Monday, January 27, 2014

ಓಂ ನಿಯಮಾಯ ನಮಃ !!

"ಓಂಸ್ ಲಾ" ಕೊನೆಯ ಬೆಂಚಿನಲ್ಲಿ ಮಲಗಿರುವವರೆಲ್ಲಾ ಬೆಚ್ಚಿಬಿದ್ದು ಏಳುವಷ್ಟು ಜೋರು ದನಿಯಲ್ಲಿ ಪ್ರೊಫ಼ೆಸ್ಸರ್ರು ಅರಚಿದರು. ವರ್ಷಾನುವರ್ಷಗಳಿಂದ ಎಲೆಕ್ಟ್ರಾನಿಕ್ಸ್ ಪಾಠಗಳು ಶುರುವಾಗುವುದೇ ಈ ನಿಯಮದೊಂದಿಗಾದರೂ ಅದು ಈಗಷ್ಟೇ ತಾವೇ ಆವಿಷ್ಕಾರಿಸಿದ ಹೊಸ ವಿಷಯವೇನೋ ಎಂಬಂತೆ ವಿವರಿಸಿವುದು ನಮ್ಮ ಪ್ರೊಫ಼ೆಸ್ಸರ್ರಿನ ಅಭ್ಯಾಸ.



 "The amount of current flowing through a conductor is directly proportional to strength of the voltage applied across it"  ಕಪ್ಪು ಬೋರ್ಡಿನ ಮೇಲೆ ಜೇಡರ ಬಲೆಯಂತೆ ಕಾಣುವ ಒಂದು ಸರ್ಕಿಟ್ ಚಿತ್ರ ಬಿಡಿಸಿ ಗೆದ್ದ ಹುಮ್ಮಸ್ಸಿನಲ್ಲಿ ಪ್ರೊಫ಼ೆಸ್ಸರ್ರು ನಮ್ಮೆಡೆಗೆ ತಿರುಗುವ ಮುಂಚೆ, ನಾನಿನ್ನು ನಿಮ್ಮ ಶೋಷಣೆ ತಾಳಲಾರೆ ಎಂದು ಅರಚಿ ಹೇಳುತ್ತಾ ಪ್ರಾಣ ಬಿಡುವಂತೆ, ಅವರ ಕೈಯ್ಯಲ್ಲಿದ್ದ ಬಳಪದ ಕೋಲು ಪಟಕ್ಕನೇ ಮುರಿದು ಕೆಳಗುರುಳಿ ಆತ್ಮಹತ್ಯೆ ಮಾಡಿಕೊಂಡಿತು! ತೂಕಡಿಸುವ ಹುಡುಗರತ್ತ ಗುರಿ ಮಾಡಿ ಎಸೆಯಲು ನಮ್ಮ ಪ್ರೊಫ಼ೆಸ್ಸರ್ರು ಸದಾ ಬಳಿ ಇಟ್ಟುಕೊಳ್ಳುವ ತಮ್ಮ ತುಂಡು ಬಳಪಗಳ ಬತ್ತಳಿಕೆಗೆ ಮತ್ತೊಂದು ಕ್ಷಿಪಣಿ ಸೇರಿತು!

ನಾನು ಮೊದಲಿನಿಂದಲೂ ಇತರರಿಗಿಂತ ಭಿನ್ನ... ತೂಕಡಿಸುವ ಬದಲು ಯಾವುದೋ ಕತೆ ಕವನಗಳ ಗುಂಗಿನಲ್ಲಿ ತರಗತಿಯಲ್ಲಿ ಅನಿವಾರ್ಯವಾಗಿ ಕಳೆಯಲೇಬೇಕಾದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದೆ...  C-Progams  ಬರೆದುಕೊಂದು ಹೋಗಬೇಕಿದ್ದ  Lab Record book ನಲ್ಲಿ ಧೈರ್ಯವಾಗಿ ಒಂದು ರೇಖಾ ಚಿತ್ರದ ಜೊತೆಗೆ ವಿರಹಗೀತೆ ಬರೆದು ಉಪನ್ಯಾಸಕಿಗೆ ಕೊಟ್ಟ ಖ್ಯಾತಿಗೆ ಪಾತ್ರನಾಗಿದ್ದೆ!

ಅಂದು ಮೇಷ್ಟ್ರು ಹೇಳುತ್ತಿದ್ದ ಓಂಸ್ ಲಾ ವಿಷಯಗಳು ಮತ್ತು ನನ್ನ ತಲೆಯಲ್ಲಿದ್ದ ಪ್ರೀತಿ ಪ್ರೇಮದ ವಿಷಯಗಳು ಬೆರಕೆಯಾಗಿ ಹೊಸದ್ಯಾವುದೋ ಲಾ ಆವಿಷ್ಕಾರಗೊಳ್ಳುವಂತೆ ಕಾಣುತಿತ್ತು. ಪಾಪ ಅವನ್ಯಾರೋ ಓಂ ಅನ್ನುವವನು ಹೇಳಿರೋ ಮಾತು ಶತ ಪ್ರತಿಶತ ಸತ್ಯ ಕಣ್ರೀ! ಜೀವನದಲ್ಲಿ ನಾವು ಏನೇ ಕೆಲಸಗಳನ್ನು ಮಾಡಲು ಹೋದರು ಒಂದಲ್ಲ ಒಂದು ರೀತಿಯ ಅಡ್ಡಿ ತಡೆಗಳು ಉಂಟಾಗುತ್ತವೆ. ಯಾಕೆ ಎಂದು ಕೇಳಿದರೆ ಪಾಪ-ಪುಣ್ಯ, ಅದೃಷ್ಟ, ಗ್ರಹಗತಿ, ಹಣೆಬರಹ, ಪಡ್ಕೊಂಡು ಬಂದಿದ್ದು, ಕೇಳ್ಕೊಂಡು ಬಂದಿದ್ದು ಅಂತ ನೂರಾರು ಕಾರಣಗಳನ್ನು ಕೊಡುತ್ತಾರೆ. ಅವನ್ನೆಲ್ಲಾ ಸೇರಿಸಿ ಓಂ ಒಂದೇ ಒಂದು ಪದದಲ್ಲಿ ವಿವರಣೆ ನೀಡಿದ್ದಾನೆ... ಅದೇ "Resistance" ಪಾಪಿಗಳಿಗೆ ಅದು ಹೆಚ್ಚಿರುತ್ತೆ ಅದಕ್ಕೆ ಅವರ ಕೆಲಸ ಕಾರ್ಯಗಳಲ್ಲಿ ಹೆಚ್ಚು ಅಡೆ ತಡೆ ಎದುರಾಗುತ್ತೆ. ಈ ಪುಣ್ಯ ಮಾಡಿದವರು, ಅದೃಷ್ಟವಂತರು, ಕೇಳ್ಕೊಂಡು ಬಂದಿರುವವರು ಎನ್ನುತ್ತಾರಲ್ಲ ಅವರಿಗೆ ಭಗವಂತ ಕಮ್ಮಿ Resistance ಹಾಕಿ ಕಳುಹಿಸಿರುತ್ತಾನೆ ಕಣ್ರೀ, ಅದಕ್ಕೆ ಅವರ ಸರ್ಕಿಟ್ ಅಂದರೆ ಜೀವನದಲ್ಲಿ ಬೇಕಾದಷ್ಟು ಕರೆಂಟ್ ಅಂದರೆ ಕಾರ್ಯಗಳು ಸರಾಗವಾಗಿ ಹರಿದುಹೋಗುತ್ತದೆ! ಓಂ ಹೇಳಿರುವಂತೆ ಅಂಥವರು ತಮ್ಮ ಜೀವನದ ಸರ್ಕೀಟ್‍ನಲ್ಲಿ ಹೆಚ್ಚಿಗೆ ಕರೆಂಟ್ ಹರಿಸಲು ನತದೃಷ್ಟರಂತೆ ಆ ಕಡೆಯಿಂದಲೂ ಈ ಕಡೆಯಿಂದಲೂ ಭಾರಿ ಪ್ರಮಾಣದ Voltage ಹಾಕಬೇಕಿಲ್ಲ, ಹೆಚ್ಚು ಶ್ರಮ ಪಡಬೇಕಿಲ್ಲ, ನಸೀಬಿನ ಅವಾಹಕತ್ವದ ವಿರುದ್ಧ ಹೆಚ್ಚು ಹೋರಾಟ ನಡೆಸಬೇಕಿಲ್ಲ. ಆದರೆ ಪಾಪ ಈ ನತದೃಷ್ಟರ ಪಾಡು ಹಾಗಲ್ಲ... ಹೆಚ್ಚಿಗೆ ಹೇಳುವುದು ಯಾಕೆ? ಈ ಕೆಳಗಿನ ಚಿತ್ರ ನೋಡಿದರೆ ನಿಮಗೇ ಅರ್ಥವಾಗುತ್ತದೆ.


