Wednesday, November 30, 2011

"ಭಾವಸಿಂಚನ" - ಎಲ್ಲೆಲ್ಲೂ ಹರುಷದ ಸಿಂಚನ!

ಗೆಳೆಯರೇ,

ನಿಮಗೆಲ್ಲ ನಾನು ಈಗಾಗಲೇ ತಿಳಿಸಿದ್ದಂತೆ ನವೆಂಬರ್ 26ರಂದು ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಮ್ಮ 3K ಸಮುದಾಯದ ಮೊದಲ ಕವನ ಸಂಕಲನ - "ಭಾವಸಿಂಚನ" ಪುಸ್ತಕದ ಬಿಡುಗಡೆ ಕಾರ್ಯಕ್ರಮವಿತ್ತು. ನಿಮ್ಮೆಲ್ಲರ ಶುಭ ಹಾರೈಕೆಗಳಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಸಂಭ್ರಮದಲ್ಲಿ ಭಾಗಿಯಾದವರಿಗೂ, ದೂರವೇ ಉಳಿದು ನಮ್ಮನ್ನು ಹಾರೈಸಿದವರಿಗೂ ಅನಂತಾನಂತ ಧನ್ಯವಾದಗಳು. ಅಂದಿನ ಸವಿ ಸವಿ ಕ್ಷಣಗಳ ಒಂದು ನೋಟ ಇಲ್ಲಿದೆ....

ನಮ್ಮ 3K ತಂಡ ಅಂದು ಅತ್ಯಂತ ಉತ್ಸಾಹಭರಿತವಾಗಿತ್ತು

ಕವಿಗಳಲ್ಲದವರ ಕವನಸಂಕಲನ..
ಭಾವಸಿಂಚನ..
ಬಿಡುಗಡೆಯ ಆ ದಿನ..
ಎಲ್ಲರಿಗೂ ರೋಮಾಂಚನ..


ಅಂದು ಬೆಳಗಿನಿಂದಲೇ ಸಮಾರಂಭದ Bannerಗಳು ಸುತ್ತಮುತ್ತಲಿನ ಜನರ ಗಮನ ಸೆಳೆದಿತ್ತು


ಬಂದ ಅತಿಥಿಗಳಿಗೂ, ಸಮುದಾಯದ ಪ್ರತಿ ಸದಸ್ಯರಿಗೂ ವಿತರಿಸಲಾದ ಸುಂದರ ಸ್ಮರಣಿಕೆಗಳು


UTV Motion Pictures, Director ತೇಜು ಶಿಶಿರವರು ಸಹ ನಮ್ಮ ಸಮುದಾಯದ ಸದಸ್ಯರು. ಅವರು ಆಗಮಿಸಿದ್ದು ನಮಗೆಲ್ಲಾ ಬಹಳ ಸಂತಸ ತಂದಿತು


ನಮ್ಮ 3K ಸಮುದಾಯದ ಸದಸ್ಯರ ದಂಡು!


ನಮ್ಮೆಲ್ಲರ ಪ್ರೀತಿಯ "ಪಕ್ಕು ಮಾಮ" ಪ್ರಕಾಶ್ ಹೆಗಡೆ ಅಲ್ಲಿ Center of attraction ಆಗಿದ್ದರು! ದುಂಡಿ ರಾಜ್‍ರವರನ್ನು ತಲುಪುವಲ್ಲಿ ನೆರವಾದ ಅವರಿಗೆ ಹೃತ್ಪೂರ್ವಕ ವಂದನೆಗಳು.


ರುಚಿಕಟ್ಟಾದ ಲಘು ಉಪಾಹಾರ, ಬಾದಾಮಿ ಹಾಲು....


ಕಾರ್ಯಕ್ರಮದ ಆರಂಭ ಕುಮಾರಿ ಭೂಮಿಕಾರವರ ಮಧುರ ಕಂಠದ ಗಾಯನದೊಂದಿಗೆ...


ನಂತರ ನಮ್ಮ ನಿಮ್ಮೆಲ್ಲರ ಸ್ನೇಹ ಲೋಕದ ಗೆಳೆಯ ಅಶೋಕ್ ವಿ ಶೆಟ್ಟಿ ಅವರಿಂದ ಸ್ವಾಗತ ಭಾಷಣ.


