Sunday, April 22, 2012

3K ಕಾವ್ಯ ಸಂಚಾರ-2 ಮೈಸೂರು

ಬ್ಲಾಗ್ ಲೋಕದ ಗೆಳೆಯರೇ,



ನಮಸ್ಕಾರಗಳು. ಬಹಳ ದಿನಗಳಿಂದ ಅನೇಕ ಕಾರಣಗಳಿಂದಾಗಿ ನಾನು ನಿಮ್ಮ ಬ್ಲಾಗ್ ಕಡೆಗೂ ಬರಲಾಗಿಲ್ಲ... ನನ್ನ ಬ್ಲಾಗಿನಲ್ಲೂ ಯಾವುದೇ ಹೊಸ ವಿಷಯಗಳಿಲ್ಲ. ಕ್ಷಮಿಸಬೇಕು. ಇನ್ನೂ ಕೆಲವು ದಿನ ನಾನು ಇದೇ ಸ್ಥಿತಿಯಲ್ಲಿರಬೇಕಾಗುವುದು ಖಂಡಿತ. ಆದರೆ ಈ ಕೆಲಸ ಕಾರ್ಯಗಳ ನಡುವೆ ಮರೆಯಲಾಗದ ಕೆಲವು ಸಿಹಿ ಕ್ಷಣಗಳು ಬಂದಾಗ, ಅವುಗಳನ್ನು ನಿಮ್ಮೊಡನೆ ಹಂಚಿಕೊಳ್ಳದಿರಲು ಆಗುವುದಿಲ್ಲ. ಅಂಥದ್ದೇ ಒಂದು ಸಿಹಿ ಸವಿ ನೆನಪುಗಳ ನಿಧಿಯನ್ನು ಹೊತ್ತು ತಂದಿದ್ದು ನಮ್ಮ "ಕಾವ್ಯಸಂಚಾರ-೨ ಮೈಸೂರು"

ಈಗಾಗಲೇ ನಾನು ತಿಳಿಸಿರುವಂತೆ ಕಾವ್ಯಸಂಚಾರ ಎಂಬುದು " 3K - ಕನ್ನಡ ಕವಿತೆ ಕವನ" ಎಂಬ ಅಂತರ್ಜಾಲದ ಕವಿಗಳ ಸಂಘ ರೂಪಿಸಿರುವ ಹೊಸ ಯೋಜನೆ. ಕಾವ್ಯಸಂಚಾರದಲ್ಲಿ ನಮ್ಮ ತಂಡ ಬೇರೆ ಬೇರೆ ಊರುಗಳಿಗೆ ಸಂಚರಿಸಿ ಕವಿಗೋಷ್ಠಿ ನಡೆಸುವುದು. ಅಲ್ಲಿನ ಸುತ್ತಮುತ್ತಲಿನ ಊರುಗಳಲ್ಲಿರುವ ಪ್ರತಿಭಾನ್ವಿತ ಕವಿಗಳನ್ನು ಕರೆಸಿ ಕಾವ್ಯವಾಚನ ಮಾಡಿಸುವುದು. ಹೆಸಾರಾಂತ ಕವಿಗಳಿಗೆ, ಸಾಹಿತಿಗಳಿಗೆ ಸನ್ಮಾನ ಮಾಡುವುದು, ಅವರ ಆಶೀರ್ವಾದ ಹಾಗು ಸಲಹೆಗಳು ನಮ್ಮ ಗುಂಪಿನ ಎಳೆಯ ಉದಯೋನ್ಮುಖ ಕವಿಗಳಿಗೆ ತಲುಪುವಂತೆ ಮಾಡುವುದು ಇವೇ ಮುಂತಾದವು ಕಾವ್ಯಸಂಚಾರದ ಮುಖ್ಯ ಉದ್ದೇಶ.

ಕಳೆದ ಬಾರಿ ಮಂಗಳೂರಿಗೆ ಸಂಚರಿಸಿದ್ದ ನಾವು ಅಲ್ಲಿನ ಖ್ಯಾತ ಸಾಹಿತಿಗಳಾದ ಕು.ಗೋ. ಅವರನ್ನು ಭೇಟಿಯಾಗಿ ಸನ್ಮಾನಿಸಿ ಅವರ ಆಶೀರ್ವಚನಗಳನ್ನು ಪಡೆದಿದ್ದೆವು. ಈ ಬಾರಿ ನಾವು ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ಅಂದಿನ ದಿನದ ಕೆಲವು ಸವಿ ಕವಿ ಕ್ಷಣಗಳ ನೆನೆಪು ಇಲ್ಲಿವೆ.