ಮನಸಲ್ಲಿ ಹೀಗೆಲ್ಲ ಹರಿದಾಡುತ್ತಿದ್ದ ವಿಚಾರಧಾರೆಗಳ ಮಧ್ಯೆ ತೇಲಾಡುತ್ತಿದ್ದ ನನ್ನ ಯಾವುದೋ ಕೈಬಳೆಗಳ ಝಲ್ ಝಲ್ ಸದ್ದು ಎಚ್ಚರಮಾಡಿ ಮತ್ತೆ ನನ್ನ ಕ್ಲಾಸಿಗೆ ಎಳೆದು ತಂದಿತು... ಪಕ್ಕದ ಸಾಲಿನಲ್ಲಿದ್ದ ನಳಿನಿ ಅಂದು ಕೈಗೆ ಒಂದು ಡಜ಼ನ್ ಹೊಸ ಬಳೆಗಳನ್ನು ಹಾಕಿಬಂದಂತಿತ್ತು... ಬಳೆಗಳ ಝಲ್ಲಿಗೆ ಸೋಲದ ರಸಿಕನುಂಟೆ? "ಹಸಿರು ಗಾಜಿನ ಬಳೆಗಳೇ..." ಹಾಡಿನ ಸುಧಾರಾಣಿಯಂತೆ ಕಾಣುತ್ತಿದ್ದ ಅವಳನ್ನೇ ಎರಡು ಸೆಕೆಂಡು ಅರಿವಿಲ್ಲದೆ ನೋಡಿದೆ.. ಅವಳು ಒಮ್ಮೆ ನನ್ನೆಡೆಗೆ ಕೆಂಗಣ್ಣು ಬೀರಿ ಸಿಟ್ಟಿನಿಂದ ಮುಖ ತಿರುಗಿಸಿಕೊಂಡಳು! ಮನೆಗಳಿಗೆ ಸೂರಿನ ಮೇಲೆ ಸಿಂಟೆಕ್ಸ್ ತೊಟ್ಟಿ ಇಟ್ಟಿರುವಂತೆ ಈ ಹುಡುಗಿಯರಿಗೆ ಮೂಗಿನ ಮೇಲೆ ಸಿಟ್ಟಿನ ಸಿಂಟೆಕ್ಸ್ ಟ್ಯಾಂಕ್ ಇರುತ್ತೆ ಕಣ್ರೀ... ನಮ್ಮಂತ ಬಡಪಾಯಿಗಳು ಒಮ್ಮೆ ತಿರುಗಿ ನೋಡಿದರೂ ಪುಸುಕ್ ಅಂತ ಹರಿದು ಬಂದು ಮುಖವೆಲ್ಲ ಕೆಂಪಾಗಿಸಿಬಿಡುತ್ತದೆ! ಅವಳು ಮುಖ ತಿರುವಿದಂತೆ ನಾನೂ ತಿರುವಿ ಬೋರ್ಡಿನೆಡೆಗೆ ನೋಡಿದೆ...

ಮೇಷ್ಟ್ರು ಅಲ್ಲಿ ಹಾಕಿದ್ದ ಆ ಸರ್ಕಿಟ್ ಚಿತ್ರ ಯಾಕೋ ನನ್ನ ಕಣ್ಣು ಸೆಳೆಯಿತು. ಎಷ್ಟು ಚೆನ್ನಾಗಿದೆ ಈ ಚಿತ್ರ. ಇದು ಬರಿ ಓಂನ ತತ್ವವಲ್ಲ ನಮ್ಮಂತಹ ಕಾಲೇಜು ಹುಡುಗರ ಜೀವನ ತತ್ವವನ್ನೂ ಸಾರುವಂತಿದೆಯಲ್ಲಾ ಎಂಬ ಯೋಚನೆ ತಲೆಯೊಳಗೆ ಹರಿಯುತ್ತಿರುವಂತೆ ಅವರು ಬರೆದ ಆ ಚಿತ್ರ ನನ್ನ ಕಣ್ಣುಗಳಲ್ಲಿ ಹಾಗೇ ಮಾರ್ಪಾಡಾದವು! ಆ ಚಿತ್ರದಲ್ಲಿ ಒಂದೆಡೆಗೆ + ಅಂದರೆ ಪಾಸಿಟಿವ್ ಶಕ್ತಿ ಇದೆ. ಇನ್ನೊಂದೆಡೆ - ಅಂದರೆ ನೆಗೆಟೀವ್ ಶಕ್ತಿ ಇದೆ. ನಮ್ಮ ಕಾಲೇಜಲ್ಲೂ ಹಾಗೆ... ಎಲ್ಲಾ ಕ್ಲಾಸಲ್ಲಿ ಕೂಡ ಹುಡುಗರೆಲ್ಲಾ ಒಂದು ಕಡೆ, ಹುಡುಗಿಯರೆಲ್ಲಾ ಒಂದು ಕಡೆ. ನಿಜ ಹೇಳಬೇಕಂದರೆ ಆ ಚಿತ್ರದಲ್ಲಿರೋ + ಹುಡುಗರಿಗೇ ಸಂಬಂಧಪಟಿದ್ದು. ಈ ಹುಡುಗರು ಯಾವಾಗ್ಲೂ  "additive in nature"  ಎಷ್ಟೇ ಜನ ಹುಡುಗಿಯರು ಬಂದರು ಅವರು ತಮ್ಮ  Crush list ನಲ್ಲೋ Friend list  ನಲ್ಲೋ  "add"  ಮಾಡ್ಕೋತಾನೆ ಹೋಗುತ್ತಾರೆ. ಈ ನಳಿನಿಯ ಹಾಗಂತೂ ಯಾವತ್ತೂ ಯಾರಿಗೂ ಮೂತಿ ತಿರುವೋದಿಲ್ಲ... ಕಾಲೇಜಿನಲ್ಲಿ ಯಾರೇ ಹೊಸ ಪರಿಚಯವಾದರೂ ತಕ್ಷಣ Facebookನಲ್ಲಿ  friend request ಕಳಿಸೋದು  Twitter  ನಲ್ಲಿ  Follow  ಮಾಡೋದು ಬಡಪಾಯಿ ಹುಡುಗರೇ ತಾನೆ. ಹಾಗಂತ ಕೀಳರಿಮೆ ಬೇಡ. "+" ಪಾಸಿಟಿವ್ ಅನ್ನಿಸ್ಕೊಳ್ಳೋಕೆ ಇನ್ನು ಒಂದು ಕಾರಣ ಇದೆ. ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಎಲ್ಲವನ್ನೂ ಪಾಸಿಟಿವ್ ಆಗಿ ತಗೊತಾರೆ. ಬೇಕಿದ್ರೆ ಹುಡುಗಿಯರೆದುರು ಸದಾ ಹಲ್ಲು ಕಿರಿಯೋ ಹುಡುಗರನ್ನ ನಿಮ್ಮ ಎಷ್ಟು  subjects  ಬಾಕಿ ಇದೆ ಎಂದು ಕೇಳಿ ನೋಡಿ ನೋಡೋಣ. ಎಷ್ಟೆಲ್ಲಾ ಬಾಕಿ ಇದ್ದರೂ ಅಷ್ಟು ಪಾಸಿಟಿವ್ ಆಗಿ ನಗುವ ಅಭ್ಯಾಸ ಹುಡುಗಿಯರಿಗೆಲ್ಲಿ ಬರಬೇಕು? ಹುಡುಗಿಯರು ಯಾವಾಗ್ಲೂ - ಅಂದರೆ ನೆಗೆಟೀವ್ ಸೈಡ್ ಕಣ್ರೀ... ತಾಜ್‍ಮಹಲ್ ತಂದುಕೊಡ್ತೀನಿ ಅಂದರು ಇಲ್ಲಿವರೆಗೆ ನನಗೆ ಎಲ್ಲರೂ "NO" ಅಂತಾನೆ ಹೇಳಿರೋದು! ಆದರೂ ನನ್ನ ಹೃದಯ ಮೃದು ಕಣ್ರೀ ಹುಡುಗಿಯರು ನೆಗೆಟೀವ್ ಅಂತ ಹೆಚ್ಚು ಒತ್ತಿ ಹೇಳಿದರೆ ಅವರು ನೊಂದ್ಕೋತಾರೆ ಪಾಪ! ಇನ್ನು ಪಾಸಿಟೀವ್ ನೆಗೆಟೀವ್‍ಗಳ ಮಧ್ಯೆ ಯಾವಾಗಲೂ ಕರೆಂಟ್ ಇದ್ದಿದ್ದೇ. ಯಾವ ಕರೆಂಟು ಅಂತೀರ? ಸುಂದರವಾದ ಹುಡುಗಿ ಸ್ಮೈಲ್ ಕೊಟ್ಟಾಗ ಮೈ ಜುಮ್ ಅನ್ನೋಲ್ವ? ಅದು ಈ ಕರೆಂಟಿಂದ ಕಣ್ರೀ... ಇನ್ನು ಈ ಕರೆಂಟಿಗೆ ಇದ್ದೆ ಇರಬೇಕಲ್ಲ Resistance...  ನಮ್ಮ ಪ್ರೊಫ಼ೆಸ್ಸರಂತೋರು, ಕ್ಯಾಂಪಸಲ್ಲಿ ಎಲ್ಲೆಂದರಲ್ಲಿ ಮಾತಾಡುತ್ತ ನಿಲ್ಲುವ ಹಾಗಿಲ್ಲ ಅನ್ನೋ ನಿಯಮಗಳು, ಲೈಬ್ರರಿನಲ್ಲಿ ಮುಖ ನೋಡಿದ್ರೆ ಕೆಂಗಣ್ಣು ಬೀರೋ ಲೈಬ್ರರಿಯನ್, ಅಸೈನ್ಮೆಂಟು, ಇಂಟರ್ನಲ್ಸು ಹಾಳು ಮೂಳು ಕೆಲವು ಸಲ ಸಹಪಾಠಿಗಳು ಕೂಡ Resistance  ಆಗಿಬಿಡ್ತಾರೆ ಕಣ್ರೀ... ಇದನೆಲ್ಲಾ ಮೀರಿ ಹುಡುಗ ಹುಡುಗಿಯರ ಮಧ್ಯೆ ಕರೆಂಟ್ ಹರಿಯಬೇಕಂದ್ರೆ ಅವರಿಗೆ ಮೀಟ್ರಿರಬೇಕು... ಕ್ಷಮಿಸಿ Voltage ಇರಬೇಕು ಕಣ್ರೀ!

