Wednesday, January 27, 2010

ಮನಸಲ್ಲೆ ಮಾತಾಡುವೆ



*** ಮನಸಲ್ಲೆ ಮಾತಾಡುವೆ ***









ಮನಸಲ್ಲೆ ಮಾತಾಡುವೆ ನಿನ್ನೊಂದಿಗೆ..
ನಾ ಒಂಟಿಯಾಗಿ ಕುಳಿತು..
ಕನಸಲ್ಲೆ ಓಡಾಡುವೆ ನಿನ್ನೊಂದಿಗೆ..
ನಾ ಕೈಯಲ್ಲಿ ಕೈ ಹಿಡಿದು..

ಇಲ್ಲಿನ ನೀರನ್ನು ಆವಿಯಾಗಿ ಸೆಳೆದು
ಮೆಲ್ಲಗೆ ಮೋಡವಾಗಿ ಕದ್ದೊಯ್ದು
ಇನ್ನೆಲ್ಲೊ ಕರಗಿ ಮಳೆಯ ಸುರಿಸುತಿರುವೆ ನೀನು...
ಬರುಡಾದ ಭೂಮಿಯಲಿ ಕಂಬನಿಯ ನೀರ ಹರಿಸಿ
ಗಿಡವ ಬೆಳೆಸಿದೆ ನಾನು..

ಗಿಡವಿಂದು ಬೆಳೆದು ಆಗಿದೆ ಹೆಮ್ಮರ
ಅದರ ಸಾವಿರಾರು ಎಲೆಗಳ ಮೇಲೆ
ನಿನ್ನ ಹೆಸರ ಬರೆದು ಮಾಡಿದೆ
ನಾ ನಿನ್ನ ನೆನಪುಗಳ ಅಮರ..

ನಮ್ಮಿಬ್ಬರ ದೂರ ಮಾಡಿ
ಕಾಲವು ಕಟ್ಟಿಹುದು ಭದ್ರ ಕೋಟೆ
ಆಕಾಶ ಮುಟ್ಟುವಂತಿದ್ದ ಆಸೆಗಳು
ಇಂದು ಊರಾಚೆಯ ಸಮಾಧಿಯಷ್ಟೆ
ಆಗಾಗ ಸಮಾಧಿಯೂ ಪಿಸುಗುಡುವುದು
ಹೃದಯದಿ ಹುದುಗಿದ್ದ ಕೆಂಡ
ಆಗ ಬೆಂಕಿಯಾಗಿ ನನ್ನ ಸುಡುವುದು..
ಹೀಗೆ ಹೃದಯ ಸುಟ್ಟಾಗಲೆಲ್ಲಾ...
ನಾ ಮತ್ತೆ...

ಮನಸಲ್ಲೆ ಮಾತಾಡುವೆ ನಿನ್ನೊಂದಿಗೆ..
ನಾ ಒಂಟಿಯಾಗಿ ಕುಳಿತು..
ಕನಸಲ್ಲೆ ಓಡಾಡುವೆ ನಿನ್ನೊಂದಿಗೆ..
ನಾ ಕೈಯಲ್ಲಿ ಕೈ ಹಿಡಿದು..





Monday, January 25, 2010




ನನ್ನ ಬಗ್ಗೆ....
ಈ ಪ್ರದೀಪ...
ಆಗಲು ಬಯಸಿದ್ದು...
ಪ್ರೀತಿಯ ಬೆಳಕು ಚೆಲ್ಲುವ ಪ್ರಖರ ದೀಪ.
ಈ ಪ್ರದೀಪ...
ಆಗಲು ಬಯಸಿದ್ದು...
ಪ್ರೀತಿಯ ಬೆಳಕು ಚೆಲ್ಲುವ ಪ್ರಖರ ದೀಪ.
ಆದರೆ ವಿಧಿಯು ನನ್ನ ಮಾಡಿದ್ದು...
ಪ್ರೀತಿಯ ತೀರದಿಂದ ದೂರಾಗಿ
ಹತಾಶೆಯ ಸಾಗರದಿ ಮುಳುಗಿದ
ಅಜ್ಞಾತ ಒಂಟಿ ದ್ವೀಪ!


ದೇವರೇ.... ನೀನು ಕಲ್ಲು



ಓ ದೇವರೇ..
ಎಷ್ಟು ಚೆನ್ನಾಗಿರುತಿತ್ತು...
ನಿಂತುಬಿಡುವ ಹಾಗಿದ್ದರೆ
ನಾವು ಕಲ್ಲಾಗಿ ನಿನ್ನಂತೆ!
ಬಿಟ್ಟು ಈ ಜೀವ ದೇಹದ ಚಿಂತೆ.