11 ಮಾರ್ಚ್ 2012 ರಂದು ಮೈಸೂರಿನ ಸಭಾಂಗಣದಲ್ಲಿ ನಮ್ಮ ತಂಡ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕವಿಗೋಷ್ಠಿ ನಡೆಸಿತು. ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಅರಸ್ ಅವರ ಸಂಪೂರ್ಣ ಸಹಕಾರದಿಂದಲೇ ಇದು ಸಾಧ್ಯವಾಗಿದ್ದು. ಅವರಿಗೆ ನಮ್ಮ ತಂಡ ಚಿರಋಣಿ. ಈ ಕವಿಗೋಷ್ಠಿ ನಡೆಯಲು ಮುಖ್ಯ ಉದ್ದೇಶ ಅಲ್ಲಿನ ಹಿರಿಯ ಸಾಹಿತಿ, ಚುಟುಕು ರತ್ನ ಡಾ. ಎಂ ಅಕ್ಬರ್ ಅಲಿ ಅವರ 88ನೇ ಜನ್ಮ ದಿನಾಚರಣೆ ಹಾಗು ಸರ್ವಙ್ಞನ ವಚನಗಳ ಬಗ್ಗೆ ಅವರ ಸಂಶೋಧನಾ ಕೃತಿಯ ಬಿಡುಗಡೆ. ಚುಟುಕು ಸಾಹಿತ್ಯಕ್ಕೆ ಡಾ. ಅಕ್ಬರ್ ಅಲಿ ಅವರ ಕೊಡುಗೆ ಅಪಾರ. ಮುಸ್ಲಿಮ್ ಸಂವೇದನೆಯ ಹಿನ್ನೆಲೆಯಲ್ಲಿ ಕನ್ನಡದ ಅನನ್ಯ ಶೈಲಿಯನ್ನು ರೂಪಿಸಿಕೊಂಡ ಇವರು ವ್ಯಂಗ್ಯ, ವಿಡಂಬನೆ, ಕಟಕಿ, ನಿಂದೆ, ವಿನೋದ, ವಿಷಾದ, ಅನುಕಂಪ, ಕರುಣೆಗಳೇ ಮುಂತಾದವು ತುಂಬಿದ ಚುರುಕಾದ ಚುಟುಕುಗಳ ರಚನೆಯಲ್ಲಿ ದಶಕಗಳಾಚೆಯಿಂದ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ. ಅವರೊಡನೆ ವೇದಿಕೆ ಹಂಚಿಕೊಂಡು ಅವರನ್ನು ಸನ್ಮಾನಿಸುವ ಅವಕಾಶ ಪಡೆದ ನಾವೆಲ್ಲರೂ ನಿಜವಾಗಲೂ ಧನ್ಯ!



ಕಾರ್ಯಕ್ರಮಕ್ಕೂ ಮುನ್ನ ಡಾ. ಅರಸ್ ಅವರ ಜೊತೆ ಕಾಫ಼ಿ ತಿಂಡಿ

ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭ

ಡಾ. ಅಕ್ಬರ್ ಅಲಿ ಅವರ ಕೃತಿ ಬಿಡುಗಡೆ

ಡಾ. ಆರಸ್ ಅವರ ಭಾಷಣ

3K ಜನನಿ ರೂಪ ಸತೀಶ್ ಅವರಿಂದ ಡಾ. ಅಕ್ಬರ್ ಅಲಿ ಅವರ ಪುಸ್ತಕದ ಬಗ್ಗೆ ಕೆಲವು ಮಾತುಗಳು.