ಮತ್ತೊಮ್ಮೆ ಎಚ್ಚರ ಆಯ್ತು! ತಲೆಯೆತ್ತಿ ಅಬ್ಬಬ್ಬಾ! ಕಪ್ಪುಬೋರ್ಡಿನ ತುಂಬಾ ಆಗಲೇ ಎಂದೂ ಕಂಡರಿಯದ ಭಾಷೆಯ ಫ಼ಾರ್ಮುಲಾಗಳನ್ನು ತುಂಬಿಸಿ, ಕೊನೆಯ ಸಾಲಿನ ಕೆಳಗೆ ಎರಡು ಗೆರೆ ಎಳೆಯುತ್ತಾ ಗೆಲುವಿನ ನಗೆ ಬೀರಿ "Hence the theorem is proved" ಎನ್ನುತ್ತಾ ನಮ್ಮೆಡೆಗೆ ತಿರುಗಿದ ಪ್ರೊಫ಼ೆಸ್ಸರ್ರು ನನಗೆ ಭೀಷ್ಮ ಪಿತಾಮಹಾರಂತೆ ಕಂಡರು! ನಿಜವಾಗಿ ಅಂದು ತುಂಬಿದ್ದ ಆ ಬೋರ್ಡು ಆಗ ತಾನೆ ಕುರುಕ್ಷೇತ್ರ ಯುದ್ಧ ಮುಗಿದ ರುದ್ರಭೂಮಿಯಂತೆ ಕಾಣುತಿತ್ತು! ಅದರ ತುಂಬಾ ಚೆಲ್ಲಾಡಿದ್ದ ಥೀಟಾ, ಬೀಟಾ, ಗಾಮಾಗಳು ಯುಧ್ಧದಲ್ಲಿ ಹತರಾದ ಸೈನಿಕರಂತೆ, ಇನ್ನು ಕೆಲವು ದೊಡ್ಡ ದೊಡ್ಡ ಡೆಲ್ಟಾಗಳು ತಲೆಕೆಳಕಾಗಿ ಬಿದ್ದ ಕುದುರೆ, ಆನೆಗಳಂತೆ ಕಂಡವು! ಆ ಭಯಾನಕ ದೃಶ್ಯವನ್ನು ಅರಗಿಸಿಕೊಳ್ಳುವಷ್ಟರಲ್ಲಿ "ಸಾರ್ ಒಂದ್ ಕೊಶೆನ್" ಎಂದು ನಮ್ಮ ಬೆಂಚಿನ ಕೊನೆಯಲ್ಲಿದ್ದ ಪವನ್ ಕೈ ಎತ್ತಿದ್ದ. ಸಧ್ಯ ಪಾಠ ಮುಗೀತು ಎಂದು ಸಂತಸದಲ್ಲಿದ್ದ ನಾನು ಬೇಸರದಿಂದ ತಿರುಗಿ ನೋಡಿದೆ... ನಮ್ಮ ಬೆಂಚಿನಲ್ಲಿದ್ದ ಐದೂ ಜನ ಮೇಧಾವಿಗಳು ನನಗೆ ಪಂಚ ಪಾಂಡವರಂತೆ ಗೋಚರಿಸಿದರು! ಮಹಾಭಾರತದ ಯುಧ್ಧಭೂಮಿಗೆ ಪಂಚಪಾಂಡವರು ಒಬ್ಬರಾದ ಮೇಲೆ ಒಬ್ಬರು ಇಳಿದು ಬಂದಂತೆ ಒಬ್ಬರಾದ ಮೇಲೆ ಒಬ್ಬರು ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಎದ್ದೆದ್ದು ಪ್ರಶ್ನೆ ಕೇಳುತ್ತಿದ್ದರೆ ನನಗೆ ಅವರೆಲ್ಲರೂ ಭೀಷ್ಮನೆಡೆಗೆ ಬಾಣ ಪ್ರಹಾರ ಮಾಡುತ್ತಿದ್ದಂತೆ ತೋರಿತು! 

 ಭೀಷ್ಮನೋ ನೋಡು ನಿನ್ನ ಆಪ್ತ ಸೈನಿಕ ಇಲ್ಲಿ ಸತ್ತು ಬಿದ್ದಿದ್ದಾನೆ.... ನಿನ್ನ ಮೆಚ್ಚಿನ ಅನೆ ಇಲ್ಲಿ ಸತ್ತು ಬಿದ್ದಿದೆ ಎಂದು ಬೋರ್ಡಿನ ಮೇಲಿನ ಬೀಟಾ, ಗಾಮಾ, ಡೆಲ್ಟಾಗಳ ಕಡೆ ಕೈ ತೋರಿ ತೋರಿ ಅವರನ್ನು ಹೆದರಿಸಿ ಕೂರಿಸುತ್ತಿದಂತೆ ಅನ್ನಿಸುತ್ತಿತ್ತು! ಕೊನೆಯವನು ಸಮಾಧಾನ ಪಟ್ಟುಕೊಂಡು ಕುಳಿತ ತಕ್ಷಣ ಎಂದಿನಂತೆ  45 ನಿಮಿಷ ತಡವಾಗಿ ಬಂದ ಸೀನ ಬಾಗಿಲಲ್ಲಿ  ಪ್ರೊಫ಼ೆಸ್ಸರ್ ಮುಖನೋಡುತ್ತಾ ನಿಂತ... ನನಗೆ ಆಶ್ಚರ್ಯ, ಅರೆರೆ ಈ ಚಕ್ರವ್ಯೂಹ ಭೇದಿಸಲು  ಸಜ್ಜಾಗಿ ಬಂದಿಹನಲ್ಲಾ ಈ ಅಭಿಮನ್ಯು! ಭಲೇ!

Wednesday, January 15, 2014

ಹಳ್ಳಿ ಹಳ್ಳಿಗೆ ಸ್ನೇಹ ಮತ್ತು ಸಹಾಯ



12th January 2014 ಅಂತರ್ಜಾಲದ ಸಮಾಜಮುಖಿ ಚಟುವಟಿಕೆಗಳಿಗೆಂದೇ ಸ್ಥಾಪನೆಗೊಂಡ "ಸ್ನೇಹ ಸಹಾಯ ಸಂಘ" ಎಂಬ ಸಮುದಾಯದ ವತಿಯಿಂದ ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲ್ಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸೌಲಭ್ಯಗಳ ಹಾಗು ಶಿಕ್ಷಕರ ಕೊರತೆಗಳಿಂದ ಬಳಲುತ್ತಿರುವ ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಹಾಗು ಸುಲಭ ಕಲಿಕೆಗೆ ಅನುವು ಮಾಡಿಕೊಡಲು ಅಂಥ ಶಾಲೆಗಳನ್ನು ಗುರುತಿಸಿ ಅವಕ್ಕೆ ಎಜುಸ್ಯಾಟ್ ಎಂಬ ಉಪಗ್ರಹ ಶಿಕ್ಷಣ ಸೌಲಭ್ಯದ ಉಪಕರಣಗಳನ್ನು ಕೊಡುಗೆಯಾಗಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಙ್ಞಾನವಿ ಗ್ರಾಮೀಣ ಅಭಿವೃದ್ಧಿ ತಂಡ ಎಂಬ ಸಂಘದ ಜೊತೆ ಕೈಜೋಡಿಸಿ ಸ್ನೇಹ ಸಹಾಯ ಸಂಘ ನೆರವೇರಿಸಿದ ಕಾರ್ಯಕ್ರಮ ಇದಾಗಿತ್ತು.

 ಸುಮಾರು ಐವತ್ತು ಜನರಿಂದ ಸಂಗ್ರಹಿಸಿದ ಇಪ್ಪತ್ತೈದು ಸಾವಿರ ರೂಪಾಯಿಗಳು ಸ್ನೇಹ ಸಹಯ ಸಂಘದ ಕೊಡುಗೆಯಾದರೆ ಇನ್ನು ಇಪ್ಪತೈದು ಸಾವಿರ ರೂಪಾಯಿಗಳು ಮತ್ತೊಂದು ಕಂಪನಿಯಿಂದ ಬಂದು ಒಟ್ಟು ಅಂದಾಜು ಐವತ್ತು ಸಾವಿರ ರೂಪಾಯಿಗಳಲ್ಲಿ  Dish Antenna, T.V. , Set Top box, UPS , Speakers ಇಷ್ಟನ್ನು ಕೊಡುಗೆ ನೀಡಲಾಯಿತು.

