Monday, September 23, 2013

ಈರುಳ್ಳಿರಾಜನ ಆಸ್ಥಾನದಲ್ಲಿ...

ಅದು ಈರುಳ್ಳಿರಾಜನ ರಾಜ್ಯ....
 ಮಾರುಕಟ್ಟೆಯ ಒಂದು ಗಲ್ಲಿಯಲ್ಲಿ ಮುಂಜಾನೆ ಅಂಗಡಿಗಳು ಬಾಗಿಲು ತೆರೆಯುತ್ತಿವೆ. ಅಲ್ಲಿನ ಪ್ರಜೆಗಳು ಬಹಳ ಪರಿಶ್ರಮದ ಜೀವಿಗಳು. ಬೆಳಗ್ಗೆ ಬೇಗನೇ ಎದ್ದು ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಮಾರುಕಟ್ಟೆಯ ಮಧ್ಯದಲ್ಲಿ ಒಂದು ಆಭರಣಗಳ ಅಂಗಡಿ ಬಾಗಿಲು ತೆರೆಯಿತು. ಅದರೊಳಗಡೆ ಎಲ್ಲೆಡೆ ಪ್ರಕಾಶಮಾನವಾದ ದೀಪಗಳು ಪ್ರಜ್ವಲಿಸುತ್ತಿದೆ. ದೀಪದ ಬೆಳಕನ್ನು ಪ್ರತಿಬಿಂಬಿಸುವ ಕನ್ನಡಿಯ ಗೋಡೆಗಳು. ಎಲ್ಲೆಡೆ ಫಳ ಫಳನೇ ಮೆರಗು! ಕೆಳಗೊಂದು ಮೇಲೊಂದು ಬೀಗ ಹಾಕಿ ಭದ್ರ ಮಾಡಿದ ಗಾಜಿನ ಶೋಕೇಸುಗಳು! ಆ ಶೋಕೇಸಿನ ಒಳಗೆ ಹೊಳೆಯುತ್ತಿದ್ದವು ವಿವಿಧ ಬಣ್ಣಗಳ ಬೇರೆ ಬೇರೆ ಗಾತ್ರದ ಈರುಳ್ಳಿಗಳು!

ಹೌದು, ಆ ರಾಜ್ಯದಲ್ಲಿ ಈರುಳ್ಳಿಗಳೇ ಸರ್ವ ಶ್ರೇಷ್ಠ ವಸ್ತು! ಈರುಳ್ಳಿಗಿಂತ ಮಿಗಿಲಾದ ವಸ್ತು ಇನ್ನೊಂದಿಲ್ಲ! ಇದು ಈರುಳ್ಳಿರಾಜನ ಅಪ್ಪಣೆಯಾಗಿತ್ತು!

ಆ ಆಭರಣದ ಅಂಗಡಿಗಳ ಮುಂದೆ ಒಂದು ತಳ್ಳುವ ಗಾಡಿ ಸಾಗುತ್ತಿದೆ. ಒಣಗಿ ಹೋದ ಬಡ ಬದನೆಕಾಯಿಯೊಂದು ಹರಿದ ಬನಿಯನ್ನು, ಲುಂಗಿ ತೊಟ್ಟು ಏದುಸಿರುಬಿಡುತ್ತಾ ಆ ಕೈಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದೆ. ಜೊತೆಗೆ ಆಗಾಗ ಸ್ವಲ್ಪ ನಿಂತು ಸುಧಾರಿಸಿಕೊಂಡು ಬೆವರೊರೆಸಿಕೊಳ್ಳುತ್ತಾ "ಹತ್ರುಪಾಯ್ಗ್ ಮೂರು, ಹತ್ರುಪಾಯ್ಗ್ ಮೂರು..." ಎಂದು ಕೂಗುತ್ತಿದೆ. ಸುತ್ತಲೂ ಹೋಗುತ್ತಿರುವವರು ಇದರ ಅವಸ್ಥೆ ಕಂಡು, ಕನಿಕರಪಟ್ಟು ತಮ್ಮ ಪಾಡಿಗೆ ತಾವು ಹೋಗುತ್ತಿದ್ದಾರೆಯೇ ಹೊರತು ಯಾರೂ ಖರೀದಿಸಲು ಮುಂದಾಗುತ್ತಿಲ್ಲ. ಹಾಂ! ಹೇಳುವುದೇ ಮರತೆ ಆ ಕೈಗಾಡಿಯಲ್ಲಿ ಬಡ ಬದನೆಕಾಯಿ ಮಾರುತ್ತಿದ್ದುದು ಚಿನ್ನ-ಬೆಳ್ಳಿಯ ಪಾತ್ರೆಗಳು, ಉಂಗುರ, ಸರ, ಕೈಬಳೆ, ಕಾಲ್ಗೆಜ್ಜೆಗಳು ಜೊತೆಗೆ ಸ್ವಲ್ಪ ರತ್ನ, ವಜ್ರಗಳು ಅಷ್ಟೇ!!!