ಅನುಪಮಾ ಹೆಗಡೆಯವರು ಕವಿರಾಜ್‍ರವರ ಜನಪ್ರಿಯ ಗೀತೆಗಳಲ್ಲಿ ಒಂದಾದ "ಗಗನವೇ ಬಾಗಿ.." ಹಾಡನ್ನು ಹಾಡಿ ಎಲ್ಲರನ್ನು ಸ್ವಾಗತಿಸಿದ ರೀತಿ ಮನ ಸೆಳೆಯಿತು... ನಂತರ ಪ್ರೇಕ್ಷಕಕರಿಗೆ ನಮ್ಮ ಸಂಘದ ಬಗ್ಗೆ ತಿಳಿಸಲು ಸಹ ಒಂದು ಕವನವನ್ನೇ ಆರಿಸಿಕೊಂಡರು..


ಸಜ್ಜನರ ಸ್ನೇಹ ಸವಿಯುವುದಕೆ,
ಸಹೃದಯರ ಕಾವ್ಯ ಸ್ಮರಿಸುವುದಕೆ,
ಭಾವಜೀವಿಗಳ ಬಾಂಧವ್ಯ ಬೆಳೆಸುವುದಕೆ,

ಬನ್ನಿ,
ಕಾವ್ಯಲೋಕದ ಎಳೆಪೈರುಗಳು ಚಿಗುರುವ ಹೊಲಕೆ,
ಕೆಸರಲ್ಲೂ ಕಾವ್ಯಕಮಲಗಳು ಅರಳುವ ಕೊಳಕೆ,
ಹೆಮ್ಮರವಾಗಿ ಬೆಳೆವುದಿಲ್ಲಿ ನಿಮ್ಮ ಕಾವ್ಯಾಸಕ್ತಿಯ ಮೊಳಕೆ,
ಬಾಳ ಕತ್ತಲೆಯನ್ನೂ ಬೆಳಗುವುದಿಲ್ಲಿ ಕಾವ್ಯಾಮೃತದ ಬೆಳಕೇ!

ಸ್ವಾಗತಿಸುವೆವು ಎಲ್ಲರ ನಮ್ಮ ಮುಕ್ತ ಸಮುದಾಯಕೆ,
ಸಂಭ್ರಮದ ಈ ದಿನ, ನಮ್ಮೆಲ್ಲರದೊಂದೇ ಹಾರೈಕೆ,
ಉದಯವಾಗಲಿ ನಮ್ಮ ಚೆಲುವ ಸಮುದಾಯ - 3K!



ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಲೇಖಕರಾದ ಶ್ರೀ ಮಂಜುನಾಥ್ ಕೊಳ್ಳೇಗಾಲ, ಕನ್ನಡ ಸಿನಿಮಾ ಲೋಕದ ಜನಪ್ರಿಯ ಸಂಗೀತ ಸಾಹಿತಿ ಶೀ ಕವಿರಾಜ್ ಹಾಗು ಜನಪ್ರಿಯ ಹಾಸ್ಯ ಸಾಹಿತಿ ಶ್ರೀ ದುಂಡಿರಾಜ್ರವರು ಉಪಸ್ತಿಥರಿದ್ದರು. ಅವರ ಜೊತೆಯಲ್ಲಿ ನಮ್ಮ ಸಮುದಾಯದ ಅಧ್ಯಕ್ಷೆ ಶ್ರೀಮತಿ ರೂಪ ಸತೀಶ್.


ಯಾವ ಜನುಮದ ಮೈತ್ರಿ?
ಪ್ರೇಕ್ಷಕರಿಗೆ ಅತಿಥಿಗಳ ಪರಿಚಯ ಮಾಡಿಸುವ ಸಂದರ್ಭದಲ್ಲಿ ಸಮುದಾಯದ ಇಬ್ಬರೇ ಮಹಿಳಾ ಸದಸ್ಯರಾದ ರೂಪಾ ಸತೀಶ್ ಹಾಗು ಅನುಪಮಾ ಹೆಗಡೆಯವರು ತಬ್ಬಿ ಖುಷಿ ಹಂಚಿಕೊಂಡರು


ಅತಿಥಿಗಳಿಂದ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಸಾಂಪ್ರದಾಯಿಕ ಪ್ರಾರಂಭ ಕಂಡಿತು.



ಬೆಳಗುತಿರಲಿ ಹೀಗೇ ನಮ್ಮ 3K ಜ್ಯೋತಿ
ಬೆಳೆಯುತಿರಲಿ ಹೀಗೇ ಸಮುದಾಯದ ಖ್ಯಾತಿ
ಹೆಚ್ಚುತಿರಲಿ ದಿನ ದಿನವೂ ಸದಸ್ಯರ ಗಣತಿ
ನಮ್ಮೊಂದಿಗೆ ಕೈ ಜೋಡಿಸಲು ನಿಮ್ಮಲ್ಲಿ ವಿನಂತಿ

ಅಂದು ತಾರೀಖು 26/11/2011... ಅದು 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ನಡೆದ ದಿನ(26/11). ಹಲವು ಜನ ಸೇನೆಯವರು ನೂರಾರು ಜನ ಅಮಾಯಕರು ಬಲಿ ತೆಗೆದುಕೊಂಡ ಒಂದು ಹೀನ ಕೃತ್ಯ ನಡೆದ ಕರಾಳ ದಿನ. ಆ ದಿನ ಹುತಾತ್ಮರಾದವರ ನೆನಪಿನಲ್ಲಿ ಎಲ್ಲರೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿದರು.