ಏನಿದು ಎಜುಸಾಟ್?

Edusat ಎಂದರೆ  Educational Satellite  ಎನ್ನುವುದರ ಸಂಕ್ಷಿಪ್ತ ರೂಪ.  20th September 2004 ರಂದು ಉಡಾವಣೆಗೊಂಡ  ISRO ದ ಸಂಪರ್ಕ ಉಪಗ್ರಹ GSAT-3 ಎಂಬುದರ ಇನ್ನೊಂದು ಹೆಸರೇ  EDUSAT. ಇದು ಸಂಪೂರ್ಣ ಶೈಕ್ಷಣಿಕ ಉದ್ದೇಶಕ್ಕಾಗಿಯೇ ಉಡಾಯಿಸಲಾದ ದೇಶದ ಮೊಟ್ಟ ಮೊದಲನೆಯ ಉಪಗ್ರಹ. ಕುಗ್ರಾಮಗಳಲ್ಲಿ ಕೂಡ ಉಪಗ್ರಹದ ಮುಖಾಂತರ ಶೈಕ್ಷಣಿಕ ವಿಷಯಗಳ ಬಗ್ಗೆ ಪಾಠಗಳನ್ನು ಟಿವಿ ವಾಹಿನಿಗಳಂತೆ ಪ್ರಸಾರ ಮಾಡಬಹುದು. ಆ ಮೂಲಕ ದೇಶದ ಯಾವುದೇ ಮೂಲೆಯಲ್ಲಿದ್ದರೂ ವಿದ್ಯಾರ್ಥಿಗಳಿಗೆ ಉತ್ತಮಮಟ್ಟದ ಶಿಕ್ಷಣ ಒದಗಿಸಲು ಬಹಳ ಉಪಯೋಗಕಾರಿ ಯೋಜನೆಯಿದು. ಈ GSAT-3 ಎಂಬ ಉಪಗ್ರಹವು ಈ ಹೊಸ ರೀತಿಯ ಶಿಕ್ಷಣ ಸೇವೆಯನ್ನು ಉಪಸ್ಥಿತಿಗೆ ತಂದಿತಾದರೂ 2010ರಲ್ಲಿ ತನ್ನ ಜೀವಾವಧಿ ಮುಗಿಸಿತು. ಇಂದಿನ ದಿನ ISRO ತನ್ನ ಇತರೆ ಹೊಸ ಉಪಗ್ರಹಗಳ ಮುಖಾಂತರ EDUSAT ಎಂಬ ಹೆಸರಿನಲ್ಲಿಯೇ ಈ ಉಪಗ್ರಹ ಶಿಕ್ಷಣ ಸೇವೆಯನ್ನು ಮುಂದುವರಿಸಿದೆ.

ಎಜುಸ್ಯಾಟ್ ಸೌಲಭ್ಯ ಪಡೆಯಲು ಏನೇನು ಬೇಕು?

ಎಜುಸ್ಯಾಟ್ ಉಪಕರಣಗಳನ್ನು ಮಾರಾಟ ಮಾಡುವ ಬಹಳಷ್ಟು ಕಂಪೆನಿಗಳು ಗೂಗಲ್ ಸರ್ಚ್ ಮಾಡಿದರೆ ಸಾಕು ಸಿಗುತ್ತವೆ. One-way Broadcasting ಅಂದರೆ ಉಪಗ್ರಹದಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಟಿವಿ ವಾಹಿನಿಯಂತೆ ನೋಡಲು Dish Antenna, T.V. , Set Top box ಇದ್ದರೆ ಸಾಕು.  Interactive TV, video conferencing, computer conferencing, web-based instructions ಹೀಗೆ ಈ ಉಪಗ್ರಹದಿಂದ ಇನ್ನೂ ಅನೇಕ ಸೌಲಭ್ಯಗಳನ್ನು ಪಡೆಯಬಹುದಾದ ಸಾಧ್ಯತೆಗಳುಂಟು ಆದರೆ ಅವಕ್ಕೆ ಇನ್ನು ಆಧುನಿಕ ಉಪಕರಣಗಳು ಬೇಕಾಗುವವು ಹಾಗು ವೆಚ್ಚ ಹೆಚ್ಚಾಗುವವು.

ಮುಂದಿನ ಯೋಜನೆಗಳು...

ವರುಷಕ್ಕೆ ಕನಿಷ್ಠ ಎರಡು ಬಾರಿ ಗ್ರಾಮೀಣ ಅಭಿವೃದ್ಧಿ ಕೆಲಸಗಳನ್ನು ಮಾಡಲೇಬೇಕೆಂಬುದು ಸ್ನೇಹ ಸಹಾಯ ಸಂಘದ ಧ್ಯೇಯವಾಗಿದೆ. ಅಂತಹ ಕಾರ್ಯಕ್ರಮಗಳ ಸಾಲಿನಲ್ಲಿ ಕೂನನಕೊಪ್ಪಲು ಕಾರ್ಯಕ್ರಮ ಏಳನೆಯದಾಗಿದೆ. ಇದೇ ವರ್ಷದ ದ್ವಿತೀಯಾರ್ಧದಲ್ಲಿ ಮತ್ತೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಉತ್ಸಾಹದಲ್ಲಿದ್ದಾರೆ ತಂಡದ ಮುಂದಾಳುಗಳಾದ ಮಹೇಶ್ ಗೌಡ, ದಿವ್ಯಾ ಶ್ರೀ ಹಾಗು ರಮೇಶ್ ಅವರು. ಅವರ ಈ ಮಹತ್ಕಾರ್ಯಗಳಿಗೆ ಅಭಿನಂದನೆಗಳನ್ನು ಹೇಳುತ್ತ ಕಾರ್ಯಕ್ರಮದ ಸಫಲತೆಗೆ ಕೈ ಜೋಡಿಸಿದ ಹಾಗೂ ಪ್ರಯಾಣಕ್ಕೆ ಜೊತೆಯಾದ ಎಲ್ಲ ಮಿತ್ರ ವೃಂದದವರಿಗೂ ನನ್ನ ನಮನಗಳು.

ಕೂನನಕೊಪ್ಪಲು ಭಾಗದ ವಿದ್ಯಾರ್ಥಿಗಳ ಬಾಳು ಶೀಘ್ರವೇ ಬೆಳಗಲಿದೆ. ಅವರ ಕಲಿಕೆಗೆ ಅಡ್ಡವಾಗಿದ್ದ ಕಷ್ಟ ಕೋಟಲೆಗಳು ಶೀಘ್ರವೇ ಮುಗಿಯಲಿದೆ. ಕಾರಣ ಅವರಿಗಾಗಿ ಹಾಗು ಸುತ್ತಮುತ್ತಲಿನ ಹಳ್ಳಿಯವರಿಗಾಗಿ ಙ್ಞಾನವಿ ತಂಡದಿಂದ ಹಾಗು ಸರಕಾರಿ ಅಧಿಕಾರಿಗಳ ನೆರವಿನಿಂದ ಅಲ್ಲಿ ಆಧುನಿಕ ಸೌಲಭ್ಯಗಳುಳ್ಳ ಒಂದು ಹೊಸ ಶಾಲೆ ಹೊಸ ಕಟ್ಟಡ ನಿರ್ಮಾಣ ಆಗುತ್ತಿದೆ ಎಂಬುದು ಅತ್ಯಂತ ಸಂತೋಷಕರ ವಿಷಯ!