ಅದು ಸುಂದರವಾದ ಅರಮನೆ. ಸುತ್ತಲೂ ದೊಡ್ಡ ದೊಡ್ಡ ಕಂಬಗಳು. ಅದರ ಸೌಂದರ್ಯ ವರ್ಣನೆಗೆ ಮೀರಿದ್ದು.


 ಒಳಗೆ ಆಸ್ಥಾನದಲ್ಲಿ ಮುಖ್ಯಮಂತ್ರಿಗಳಾದ ಅಲೂಗಡ್ಡೆ ಮೊದಲಾಗಿ, ಪಂಡಿತರಾದ ಸೌತೆಕಾಯಿ, ಹಣಕಾಸು ಸಚಿವ ಹಾಗಲಕಾಯಿ, ಆರೋಗ್ಯ ಸಚಿವ ಕೆಂಪು ಮೂಲಂಗಿ, ಗೃಹ ಸಚಿವೆ ಟೊಮ್ಯಾಟೋ ದೇವಿ ಮುಂತಾದವರು ಉಪಸ್ಥಿತರಿದ್ದರು. ರಾಜ ಬರುವ ಮಾರ್ಗದಲ್ಲಿ ಅಲ್ಲಲ್ಲಿ ಸೈನಿಕ ಹುರುಳೀಕಾಯಿಗಳು ತಮಗಿಂತ ತೆಳ್ಳಗಿರುವ ಈಟಿಯನ್ನು ಹಿಡಿದು ನಿಂತಿದ್ದಾರೆ. ಅವರ ಪಕ್ಕದಲ್ಲಿ ಹಸಿರು ಸೀರೆಯನುಟ್ಟ ಎಲೆಕೋಸುದೇವಿಯರು ಅಗಲವಾದ ತಟ್ಟೆಗಳಲ್ಲಿ ಈರುಳ್ಳಿ ಸಿಪ್ಪೆಯ ತುರಿ ಹಿಡಿದು ರಾಜನ ಬರುವನ್ನೇ ಕಾಯುತ್ತಿದ್ದಾರೆ. ಘೋಷ ಮೊಳಗುತ್ತದೆ...
"ರಾಜಾಧಿ ರಾಜsss.... ತೇಜ ಭೋಜsss....
ವೀರಾಧಿ ವೀರsss....  ಅಪ್ರತಿಮ ಶೂರsss....
ಈರುಳ್ಳಿ ರಾಜಾsss....  ಆಗಮಿಸುತ್ತಿದ್ದಾರೆsss.... "



