Wednesday, May 2, 2012

DESIRE Society - ಅನಾಥಾಶ್ರಮದಲ್ಲೊಂದು ಸಂಭ್ರಮ

ಮೇ ಒಂದು, ಕಾರ್ಮಿಕರ ದಿನ. ರಜೆ ಒಂದನ್ನು ಸದುಪಯೋಗ ಪಡಿಸಿಕೊಳ್ಳಲು ಏನೇನೋ ಮಾಡಿದ್ದುಂಟು. ಆದರೆ ರಜೆಯೊಂದನ್ನು ಈ ರೀತಿ ಸಾರ್ಥಕ ಪಡಿಸಿಕೊಂಡಿದ್ದು ಇದೇ ಮೊದಲು!


ಸತೀಶ್ ಬಿ ಕನ್ನಡಿಗ ಅವರ ಸಾರಥ್ಯದಲ್ಲಿ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಎಂಬ ಅನಾಥಾಶ್ರಮದಲ್ಲಿ ಒಂದು ಸುಂದರ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದ ಮೂಲಕ ಕ್ಷಣ ಕಾಲ ಈ ವಿಶಿಷ್ಟ ಮಕ್ಕಳ ನೋವು ನಲಿವುಗಳಲ್ಲಿ ಭಾಗಿಯಾಗುವ ಭಾಗ್ಯ ನನ್ನದಾಯಿತು.

ಎಡದಿಂದ ಬಲಕ್ಕೆ: ಅಶೋಕಣ್ಣ, ಕೈಯಲ್ಲಿ ಆಶ್ರಮದ ಅತ್ಯಂತ ಚೂಟಿ ಬಾಲಕ ಯಶ್ವಂತ್ ಹಿಡಿದು ನಾನು, ಜ್ಯೋತಿ ಅಕ್ಕ, 3K ಅಧ್ಯಕ್ಷೆ ರೂಪಕ್ಕ

DESIRE Society ಎಂಬುದು HIV/AIDS ರೋಗವಿರುವ ಮಕ್ಕಳಿಗೆ ಬಾಳ ದೀಪ ಆರುವ ಮುನ್ನ ಹೊಸ ಬೆಳಕು ತೋರಿಸುವಂತಹ ಒಂದು ಉತ್ತಮ NGO ಆಗಿದೆ. ಇಂದು ಈ ಸಂಸ್ಥೆಯು ಇಂದು ಆಂಧ್ರಪ್ರದೇಶ, ತಮಿಳುನಾಡು ಹಾಗು ಕರ್ನಾಟಕದ ಹಲವು ಊರುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಈ ಶಾಖೆಯಲ್ಲಿ 25 ಜನ ಮಕ್ಕಳಿದ್ದಾರೆ. ಈ ಮಕ್ಕಳಿಗೆ ಬರುವ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಮುಂತಾದ ಅನೇಕ ಸಾಮಗ್ರಿಗಳನ್ನು ವಿತರಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಈ ಕಾರ್ಯಕ್ರಮದಲ್ಲಿ ಅಂತರ್ಜಾಲದ ಪ್ರಸಿದ್ಧ ಸಾಮಾಜಿಕ ತಾಣವಾದ ಸ್ನೇಹಲೋಕ, ನನ್ನ ನುಡಿ ಕನ್ನಡ, 3K ಮುಂತಾದ ಅನೇಕ ಗುಂಪಿನ ಸದಸ್ಯರು ಪಾಲ್ಗೊಂಡಿದ್ದರು. ಎಲ್ಲರೂ ಸೇರಿ ಅಂದಾಜು 50,000 ರೂಪಾಯಿಯ ವರೆಗೆ ಹಣ ಸಂಗ್ರಹಿಸಿ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಲನಚಿತ್ರದ ನಿರ್ದೇಶಕರಾದ ಶಶಿಕಾಂತ್ ಹಾಗು ಪ್ರಸಿದ್ಧ ಸಂಗೀತ ಸಂಯೋಜಕರಾದ ಮಣಿಕಾಂತ್ ಕದ್ರಿಯವರು ಹಾಜರಿದ್ದರು. ನಮ್ಮೆಲ್ಲರ ಮೆಚ್ಚಿನ ಅಶೋಕ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸುಂದರ ಕಾರ್ಯಕ್ರಮದ ಕೆಲವು ಸ್ಮರಣೀಯ ದೃಶ್ಯಗಳ ಮೆಲುಕು ಇಲ್ಲಿದೆ ನಿಮಗಾಗಿ...



ಹೊತ್ತಿ ಉರಿಯುವ ಆವೇಗದಲಿ

ಧಗಧಗನೆ ಉರಿಯಿತಾ ದೀಪ

ಉರಿದು ಬಾಳ ಮುಗಿಸಿತು ಬಹುಬೇಗ

ಮನೆಯಂಗಳದ ಕತ್ತಲೆ ಕರಗಲಿಲ್ಲ!