ಚುಟುಕು ರತ್ನ ಡಾ. ಅಕ್ಬರ್ ಅಲಿ ಅವರ ಕೈಯಲ್ಲಿ "ಭಾವಸಿಂಚನ"

ಡಾ. ಅಕ್ಬರ್ ಅಲಿ ಅವರಿಂದ ರೂಪಕ್ಕ ಅವರಿಗೆ ಸನ್ಮಾನ

ವೇದಿಕೆಯ ಮೇಲಿದ್ದ ಮುಖ್ಯ ಅತಿಥಿಗಳಿಗೆ ಸರ್. ಎಂ. ವಿಶ್ವೇಶ್ವರಯ್ಯನವರ ಪುತ್ಥಳಿ ನೆನಪಿನ ಕಾಣಿಕೆ

ಡಾ. ಅರಸ್ ಹಾಗು ಡಾ. ಅಕ್ಬರ್ ಅಲಿ ಅವರಿಗೆ ತಂಡದಿಂದ ಸನ್ಮಾನ. ಕಾರ್ಯಕ್ರಮದ ಅತ್ಯಂತ ಸ್ಮರಣಿಯ ಕ್ಷಣಗಳು

ಒಂದೇ ಕುಟುಂಬದ ಮೂರು ತಲೆಮಾರುಗಳಂತೆ ಕಾಣುವ ಈ ಚಿತ್ರ - ಡಾ. ಆಕ್ಬರ್ ಅಲಿ ಅವರೊಂದಿಗೆ ನಮ್ಮ 3K ತಂಡ

ನನಗೂ ಸಿಕ್ಕಿತು ಚುಟುಕು ಕವನ ವಾಚಿಸಲು ಒಂದು ಅವಕಾಶ. ಹಿರಿಯ ಸಾಹಿತಿಗಳ ಮುಂದೆ ವಾಚಿಸಲು ಭಯವಾಗುತಿತ್ತು. ಹೇಳಿ ಮುಗಿಸಿದ ನಂತರ ಕಾರ್ಯಕ್ರಮದ ನಿರೂಪಕಿ "ಅಂತೂ ಕೊನೆಗೆ ನೀವಾದರೂ ನಗಿಸಿದಿರಿ" ಎಂದರು. ಬಹಳ ಸಂತೋಷವಾಯಿತು!

ಸುಂದರ ಚುಟುಕುಗಳನ್ನು ಹೇಳಿ ನಗಿಸಿದರು ನಮ್ಮ ಮೇಷ್ಟ್ರು - ಶ್ರೀ ಎಸ್. ಮಂಜುನಾಥ್ ಕೊಳ್ಳೇಗಾಲ

ಇವರು ಕಾವ್ಯಸಂಚಾರದ ನಾಯಕ, ಮೂರ್ತಿ ದೊಡ್ಡದಾದರೆ ಕೀರ್ತಿ ಇನ್ನೂ ದೊಡ್ಡದು - ಶ್ರೀ ಎಸ್. ಮಹೇಶ್ ಮೂರ್ತಿ

ಮಡಿಕೇರಿಯ ಒಬ್ಬ ಪ್ರತಿಭಾವಂತ ಸಾಹಿತಿ ಪಿ. ಜಿ. ಮಹಾಬಲೇಶ್ವರ ಶರ್ಮ. ಕುತ್ತಿಗೆ ನೋವಿಗೆ ಶಸ್ತ್ರ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಇನ್ನೂ ಕಲಿಕೆಯಲ್ಲಿದ್ದ ವೈದ್ಯರುಗಳು ನೀಡಿದ ಅಸಂಬದ್ಧ ಚುಚ್ಚುಮದ್ದು ಒಂದರ ಪರಿಣಾಮವಾಗಿ ಇವರ ಸೊಂಟ ಹಾಗು ಕಾಲುಗಳು ಸ್ವಾಧೀನ ಕಳೆದುಕೊಂಡು ಇಂದು ಹಾಸಿಗೆ ಹಿಡಿದ್ದಿದ್ದಾರೆ. ಆದರೂ ಸಾಹಿತ್ಯ ಸೇವೆ ಮುಂದುವರಿಸಿದ್ದಾರೆ. ಇವರು ಬರೆದ ಚುಟುಕು ಕವನಗಳನ್ನು ಇವರ ಪುತ್ರ ಕವಿಗೋಷ್ಠಿಯಲ್ಲಿ ಓದಿದರು. 3K ತಂಡದಿಂದ ಅವರ ಚಿಕಿತ್ಸೆಗೆ ಸ್ವಲ್ಪ ಧನಸಹಾಯವನ್ನೂ ಮಾಡಲಾಯಿತು.