ಈರುಳ್ಳಿರಾಜ ಕೈಯಲೊಂದು ಹೂವಿನಾಕೃತಿಯಲ್ಲಿ ಕತ್ತರಿಸಿದ ಈರುಳ್ಳಿಯನ್ನು ಹಿಡಿದು ಅದರ ಸುಗಂಧವನ್ನು ಹೀರುತ್ತಾ ಬರುತ್ತಿದ್ದಾನೆ. ಬದಿಯಲ್ಲಿ ನಿಂತಿದ್ದ ಎಲೆಕೋಸುಗಳು ಈರುಳ್ಳಿ ಸಿಪ್ಪೆಯ ತುರಿಗಳನ್ನು ಹೂವಿನಂತೆ ರಾಜನ ಮೇಲೆ ಹಾಕುತ್ತಿದ್ದಾರೆ. ಇದರಿಂದ ರಾಜನಿಗೆ ಮತ್ತಷ್ಟು ಸಂತೋಷ ಉಂಟಾಗಿ ಹಸನ್ಮುಖನಾಗಿ ಅಸ್ಥಾನಕ್ಕೆ ಬರುತ್ತಿದ್ದಾನೆ. ಎಲ್ಲರೂ ಎದ್ದು ನಿಂತಿದ್ದಾರೆ. ಈರುಳ್ಳಿರಾಯನು ಬಂದು ತನ್ನ ಸಿಂಹಾಸನವನ್ನು ಅಲಂಕರಿಸಿದನು. ಅವನ ಪಕ್ಕದಲ್ಲೆ ಅವನ ಸಹೋದರನಾದ ಬೆಳ್ಳುಳ್ಳಿರಾಯನೂ ಉಪಸಿಂಹಾಸನದ ಮೇಲೆ ಕುಳಿತನು. ಎಂದಿನಂತೆ ಮೊದಲಿಗೆ ಸಂಗೀತ ಕಾರ್ಯಕ್ರಮವಿತ್ತು. ಮಂತ್ರಿಯಾದ ಆಲೂಗಡ್ಡೆಯು ಮುಂದೆ ಬಂದು ಕಾರ್ಯಕ್ರಮದ ಪರಿಚಯ ಮಾಡಿಸಿದನು.

"ಇಂದು ನಿಮ್ಮನ್ನು ರಂಜಿಸಲು ನಮ್ಮ ನಾಡಿನ ಉತ್ತರ ಭಾಗದಿಂದ ಕೆಲವು ಈರುಳ್ಳಿಗಳ ತಂಡ ಬಂದಿದೆ. ಅವರು ನಮ್ಮ ರಾಜಣ್ಣನವರ ಜೀವನ ಚೈತ್ರ ಚಿತ್ರದ ಹಾಡೊಂದನ್ನು ಹಾಡಲಿದ್ದಾರೆ.

ರಾಜನ ಅಪ್ಪಣೆ ದೊರೆಯಿತು. ಸಂಗೀತ ಶುರುವಾಯಿತು... ತೆಳ್ಳಗೆ ಬೆಳ್ಳಗೆ ಇರುವ ಈರುಳ್ಳಿಯೊಂದು ರಾಜ್‍ಕುಮಾರ್ ಸ್ಟೈಲಿನಲ್ಲಿ ಚೂಪು ಮೀಸೆ ಬಿಟ್ಟು ಮುಗುಳ್ನಗೆ ಬೀರುತ್ತಾ ವೇದಿಕೆಗೆ ಬಂದಿತು. ಹಿಂದೆ ಚಿಕ್ಕ ಚಿಕ್ಕ ಈರುಳ್ಳಿಗಳ ಗುಂಪು ವಾದ್ಯ ನುಡಿಸುತ್ತಿತ್ತು!

ಈರುಳ್ಳಿಯಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ
ಹೊಲ ಬಿಟ್ಟು ಏರಿದ್ ನಾವು ಎತ್ತಿನ್ ಬಂಡಿ
ದೋಸೆ ಪಲ್ಯ ಪಕೋಡ ಅಂತ ಆದ್ವಿ ತಿಂಡಿ
ಕೇಜಿ ರೇಟು ಎಂಭತ್ತಾದ್ರು ತಿನ್ನಿ ಉಳ್ಳಾಗಡ್ಡಿ!