ಅನುಪಮಾರವರ ಸರಳ ಭಾಷೆಯ ಭಾಷಣದಲ್ಲಿ ನಿರಾಳ ಭಾವನೆಗಳು ವ್ಯಕ್ತವಾಗಿ ಎಲ್ಲರ ಗಮನ ಸೆಳೆಯಿತು.


"ಭಾವಸಿಂಚನ" ಬಿಡುಗಡೆಯ ಅಂತಿಮ ಘಟ್ಟದಲ್ಲಿ.. ಎಲ್ಲರ ಮುಖದಲ್ಲಿ ಸಂತಸದ ಸಿಂಚನ!


ಕೊನೆಗೂ ಬಂತು ನಮ್ಮದೆಂಬ ಒಂದು ಪುಸ್ತಕ!


ಅತಿಥಿಗಳ ಕೈಯಲ್ಲಿ ರಾರಾಜಿಸುತ್ತಿರುವ ಭಾವಸಿಂಚನದ ಮೊದಲ ಪ್ರತಿಗಳು


ಇದು ನಮ್ಮ ಚೊಚ್ಚಲ ಪ್ರಯತ್ನ. ಆದ್ದರಿಂದ ಅದಕ್ಕೆ ಬೆಲೆ ಕಟ್ಟಲು ನಮಗೆ ಇಷ್ಟವಾಗಲಿಲ್ಲ. ಇದು ಕನ್ನಡವನ್ನು ಬೆಳೆಸಿ ಪೋಷಿಸುವ ಎಲ್ಲರಿಗೂ ನಮ್ಮ ಕೊಡುಗೆ. ಅಂದರೆ ಇದು ಉಚಿತ. ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಪುಸ್ತಕದ ಒಂದು ಪ್ರತಿಯನ್ನು ಹಂಚಲಾಯಿತು.


ರವಿ ಕಾಣದ್ದನ್ನು ಕವಿ ಕಂಡ ಎನ್ನುತ್ತಾರೆ... ನಿಜ.. ಎಷ್ಟು ಕಲ್ಪನಾಶಕ್ತಿಯನ್ನು ಹೊಂದಿವೆ ಈ ಕವಿಗಳ ಕಣ್ಣುಗಳು.. ಕಾಣದ್ದನೂ ಕಂಡು ಬಿಡುತ್ತವೆ. ಆದರೆ ಭೂಮಿಯ ಮೇಲೆ ಇರುವುದನ್ನೂ ಕಾಣಲಾಗದ ಎಷ್ಟೋ ಜನರು ಇಂದು ನಮ್ಮ ಸುತ್ತ ಇದ್ದಾರೆ. ಅಂಥವರ ಬಾಳನ್ನು ಬೆಳಗುವ ಕೆಲಸವನ್ನು ಏಕೆ ಈ ಕವಿಗಳ ಕಣ್ಣುಗಳು ಮಾಡಬಾರದು? ನೇತ್ರದಾನ ನಮ್ಮೆಲ್ಲರ ಆಶಯವಾಗಿತ್ತು. ಎಲ್ಲರಿಗೂ ನೇತ್ರದಾನದ ಅರ್ಜಿಯೊಂದನ್ನೂ ವಿತರಿಸಲಾಯಿತು. ಇಚ್ಛೆಯಿರುವವರು ಅರ್ಜಿ ಭರ್ತಿ ಮಾಡಿ ಕೊಟ್ಟರು. ಅದನ್ನು ಸಂಬಂಧಪಟ್ಟ ಇಲಾಖೆಯವರಿಗೆ ಹಸ್ತಾಂತರಿಸಲಾಯಿತು.