ಯಾರ ಪ್ರಶ್ನೆಗೂ ಉತ್ತರಿಸುವಷ್ಟಿಲ್ಲ
ಜರೆದರೂ ಎಲ್ಲರೂ ಮೌನವೇ ಎಲ್ಲಾ
ಮುನ್ನಡೆಯುವುದು ಹೇಗೆ ಎಂಬ
ಯೋಚನೆಯೇ ಇರದು..
ಹಿಂದಿನಿಂದ ಯಾರೂ ತಳ್ಳಲೂ ಆಗದು
ಸುಮ್ಮನೆ ನಗುತಾ ಇರಬಹುದು
ನಿಂತಲ್ಲೇ ನಿಂತು..
ಸಹಿಸಲು ಸಾಧ್ಯ ಆಗ ಒಂದೊಂದಾಗಿ
ನೀ ಕೊಡುವ ಕಷ್ಟಗಳ ಕಂತು.

***********************************************************

ತಿರುಪತಿ ತಿಮ್ಮಪ್ಪನ ಅನುಗ್ರಹ ನಮ್ಮೆಲರ ಮೇಲಿರಲಿ ಅಂತ ಬೇಡುವೆ...







Tuesday, January 19, 2010

**** ಬೊಂಬೆಯಾಟವಯ್ಯ *****





ಪರದೆಯ ಮರೆಯಲಿ ನಿಂತು
ಕೈಗೊಂಬೆಗಳ ಆಡಿಸುವಾತ
ಆಡಿಸುತಿಹನು ದಯೆಯಿಲ್ಲದೆ
ದಿನವೂ ಹೊಸತೊಂದು ಆಟ
ಆಟ ಆಟಗಳ ನಡುವೆಯೇ
ಕಲಿಸುತಿಹನು ಏನೋ ಪಾಠ




ಕೈಗೊಂಬೆಗಳು ನಾವೆಲ್ಲ ಜಗದಲಿ..
ಆಡಿಸುವಾತ ನೀಡಿಹನು ವಿಧ-ವಿಧ ಪಾತ್ರ
ಪ್ರತಿ ಪಾತ್ರಕೂ ತಾನು
ಪರದೆಯ ಮೇಲೆ ಬರಲು ಕಾತರ
ಬಂದ ಪಾತ್ರಗಳ ಪರಿಚಯವ ಮಾಡಿಸಿ
ಆಗುವಷ್ಟರಲಿ ಪುಟ್ಟ ಬೊಂಬೆಗಳ
ಹೃದಯಗಳು ಹತ್ತಿರ..
ಅದು ಏಕೋ ಕಾಣೆ..
ಆತನಿಗೆ ಆಟ ಮುಗಿಸುವ ಆತುರ..

ಬಂದು ಹೋಗುವ ಬೊಂಬೆಗಳು ನಾವು
ಆಟ ನಡೆಯುವುದಷ್ಟೆ ಮುಖ್ಯ
ಶಾಶ್ವತವಲ್ಲ ಬೊಂಬೆಗಳ ಸಖ್ಯ
ಪರದೆಯ ಹಿಂದೆ ಇಣುಕಿದರೂ...
ಒಂಟಿತನದ ನೋವು..
ಪರದೆಯ ಮುಂದೆ..
ನಗುವುದು ನಗಿಸುವುದೇ ಕಾಯಕ..

Monday, January 18, 2010


***** ನದಿ - ದಡ ******






ನಾ ನಿಂತಲ್ಲೇ ನಿಂತಿರುವೆ ಮರಳಾಗಿ...
ಅವಳು ಹರಿದುಹೋದಳು ನದಿಯಾಗಿ..
ನನ್ನ ಬೆಚ್ಚನೆಯ ಭಾವನೆಗಳ ಮೇಲೆ
ತಣ್ಣೀರು ಎರಚಿ..
ಅವಳು ನದಿಯಾದಳು..
ನಾ ದಡವಾದೆ..
ನಾ ತಬ್ಬಿ ನಿಂತೆ ಅವಳ
ಅತ್ತಲಿಂದಲೂ.. ಇತ್ತಲಿಂದಲೂ..
ನನ್ನನವಳು ಬಿಟ್ಟು ಹೋಗದಂತೆ
ಸೀಳಿ ಹೋದಳವಳು ನನ್ನೆದೆಯ
ಮತ್ತೆ ಎಂದೂ ಬಾರದಂತೆ...

ಹರಿಯುವ ನೀರು ನಿಲ್ಲದು
ಎಂದು ಈ ದಡವು ಬಲ್ಲದು
ನದಿಯ ನೆಲೆ ಸಾಗರವೇ
ಎಂದು ನಾ ಅರಿತಿರುವೆ..
ಆದರೂ ಮತ್ತೆ ಮೋಡದಿ
ಮಳೆಯಾಗಿ ನೀ ಬರುವೆ
ಎಂಬ ಕನಸಲಿ ಕಾದಿರುವೆ...

.......................... ನಿನ್ನ ನೆಚ್ಚಿನ ಮರಳು ದಡ