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು
ಈರುಳ್ಳಿ ಬೆಳ್ಳುಳ್ಳಿ ಎಷ್ಟು ಚೆನ್ನಾಗ್ ಬೆಳೀತಾವ್ ನೋಡು
ನಾವು ಕೈಯ್ಯ ಕೊಟ್ಟ್ರೆ ಪಾಪ ರೈತರ ಪಾಡು
ಸಾಲ ತೀರ‍್ಸೋಕಾಗ್ದೆ ಸೇರಿದ್ ಸುಡುಗಾಡು

ಅಣ್ಣಾ ಹಜ಼ಾರೆ, ಬಾಬಾ ಅಂಥೋರ್ ಮಾಡ್ತಾರ್ ಉಪವಾಸ
ಅವರ‍್ನ ನಂಬ್ಕೊಂಡ್ ಜೊತೇಗ್ ಕುಂತೋರ‍್ಗ್ ಜೈಲುವಾಸ
ಏನೇ ಹೇಳಿ ಯೆಡ್ದಿ-ರೆಡ್ದಿಗಳ್ದ್ ಭಾಳಾ ಮೋಸ
ಸತ್ಯ-ಧರ್ಮ ಹೊಂಟೋದ್ವಂತೆ ವನವಾಸ

|| ಈರುಳ್ಳಿಯಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ...||


ಸಂಗೀತ ಅಲ್ಲಿಗೆ ಮುಗಿಯುತ್ತದೆ. ಚಪ್ಪಾಳೆಗಳ ಸುರಿಮಳೆಯಾಗುತ್ತದೆ. ಕಲಾವಿದರು ಮರಳುತ್ತಾರೆ. ರಾಜನು ಮಂತ್ರಿಯನ್ನು ಕರೆದು ಮೆಲ್ಲಗೆ ಕಿವಿಯಲ್ಲಿ ಹೇಳುತ್ತಾನೆ,
"ಮಂತ್ರಿಗಳೇ ಅದೇ ಹಳೇ ರೀತಿಯ ಮನೋರಂಜನಾ ಕಾರ್ಯಕ್ರಮಗಳು ಬೇಸರ ಮೂಡಿಸುತ್ತಿವೆ.. ಹೊಸ ಥರದ್ದೇನಾದರೂ ತೋರಿಸಿ..."
"ಮಹಾ ಪ್ರಭು, ಯಾವ ರೀತಿಯ ಕಾರ್ಯಕ್ರಮವೆಂದು ತಾವೇ ಸೂಚಿಸಿದರೆ ಸೂಕ್ತ..."
"ಅದೇ ಬಾಲಿವುಡ್‍ನ ಐಟಮ್ ಸಾಂಗ್ ಥರದ್ದು.." ಎಂದು ಈರುಳ್ಳಿರಾಜ ನಾಚುತ್ತಲೇ ನುಡಿದ!
"ಓಹ್! ಆಗಲಿ ಮಹಾಪ್ರಭು!" ಎಂದು ಆಶ್ಚರ್ಯದಿಂದ ನಗುತ್ತಲೇ ಮಂತ್ರಿ ತನ್ನ ಸೇವಕನ ಕಿವಿಯಲ್ಲಿ ಏನೋ ಮೆಲ್ಲಗೆ ನುಡಿದು ನಂತರ ಘೋಷಿಸುತ್ತಾನೆ...
"ಮುಂದಿನ ಕಾರ್ಯಕ್ರಮ ನರ್ತನೆ... ನರ್ತಕಿ ಮುಂಬೈಯಿಂದ ಬಂದ ಖಾರಾ ಕೈಫ್!!!"