ಮಂಜುನಾಥ್ ಕೊಳ್ಳೇಗಾಲರವರು ಕವನ ಸಂಕಲದೊಳಗಿನ ಒಂದೆರಡು ಕವನಗಳ ವಿಮರ್ಶೆಯೊಂದಿಗೆ ಭಾಷಣದ ಮೂಲಕ ಮನ ತಣಿಸಿದರು



"ಅಪ್ಪಾ.. ಈ ಪುಸ್ತಕ ನನಗೇ ಇರಲಿ" ಎನ್ನುತ್ತಿರುವಂತಿದೆ ನಮ್ಮ ಅಶೋಕರ ಮಗಳು ಖುಶಿ



"ಅಯ್ಯೋ ಫೋಟೋ ತೆಗೆದದ್ದು ಸಾಕು.. ನಾನಿನ್ನು ಕವನ ಓದ್ಬೇಕು ಹೋಗೀಪ್ಪಾ"
ಕವನ ಅರ್ಥವಾಗದಿದ್ದರೂ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳಲಾದರು ಪುಸ್ತಕ ಖುಶಿಗೆ ಉಪಯೋಗವಾಯಿತು!


ಕವಿರಾಜ್‍ರವರ ಭಾಷಣದಲ್ಲಿ ಪ್ರೇಕ್ಷಕರೆಲ್ಲರೂ ತಲ್ಲೀನರಾದರು


ದುಂಡಿರಾಜ್‍ರವರು ತಾವೇ ಹೇಳಿದಂತೆ ತಮ್ಮ ಅತ್ಯಂತ ಗಂಭೀರ ಭಾಷಣ ನೀಡಿದರು. ಕಾರಣ ಈ ಪುಸ್ತಕದಲ್ಲಿರುವುದು ಹೆಚ್ಚಿನವು "Heavy Matter" ಎಂದರು.. ಪ್ರೇಕ್ಷಕರಲ್ಲಿ ನಗೆ ಮೂಡಿತು!


ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಈ ಗುಲಾಬಿ ಹೂವು ಬಾಗಿಲಲ್ಲೇ ನಿಂತು ಬರುವವರನ್ನೆಲ್ಲಾ ನಗು ನಗುತ್ತಾ ಬರಮಾಡಿಕೊಳ್ಳುತ್ತಿತ್ತು


ಅತಿಥಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ...


ಅತಿಥಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ...


ಅತಿಥಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ...


ರೂಪಕ್ಕರವರಿಗೆ ಅನುಪಮಾರವರು ಸನ್ಮಾನ ಮಾಡಿದ ರೀತಿ ಎಲ್ಲರ ಗಮನ ಸೆಳೆಯಿತು.. ಅನುಪಮಾರವರು ಶಾಲನ್ನು ಗೊಂಬೆಗೆ ಸುತ್ತಿದಂತೆ ಸುತ್ತಿದಾಗ ಎಲ್ಲರಲ್ಲೂ ನಗೆ ಮೂಡಿತು.


ನಂತರ ರೂಪಕ್ಕನವರಿಗೆ ಶಾಲು ಹೊದ್ದಿಸುವ ಸರದಿ...


ಅತಿಥಿಗಳಿಂದ 3K ಬಳಗದ ಸದಸ್ಯರೆಲ್ಲರಿಗೂ ಶಾಲು, ಸ್ಮರಣಿಕೆ ವಿತರಣೆ


ಕೊನೆಗೆ ಕಾರ್ಯಕ್ರಮಕ್ಕೆ ನೆರವಾದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸುವ ಹೊಣೆ ನನ್ನದಾಯಿತು...


ಭರತ್ ಆರ್ ಭಟ್ ಅವರು ಬರೆದುಕೊಟ್ಟ ಚೀಟಿಯನ್ನು ಹೇಗೋ ತಪ್ಪಿಲ್ಲದೇ ಓದಿಬಿಟ್ಟೆ..
ಆದರೂ ಅದರಲ್ಲಿ ನಮ್ಮ ಪ್ರಕಾಶ್ ಹೆಗಡೆಯವರ ಹೆಸರೇ ಬಿಟ್ಟುಹೋಯ್ತಲ್ಲಾ ಎಂಬ ಕೊರಗು..
ಆರಂಭ ಗೀತೆ ಹಾಡಿದ ಭೂಮಿಕರವರ ಹೆಸರು ಸಹ ತಪ್ಪಿ ಹೊಯ್ತು.. ಕ್ಷಮಿಸಿ