 Facebookನಲ್ಲಿ ಸ್ನೇಹ ಸಹಾಯ ಸಂಘವನ್ನು ಸೇರಲು ಕ್ಲಿಕ್ಕಿಸಿ...

https://www.facebook.com/groups/snehasahayasangha/ 


ಬೆಳಗಲಿ ಬೆಳೆಯಲಿ ಗ್ರಾಮೀಣ ಭಾರತ
ಸ್ನೇಹ ಸಹಾಯ ಸಂಘಕ್ಕೆ ನಿಮಗೆಲ್ಲ ಸುಸ್ವಾಗತ  

Monday, December 16, 2013

3K ಸಂಜೆ - ಜಯಂತ್ ಕಾಯ್ಕಿಣಿಯೊಂದಿಗೆ


14th December 2013 ಶನಿವಾರ ಸಂಜೆ ಕೆಲವು ಅವಿಸ್ಮರಣೀಯ ಕ್ಷಣಗಳು ನನ್ನ ನೆನಪಿನ ಪುಟಗಳಲ್ಲಿ ಎಂದೆಂದಿಗೂ ಅಳಿಸದಂತೆ ಅಚ್ಚೊತ್ತಿ ಕುಳಿತವು. ನಮ್ಮ ಮೆಚ್ಚಿನ 3K  ಕನ್ನಡ ಕವಿತೆ ಕಥನ ತಂಡವು ಖ್ಯಾತ ಚಲನಚಿತ್ರ ಸಾಹಿತಿ ಡಾ. ಜಯಂತ್ ಕಾಯ್ಕಿಣಿ ಅವರನ್ನು ಭೇಟಿ ಮಾಡಿದ ಸಂಜೆ ಜೀವನದಲ್ಲಿ ಕೆಲವು ಅದ್ಭುತ ಕ್ಷಣಗಳನ್ನು ಕಟ್ಟಿಕೊಡುವಂತಿತ್ತು! ಎಲ್ಲರಲ್ಲೂ ಉತ್ಸಾಹ, ಕುತೂಹಲ, ರೋಮಾಂಚನ! ಕನ್ನಡ ಸಿನಿ ಲೋಕದಿ ಹಲವು ಅದ್ಭುತ ಹಾಡುಗಳನ್ನು ಸೃಷ್ಠಿಸಿ ಪದಗಳಲೇ ಜನರ ಮನಸೂರೆಗೊಳಿಸಿರುವ, ಕನ್ನಡ ನಾಡಿನ ಮನೆ ಮಾತಾಗಿರುವ ಜಯಂತ್ ಅವರ ಜೊತೆ ಕುಳಿತು ಹರಟೆ ಹೊಡೆಯುವ ಭಾಗ್ಯ ನಮಗಂದು ದೊರೆಯಿತು. ನಾವು ಅಂದು ಕಳೆದ 4  ಗಂಟೆಗಳಲ್ಲಿ ಅವರಾಡಿದ ಮಾತುಗಳು, ಯುವ ಕವಿಗಳಿಗೆ ಅವರು ನೀಡಿದ ಮಾರ್ಗದರ್ಶನ ಎಲ್ಲವನ್ನೂ ದಾಖಲಿಸಿ ಇಟ್ಟುಕೊಳ್ಳಬೇಕು. ಅದು ಸಾಹಿತ್ಯಲೋಕದ ಎಳೆ ಪೈರುಗಳಿಗೆ ರಸಗೊಬ್ಬರದಂತಾಗ ಬೇಕು ಎನ್ನುವ ಹಂಬಲದಲ್ಲಿ ಅವರು ಹೇಳಿದ ಕೆಲವು ಅಂಶಗಳಲ್ಲಿ ನನ್ನ ನೆನಪಿನಲ್ಲುಳಿದಷ್ಟನ್ನು ಬರೆದಿಡುವ ಪ್ರಯತ್ನ ಮಾಡಿದ್ದೇನೆ... ತಪ್ಪುಗಳಿದ್ದರೆ ಕ್ಷಮಿಸಿ, ಕಾರ್ಯಕ್ರಮಕ್ಕೆ ಬಂದಿದ್ದವರು ಯಾವುದಾದರೂ ವಿಷಯಗಳು ಬಿಟ್ಟುಹೋಗಿದ್ದರೆ ಸೇರಿಸಬೇಕಾಗಿ ವಿನಂತಿ. 

ಕಾವ್ಯರಚನೆಯ ಬಗ್ಗೆ, ಅವರ ಜೀವನದ ಬಗ್ಗೆ, ಸಮಕಾಲೀನ ಸಿನಿಮಾ ಹಾಗು ಸಾಹಿತ್ಯದ ಬಗ್ಗೆ ಅವರು ನಮಗೆ ತಿಳಿಸಿಕೊಟ್ಟ ಕೆಲವು ಅಂಶಗಳು... ಅವರದೇ ಮಾತುಗಳಲ್ಲಿ...


1. K. V. Tirumalesh ಅವರ ಪ್ರಭಾವ: ಜಯಂತ್ ಅವರ ಕಾವ್ಯಗಳ ಮೇಲೆ ಬಹಳ ಪರಿಣಾಮ ಬೀರಿದಂಥವರು ಕೆ. ವಿ. ತಿರುಮಲೇಶ್ ಅವರು. ತಿರುಮಲೇಶರ ಕಾವ್ಯ ಅವರು ಓದುವುದಕೂ ಮುನ್ನ ಅವರು ಬರೆದ ಕವಿತೆಗಳಿಗೂ, ನಂತರದ ಕವಿತೆಗಳಿಗೂ ವ್ಯತ್ಯಾಸ ಎದ್ದು ಕಾಣುತ್ತದೆ ಎಂದು ಅವರೇ ಹೇಳುತ್ತಾರೆ.

2. ಬರವಣಿಗೆ ಮುಖ್ಯ: ಇಂದು ಎಲ್ಲರೂ ಕೈಯಲ್ಲೇ ಮೊಬೈಲ್ ಹಿಡಿದು ಬರೀ ಹೆಬ್ಬೆರಳಿನಲ್ಲಿಯೇ ಟೈಪಿಸುತ್ತಾರೆ, ಅಂತರ್ಜಾಲದಲ್ಲಿ ಕವನಗಳನ್ನು ಅಂಚಿಸುತ್ತಾರೆ.  ಆದರೆ ಒಬ್ಬ ಲೇಖಕನಿಗೆ ಕೈ ಬರವಣಿಗೆ ಎಂಬುದು ಬಹಳ ಮುಖ್ಯ. ಅದು ವ್ಯಕ್ತಿತ್ವ ವಿಕಾಸದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ! ಆದ್ದರಿಂದ ಟೈಪಿಸುವುದರ ಜೊತೆಗೆ ಆಗಾಗ ಬರೆಯುವುದನ್ನು ಬಿಡಬಾರದು.

3. ಓದು ಮುಖ್ಯ: ಕವಿ ಬರಹಗಾರರಾಗಲು ಓದುವುದು ಬರವಣಿಗೆಗಿಂಥ ಬಹಳ ಮುಖ್ಯ, ಏಕೆಂದರೆ, ಉತ್ತಮ ಸಾಹಿತ್ಯವನ್ನು ಓದುವುದರಿಂದಲೇ ಬರಹಕ್ಕೆ ಸರಕು ಸಿಗುವುದು, ಓದುವುದರಿಂದಲೇ ಕಾವ್ಯ ಸ್ಪೂರ್ತಿ, ಪದಗಳ ಮೇಲಿನ ಹಿಡಿತ ವಿಕಸನಗೊಳ್ಳುವುದು. ಆದ್ದರಿಂದ ಉತ್ತಮ ಸಾಹಿತ್ಯಗಳನ್ನು ಓದುವುದು ತುಂಬಾ ಮುಖ್ಯ. ಜಯಂತ್ ಅವರು ಉನ್ನತ ವ್ಯಾಸಂಗದಲ್ಲಿ ಚಿನ್ನದ ಪದಕ ಪಡೆದವರು ಹಾಗು ಮುಂಬೈನ ದೊಡ್ಡ ದೊಡ್ಡ ಕಂಪನಿಗಳಲ್ಲಿ ಬೇರೆ ಬೇರೆ  Shiftಗಳಲ್ಲಿಸೇವೆ ಸಲ್ಲಿಸಿದವರು. ಆ ವ್ಯಸ್ಥತೆ, ಒತ್ತಡ ತುಂಬಿದ ದಿನಗಳಲ್ಲಿಯೂ ಸಹ ಜಯಂತ್ ಅವರು ಓದುವ ಗೀಳನ್ನು ಬಿಡಲಿಲ್ಲ. ದಿನ ದಿನವೂ ಉತ್ತಮ ಸಾಹಿತ್ಯದ ಕೆಲವು ಪುಟಗಳನ್ನು ತಿರುವಿ ಹಾಕಿದ ನಂತರವೇ ನಿದ್ರೆಗೆ ಹೋಗುತ್ತಿದ್ದುದು. ಆದ್ದರಿಂದ ಇಂದಿನ ಸಾಹಿತ್ಯ ಲೋಕದ ಎಳೆ ಚಿಗುರುಗಳಿಗೆ ಅವರ ಮೊದಲ ಕಿವಿ ಮಾತು ಸಹ ಅದೇ... ಪ್ರತೀದಿನ ತಪ್ಪದೇ ಉತ್ತಮ ಸಾಹಿತ್ಯಗಳನ್ನು ಓದುತ್ತಿರಿ.

4. ಕವಿತೆಗೆ ಅರ್ಥವಿರುವುದಿಲ್ಲ ಅದೊಂದು ಅನುಭವವಷ್ಟೇ: ಬಹಳಷ್ಟು ಜನ ಜಯಂತ್ ಅವರನ್ನು ಕವನಗಳಿಗೆ ಅರ್ಥ ಕೇಳಿರುತ್ತಾರೆ. ಅವರಿಗೆಲ್ಲಾ ಅವರದ್ದೊಂದೇ ಉತ್ತರ. ಕವಿತೆಯಲ್ಲಿರುವ ಪದಗಳಿಗೆ ಅರ್ಥ ಹುಡುಕಬಹುದು, ಸಾಲುಗಳಿಗೆ ಅರ್ಥ ಹುಡುಕಬಹುದು. ಆದರೆ ಒಂದು ಸಂಪೂರ್ಣ ಕವಿತೆಗೆ ಅರ್ಥವಿರುವುದಿಲ್ಲ. ಅದೊಂದು ಅನುಭವವಷ್ಟೇ!