ತುಂಡುಡುಗೆ ತೊಟ್ಟ ಹಚ್ಚ ಹಸುರಿನ ತೆಳ್ಳನೆಯ ಮೈಯ್ಯ ಮೆಣಸಿನಕಾಯಿಯೊಂದು ವೇದಿಕೆಯ ಮೇಲೆ ಪ್ರತ್ಯಕ್ಷವಾಗುತ್ತದೆ! ಎಲ್ಲಾ ತರಕಾರಿಗಳೂ ಕಣ್ಣು ಬಾಯಿ ಅಗಲಿಸಿ ನೋಡುತ್ತಿದಾರೆ. ಸಂಗೀತ ಶುರುವಾಗುತ್ತದೆ...


Oh zara zara cut me, cut me, cut me,
Oh zara zara chew me, chew me, chew me,
oh zara zara taste me, taste me, taste me,
oh zara zara ooh ooh...


ಎಲ್ಲರೂ ಖಾರಾ ಕೈಫ್‍ನ ಮೋಹಕ ಮೈಮಾಟವನ್ನು ನೋಡುತ್ತಾ ಅವಳ ಹಾಡಿನ ಅಮಲಿನಲ್ಲಿ ಮುಳುಗಿ ಹೋಗಿರುವಾಗ ಅಲ್ಲಿಗೆ ಗೋರಿಕಾಯೊಂದು ಓಡಿ ಬಂದು ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡುತ್ತದೆ. ಸಿಟ್ಟಾದ ರಾಜನ ಮುಂದೆ ಕೈ ಮುಗಿದು
"ಕ್ಷಮಿಸಬೇಕು ಮಹಾಪ್ರಭು.. ನಿಮ್ಮ ಅಪ್ಪಟ ವೈರಿಯೊಬ್ಬ ಸೆರೆ ಸಿಕ್ಕ ಸಿಹಿ ಸುದ್ಧಿಯನ್ನು ತಿಳಿಸಲು ಬಂದೆ"
"ಏನು! ನಮ್ಮ ವೈರಿ ಸೆರೆ ಸಿಕ್ಕನೆ? ಯಾರು? ಯಾರದು ಆ ವೈರಿ?"
ಆ ಸಮಯಕ್ಕೆ ಸರಿಯಾಗಿ ರಾಜನ ಆಪ್ತ ಸೇನಾಧಿಪತಿಯಾದ ಬೆಂಡೇಕಾಯಿ ಕುದುರೆಯ ಮೇಲೆ ದುಂಡಾದ ವಸ್ತು ಒಂದನ್ನು ಸರಪಳಿಗಳಿಂದ ಬಂಧಿಸಿ ಆಸ್ಥನಕ್ಕೆ ಕರೆ ತಂದು ಸರಪಳಿ ಬಿಚ್ಚುತ್ತಾನೆ. ಆ ದುಂಡಾದ ವಸ್ತು ತಕ್ಷಣವೇ ಕೆಳಗುರುಳಿ ಬಿದ್ದು ಹೊರಳಾಡಿ ಎದ್ದೇಳಲು ಕಷ್ಟ ಪಡುತ್ತಿರುತ್ತದೆ. ಸೈನಿಕರಿಬ್ಬರು ಬಂದು ಅದನ್ನು ಎಬ್ಬಿಸಿ ರಾಜನೆಡೆಗೆ ಮುಖಮಾಡಿ ನಿಲ್ಲಿಸುತ್ತಾರೆ. ಸೇನಾಧಿಪತಿ ಬೆಂಡೇಕಾಯಿ ನುಡಿಯುತ್ತಾನೆ. ..
"ಮಹಾಪ್ರಭು, ಇವನು ನಿಮ್ಮ ಬದ್ಧ ವೈರಿ ಔರಂಗಜೇಬುವಿನ ತಮ್ಮ ಔರಂಗಸೇಬು!"
ಎಲ್ಲರೂ ಓಹ್! ಎಂದು ಉದ್ಗಾರ ತೆಗೆದರು.



