ಕವನದ ಸನ್ನಿವೇಷ: ಬಾಲ್ಯದಲ್ಲಿ ಜೊತೆಯಲ್ಲೆ ಆಡಿ ಬೆಳೆದ ಗೆಳತಿಯ ಮೇಲೆ ಪ್ರೀತಿಯು ಮೂಡಿ ಬಂದಾಗ...ಕಣ್ಣಾಮುಚ್ಚೇ ಕಾಡೇಗೂಡೇ...
ಎಂದು ಹಾಡಿದ್ದೆ ನನ್ನ ಕಣ್ಮುಚ್ಚಿ ನೀನಂದು
ಕಣ್ಣ ಮುಚ್ಚಿದೊಡನೆ ಕಾಡಿಬಿಡುವೆ
ಕನಸಾಗಿ ನನ್ನ ನೀನಿಂದು.
ಇಪ್ಪತ್ತು ವರ್ಷ ಹೆಚ್ಚಾದರೂ ವಯಸ್ಸು
ನಿನ್ನನ್ನೆಂದೂ ಮರೆಯಲಿಲ್ಲ ಮನಸು
ಸೇರಲು ನಿನ್ನ ಬಂದಿರುವೆ ವಾಪಸ್ಸು
ಅಂದು ಮರಳಲ್ಲಿ ಕಟ್ಟಿದ್ದೆವು
ನಾವೊಂದು ಪುಟ್ಟ ಮನೆ
ಇಂದು ನನ್ನ ಮನಸಲ್ಲೆ ಕಟ್ಟಿರುವೆ
ನೀ ಸಾವಿರ ಕನಸುಗಳ ಅರಮನೆ
ಅಂದು ಛಾವಣಿಯ ಮೇಲೆ ಕುಳಿತು
ನಾವು ಆಡಿದ್ದ ಬೆಳುದಿಂಗಳು
ಇಂದು ಚಂದ್ರನನ್ನೆ ಕದ್ದೊಯ್ದ ನಿನ್ನ
ಹುಡುಕುತಿದೆ ಕತ್ತಲಲಿ ಕಂಗಳು
ಅಂದು ನೀ ಕಳೆದುಹೋಗದಿರಲೆಂದು
ಕೈ ಹಿಡಿದು ತೋರಿದ್ದೆ ಸಂತೆ
ಇಂದು ನನ್ನ ಕಾಡುತಿದೆ, ಬಾಳ ಸಂತೆಯಲಿ
ನಿನ್ನ ಕಳೆದುಕೊಳ್ಳುವ ಚಿಂತೆ
ನೀ ಅತ್ತಾಗ ಕರೆದುಕೊಂಡು ಹೋದೆ
ನಿನಗೆ ತೋರಲು ಸಾಗರದ ತೀರ
ಅಪ್ಪ ಬೈಯ್ಯುವರೆಂದು ತಿಳಿದಿದ್ದರೂ ನಂತರ
ಆಸೆಯಿತ್ತು ಹೋಗಲು ನಿನ್ನೊಡನೆ ದೂರ
ನೀ ಹಠವ ಹಿಡಿದು ಕುಳಿತಾಗ
ಏರಿಸಿದ್ದೆ ನಿನ್ನ ಮಾವಿನ ಮರ
ಹಣ್ಣ ಕಿತ್ತು ಓಡಿದ್ದೆವು ಕಳ್ಳರ ಥರ
ಆಹಾ! ಆ ನೆನಪುಗಳು ಎಷ್ಟು ಮಧುರ!
ನಿನ್ನ ಮನದಲ್ಲಿ ನೀನಿನ್ನು ಪುಟ್ಟ ಬಾಲೆ
ಹೊತ್ತಿಸಿ ನನ್ನಲ್ಲಿ ಪ್ರೀತಿಯ ಜ್ವಾಲೆ
ಆಡುತಿರುವೆ ಮತ್ತೆ ಕಣ್ಣಾಮುಚ್ಚಾಲೆ
ತೂಗುವುದ ನಿಲ್ಲಿಸು ಹೌದು-ಇಲ್ಲಗಳ ನಡುವೆ
ನನ್ನ ಮನಸ್ಸಿನ ಉಯ್ಯಾಲೆ!
ಹೊತ್ತಿಸಿ ನನ್ನಲ್ಲಿ ಪ್ರೀತಿಯ ಜ್ವಾಲೆ
ಆಡುತಿರುವೆ ಮತ್ತೆ ಕಣ್ಣಾಮುಚ್ಚಾಲೆ
ತೂಗುವುದ ನಿಲ್ಲಿಸು ಹೌದು-ಇಲ್ಲಗಳ ನಡುವೆ
ನನ್ನ ಮನಸ್ಸಿನ ಉಯ್ಯಾಲೆ!
----------------------------------------------
'ಯಜಮಾನ' ಚಿತ್ರದ ಸುಂದರ ಗೀತೆ....
'ಯಜಮಾನ' ಚಿತ್ರದ ಸುಂದರ ಗೀತೆ....
ಕಣ್ಣಾಮುಚ್ಚೇ ಕಾಡೇಗೂಡೇ..