5. ಕುವೆಂಪು ಕಾವ್ಯ: ಕುವೆಂಪುರವರು ತಮ್ಮ ಮಗ ತೇಜಸ್ವಿ ಮೂರು ವರ್ಷದವರಿದ್ದಾಗ ಬರೆದ ಒಂದು ಕವನದ ಮೂರು ಸಾಲುಗಳನ್ನು  ವಾಚಿಸಿ ಕಾವ್ಯ ರುಚಿಸಲು ಅದರಲ್ಲಿ ಏನಿರಬೇಕು ಎಂಬುದರ ನಿದರ್ಶನ ನೀಡಿದರು...

"ನಿನಗೂ ಮೂರು ವರುಷ
ನನಗೂ ಮೂರು ವರುಷ
ನಾವಿಬ್ಬರೂ ಒಂದೇ!"

ಇದರಲ್ಲಿ ಕವಿ ತಮ್ಮ ಮಗನ ತುಂಟಾಟಗಳ ಚಿತ್ರಣದಲ್ಲಿ ತಮ್ಮನ್ನೂ ಚಿತ್ರಿಸಿಕೊಂಡಿದ್ದಾರೆ.. ಒಂದು ಮಗು ಹುಟ್ಟಿದಾಗಲೇ ಒಬ್ಬ ತಂದೆಯೂ ಹುಟ್ಟಿರುತ್ತಾನೆ ಎಂಬ ಅನುಭವವನ್ನು ಕಟ್ಟಿ ಕೊಡುತ್ತಾರೆ. ನಾವಿಬ್ಬರು ಒಂದೇ ಎನ್ನುವಲ್ಲಿ ಒಂದು ಹೊಸತನ ಪ್ರಕಟವಾಗುತ್ತದೆ! ಈ ಮೂರು ಅಂಶಗಳು ಕಾವ್ಯಕ್ಕೆ ಬಹಳ ಮುಖ್ಯ.

6. ಸಿನಿಮಾ ಹಾಡುಗಳು ಕಾವ್ಯವಲ್ಲ: ಸಿನಿಮಾ ಹಾಡುಗಳು ಎಂದೂ ಕವನ ಆಗುವುದಕ್ಕೆ ಸಾಧ್ಯವಿಲ್ಲ. ಕಾರಣ ಇಷ್ಟೇ, ಕವನ ಎಂಬುದು ನಮ್ಮ ಅಂತರಂಗದ ದನಿಯಿಂದ ಬರುವಂಥದ್ದು ಅದು ನಮ್ಮ ಮನಸಿನ ಭಾವನೆಗಳನ್ನು ಪದ ಸಂಯೋಜಿಸಿ ಹೇಳುವಂಥದ್ದು. ಆದರೆ ಸಿನಿಮಾ ಹಾಡುಗಳು ಹಾಗಲ್ಲ, ಅದು ಚಿತ್ರ ಸಾಹಿತಿಯಾದವರು ತಮ್ಮ ಅಂತರಂಗವನ್ನು ಮರೆತು ನಾಯಕನಾಗಿಯೋ ನಾಯಕಿಯಾಗಿಯೋ ಇನ್ನ್ಯಾವುದೋ ಪಾತ್ರಧಾರಿಯಾಗಿಯೋ ಪರಕಾಯ ಪ್ರವೇಶ ಮಾಡಿ ಅವನ/ಅವಳ ಭಾವನೆಗಳನ್ನು ರಾಗಕ್ಕೆ ಸರಿಯಾಗಿ ಸಂಯೋಜಿಸುವಂಥದ್ದು. ಸಿನಿಮಾ ಸಾಹಿತ್ಯ ಬರೆಯಬೇಕಾದರೆ ಅದರ ಸಂದರ್ಭವನ್ನು ತಿಳಿದುಕೊಳ್ಳಬೇಕು. ಸಿನಿಮಾದಲ್ಲಿ ಆ ಹಾಡು ಮೊದಲನೆಯದೋ, ಎರಡನೆಯದೋ, ಮೂರನೆಯದೋ, ಹಾಡಿನ ಚಿತ್ರೀಕರಣ ಎಲ್ಲಿ ಯಾವ ಸಮಯದಲ್ಲಿ ನಡೆಯಲಿದೆ ಎಲ್ಲವನ್ನೂ ಗಮನಿಸಿ ಬರೆಯಬೇಕು. ಇಷ್ಟೆಲ್ಲಾ ಬೇಲಿಗಳಿರುವುದರಿಂದ ಸಿನಿಮಾ ಸಾಹಿತ್ಯದಲ್ಲಿ ನೈಜ ಭಾವನೆಗಳು ಮಂಕಾಗುತ್ತವೆ. ಆದರೆ ಕವನ ಹಾಗಲ್ಲ. ಅದರಲ್ಲಿ ಅಂತರಂಗವು ಸ್ವಚ್ಛಂದ ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಾಡುತ್ತದೆ.

7. Poetry is not a description of the picture: 
ಕಣ್ಣಿಗೆ ಕಂಡ ಚಿತ್ರಗಳ ವರ್ಣನೆಯಷ್ಟೇ ಕಾವ್ಯವಾಗುವುದಿಲ್ಲ. ಆ ಚಿತ್ರ  ನಿಮ್ಮೊಳಗೆ ಇಳಿಯಬೇಕು. ನೀವು ಚಿತ್ರದೊಳಗೆ ಇಳಿಯಬೇಕು. ಆ ಚಿತ್ರದಲ್ಲಿ ನೀವು ಒಬ್ಬರಾಗಿ ಅನುಭವಿಸಬೇಕು. ಹೊಸ ವಿಷಯ ಒಂದನ್ನು ಕಂಡುಕೊಳ್ಳಬೇಕು. ಆಗಷ್ಟೇ ಅದು ಪರಿಪೂರ್ಣ ಕಾವ್ಯವೆನಿಸುವುದು. ಇದ್ದಿದ್ದನ್ನು ಇದ್ದಂತೆ ವಿವರಿಸುವುದು ಕಾವ್ಯವಲ್ಲ!

8. Position of the poet should change:
ಕವನದ ಆದಿಗೂ, ಕವನದ ಅಂತ್ಯಕ್ಕೂ ಕವಿಯ ದೃಷ್ಠಿಯಲ್ಲಿ, ಅದರ ದಿಕ್ಕಿನಲ್ಲಿ ಬದಲಾವಣೆಯಿರಬೇಕು. ಕಾವ್ಯದ ಸನ್ನಿವೇಶದಲ್ಲಿ ಕವಿ ನಿಂತಲ್ಲಿಯೇ ನಿಲ್ಲಬಾರದು ಕವನದ ವಿಷಯದ ಬಗ್ಗೆ ಕವಿಯ ದೃಷ್ಠಿಕೋನ ಕವನ ಮುಗಿಯುವ ಮುಂಚೆ ಬದಲಾಗಬೇಕು. ಉದಾಹರಣೆಗೆ ವೇಶ್ಯೆಯ ಬಗ್ಗೆ ಬರೆದ ಕವನದಲ್ಲಿ ಕೊನೆಗೆ ಅವಳು ತನ್ನ ತಂಗಿಯಂತೆ ಕಾಣುವ ಪ್ರಸಂಗ ಬಂದರೆ ಅದು ವೈವಿಧ್ಯಮಯವೆನಿಸುತ್ತದೆ.

9. Poetry should connect the unconnected: ಕೇವಲ ಎದುರಿಗೆ ಕಣ್ಣಿಗೆ ಕಾಣುವ ವಸ್ತುಗಳ ಬಗ್ಗೆ ಬರೆದರೆ ಅದು ಕವನವಲ್ಲ, ವರದಿಯಾಗುತ್ತದೆ. ಕಣ್ಣಿಗೆ ಕಾಣುವ ವಸ್ತುಗಳನ್ನು ಒಳಗಣ್ಣಿಗೆ ಕಾಣುವ ಕಲ್ಪನೆಯನ್ನೂ ಒಟ್ಟಿಗೆ ಹೆಣೆದು ಒಂದೇ ಎಂಬಂತೆ ಚಿತ್ರಿಸಿಕೊಡಬೇಕು. ಉದಾಹರಣೆಗೆ ಬಸ್ಸಿನ ಮೆಟ್ಟಿಲ ಮೇಲೊಂದು ಪುಟ್ಟ ಮಗುವಿನ ಚಪ್ಪಲಿ ಬಿದ್ದಿರುವುದನ್ನು ನೀವು ನೋಡುತ್ತೀರಿ. ನೀವು ಅದರ ಮೇಲೊಂದು ಕವಿತೆ ಬರೆದರೆ ಅದು ಕೇವಲ ಮೆಟ್ಟಿಲ ಮೇಲೆ ಬಿದ್ದಿರುವ ಚಪ್ಪಲಿಯ ಬಗ್ಗೆ ಅಲ್ಲದೇ ಬೇರೆಡೆ ಎಲ್ಲೋ ಒಂದೇ ಕಾಲಿನ ಚಪ್ಪಲಿಯನ್ನು ತೊಟ್ಟು ಅಳುತ್ತಿರುವ ಮಗುವೂ  ಚಿತ್ರಿತವಾಗುವಂಥ ಸಾಲುಗಳಿರಬೇಕು. ಆಗಲೇ ಅದು ಪರಿಪೂರ್ಣವೆನಿಸುವುದು.