"ಈರುಳ್ಳಿಗಳ ಬೆಲೆ ಗಗನಕ್ಕೇರಿದ್ದರಿಂದ ಸೇಬುಗಳ ರಾಜ್ಯ ಕುಸಿದು ಇಂದು ನಿಮ್ಮಲಿಗೆ ತಾನೇ ಶರಣಾಗಲು ಬಂದಿದ್ದಾನೆ"

ಈರುಳ್ಳಿರಾಜ ಅಟ್ಟಹಾಸದಲ್ಲಿ ನಗುತ್ತ "ಓಹೋ! ಹಾಗೇನು? ಏಕೆ ಔರಂಗಸೇಬರೇ ಮುಗಿದು ಹೋಯಿತೇ ನಿಮ್ಮ ವಿಜಯನಗರದ ವೈಭವ?" ಎಂದು ಕೇಳಲು ಸಭೆಯಲ್ಲಿದ್ದ ಎಲ್ಲರೂ ಬಿದ್ದು ಬಿದ್ದು ನಕ್ಕರು.

ಆ ಸೇಬೋ ಮುಖ ಟೊಮ್ಯಾಟೋಗಿಂಥ ಕೆಂಪು ಮಾಡಿಕೊಂಡಿತ್ತು. ಅವನನ್ನು ಬಂಧನದಲ್ಲಿರಿಸಲು ರಾಜಾಜ್ಞೆಯಾಯಿತು.

"ಮಹಾಪ್ರಭು, ತಮಗಾಗಿ ಮತ್ತೊಂದು ಸುದ್ದಿಯನ್ನು ತಂದಿದ್ದೇನೆ. ದೂರದ ಸಿದ್ಧರಾಮಯ್ಯನವರ ರಾಜ್ಯದಲ್ಲಿ ಅಮೂಲ್ಯವಾದ ಈರುಳ್ಳಿಗಳನ್ನು ರಸ್ತೆಯ ಬದಿಯಲ್ಲಿಟ್ಟುಕೊಂಡು ಮಾರುತ್ತಿರುವರೆಂಬ ಮಾಹಿತಿ ದೊರೆತಿದೆ. ಅಷ್ಟೇ ಅಲ್ಲ... ಕೇಜಿಗೆ ಒಂದು ರುಪಾಯಿಯ ಬೆಲೆಯ ಅಕ್ಕಿಯ ಜೊತೆಗೆ ಈರುಳ್ಳಿಯನ್ನೂ ಇಟ್ಟುಕೊಂಡು ಮಾರುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ..."

"ಓಹೋ! ಹಾಗೋ! ಸೇನಾಧಿಪತಿಗಳೇ ಶೀಘ್ರವೇ ಆ ಸಿದ್ಧರಾಮಯ್ಯನ ರಾಜ್ಯದ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಳ್ಳಿ ಆ ರಾಜ್ಯವನ್ನು ಗೆದ್ದು ನಮ್ಮ ವಂಶಸ್ಥ ಈರುಳ್ಳಿಗಳ ಮರ್ಯಾದೆ ಉಳಿಸೋಣ. ಮತ್ತೆ ಅವರ ರಾಜ್ಯದಲ್ಲಿ ಈರುಳ್ಳಿಗಳ ಬೆಲೆ ಏರಿ, ನಮ್ಮವರಿಗೆ ಸೂಕ್ತ ಸ್ಥಾನಮಾನ ದೊರೆಯುವಂತೆ ಮಾಡೋಣ. ಬನ್ನಿ ಯುದ್ಧ ಮಾಡೋಣ ಬನ್ನಿ..."

ಸಭೆಯಿಂದ ಈರುಳ್ಳಿರಾಜ ದ್ವೇಷದ ಕಿಡಿ ಕಾರುತ್ತಾ ಹೊರ ನಡೆಯುತ್ತಾನೆ!  