ಬಸಿರೊಳಗಿನ ಎಳೆ ಬತ್ತಿಯ ಬದುಕೂ

ಬೆಳಗುವ ಮುನ್ನವೇ ಸುಟ್ಟು ಕಪ್ಪಾಯಿತಲ್ಲ,

ಎಲ್ಲರಂತೆ ಬೆಳೆದು ಜಗ ಬೆಳಗುವಾಸೆ ಅದಕೂ

ಈ ದೀಪಗಳಲ್ಲಿನ್ನು ಹೆಚ್ಚು ಇಂಧನ ಉಳಿದಿಲ್ಲ!



ಮಕ್ಕಳು ತಮ್ಮ ಮನೋರಂಜನಾ ಕಾರ್ಯಕ್ರಮಕ್ಕೆ ಬಣ್ಣ ಬಣ್ಣದ ಹೊಸ ಬಟ್ಟೆ ಧರಿಸಿ ಸಂತೋಷವಾಗಿ ಸಜ್ಜಾಗಿ ಕುಳಿತ್ತಿದ್ದಾರೆ. ನಮ್ಮ 3K ಜನನಿ ರೂಪಕ್ಕ ಮಕ್ಕಳಿಗೆ ಮೇಕಪ್ ಮಾಡುವುದರಲ್ಲಿ ವ್ಯಸ್ತವಾಗಿದ್ದಾರೆ.



ಕೈಯಲ್ಲಿ ಕನ್ನಡಿ ಹಿಡಿದು ಕಾರ್ಯಕ್ರಮಕ್ಕೆ ಸಿಧ್ಧತೆ ನಡೆಸಿದ್ದ ಪುಟ್ಟ ಪೋರಿಯೊಬ್ಬಳು ನನ್ನ ಕ್ಯಮೆರಾ ಕಣ್ಣಿಗೆ ಕಂಡಿದ್ದು ಹೀಗೆ
ಹಿಡಿದಿರುವೆ ಪುಟ್ಟ ಕೈಗಳಲ್ಲಿ ಪುಟ್ಟದೊಂದು ಕನ್ನಡಿ
ಬಣ್ಣ ಬಣ್ಣದ ಭವಿಷ್ಯಕೀಗಲೇ ಬರೆಯುವಾಸೆ ಮುನ್ನುಡಿ

ಕೆಂಪು, ನೀಲಿ, ಹಸಿರು, ಹಳದಿ ನೋಡು ಎಷ್ಟು ಬಣ್ಣ
ಬಣ್ಣ ಹಚ್ಚಿ ಕುಣಿಯಬೇಕು ಉಡುಗೊರೆ ಕೊಡುವರಣ್ಣ

ವರುಷಕೊಮ್ಮೆ ಅಷ್ಟೆ ಹೀಗೆ ಬರುವುದು ಒಳ್ಳೇ ದಿನ, ಒಳ್ಳೇ ಜನ,
ಕನ್ನಡಿ ಮುಚ್ಚಿ ಎತ್ತಿಟ್ಟರೆ ಇಂದು ಮತ್ತೆ ಕಪ್ಪು ಬಿಳುಪು ಜೀವನ!

"ಮರಳಿ ಮರೆಯಾಗಿ... ತೆರಳಿ ತೆರೆಯಾಗಿ ಹೋದೆವು ನಾವುಗಳು ಬಾಲ್ಯದ ದಿನಗಳಿಗೆ ಈ ಮಕ್ಕಳೊಡನೆ ತುಂಟಾಟವಾಡುತಾ..."
ಎಡದಿಂದ ಬಲಕ್ಕೆ: "ಬಾಲ್‍ಪೆನ್" ಚಲನಚಿತ್ರದ ತಂಡದ ರಾಜೇಶ್, ನಿರ್ದೇಶಕ ಶಶಿಕಾಂತ್, ಖ್ಯಾತ ಸಂಗೀತ ಸಂಯೋಜಕ ಮಣಿಕಾಂತ್ ಕದ್ರಿ ಅವರೊಂದಿಗೆ ನಾನು, ಜಗನ್, ರೂಪಕ್ಕ, ಅಶೋಕ್, ಸತೀಶ್ ಬಿ ಕನ್ನಡಿಗ
ಕಾರ್ಯಕ್ರಮಕ್ಕೆ ನೂರಾರು ಜನ ಹಾಜರಿದ್ದರು

ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭ


ಎಡದಿಂದ ಬಲಕ್ಕೆ: "ಬಾಲ್‍ಪೆನ್" ಚಲನಚಿತ್ರದ ತಂಡದ ರಾಜೇಶ್, ನಿರ್ದೇಶಕ ಶಶಿಕಾಂತ್, ಖ್ಯಾತ ಸಂಗೀತ ಸಂಯೋಜಕ ಮಣಿಕಾಂತ್ ಕದ್ರಿ, ನಮ್ಮೆಲ್ಲರ ಮೆಚ್ಚಿನ ಗೆಳೆಯ ಅಶೋಕ್ ಶೆಟ್ಟಿ ಹಾಗು DESIRE Societyಯ ಅಧ್ಯಕ್ಷರಾದ ಸುಭಾಶ್  

ಕಾರ್ಯಕ್ರಮ ವೀಕ್ಷಿಸಲು ವೇದಿಕೆಯ ಎದುರು ಬಂದು ಕುಳಿತ ಆಶ್ರಮದ ಮಕ್ಕಳು

"ಸಂಜೆ ನಸುಕಿನಲಿ ಮಳೆ ಹುಯ್ಯಲಿ..." ಎಂದು ಸುಮಧುರವಾಗಿ ಹಾಡಿದರು ನಮ್ಮ ಸತೀಶ್ ನಾಯಕ್. ಅವರ ಹಾಡಿಗೆ ವರುಣದೇವನು ಒಲಿದೇ ಬಿಟ್ಟನು! ಅಂದು ಸಂಜೆ ಎಲ್ಲೆಡೆ ಜೋರು ಮಳೆ! ನಾವೆಲ್ಲ ನೆನೆದು ಮನೆ ಸೇರಿದೆವು!

ವೇದಿಕೆಯ ಮುಂದೆ ಕುಳಿತಿದ್ದ ಮಕ್ಕಳನ್ನು ಕಂಡು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಶಿಕಾಂತ್ ಅವರು "ಇದು ಈ ಮಕ್ಕಳಿಗಾಗಿ ನಡೆಯುತ್ತಿರುವ ಕಾರ್ಯಕ್ರಮ.. ಅವರು ಕೂರಬೇಕಾದ್ದು ವೇದಿಕೆಯ ಕೆಳಗಲ್ಲ ವೇದಿಕೆಯ ಮೇಲೆ ಎಂದು ಹೇಳಿ ಮಕ್ಕಳನ್ನು ಮೇಲೆ ಕರೆದು ಅತಿಥಿಗಳಿಗೆಂದು ಹಾಕಿಸಲಾಗಿದ್ದ ಕುರ್ಚಿಗಳ ಮೇಲೆ ಕೂರಿಸಿದರು! ಕಾರ್ಯಕ್ರಮದ ಮುಖ್ಯ ಅತಿಥಿಗಳೂ ಅಧ್ಯಕ್ಷರೂ ಸ್ವತಃ ಆ ಮಕ್ಕಳ ಹಿಂದಿನ ಸಾಲಿನಲ್ಲಿ ಕುಳಿತರು

ಮಕ್ಕಳನ್ನು ಕರೆದು ವೇದಿಕೆಯ ಮೇಲೆ ಕೂರಿಸಿದ ತಕ್ಷಣವೇ ತಮ್ಮ ಹೊಸ ಚಿತ್ರದ ಹಾಡೊಂದನ್ನು ಹಾಕಿಸಿದರು ನಮ್ಮ ಶಶಿಕಾಂತ್... ಅದೇ ಬಾಲ್‍ಪೆನ್ ಚಿತ್ರದ "ಇದು ಯಾರ ಭುವಿ, ಇದು ಯಾರ ನದಿ..." ಎಂಬ ಮಕ್ಕಳೇ ಹಾಡಿರುವ ಮಧುರ ಗೀತೆ. ಇದು ಒಂದು ಅನಾಥಾಶ್ರಮದ ಮಕ್ಕಳ ಮೇಲೆ ಚಿತ್ರೀಕರಣಗೊಂಡಿರುವ ಹಾಡು... ಅದ್ಭುತ ಸಂದೇಶ ಹೊಂದಿರುವ ಈ ಹಾಡನ್ನು ಕೇಳಿದ ಕೂಡಲೇ ಮನ ಕರಗಿತು. ಆ ಹಾಡಿಗೂ ಅಂದಿನ ಸನ್ನಿವೇಶಕ್ಕೂ ಬಹಳ ಹೋಲಿಕೆಯಿತ್ತು! ಒಂದು ಕ್ಷಣ ಕಣ್ಣು ಹಸಿಯಾಯಿತು!


ಇದೇ ಆ ಹಾಡು...