10. ಯೋಗರಾಜಭಟ್ಟರ ಪ್ರಶಂಸೆ:  ಯೋಗರಾಜ ಭಟ್ಟರ ಚಿತ್ರ ಸಾಹಿತ್ಯ ಇಂದು ಜನಪ್ರಿಯವಾಗಿರುವುದಕ್ಕೆ ಕಾರಣ ಅವರ ಕಾವ್ಯವಸ್ತುಗಳ ವೈವಿಧ್ಯತೆ ಹಾಗು ಸುತ್ತಲೂ ಕಾಣುವ ಜನರ ಜೀವನದ ಬಗ್ಗೆ down-to-earth  ರೀತಿಯ ವಿಶ್ಲೇಷಣೆ ಉದಾಹರಣೆಗೆ ಅವರ ಜಾಕಿ ಚಿತ್ರದ ಹಾಡೊಂದರಲ್ಲಿ ಜಾಕಿಗೆ ಮಾಡಲು ಬರುವ ಕೆಲಸಗಳ ಬಗ್ಗೆ ಕೆಲವು ಸಾಲುಗಳು ಈ ರೀತಿ ಇವೆ...

Maralu Dinnu, Baale Hannu, Puncture Angadi, Paani Poori,
Raagi Machine, Baddi Saala, Real Estate, Mori Clean-u,

ಇವೆಲ್ಲಾ ಅವರಿಗೆ ಹೊಳೆದದ್ದು ಬೆಂಗಳೂರಿಗೆ ವಲಸೆ ಬರುವ ಹಳ್ಳಿಗರ ಜೀವನವನ್ನು ಹತ್ತಿರದಿಂದ ವಿಶ್ಲೇಷಿಸಿದಾಗ. ಬರೀ ಪ್ರೀತಿ, ಪ್ರೇಮ, ಹೂವು ಹಕ್ಕಿ, ಹಸಿರು, ಮಳೆ ಅಂತಹ ಮಧುರ ಅನುಭವಗಳನ್ನು ಕೊಡುವ ವಸ್ತುಗಳನ್ನು ಹುಡುಕಿಕೊಂಡು ಹೋಗಿ ಕವನ ಬರೆದರೆ ಅದರಲ್ಲಿ ಏನೂ ಹೊಸತನವಿರುವುದಿಲ್ಲ. ಅದೆಲ್ಲಾ ಈಗಾಗಲೇ ಎಷ್ಟೋ ಶತಮಾನಗಳಿಂದ ಕಾವ್ಯದಲ್ಲಿ ಸರ್ವೇ ಸಾಮಾನ್ಯ ಬಿದ್ದು ಕೊಳೆಯುತ್ತಿರುವ ವಸ್ತುಗಳು. ಇಂದಿನ ಕವಿಗಳು ಅವುಗಳ ಹಂಗನ್ನು ತೊರೆದು ಹೊರಬರಬೇಕಿದೆ. ಟ್ರಾಫ಼ಿಕ್ ಜಾಮಿನಲ್ಲಿ ಸಿಕ್ಕಿಕೊಂಡಿರುವಾಗ ಸಿಗ್ನಲ್ಲಿನ ಮೇಲೆ ಕವನ ಬರೆಯಿರಿ. ಅಲ್ಲೇ ನಿಂತು ನಿದ್ರಿಸುತ್ತಿರುವ ಪೋಲೀಸನ ಮೇಲೆ ಕವನ ಬರೆಯಿರಿ, ಗಾಡಿಯಿಂದ ಗಾಡಿಗೆ ಓಡಿಬಂದು "ಅಣ್ಣಾ ಹೂವ ತಕ್ಕಳ್ಳಿ ಅಣ್ಣಾ" ಎನ್ನುತ್ತಾ ಗಾಜಿಂದ ಇಣುಕುವ ಪುಟ್ಟ ಹುಡುಗಿಯ ಮೇಲೆ ಕವನ ಬರೆಯಿರಿ. ಹೀಗೆ ವೈವಿಧ್ಯತೆಯ ಪ್ರಯೋಗ ನಡೆಯಲಿ.

11. ಬರೀ ಬಾಗಿಲು ಮಾಡುವವ ಕಾರ್ಪೆಂಟರ್ ಅಲ್ಲ: ಒಬ್ಬ ಕಾರ್ಪೆಂಟರ್ ಆದವನಿಗೆ ಬಾಗಿಲೂ ಮಾಡಲು ಗೊತ್ತಿರಬೇಕು, ಕಿಟಕಿ, ಮೇಜು ಕುರ್ಚಿ, ಮಂಚ ಎಲ್ಲವನ್ನೂ ಮಾಡಲು ಗೊತ್ತಿರಬೇಕು, ಅಂತೆಯೇ ಒಬ್ಬ ಕವಿಯಾದವನು ಒಂದು ವಿಷಯಕ್ಕೆ ಅಂಟಿಕೊಳ್ಳದೇ, ಯಾವುದೇ ವಸ್ತುವಿನ ಮೇಲೆ ಎಂತಹ ಭಾವನೆಗಳ ಬಗ್ಗೆಯೂ ಸರಾಗವಾಗಿ ಬರೆಯುವುದನ್ನು ಕಲಿಯಬೇಕು. ಆಗಷ್ಟೇ ಕವಿತ್ವ ಸಾರ್ಥಕತೆ ಪಡೆಯುವುದು. ಒಂದು ವಿಷಯದ ಬಗ್ಗೆ ಮಾತ್ರ ಬರೆಯುವುದು ಯವ್ವನದಲ್ಲಷ್ಟೇ ಮೊಡವೆ ಬಂದಂತೆ ಎಂದು ಟೀಕಿಸಿದರು.

12. ಕನ್ನಡ ಕವನದಲ್ಲಿ ಆಂಗ್ಲ ಪದ ತಪ್ಪಲ್ಲ! ಇಂದಿನ ಕನ್ನಡ ಕಾವ್ಯದಲ್ಲಿ ಸಾಲು ಸಾಲಿಗೂ ಪರಭಾಷೆಯ ಪದಗಳು ಇಣುಕುತ್ತವೆ. ಅದು ಇಂದಿನ ಜನರ ಆಡುಮಾತುಗಳಿಂದ ಪ್ರೇರಿತವಾಗಿರುವುದರಿಂದ ಈಗಾಗಲೆ ಪ್ರಚಲಿತವಾಗಿರುವ ಪರಭಾಷಾ ಪದಗಳನ್ನು ಕಾವ್ಯದಲ್ಲೂ ಯಥಾವತ್ತಾಗಿ ಬಳಸಬಹುದು. ಅದು ತಪ್ಪೇನಲ್ಲ! ಈಗಲೂ ಸಹ ನಾವು ಅಚ್ಚ ಕನ್ನಡದ ಹಂಗಿನಲ್ಲಿಯೇ ಇದ್ದರೆ ಸಾಹಿತ್ಯವು ಸಾಮಾನ್ಯ ಜನರಿಂದ ದೂರವಾಗಿ ಸುಲಭವಾಗಿ ಎಲ್ಲರಿಗೂ ನಿಲುಕದಂತಾಗುತ್ತದೆ. ನಮ್ಮ ಕವನಗಳು ಯಾರಿಗೂ ಅರ್ಥವಾಗದಂತಾಗುತ್ತದೆ. ಆದ್ದರಿಂದ ಎಲ್ಲೆಡೆ ನಿತ್ಯ ಹೊಸತನ ಗಮನ ಸೆಳೆವಂತೆ ಕನ್ನಡ ಕಾವ್ಯದಲ್ಲೂ ಪರಭಾಷಾ ಪದಗಳ ಬಳಕೆ ಆಗಲಿ ಅದರಲ್ಲಿ ತಪ್ಪೇನಿಲ್ಲ. ಉದಾಹರಣೆಗೆ ಯೋಗರಾಜಭಟ್ಟರ ಈ ಹಾಡು ನೋಡಿ:
"ಹೃದಯದ ಮೇಲೆ ಹೈ-ಹೀಲ್ಡು ಹಾಕಿ
ರಾಜಕುಮಾರಿ ಬಂದಂಗಾಯ್ತು"

ಅದೇ ಇಲ್ಲಿ ಹೃದಯದ ಮೇಲೆ ಕಾಲಿಟ್ಟು ರಾಜಕುಮಾರಿ ಬಂದಳು ಎಂದಿದ್ದರೆ ಅದು ಹಳೇ ಸರಕಾಗುತಿತ್ತು! ಹೈ-ಹೀಲ್ಡು ಎಂಬ ಪರಭಾಷಾ ಪದ ಒಂದರಿಂದಲೇ ಸಾಲು ಸ್ವಾರಸ್ಯಕರವೆನಿಸುತ್ತದೆ!