Thursday, July 4, 2013

Jiah Khan - RIP



She believed in love
She believed in its purity
She embraced with innocence
A bond without surety

Gave her heart to a traitor
Overlooked all his deeds
He left her a gift in belly
Satisfying his youthful needs
 
Such a bold actress onscreen
Couldn’t make up her mind
Cowardly gave up her life for him
Really love is blind!

Love thrills... but speed kills...

Monday, June 24, 2013

ಹತ್ತು ಜನರಿಂದ ಒಂದೊಂದು ತುತ್ತು...




 ಹಾಕಿ ಕಚ್ಚೆ
ಬಣ್ಣ ಹಚ್ಚೆ
ಕೈ ಬೀಸಿ ಕರೆದಿದೆ ವೇದಿಕೆ,



ಗಾಂಪರ ಹಾಡು
ಕುಣಿದು ನೋಡು
ಹಿರಿಯ ಕಿರಿಯ ಭೇದವದೇಕೆ?
ಬಣ್ಣದ ಗಾಜು
ತೊಡಲೆಂಥ ಮೋಜು
ನಾಳಿನ ಕನಸುಗಳು ಬಣ್ಣ ಬಣ್ಣ

 

ಶರ್ಟು ಪ್ಯಾಂಟಿನಲ್ಲಿ
ಒಂದೆರಡು ಬಟನ್ ಇಲ್ಲಾ
ಉಜ್ವಲ ಭವಿಷ್ಯದ ನಂಬಿಕೆಯಣ್ಣಾ

 
ಹತ್ತು ಜನರಿಂದೊಂದೊಂದು ತುತ್ತು
ಟೈ, ಬೆಲ್ಟು ಶೂ ಹೊತ್ತು
ತಂದು ಪುಟಾಣಿಗಳಿಗೆ ಹಂಚಿದ್ದಾಯ್ತು

 

ಫೋಟೋ ಕೃಪೆ -  Srikant Manjunath

ಗೆಳೆಯರೆಲ್ಲಾ ಒಟ್ಟಾಗಿ ಕೂತು
ಗಂಟೆಗಟ್ಟಲೇ ಹರಟೆ ಮಾತು
ಅಣಕಿಸುತ ಅವರಿವರ ಫೋಟೋ ತೆಗೆದಿದ್ದಾಯ್ತು

 

ಆಡಿದರು ಕೆಲವರು ಕುಸ್ತಿ
ಮಾಡಿದರು ಕೆಲವರು ಮಸ್ತಿ
ಹೊಸಬರು ಇವರೇಕೆ ಹೀಗೆ ಅಂದ್ರೆ

 
ನಮಗೆ ಪ್ರೀತಿ ಜಾಸ್ತಿ
ಅದುವೆ ನಮ್ಮ ಆಸ್ತಿ
ಮಕ್ಕಳಾಗಿ ಬಿಡುವೆವು ಒಟ್ಟಾಗಿ ಬಂದ್ರೆ

 ಪ್ರೇಮ ಕವಿಗಳಿಬ್ಬರ ಭೇಟಿ - ಇದೊಂಥರ "ಕಲ್ಯಾಣ" ಭಾಗ್ಯ
ಕಾರ್ಯಕ್ರಮವನ್ನು ಆಯೋಜಿಸಿದ ಸತೀಶ್ ಬಿ. ಕನ್ನಡಿಗರವರಿಗೆ ನಾವೆಲ್ಲರೂ ಚಿರಋಣಿಗಳು!

ಎಂಥಾ ಸುಂದರ ಕಾರ್ಯಕ್ರಮ... ತಡೀರಿ ದೃಷ್ಟಿ ತೆಗೆದು ಬಿಡ್ತೀನಿ... ಕಾಗೆ ಕಣ್ಣು ಗೂಬೆ ಕಣ್ಣು....