣ್ತಿದ್ದಾಳೆ ಮುಗ್ಧ ಕಂಗಳ ಮೇಘನ!


ಕಾರ್ಯಕ್ರಮದ ಟೆನ್ಷನ್ ಮಧ್ಯೆ ಕಾರಿನ ಕೀ ಕಳೆದು ಹೋದದ್ದರಿಂದ ರಾತ್ರಿ ಹತ್ತು ಘಂಟೆಯ ವರೆಗೆ ನಾವು ಅಲ್ಲೆ ಹರಟೆ ಹೊಡೆಯುತ್ತಾ ಕುಳಿತೆವು ಆಗ ತಾನೆ ನಡೆದ ಅದ್ಭುತ ಕ್ಷಣಗಳನ್ನು ಮತ್ತೆ ಮೆಲುಕು ಹಾಕಲು ನಮಗೆ ಇದಕ್ಕಿಂತ ಒಳ್ಳೇ ಅವಕಾಶ ಬೇಕಿತ್ತೆ? ಕುಟುಂಬದವರೆಲ್ಲಾ ಒಟ್ಟಿಗೆ ಕುಳಿತು ಬೆಳದಿಂಗಳೂಟ ಮಾಡಿದಂತಿತ್ತು... ಆ ಕ್ಷಣಗಳು!




ರೂಪಕ್ಕ ತಮ್ಮಂದಿರಿಗೆ ಕಥೆ ಪುಸ್ತಕದಿಂದ ಕಥೆ ಹೇಳಿ ಮಲಗಿಸುತ್ತಿರುವಂತಿದೆ!!!! ಹ್ಹ ಹ್ಹ ಹ್ಹಾ!! 
==================================== 
ಹೇಗನ್ನಿಸಿತು ನಮ್ಮ ಕುಟುಂಬದ ಈ ಕಾರ್ಯಕ್ರಮ? ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ತಪ್ಪದೇ ಇಲ್ಲೇ ಬರೆದು ತಿಳಿಸಿ... ತಿಳಿಸ್ತೀರ ತಾನೆ? ಧನ್ಯವಾದಗಳು!