ಕವನ ವಾಚಿಸಿದವರಿಗೆಲ್ಲಾ ನೆನಪಿನ ಕಾಣಿಕೆ
Group Photo

ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ಹಾಗು ಸವಿಗನ್ನಡ ಪತ್ರಿಕಾ ಬಳಗದ ಸಂಪಾದಕರಾದ ನಾಗಣ್ಣ ಅವರ ಮನೆಯಲ್ಲಿ ಸಂಜೆ ಸ್ವಲ್ಪ ಕಾಲ ಚರ್ಚೆ ನಡೆಸಿದೆವು. ರೂಪಕ್ಕನವರಿಗೆ ಸನ್ಮಾನ ಮಾಡುವ ಮೂಲಕ ಅವರು ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ನಾಗಣ್ಣ ಅವರಿಗೆ ಸಂದ ಅಪಾರ ಪ್ರಶಸ್ತಿಗಳ ನೋಟ


ಅಂದಿನ ಸುಮಧುರ ಸಂಜೆ ನನ್ನ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು ಹೀಗೆ

ನಮ್ಮೆಲ್ಲರ ನೆಚ್ಚಿನ ಸೌಮ್ಯಕ್ಕ ಅವರ ಮೂರು ಮುದ್ದು ಪುಟಾಣಿಗಳು - ಈ ತ್ರಿವಳಿಗಳು ಕಾರ್ಯಕ್ರಮದಲ್ಲಿ ಎಲ್ಲರ ಮನ ಸೆಳೆದಿದ್ದರು

ಜಗತ್ಪ್ರಸಿದ್ಧ ಮೈಸೂರಿನ ಅರಮನೆ ಮುಸ್ಸಂಜೆಯ ಸಮಯದಲ್ಲಿ ಕಂಡಿದ್ದು ಹೀಗೆ
ಸಾರ್ಥಕವೆನಿಸಿದ ಮತ್ತೊಂದು ಕಾವ್ಯಸಂಚಾರ...

ಕವಿರಾಜ್ ರಾವ್, ಸತೀಶ್ ಬಿ ಕನ್ನಡಿಗ, ರೇವಣ್ ದೇಸಾಯಿ, ಜಗನ್, ಸಿಂಧು ಮತ್ತವರ ಸೋದರಿ, ಸೌಮ್ಯಕ್ಕ ಮತ್ತವರ

ಮೂರು ಮುದ್ದು ತ್ರಿವಳಿ ಮಕ್ಕಳು - ಶೃತಿ, ಶ್ವೇತ, ಸ್ನೇಹ, ಮೊದಲಾದವರನ್ನು ಮೊದಲ ಬಾರಿ ಕಂಡ ಸಂತಸ...

ಮನತುಂಬಿಸಿದ ಸವಿ ಸವಿ ನೆನಪುಗಳು...

ನಮ್ಮಲ್ಲಿ ಬಹಳಷ್ಟು ಜನಕ್ಕೆ ಚುಟುಕು ಬರೆಯಲು ಮಾಡಿದ ಚೊಚ್ಚಲ ಪ್ರಯತ್ನ ಯಶಸ್ಸು ಕಂಡ ಹುಮ್ಮಸ್ಸು..

ಹಿರಿಯ ಸಾಹಿತಿಗಳಿದ್ದ ವೇದಿಕೆ ಏರಿದ ಸಂತೋಷ...

ಕಾರ್ಯಕ್ರಮದ ನಂತರ ನಾವು ಒಟ್ಟಾಗಿ ಕಳೆದ ರಸಸಂಜೆ ಮತ್ತು ರುಚಿಕರ ಭೋಜನ..

ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ಮೇಲೆ ಕೈಯಲ್ಲಿ "ಡಾ. ಅಕಬರ ಅಲಿ ಸಮಗ್ರ ಕಾವ್ಯ", ರಂಗಣ್ಣನವರ "ಭಾವನಮನ", ನಾಗರಾಜ ರಾವ್‍ರವರ "ಮುಕ್ತಕ ಶಾರದೆ" ಮಹಾಬಲೇಶ್ವರವರ "ಸಂಜೆ ಮಲ್ಲಿಗೆ" ಪುಸ್ತಕಗಳು..

ಜೊತೆಗೆ ದಿನವಿಡೀ ಪಟ್ಟ ಪರಿಶ್ರಮದ ಫಲವಾಗಿ ಬರೋಬ್ಬರಿ 250 ಸುಂದರ ಸಂಗ್ರಹ ಯೋಗ್ಯ ಛಾಯಾಚಿತ್ರಗಳು!!

ನಿಜಕ್ಕೂ ಶತ ಪ್ರತಿ ಶತ ಸಾರ್ಥಕ ಈ ಸಂಚಾರ...!