ಸವಿ ಸವಿ ನೆನಪುಗಳು...
====================

3K ಬಳಗ


ಕನ್ನಡ ಹೆಸರಾಂತ ಸಂಗೀತ ಸಾಹಿತಿ ಕವಿರಾಜ್‍ರವರೊಂದಿಗೆ


ಅನಿಲ್ ಬೆಡಗೆ, ಆಶಾ ಪ್ರಕಾಶ್, ಪ್ರಕಾಶ್ ಹೆಗಡೆ ಹಾಗು ದುಂಡಿ ರಾಜ್ ಅವರೊಂದಿಗೆ

30 ತಿಂಗಳಲ್ಲಿ 25,000 ಪ್ರತಿಗಳು ಮಾರಾಟವಾಗಿ ದಾಖಲೆ ಸೃಷ್ಟಿಸಿದ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕದ ಲೇಖಕ, ವಿಜಯಕರ್ನಾಟಕ ದಿನಪತ್ರಿಕೆಯ ಉಪಸಂಪಾದಕರು ಆದ ಎ. ಆರ್. ಮಣಿಕಾಂತ್ ಅವರೊಂದಿಗೆ


ದೊಡ್ಡಮನಿ ಮಂಜುನಾಥ್, ವೆಂಕಟೇಶ್ ಹೆಗಡೆ ಹಾಗು ಭರತ್‍ರವರೊಂದಿಗೆ..

ಗೆಳೆಯರೇ,

ಸಪ್ನ ಪುಸ್ತಕ ಮಳಿಗೆಯಲ್ಲಿ ಯಾವುದೇ ಕನ್ನಡ ಪುಸ್ತಕ ಕೊಂಡರೂ ಅದರೊಂದಿಗೆ ಭಾವಸಿಂಚನ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು.
ನಿಮಗೆ ಈ ಪುಸ್ತಕದ ಒಂದು ಪ್ರತಿ ಬೇಕಾದಲ್ಲಿ ನನಗೆ ನಿಮ್ಮ ವಿಳಾಸವನ್ನು ಈ-ಮೇಲ್ ಮೂಲಕ ಕಳುಹಿಸಿ. ಪುಸ್ತಕವನ್ನು ನೀಡಿದ ವಿಳಾಸಕ್ಕೆ Courier ಮುಖಾಂತರ ಕಳುಹಿಸಲಾಗುವುದು. ಇದು ಸಂಪೂರ್ಣ ಉಚಿತ.
ಈ-ಮೇಲ್ ಕಳುಹಿಸಬೇಕಾದ ವಿಳಾಸ:
pradeepha22@gmail.com



Friday, November 11, 2011

"ಭಾವಸಿಂಚನ" - ಪುಸ್ತಕ ಬಿಡುಗಡೆ ಸಮಾರಂಭ - ಆಹ್ವಾನ




ಗೆಳೆಯರೇ,

3K ಎಂಬುದು ಬಹಳ ವರ್ಷಗಳಿಂದ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಒಂದು ಸಮುದಾಯ. ಪ್ರಖ್ಯಾತ ಅಂತರ್ಜಾಲ ತಾಣವಾದ ಆರ್ಕೂಟ್‍ನಲ್ಲಿ ಜನಿಸಿದ ಈ ಸಮುದಾಯ ಈಗ ತನ್ನದೇ ರೂಪ ಪಡೆಯುತ್ತಿದೆ. ನಾನು ನನ್ನ ಮೊದಲ ಸಾಲುಗಳನ್ನು ಕವನ ಎಂದು ಬಗೆದು ಗೀಚಲು ಶುರುಮಾಡಿದಾಗಿನಿಂದಲೂ ನನ್ನನು ಪ್ರೋತ್ಸಾಹಿಸಿ ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುವಂತೆ ಮಾಡಿದ್ದು ನಮ್ಮ 3K.

ಕಳೆದ ಮೂರು ವರ್ಷಗಳಿಂದ ಸಮುದಾಯ ಕಂಡ ಅತ್ಯುತ್ತಮ ಕವನಗಳನ್ನು ಒಂದು ಕವನ ಸಂಕಲನವಾಗಿ ಹೊರತರುತ್ತಿದ್ದೇವೆ.

ಇದೇ ತಿಂಗಳ 26ನೇ ತಾರೀಖು ನಮ್ಮ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದ್ದೇವೆ

Kannada Sahitya Parishat
Chamarajpet, Bangalore

November 26th, 2011, Saturday,
Evening 6 PM

ದಯವಿಟ್ಟು ಎಲ್ಲರೂ ಬಂದು ನಮ್ಮ ಸಮುದಾಯವನ್ನು ಹಾರೈಸಬೇಕಾಗಿ ವಿನಂತಿ.

ಬನ್ನಿ, ಮತ್ತೊಮ್ಮೆ ಎಲ್ಲರೂ ಭೇಟಿಯಾಗೋಣ. ನಿಮ್ಮೆಲ್ಲರೊಡನೆ ಬೆರೆತು ಬಹಳ ದಿನವಾಯ್ತು...

ಧನ್ಯವಾದಗಳು