13. ಚುಟುಕು ಸಾಹಿತ್ಯ, ಹನಿಗವನಗಳೆಂದರೆ ಅಷ್ಟಕ್ಕಷ್ಟೆ: ಜಯಂತ್ ಅವರಿಗೆ ಚುಟುಕು ಸಾಹಿತ್ಯ, ಹನಿಗವನಗಳ ಬಗ್ಗೆ ಹೆಚ್ಚು ಆಸಕ್ತಿಯಿಲ್ಲ ಎಂದು ನನ್ನ ಅಭಿಪ್ರಾಯ. ಎಲ್ಲರ ಕಾವ್ಯವನ್ನು ಕೇಳಿ ಅವುಗಳ ಬಗ್ಗೆ ಒಂದಲ್ಲ ಒಂದು ರೀತಿಯ ಪ್ರತಿಕ್ರಿಯೆ ನೀಡಿದ ಅವರು ಬಹುಶಃ ಇದೇ ಕಾರಣಕ್ಕೆ ನನ್ನ ಎರಡು ಹನಿಗವನಗಳ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲಿಲ್ಲ! ನಾನು ಕವನ ವಾಚನ ಮಾಡುವುದಕ್ಕೂ ಮುಂಚೆಯೇ ಹನಿಗವನಗಳು ಕವನಗಳೇ ಅಲ್ಲ ಎಂದು ಘೋಷಿಸಿಬಿಟ್ಟರು! ಹನಿಗವನಗಳ, ಶಾಯರಿಗಳ ವಾಚನದಲ್ಲಿ ಖ್ಯಾತ ಬಗೆಯಾದ ಮೊದಲನೆಯ ಸಾಲನ್ನು ಎರೆಡೆರಡು ಬಾರಿ ವಾಚಿಸುವ ಶೈಲಿಯನ್ನು ಅಲ್ಲಗೆಳೆದರು.    

14. ಅತ್ಯಂತ ಕಡಿಮೆ ಸಮಯದಲ್ಲಿ ಬರೆದಂಥ ಹಾಡು: ಮುಂಗಾರು ಮಳೆಯ "ಅನಿಸುತಿದೆ ಯಾಕೋ ಇಂದು..."

15. ಅತ್ಯಂತ ಹೆಚ್ಚು ಸಮಯ ಹಿಡಿದ, ಹೆಚ್ಚು ತಲೆ ಕೆಡಿಸಿದ ಗೀತರಚನೆ: ಗಾಳಿಪಟದ "ಮಿಂಚಾಗಿ ನೀನು ಬರಲು..."

16. ಮೆಚ್ಚಿನ ಪತ್ರಿಕೆ: ಮಯೂರ

17. ಇಂದಿನ ಕನ್ನಡ ಚಲನಚಿತ್ರಗಳ ಬಗ್ಗೆ ಬೇಸರ: ಇಂದಿನ ಕನ್ನಡ ಚಲನಚಿತ್ರಗಳ ಗುಣಮಟ್ಟ ಜಯಂತ್ ಅವರಿಗೆ ಬೇಸರ ಮೂಡಿಸುತ್ತದೆ. ಇಡೀ ವರ್ಷದಲ್ಲಿ ಕೇವಲ ಒಂದೆರಡು ಚಿತ್ರಗಳು ಚೆಂದವೆನಿಸುತ್ತವೆ. ಕನ್ನಡ ಚಿತ್ರರಂಗದಲ್ಲಿ ಒಳಗೊಳಗೆ ನಡೆಯುವಂಥ ರಾಜಕೀಯ ಕುತಂತ್ರಗಳು ಸಹ ಬೇಸರ ಮೂಡಿಸುತ್ತದೆ.

18.  ಚಿತ್ರಗಳಲ್ಲಿ ಹೊಸಬರಿಗೆ ಅವಕಾಶ ಒದಗಿಸುವೆ: ಜಯಂತ್ ಅವರು ಯಾವುದೇ ಸಿನಿಮಾಗೆ ಒಪ್ಪಿಕೊಂಡರೂ ಅದರಲ್ಲಿ ಕನಿಷ್ಠ ಪಕ್ಷ ಒಂದು ಹಾಡಿಗಾದರೂ ಹೊಸಬರಿಗೆ ಸಾಹಿತ್ಯ ಬರೆಯಲು ಅವಕಾಶ ಮಾಡಿಕೊಡುವಂತೆ ನಿರ್ಮಾಪಕರಲ್ಲಿ ಒತ್ತಾಯಿಸುತ್ತಾರೆ.

ಇಷ್ಟೆಲ್ಲಾ ತಿಳಿಸಿಕೊಡುವ ಹೊತ್ತಿಗೆ ಜಯಂತ್ ಸರ್ ಗೆ ತುಂಬಾ ಆಯಾಸವಾಗಿತ್ತು! ಕದಂಬ ಹೋಟೆಲಿನಿಂದ ಬಂದ ಬಿಸಿ ಬಿಸಿ ವೆಜ್ ಬಿರಿಯಾನಿ, ಮೊಸರನ್ನ ಜೊತೆಗೆ ಬರ್ಫ಼ಿ ಸವಿಯುತ್ತಾ ನಾವೆಲ್ಲರೂ ಜೊತೆ ಕುಳಿತು ಊಟ ಮಾಡಿದ್ದಾಯ್ತು. ನಂತರ ಗುಂಪಿನಲ್ಲಿ ಹಾಗು ಒಬ್ಬೊಬ್ಬರಾಗಿ ನಿಂತು ಅವರ  photo session ನಡೆಸಿದ್ದಾಯ್ತು, ಕೈ ಗೆ ಸಿಕ್ಕಿದ ಪುಸ್ತಕಗಳ ಮೇಲೆಲ್ಲಾ ಅವರ ಹಸ್ತಾಕ್ಷರ ಪಡೆದಾಯ್ತು. ರೂಪಕ್ಕ, ಅನು ಅಕ್ಕ, ಸತೀಶ್ ನಾಯಕ್, ಗೋಪಿನಾಥ್, ಅರುಣ್ ಶೃಂಗೇರಿಯವರ ಕಂಠ ಮಾಧುರ್ಯ ಸವಿದದ್ದಾಯಿತು! ಕೊನೆಗೆ ನಮ್ಮೆಲ್ಲರ ಒತ್ತಾಯದ ಮೇರೆಗೆ ಜಯಂತ್ ಅವರು ಸಹ ಮಧುರ ಭಾವಗೀತೆಯೊಂದನ್ನು ಹಾಡಿ ನಮ್ಮೆಲ್ಲರ ಮನ ತಣಿಸಿದರು.  3K  ಕರಾವಳಿ ಪ್ರತಿನಿಧಿ, ಮಂಗಳೂರಿನ ಮಹೇಶ್ ಮೂರ್ತಿಯವರಿಂದ ಶಾಲು ಹೊದಿಸಿ ಚಿತ್ರಸಾಹಿತ್ಯ ಲೋಕದ ದಿಗ್ಗಜ, ಅಭಿಮಾನಿಗಳ ಕಣ್ಮಣಿ, ಜಯಂತ್ ಕಾಯ್ಕಿಣಿಯವರನ್ನು ಸನ್ಮಾನಿಸಲಾಯಿತು. 

 

ಹೊತ್ತಾಗುತ್ತಾ ಬಂದರೂ ನಮಗ್ಯಾರಿಗೂ ಅಲ್ಲಿಂದ ಹೋಗಲು ಮನಸೇ ಆಗುತ್ತಿರಲಿಲ್ಲ... ಸದಾ ಹಸನ್ಮುಖರಾಗಿ ಬಹಳ ಆಪ್ತವಾಗಿ ಮಾತನಾಡುವ ಅವರ ಮಾತುಗಳು ಇನ್ನು ಕೇಳುತ್ತಲೇ ಇರಬೇಕೆಂಬ ಹಂಬಲ ಇನ್ನು ಎಲ್ಲರಲ್ಲೂ ತುಂಬಿಕೊಂಡಿತ್ತು. ಸರಿ ನಾ ಹೊರಡುವೆ ಎಂದು ಅವರು ತಮ್ಮ ಕಾರಿನ ಬಳಿ ಹೆಜ್ಜೆ ಹಾಕುವಾಗಲೂ ಅವರ ಫೋಟೋ ತೆಗೆಯುತ್ತಾ ಹಿಂದೆ ಹಿಂದೆಯೇ ಸಾಗುತ್ತಿದ್ದ ನನ್ನ ನೋಡಿ ನಕ್ಕು ಹೆಗಲ ಮೇಲೆ ಕೈ ಹಾಕಿ "ಈ ಕ್ಯಾಮೆರಾ ಪುಣ್ಯತ್ಮನ ಜೊತೆಗೆ ನನ್ನದೊಂದು ಫೋಟೋ ತೆಗೆಯಪ್ಪಾ" ಎಂದರು. ಅರುಣ್ ಶೃಂಗೇರಿ ಕ್ಲಿಕ್ಕಿಸಿದ ಈ ಫೋಟೋಗೆ ನಾನು ಕಟ್ಟು ಹಾಕಿಸಿ ಇಟ್ಟಿಕೊಳುವುದು ಗ್ಯಾರಂಟಿ!