ಉಡುಗೊರೆಗಳನ್ನು ಪಡೆಯಲು ವೇದಿಕೆಯ ಮೇಲೆ ಬಂದ ಪುಟ್ಟ ಪೋರ ಯಶ್ವಂತ್ ಶಶಿಕಾಂತ್ ಅವರ ಕೋರಿಕೆಯ ಮೇರೆಗೆ ತನ್ನ ಕರಾಟೆ ಪ್ರತಿಭೆ ಪ್ರದರ್ಶಿಸಿದನು.
ಉಡುಗೊರೆ ಪಡೆದ ಪುಟಾಣಿಗಳ ಮುಖದಲ್ಲಿ ಸಂತೋಷದ ನಗೆ ತುಂಬಿತ್ತು.. ಮಕ್ಕಳು ನಕ್ಕರೆ ಹಾಲು ಸಕ್ಕರೆ.. ನಿಜ..
ಜ್ಯೋತಿ ಅಕ್ಕ ಅವರಿಂದ ಉಡುಗೊರೆ ವಿತರಣೆ
"ಬೋರ್ಡು ಇರದ ಬಸ್ಸನು ಏರಿ ಬಂದ.. ಪಂಕಜ" ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ. ಇವರು ಜ್ಯೋತಿ ಅಕ್ಕನವರ ಮಕ್ಕಳು.
"ಖುಷಿಯಾಗಿದೆ ಏಕೋ ನಿಮ್ಮಿಂದಲೇ..." ಎಂದು ಕುಣಿದು ಕುಪ್ಪಳಿಸಿದ ಮಕ್ಕಳು


ಮತ್ತೆ ಎಲ್ಲರ ಕೈಯಲ್ಲಿ ಮಿಂಚಿದ "ಭಾವಸಿಂಚನ"- 3K ತಂಡದ ಮೊದಲ ಕವನ ಸಂಕಲನ
Autograph Time...
With Manikanth Kadri Sir
With Director Shashikant and Rajesh
ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆಯೂ ಚೆನ್ನಾಗಿತ್ತು
ಕಾರ್ಯಕ್ರಮ ಮುಗಿದ ಕೂಡಲೆ ನಮ್ಮ ಅಶೋಕಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ಅವರ ಹಳೆಯ ಗೆಳೆಯ ಸತ್ಯ(ಸತೀಶ್) ಅವರಿಗಾಗಿ ಕೇಕ್ ವ್ಯವಸ್ಥೆ ಮಾಡಿದ್ದರು
The Karate Kid - ಯಶ್ವಂತ್ ಎಲ್ಲರಿಗೂ ಬಹಳ ಇಷ್ಟವಾಗುವವನು
ಕಾರ್ಯಕ್ರಮವೆಲ್ಲಾ ಮುಗಿದು ಹೊರಡುವ ಸಮಯದಲ್ಲಿ ಸತೀಶ್ ಬಿ ಕನ್ನಡಿಗ ಅವರನ್ನು ಹುಡುಕಿದರೆ ಅವರು ಎಲ್ಲೂ ಕಾಣದಾದರು. ಕೊನೆಗೆ ಆಶ್ರಮದ ಹಿಂಭಾಗದ ಮರದಡಿ ಒಬ್ಬರೇ ಕುಳಿತಿರುವುದು ಕಣ್ಣಿಗೆ ಬಿತ್ತು. ಅವರು ಭಾವುಕತೆಯಿಂದ ತುಂಬಿದ್ದ ಕಣ್ಣುಗಳನ್ನು ಒರೆಸಿಕೊಂಡು ನಮ್ಮನೆಲ್ಲಾ ಬೀಳ್ಕೊಟ್ಟರು. ಅವರು ಅಂದು ವೇದಿಕೆಯ ಮೇಲೆ ಹಂಚಿಕೊಂಡ ತಮ್ಮ ಜೀವನದ ಕೆಲವು ಸಿಹಿ-ಕಹಿ ಘಟನೆಗಳ ನೆನಪುಗಳು, ಅವರ ಮೆಚ್ಚಿನ "ಅರಳುವ ಹೂವುಗಳೇ.." ಹಾಡು, ಅವರ ಮುಂದಿನ ಧ್ಯೇಯ, ಇವೆಲ್ಲವನ್ನು ಕಂಡು ನನ್ನ ಹೃದಯವೂ ಕರಗಿ ಮನಸ್ಸಲ್ಲೇ ಅವರಿಗೊಂದು ದೊಡ್ಡ ಸಲಾಮ್ ಹೇಳಿತು.

ಒಟ್ಟಿನಲ್ಲಿ ಜೀವನದಲ್ಲೇ ಎಂದೂ ಕಂಡಿಲ್ಲದಂತಹ ಒಂದು ಹೊಸ ರೀತಿಯ ಹೃದಯ ಮಿಡಿಯುವಂತಹ ಅನುಭವ ನಮ್ಮದಾಯಿತು. ಅಬ್ಬಾ ಎಂತಹ ವಿಶಿಷ್ಟ ದಿನ ಅದು!